ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ-ಬೆಂಗಳೂರು ಮಾರ್ಗಕ್ಕೆ ದೊರಕದ ಮುಕ್ತಿ

Last Updated 26 ಫೆಬ್ರುವರಿ 2011, 6:40 IST
ಅಕ್ಷರ ಗಾತ್ರ

ಹಾಸನ: ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ಮಂಡಿಸಿದ ರೈಲ್ವೆ ಬಜೆಟ್‌ನಲ್ಲಿ ರಾಜ್ಯಕ್ಕೆ ಕೆಲವು ಹೊಸ ರೈಲುಗಳು, ಹೊಸ ರೈಲು ಮಾರ್ಗಗಳು ಬಂದಿದ್ದರೂ ಹಾಸನ ಬೆಂಗಳೂರು ರೈಲು ಮಾರ್ಗಕ್ಕೆ ಈ ಬಾರಿಯೂ ಮುಕ್ತಿ ಸಿಕ್ಕಿಲ್ಲ. ಈ ಯೋಜನೆ ಹದಿನಾಲ್ಕು ವರ್ಷಗಳನ್ನು ಪೂರ್ಣಗೊಳಿಸುವ ಹಂತದಲ್ಲಿದೆ.

1996-97ರಲ್ಲಿ ದೇವೇಗೌಡ ಪ್ರಧಾನಿಯಾಗಿದ್ದ ಕಾಲದಲ್ಲಿ ಈ ಯೋಜನೆ ಆದೇಶ ಹೊರಡಿಸಿದ್ದರು. ಅಷ್ಟರಲ್ಲಿ ಅವರ ಅಧಿಕಾರವೂ ಹೋಯಿತು. ಆ ನಂತರ ರೈಲ್ವೆ ಸಚಿವರಾಗಿದ್ದ ನಿತೀಶ್ ಕುಮಾರ್ 1997ರಲ್ಲಿ ಈ ಯೋಜನೆ ಉದ್ಘಾಟಿಸಿದರು. ಹಾಸನ ಜಿಲ್ಲೆ ವ್ಯಾಪ್ತಿಯಲ್ಲಿ ಹಿರಿಸಾವೆವರೆಗೆ ಕಾಮಗಾರಿಯೂ ಪೂರ್ಣಗೊಂಡಿದೆ. ಅತ್ತ ಕಡೆ ನೆಲಮಂಗಲದಿಂದ ಸೋಲೂರಿನವರೆಗೆ 15 ಕಿ.ಮೀ. ಕಾಮಗಾರಿ ಮುಗಿದಿದೆ. ಆದರೆ ಸೂಲೂರು-ಕುಣಿಗಲ್ ಮಧ್ಯದ 42 ಕಿ.ಮೀ. ಕಾಮಗಾರಿ ಮಾತ್ರ ನೆನೆಗುದಿಗೆ ಬಿದ್ದಿದೆ. ಇಲ್ಲಿ 240 ಎಕರೆ ಭೂಸ್ವಾಧೀನ ಪ್ರಕ್ರಿಯೆ ಇನ್ನೂ ನಡೆದಿಲ್ಲ.

ಕುಣಿಗಲ್‌ನಲ್ಲಿ ವಿಜಯ ಮಲ್ಯ ಅವರ ಸ್ಟಡ್ ಫ್ಯಾಕ್ಟರಿ ಮೂಲಕ ರೈಲ್ವೆ ಹಳಿ ಹಾಕಬೇಕಾಗಿ ಬಂದಿರುವುದು ಒಂದು ಸಮಸ್ಯೆಯಾಗಿತ್ತು. ಆದರೆ ಪರ್ಯಾಯ ಮಾರ್ಗ ರೂಪಿಸುವ ಮೂಲಕ ಆ ಸಮಸ್ಯೆ ಪರಿಹರಿಸಲಾಗಿದೆ. ಸ್ವಲ್ಪ ಸುತ್ತು ಬಳಸಿ, ಒಂದು ಕೆರೆಗೆ 100 ಮೀ. ಉದ್ದದ ಸೇತುವೆ ನಿರ್ಮಾಣ ಮಾಡುವ ಹೊಸ ಯೋಜನೆ ಸಿದ್ಧವಾಗಿದೆ. ಆದರೆ ಭೂಸ್ವಾಧೀನಕ್ಕೆ ಸರ್ಕಾರ ಆಸಕ್ತಿ ತೋರುತ್ತಿಲ್ಲ. ತುಮಕೂರು, ಮಂಡ್ಯ ಹಾಗೂ ಹಾಸನ ಜಿಲ್ಲೆಗಳಲ್ಲಿ ಜೆಡಿಎಸ್ ಪ್ರಾಬಲ್ಯ ಇರುವುದೇ ಇದಕ್ಕೆ ಕಾರಣ ಎಂಬುದು ಸ್ಥಳೀಯ ಮುಖಂಡರ ಆರೋಪ.

1996-97ರಲ್ಲಿ  128 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಈ ಯೋಜನೆಯಲ್ಲಿ ಹಾಸನ ವ್ಯಾಪ್ತಿಯಲ್ಲಿ ಶಾಂತಿಗ್ರಾಮ, ಶ್ರವಣಬೆಳಗೊಳ ನಿಲ್ದಾಣಗಳನ್ನು ನಿರ್ಮಿಸಿ ವರ್ಷಗಳೇ ಆಗಿವೆ. ಈ ಕಟ್ಟಡಗಳೆಲ್ಲ ಈಗ ಜನ, ನಿರ್ವಹಣೆ ಇಲ್ಲದೆ ಹಾಳು ಬಿದ್ದಿವೆ. ಒಟ್ಟಾರೆ 128 ಕೋಟಿ ರೂಪಾಯಿಯಲ್ಲಿ ಈವರೆಗೆ ಬಿಡುಗಡೆ ಆಗಿರುವುದು 70  ಕೋಟಿ ರೂಪಾಯಿ ಮಾತ್ರ. ಈ ಭಾಗದ ಜನರು ಹಲವು ವರ್ಷಗಳಿಂದ ಈ ಯೋಜನೆ ಪೂರ್ಣಗೊಳಿಸಲು ಒತ್ತಡ ಹೇರುತ್ತಿದ್ದರೂ ರೈಲ್ವೆ ಸಚಿವರು ಮಾತ್ರ ಸುಮ್ಮನಿದ್ದಾರೆ.

ಶ್ರವಣಬೆಳಗೊಳ ನಿಲ್ದಾಣದಲ್ಲಿ ಇತ್ತೀಚಿನವರೆಗೂ ಒಬ್ಬ ಗಾರ್ಡ್ ಹಾಗೂ ಸ್ಟೇಶನ ಮಾಸ್ಟರ್  ಇದ್ದರು. ಎರಡು ತಿಂಗಳ ಹಿಂದೆ ಅವರಲ್ಲಿ ಸ್ಟೇಶನ್ ಮಾಸ್ಟರ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಶಾಂತಿಗ್ರಾಮ ನಿಲ್ದಾಣದಲ್ಲಿ ಹಳಿಗಳ ಮಧ್ಯೆ ಕಾಡು ಬೆಳೆದಿದೆ.

ಈ ಯೋಜನೆ ಇಡೀ ದಕ್ಷಿಣ ಕರ್ನಾಟಕದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರವಹಿಸುತ್ತದೆ ಎಂದು ಮಾಜಿ ಪ್ರಧಾನಿ ದೇವೇಗೌಡ ಅವರು ಪ್ರತಿಪಾದಿಸುತ್ತ ಬಂದಿದ್ದಾರೆ. ಚೆನ್ನೈ ಹಾಗೂ ಮಂಗಳೂರು ದಕ್ಷಿಣ ಭಾರತದ ಪ್ರಮುಖ ಬಂದರುಗಳು ಈ ಯೋಜನೆ ಎರಡೂ ಬಂದರು ಗಳನ್ನು ಬೆಸೆಯುತ್ತದೆ. ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಹಾಸನವೂ ಒಂದು. ಈ ಎಲ್ಲ ವಿಚಾರಗಳನ್ನು ಹಿನ್ನೆಲೆಯಾಗಿಟ್ಟು ನೋಡಿದರೆ ಈ ಯೋಜನೆ ಪೂರ್ಣಗೊಂಡರೆ ಇಡೀ ಭಾಗದ ಅಭಿವೃದ್ಧಿಗೆ ವೇಗ ಲಭಿಸುತ್ತದೆ ಎಂಬುದು ಅವರ ವಾದ.

 ಈ ಒಂದೇ ಯೋಜನೆಯಲ್ಲ ಅಲ್ಲ ಕಡೂರು- ಸಕಲೇಶಪುರ ಮಧ್ಯದ 80  ಕೋಟಿ ರೂಪಾಯಿಯ ಯೋಜನೆಯೂ 14 ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಈ ಮಾರ್ಗ ಕ್ಕಾಗಿ 28 ಸೇತುವೆಗಳು, 17 ಕಿರು ಸೇತುವೆಗಳ ನಿರ್ಮಾಣವಾಗಿದೆ. ಆದರೆ ರೈಲು ಹಳಿಗಳು ಮಾತ್ರ ಇನ್ನೂ ಚಿಕ್ಕಮಗಳೂರಿನವರೆಗೂ ಬಂದಿಲ್ಲ. ವಿಚಿತ್ರವೆಂದರೆ ಕಳೆದ ವರ್ಷದ ಬಜೆಟ್‌ನಲ್ಲಿ ಈ ಮಾರ್ಗಕ್ಕೆ ಮೀಸಲಿಟ್ಟಿದ್ದು ಒಂದು ಕೋಟಿ ರೂಪಾಯಿ ಮಾತ್ರ. ಈ ಬಾರಿ ಅದೂ ಇಲ್ಲ. ಇಷ್ಟೇ ಸಾಲದೆಂಬಂತೆ ಕೇಂದ್ರದ ಪರಿಸರ ಇಲಾಖೆಯೂ ಈ ಯೋಜನೆಗೆ ಅಡ್ಡಿಯಾಗಿ ನಿಂತಿದೆ.

ಈ ಬಾರಿ ರೈಲ್ವೆ ಬಜೆಟ್‌ನಲ್ಲಿ ಜಿಲ್ಲೆಗೆ ಸಿಕ್ಕಿರುವುದು ಒಂದು ಹೊಸ ರೈಲು. (ಬೆಂಗಳೂರು- ಮೈಸೂರು-ಹಾಸನ) ಆದರೆ ಹಾಸನದಿಂದ ಬೆಂಗಳೂರಿಗೆ ಹೋಗುವವರು ಯಾರೂ ಮೈಸೂರು ಮಾರ್ಗವಾಗಿ  ಸುತ್ತಿಬಳಸಿ ಹೋಗಲು ಬಯಸುವುದಿಲ್ಲ ಎಂಬುದೂ ಅಷ್ಟೇ ಸತ್ಯ. ಆದ್ದರಿಂದ ಹೊಸ ರೈಲೂ ಈ ಜಿಲ್ಲೆಯ ಜನರಿಗೆ ಅಂಥ  ಸಂತಸವನ್ನು ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT