ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ ನೂತನ ಬಸ್ ನಿಲ್ದಾಣ:ಅಧಿಕೃತ ಕಾರ್ಯಾರಂಭ ಇಂದಿನಿಂದ

Last Updated 20 ಜನವರಿ 2011, 8:30 IST
ಅಕ್ಷರ ಗಾತ್ರ

ಹಾಸನ: ನಗರದ ಚನ್ನಪಟ್ಟಣಕೆರೆಯಲ್ಲಿ ನಿರ್ಮಿಸಿರುವ ಹಾಸನದ ನೂತನ ಬಸ್ ನಿಲ್ದಾಣ ಗುರುವಾರ ಅಧಿಕೃತವಾಗಿ ಕಾರ್ಯಾರಂಭ ಮಾಡಲಿದೆ.ದೇಶದಲ್ಲೇ ಮೊದಲಬಾರಿ ಎಂಬಂತೆ ಸಕಲ ವ್ಯವಸ್ಥೆ ಮತ್ತು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಈ ಬಸ್ ನಿಲ್ದಾಣ ಉದ್ಘಾಟನೆ ಗೊಂಡು ಹಲವು ತಿಂಗಳು ಗತಿಸಿದ್ದರೂ ಕೆಲವು ತೊಂದರೆಗಳಿಂದಾಗಿ ಕಾರ್ಯಾರಂಭ ವಾಗಿರಲಿಲ್ಲ. ಆ ಸಮಸ್ಯೆಗಳು ಈಗಲೂ ಉಳಿದುಕೊಂಡಿದ್ದರೂ ಗುರುವಾರ ದಿಂದ ಬಸ್ ನಿಲ್ದಾಣವನ್ನು ಅಧಿಕೃತವಾಗಿ ಬಳಸಿಕೊಳ್ಳಲು ರಸ್ತೆ ಸಾರಿಗೆ ಸಂಸ್ಥೆ ನಿರ್ಧರಿಸಿದೆ.

18 ಎಕರೆ ವಿಸ್ತೀರ್ಣದಲ್ಲಿ 34 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಈ ಬಸ್ ನಿಲ್ದಾಣವನ್ನು ಕೆಲವು ತಿಂಗಳ ಹಿಂದೆ ಆಗ ಸಾರಿಗೆ ಸಚಿವರಾಗಿದ್ದ  ಆರ್.ಅಶೋಕ್ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಉದ್ಘಾಟಿಸಿದ್ದರು. ಸರ್ಕಾರಿ ಕಟ್ಟಡಗಳು ಪೂರ್ಣ ಸಿದ್ಧವಾಗುವ ಮೊದಲೇ ಉದ್ಘಾಟನೆಯಾಗುವುದು ಸಾಮಾನ್ಯ. ಆದರೆ ಇಲ್ಲಿ ಬಸ್ ನಿಲ್ದಾಣ ಸೇವೆಗೆ ಸಂಪೂರ್ಣವಾಗಿ ಸಿದ್ಧಗೊಂಡ ಬಳಿಕವೇ (ಒಳಗೆ ಅಂಗಡಿ ಮಳಿಗೆಗಳು ಇನ್ನೂ ಸಿದ್ಧಗೊಳ್ಳುತ್ತಿವೆ) ಉದ್ಘಾಟನೆಯಾಗಿತ್ತು. ಆದರೆ ಬಸ್ ನಿಲ್ದಾಣದ ಮುಂದಿನ ರಸ್ತೆ, ರೈಲು ಮೇಲ್ಸೇತುವೆ, ನಗರದಿಂದ ಬಸ್ ನಿಲ್ದಾಣಕ್ಕೆ ಹೋಗುವ ರಸ್ತೆಗಳು ಸಿದ್ಧವಾಗದ ಹಿನ್ನೆಲೆಯಲ್ಲಿ ಹೊಸ ನಿಲ್ದಾಣ ಕಾರ್ಯಾರಂಭ ಆಗಿರಲಿಲ್ಲ. ಈಗ ಬಸ್ ನಿಲ್ದಾಣದ ಮುಂದೆ ಒಂದು ರಸ್ತೆ ನಿರ್ಮಾಣವಾಗಿರುವುದನ್ನು ಬಿಟ್ಟರೆ ಉಳಿದ ಸಮಸ್ಯೆಗಳು ಹಾಗೆಯೇ ಉಳಿದುಕೊಂಡಿವೆ. ಆದರೂ ಗುರುವಾರದಿಂದ ಎಲ್ಲ ಬಸ್‌ಗಳೂ ಇದೇ ನಿಲ್ದಾಣಕ್ಕೆ ಬರಲಿವೆ ಎಂದು ಸಾರಿಗೆ ಸಂಸ್ಥೆ ತಿಳಿಸಿದೆ.

ಸೇವೆಗೆ ಸಿದ್ಧ: ತಾಂತ್ರಿಕವಾಗಿ ಹೊಸ ಬಸ್ ನಿಲ್ದಾಣ ಸೇವೆಗೆ ಪೂರ್ಣ ಸಿದ್ಧವಾಗಿದೆ. ಆದರೆ ಒಮ್ಮಿಂದೊಮ್ಮೆಲೇ ಸ್ಥಳಾಂತರ ವಾಗುವುದರಿಂದ ಪ್ರಯಾಣಿಕರು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುವುದು ಖಚಿತ. ಬಸ್ ನಿಲ್ದಾಣದಲ್ಲಿ ಇನ್ನೂ ಅಂಗಡಿ, ಹೋಟೇಲ್‌ಗಳು ಆರಂಭವಾಗಿಲ್ಲ. ಏನಾದರೂ ತಿನ್ನಬೇಕೆಂದರೆ ಅಕ್ಕಪಕ್ಕದಲ್ಲಿ ಅಂಗಡಿಗಳು ಇಲ್ಲ. ಆದ್ದರಿಂದ ಕುಡಿಯುವ ನೀರು ಬಿಟ್ಟರೆ ಪ್ರಯಾಣಿಕರಿಗೆ ಇಲ್ಲಿ ಬೇರೇನೂ ಸಿಗಲಾರದು. ಇದು ದೊಡ್ಡ ಸಮಸ್ಯೆಯಾಗಬಹುದು.

ಬಸ್ ನಿಲ್ದಾಣ ಅತ್ಯಾಧುನಿಕ ಹಾಗೂ ಅತ್ಯಂತ ವಿಸ್ತಾರವಾಗಿದ್ದರೂ ಬಸ್‌ಗಾಗಿ ಕಾಯುವ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಮಾಡಿರುವ ಆಸನಗಳ ವ್ಯವಸ್ಥೆ ಕಡಿಮೆಯೇ ಇದೆ. ಬಸ್ ನಿಲ್ದಾಣದ ಆಸುಪಾಸಿನಲ್ಲಿ ವಾಹನ ನಿಲುಗಡೆಗೂ ವ್ಯವಸ್ಥೆ ಮಾಡಿಲ್ಲ ಇಂಥ ಕೆಲವು ಸಮಸ್ಯೆಗಳ  ಪರಿಹಾರಕ್ಕೆ ಶೀಘ್ರ ಕ್ರಮ ಕೈಗೊಳ್ಳಬೇಕಾಗಿದೆ.

ಮುಗಿಯದ ರಸ್ತೆ ಸಮಸ್ಯೆ: ಈಗಿನ ಬಸ್ ನಿಲ್ದಾಣ ಹಾಗೂ ಹೊಸ ನಿಲ್ದಾಣಗಳ ಮಧ್ಯೆ ರೈಲ್ವೆ ಹಳಿ ಇರುವುದು ಮತ್ತು ಎರಡು ಬಸ್ ನಿಲ್ದಾಣಗಳನ್ನು ಸಂಪರ್ಕಿಸುವ ರಸ್ತೆ ಅಗಲಕಿರಿದಾಗಿರುವುದೇ ಅತಿದೊಡ್ಡ ಸಮಸ್ಯೆಯಾಗಿದೆ.ರೈಲ್ವೆ ಗೇಟ್ ಇರುವಲ್ಲಿ ಮೇಲ್ಸೇತುವೆ ನಿರ್ಮಿಸಬೇಕು ಎಂದು ಬಸ್ ನಿಲ್ದಾಣಕ್ಕೆ ಅಡಿಗಲ್ಲು ಹಾಕುವಾಗಲೇ ಗೊತ್ತಿದ್ದ ವಿಚಾರ.ಆದರೆ ಆ ನಿಟ್ಟಿನಲ್ಲಿ ಈವರೆಗೆ ಒಂದಿಂಚು ಕೆಲಸವೂ ಆಗಿಲ್ಲ. ಸಾಲದೆಂಬಂತೆ ಈರಸ್ತೆಯೂ ಅಗಲಕಿರಿದಾಗಿದೆ. ರಸ್ತೆ ಅಗಲಗೊಳಿಸಲು ಖಾಸಗಿ ಸಂಸ್ಥೆಯೊಂದಕ್ಕೆ ಸೇರಿದ ಜಾಗವನ್ನು ಸ್ವಾಧೀನಪಡಿಸಿದ್ದಾಗಿದೆ. ಮಾತ್ರವಲ್ಲದೆ ಈ ರಸ್ತೆಯ ಪಕ್ಕದಲ್ಲಿದ್ದ ದರ್ಗಾವೊಂದನ್ನು ಈಚೆಗೆ ತೆರವು ಮಾಡಲಾಗಿದೆ. ಆದರೆ ರಸ್ತೆಮಾತ್ರ ಅಗಲಗೊಂಡಿಲ್ಲ.

ಬಸ್ ನಿಲ್ದಾಣ ಸ್ಥಳಾಂತರಗೊಂಡಾಗ ಸಹಜವಾಗಿ ಈ ರಸ್ತೆಯಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗುತ್ತದೆ. ರೈಲು ಬರುವ ಸಮಯದಲ್ಲಿ ರಸ್ತೆಯ ಎರಡೂ ಭಾಗದಲ್ಲಿ ಈಗಲೇ ಸಾಕಷ್ಟು ಉದ್ದದ ಸಾಲು ನಿರ್ಮಾಣವಾಗುತ್ತದೆ. ಮುಂದೆ ಈ ಸಮಸ್ಯೆ ತೀವ್ರಗೊಳ್ಳುವುದರಲ್ಲಿ ಸಂದೇಹವಿಲ್ಲ ಎಂದು ಸ್ಥಳೀಯರು ನುಡಿಯುತ್ತಿದ್ದಾರೆ.ಗೊರೂರು ರಸ್ತೆಯಲ್ಲಿ ಸುಮಾರು ಎಂಟು ತಿಂಗಳ ಹಿಂದೆ ಮುರಿದು ಬಿದ್ದ ಸೇತುವೆ ನಿರ್ಮಾಣ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. ಆ ರಸ್ತೆಯಲ್ಲಿ ಸಂಚರಿಸುವ ವಾಹನಗಳೆಲ್ಲ ಪ್ರಸಕ್ತ ಹೊಸ ಬಸ್ ನಿಲ್ದಾಣದ ಮುಂದಿನಿಂದಲೇ ಬರುತ್ತಿವೆ. ಇವೆಲ್ಲವೂ ಹೆಚ್ಚಿನ ಸಮಸ್ಯೆ ತಂದೊಡ್ಡುವ ಸಾಧ್ಯತೆ ಇದೆ.

ಹೆಚ್ಚಿನ ಬಸ್‌ಗಳು ಬೈಪಾಸ್ ಮೂಲಕವೇ ಹೊಸ ನಿಲ್ದಾಣಕ್ಕೆ ಬಂದು ಹೋಗುವುದರಿಂದ ನಗರದೊಳಗಿನ ರಸ್ತೆಗಳಲ್ಲಿ ಸ್ವಲ್ಪಮಟ್ಟಿಗೆ ವಾಹನ ದಟ್ಟಣೆ ಕಡಿಮೆಯಾಗಬಹುದು.ವರ್ಷಗಳಿಂದ ನಗರದ ಹೃದಯಭಾಗದಂತಿದ್ದ ಹಳೆಯ ಬಸ್ ನಿಲ್ದಾಣ ಗುರುವಾರದಿಂದ ಭಣಗುಡಲಿದೆ. ಇಲ್ಲಿಯ ವ್ಯಾಪಾರಿಗಳು ಈಗಾಗಲೇ ಮುಂದಿನ ದಾರಿ ಕಾಣದೆ ಮಂಕುಬಡಿದವರಂತಾಗಿದ್ದಾರೆ. ಈ ಬಸ್ ನಿಲ್ದಾಣದ ಒಂದು ಭಾಗದಲ್ಲಿ ಡಿಪೋ ನಿರ್ಮಿಸುವ ಮಾತುಗಳೂ ಕೇಳಿಬರುತ್ತಿವೆ. ಹಳೆಯ ಬಸ್ ನಿಲ್ದಾಣದಿಂದ ಹೊಸ ನಿಲ್ದಾಣಕ್ಕೆ ರಸ್ತೆ ಸಾರಿಗೆ ಸಂಸ್ಥೆಯವರೇ ಬಸ್ ಓಡಿಸುವುದಾಗಿ ಹೇಳಿದ್ದಾರೆ. ಬಸ್ ನಿಲ್ದಾಣ ಸ್ಥಳಾಂತರವಾದರೆ ಉಳಿದ ವ್ಯವಸ್ಥೆಗಳು ಒಂದೊಂದಾಗಿ ಸರಿಹೋಗುತ್ತವೆ ಎಂದು ಅಧಿಕಾರಿಗಳು ನುಡಿಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT