ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ ನಗರಸಭೆ: ಶ್ರೀವಿದ್ಯಾ ಅಧ್ಯಕ್ಷೆ

Last Updated 7 ಸೆಪ್ಟೆಂಬರ್ 2013, 8:18 IST
ಅಕ್ಷರ ಗಾತ್ರ

ಹಾಸನ: ಹಾಸನ ನಗರಸಭೆಯ ಅಧ್ಯಕ್ಷೆಯಾಗಿ ಜೆಡಿಎಸ್‌ನ ಶ್ರೀವಿದ್ಯಾ ಶುಕ್ರವಾರ ಅವಿರೋಧವಾಗಿ ಆಯ್ಕೆಯಾದರೆ, ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅದೇ ಪಕ್ಷದ ಇರ್ಷಾದ್ ಪಾಷಾ ಆಯ್ಕೆಯಾದರು.

ಇರ್ಷಾದ್ 24 ಮತ ಪಡೆದರೆ ಇವರ ವಿರುದ್ಧ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ಆರೀಫ್ ಖಾನ್ 11 ಮತ ಗಳಿಸಿದರು.
ನಗರಸಭೆಯ ಒಟ್ಟು 35 ಸ್ಥಾನಗಳಲ್ಲಿ ಕಾಂಗ್ರೆಸ್ 9, ಬಿಜೆಪಿ ಹಾಗೂ ಕೆಜೆಪಿ ತಲಾ ಒಂದು ಹಾಗೂ ಒಬ್ಬ ಸ್ವತಂತ್ರ ಅಭ್ಯರ್ಥಿ ಇದ್ದಾರೆ. ಉಳಿದ 24 ಮಂದಿ ಜೆಡಿಎಸ್ ಅಭ್ಯರ್ಥಿಗಳೇ.

ಹಾಸನ ನಗರಸಭೆಯ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿತ್ತು. ಆಯ್ಕೆಯಾದವರಲ್ಲಿ ಶ್ರೀವಿದ್ಯಾ ಬಿಟ್ಟರೆ ಸಿ. ಶುಭಾ ಮಾತ್ರ ಈ ವರ್ಗಕ್ಕೆ ಸೇರಿದವರಾಗಿದ್ದು, ಶುಭಾ ಇದೇ ಮೊದಲ ಬಾರಿ ಆಯ್ಕೆಯಾಗಿರುವುದರಿಂದ ಶ್ರೀವಿದ್ಯಾಗೆ ಅಧ್ಯಕ್ಷ ಸ್ಥಾನಕ್ಕೆ ಏರುವುದು ಸುಲಭವಾಯಿತು. ಕಳೆದ ಬಾರಿ ಶ್ರೀವಿದ್ಯಾ ಕೆಲವು ತಿಂಗಳ ಮಟ್ಟಿಗೆ ಉಪಾಧ್ಯಕ್ಷೆಯಾಗಿಯೂ ಕಾರ್ಯ ನಿರ್ವಹಿಸಿದ್ದರು.

ತಡೆಯಾಜ್ಞೆಯ ಗೊಂದಲ: ಹಾಸನ ನಗರಸಭೆ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆಗೆ ಶುಕ್ರವಾರ ಚುನಾವಣೆ ಘೋಷಿಸಿದ್ದರೂ, ಮೀಸಲಾತಿಗೆ ತಡೆ ಯಾಜ್ಞೆ ಬಂದಿದೆ ಎಂಬ ಸುದ್ದಿಯಿಂದ ಸ್ವಲ್ಪ ಗೊಂದಲ ಸೃಷ್ಟಿಯಾಗಿತ್ತು.

ಕೆಲವು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮಾತ್ರ ತಡೆಯಾಜ್ಞೆ ಬಂದಿದೆ ಎಂದು ಕೆಲವರು ವಾದಿಸಿದರೆ, ಎಲ್ಲ  ಸಂಸ್ಥೆಗಳಿಗೂ ಅದು ಜಾರಿಯಾಗುತ್ತದೆ ಎಂದು ಇನ್ನೂ ಕೆಲವರು ವಾದಿಸಿದರು. ಅಧಿಕಾರಿಗಳಲ್ಲೂ ಈ ಬಗ್ಗೆ ಗೊಂದಲ ಮೂಡಿ ಮೇಲಾಧಿಕಾರಿಗಳನ್ನು ಸಂಪರ್ಕಿಸಿದ್ದರು.

`ತಡೆಯಾಜ್ಞೆ ಬಗ್ಗೆ ನಮ್ಮಲ್ಲೂ ಕೆಲವು ಗೊಂದಲಗಳಿವೆ. ಅಧಿಕೃತವಾಗಿ ಯಾವುದೇ ಮಾಹಿತಿ ನಮಗೆ ಬಂದಿಲ್ಲ. ಆದ್ದರಿಂದ ಚುನಾವಣೆ ಪ್ರಕ್ರಿಯೆ ಆರಂಭಿಸಿದ್ದೇವೆ. ಮಧ್ಯದಲ್ಲಿ ಆದೇಶವೇನಾದರೂ ಬಂದರೆ ಪ್ರಕ್ರಿಯೆ ರದ್ದು ಮಾಡುತ್ತೇವೆ' ಎಂದು ಚುನಾವಣಾಧಿಕಾರಿಯಾಗಿದ್ದ ಉಪ ವಿಭಾಗಾಧಿಕಾರಿ ಜಗದೀಶ್ ತಿಳಿಸಿದ್ದರು. ಮಧ್ಯಾಹ್ನದ ವೇಳೆಗೆ ಗೊಂದಲ ನಿವಾರಣೆಯಾಗಿ ಸುಸೂತ್ರವಾಗಿ ಚುನಾವಣೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT