ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನಾಂಬಾ

Last Updated 26 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಹಾಸನಾಂಬಾ ಹಾಸನ ನಗರದ ಅಧಿ ದೇವತೆ. ನಿತ್ಯವೂ ಈ ತಾಯಿಯ ದರ್ಶನ ಸಿಗುವುದಿಲ್ಲ. ವರ್ಷಕ್ಕೊಂದು ಬಾರಿ ಕನಿಷ್ಠ ಒಂಬತ್ತು ದಿನಗಳಿಂದ ಹದಿನೈದು ದಿನಗಳವರೆಗೆ ಹಾಸನಾಂಬಾ ದೇವಸ್ಥಾನದ ಗರ್ಭಗುಡಿಯ ಬಾಗಿಲು ತೆರೆಯುತ್ತದೆ.

ಈ ಸಂದರ್ಭದಲ್ಲಿ ರಾಜ್ಯದ ನಾನಾ ಮೂಲೆಗಳಿಂದ ಲಕ್ಷಾಂತರ ಭಕ್ತರು ಹಾಸನಕ್ಕೆ ಬಂದು ಅಮ್ಮನ ದರ್ಶನ ಪಡೆಯುತ್ತಾರೆ. ಅದೇ ಹಾಸನಂಬಾ ದೇವಸ್ಥಾನದ ವಿಶೇಷ.

ಹಾಸನಾಂಬೆಯ ದೇವಸ್ಥಾನ 12ನೇ ಶತಮಾನದಲ್ಲಿ ಕೃಷ್ಣಪ್ಪ ನಾಯಕರೆಂಬ ಪಾಳೇಗಾರರ ಕಾಲದಲ್ಲಿ ಸ್ಥಾಪನೆಯಾಯಿತು. ಹಾಸನಾಂಬೆ ಇಲ್ಲಿ ಹುತ್ತದ ರೂಪದಲ್ಲಿ ನೆಲಸಿದ್ದಾಳೆ.

ವರ್ಷದ ಜಾತ್ರೆ ಮುಗಿಸಿ ದೇವಸ್ಥಾನದ ಬಾಗಿಲು ಮುಚ್ಚುವ ಸಮಯದಲ್ಲಿ ದೇವಿಯ ಮುಂದೆ ಇಟ್ಟಿದ್ದ ನೈವೇದ್ಯ ಮುಂದಿನ ವರ್ಷ ಬಾಗಿಲು ತೆರೆದಾಗಲೂ ಹಾಗೇ ಇರುತ್ತದೆ ಮತ್ತು ಹಚ್ಚಿಟ್ಟ ದೀಪ ಉರಿಯುತ್ತಲೇ ಇರುತ್ತದೆ ಎಂಬ ಪ್ರತೀತಿ ಇದೆ.
ದೇವಸ್ಥಾನದ ಬಾಗಿಲು ತೆರೆದಾಗ ನೇರವಾಗಿ ದೇವಿಯ ದೃಷ್ಟಿಗೆ ಬೀಳುವುದು ಶುಭಕರವಲ್ಲ ಎಂಬ ನಂಬಿಕೆ ಇದೆ.

ಅದಕ್ಕಾಗಿ ಬಾಗಿಲು ತೆರೆಯುತ್ತಿದ್ದಂತೆ ದೃಷ್ಟಿ ನಿವಾರಣೆಗೆ ಗರ್ಭಗುಡಿಯ ಮುಂಭಾಗದಲ್ಲಿ ಬಾಳೆ ಕಂದು ಕಡಿಯುವ ಸಂಪ್ರದಾಯವಿದೆ. ಗರ್ಭಗುಡಿ ಮುಂದೆ ಬಾಳೆಗೊನೆ ಸಹಿತವಾದ ಬಾಳೆ ಕಂದನ್ನು ನೆಡುತ್ತಾರೆ. ಈ ಸಂಪ್ರದಾಯ ಬೇರೆಲ್ಲೂ ಇಲ್ಲ. ದೇವಿಯ ಪಾದಗಳಿಗೆ ಪೂಜೆ, ಕುಂಕುಮಾರ್ಚನೆ ನಡೆಸಿ ಬಾಗಿಲು ತೆರೆಯುತ್ತಿದ್ದಂತೆ ತಳವಾರ ವಂಶಸ್ಥರು ಬಾಳೆ ಕಂದನ್ನು ಕಡಿಯುತ್ತಾರೆ.
 
ಬಹಳ ವರ್ಷಗಳ ಹಿಂದೆ ಬಾಗಿಲು ತೆರೆಯುವ ದಿನ ನರಬಲಿ ನೀಡಲಾಗುತ್ತಿತ್ತಂತೆ. ಅದನ್ನು ನಿಲ್ಲಿಸಿ ಪರ್ಯಾಯವಾಗಿ ಬಾಳೆ ಕಂದು ಕಡಿಯುವ ಸಂಪ್ರದಾಯ ಜಾರಿಗೆ ಬಂತು ಎನ್ನಲಾಗಿದೆ.

ಹಾಸನಾಂಬಾ ದೇವಾಲಯದ ಆವರಣ ಪ್ರವೇಶಿಸುತ್ತಿದ್ದಂತೆ ಸಿದ್ದೆೀಶ್ವರ ಸ್ವಾಮಿ ಗೋಚರಿಸುತ್ತದೆ. ಸಾಮಾನ್ಯವಾಗಿ ಶಿವ ಲಿಂಗರೂಪಿ. ಇಲ್ಲಿ ಪಾಶುಪತಾಸ್ತ್ರವನ್ನು ನೀಡುವ ಭಂಗಿಯಲ್ಲಿದ್ದಾನೆ. ಇಲ್ಲಿನ ಇನ್ನೊಂದು ವೈಶಿಷ್ಟ್ಯವೆಂದರೆ ಎಲ್ಲ ದೇವಸ್ಥಾನಗಳಲ್ಲಿ ಬೆಳಿಗ್ಗೆ ರಥೋತ್ಸವ ನಡೆದರೆ ಇಲ್ಲಿ ರಾತ್ರಿ ನಡೆಯುತ್ತದೆ.

ಹಾಸನಾಂಬೆ ದೇಗುಲದ ಬಾಗಿಲು ಮುಚ್ಚುವ ಹಿಂದಿನರಾತ್ರಿ ಅಮಾವಾಸ್ಯೆಯಂದು ಸಿದ್ದೆೀಶ್ವರ ಸ್ವಾಮಿಯ ರಾವಣೋತ್ಸವ. ಕೊನೆಯ ದಿನ ಮುಂಜಾನೆ ಸಿದ್ದೆೀಶ್ವರ ಸ್ವಾಮಿಯ ಕೆಂಡೋತ್ಸವ ಹಾಗೂ ವಿಶ್ವರೂಪದರ್ಶನ ಇರುತ್ತದೆ. ಈ ದೇವಸ್ಥಾನದಲ್ಲಿ ತಲೆತಲಾಂತರದಿಂದ ನಡೆದುಬಂದ ಸಂಪ್ರದಾಯಗಳಿವೆ. ಅವನ್ನು ಚಾಚೂ ತಪ್ಪದೆ ಪಾಲಿಸಿಕೊಂಡು ಬರಲಾಗುತ್ತಿದೆ.

ಹಾಸನಾಂಬೆಗೆ ಒಟ್ಟು ಏಳು ಮಂದಿ ಸೋದರಿಯರು. ಅವರಲ್ಲಿ ಹಿರಿಯವಳಾದ ಕೆಂಚಮ್ಮ ಪಕ್ಕದ ಆಲೂರು ತಾಲ್ಲೂಕಿನ ಕೆಂಚಮ್ಮನ ಹೊಸಕೋಟೆಯಲ್ಲಿ ನೆಲೆಸಿದ್ದಾಳೆ. ಮಹಾಕಾಳಿ, ಮಹಾಲಕ್ಷ್ಮಿ ಹಾಗೂ ಮಹಾತ್ರಿಪುರ ಸುಂದರಿ ಎಂಬ ಸೋದರಿಯರು ಹಾಸನದಲ್ಲಿದ್ದಾರೆ.

ಉಳಿದ ಮೂವರು ಹಾಸನದ ಹೃದಯಭಾಗದಲ್ಲಿರುವ ದೇವಿಕೆರೆಯಲ್ಲಿ ನೆಲೆಸಿದ್ದಾರೆ ಎಂಬ ಐತಿಹ್ಯವಿದೆ. ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಸಂದರ್ಭದಲ್ಲಿ ಈ ಸೋದರಿಯರನ್ನು ದೇವಸ್ಥಾನಕ್ಕೆ ಆವಾಹನೆ ಮಾಡಿ ಪೂಜೆ ಸಲ್ಲಿಸುವ ಸಂಪ್ರದಾಯವಿದೆ.

ಹಾಸನಾಂಬಾ ದೇವಸ್ಥಾನದಲ್ಲಿ ವಿಶೇಷ ಸೇವೆಗಳೇನೂ ಇಲ್ಲ. ಭಕ್ತರು ತಮಗೆ ಇಷ್ಟ ಬಂದ ರೀತಿಯಲ್ಲಿ ಹರಕೆ ಕಟ್ಟಿಕೊಂಡು ಅವನ್ನು ಸಲ್ಲಿಸುವ ಸಂಪ್ರದಾಯವಿದೆ. ಮಕ್ಕಳಿಲ್ಲದ ಮಹಿಳೆಯರು ಬೆಳ್ಳಿಯ  ತೊಟ್ಟಿಲನ್ನು ಅಮ್ಮನಿಗೆ ಹರಕೆಯಾಗಿ ಸಲ್ಲಿಸುತ್ತಾರೆ.
 
ಮದುವೆಯಾಗದ ಹುಡುಗಿಯರು ಕಂಕಣ ಬಲಕ್ಕಾಗಿ ಕೋರಿಕೆ ಸಲ್ಲಿಸಿ ಬೆಳ್ಳಿಯ ತಾಳಿ ಸಮರ್ಪಿಸುತ್ತಾರೆ. ಕಣ್ಣಿನ ಸಮಸ್ಯೆಯಿಂದ ಬಳಲುವವರು ಬೆಳ್ಳಿಯ ಕಣ್ಣು ಮಾಡಿಸಿ ಹರಕೆ ಸಲ್ಲಿಸಿದ ಉದಾಹರಣೆಗಳಿವೆ. ಅಮ್ಮನಿಗೆ ಸೀರೆಗಳನ್ನು ಸಲ್ಲಿಸಿ ಹರಕೆ ತೀರಿಸುವವರೇ ಹೆಚ್ಚು.

ಇದೇ  ಅಕ್ಟೋಬರ್ 20ರಂದು ದೇವಸ್ಥಾನದ ಬಾಗಿಲು ತೆರೆಯಿತು. ಅ.28ರಂದು ಮಧ್ಯಾಹ್ನ 12 ಗಂಟೆಗೆ ಬಾಗಿಲು ಮುಚ್ಚಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT