ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸಿಗೆ ಇದ್ದಷ್ಟು ಕಾಲು ಚಾಚಲಿ...

ಅಕ್ಷರ ಗಾತ್ರ

ಸಾಹಿತ್ಯ ಸಮ್ಮೇಳನದ ಈಗಿನ ಸ್ವರೂಪದ ಬಗ್ಗೆ ಎಳ್ಳಷ್ಟೂ ತೃಪ್ತಿ ಇಲ್ಲ. ಅಲ್ಲಿ ಸಾಹಿತ್ಯಕ್ಕಿಂತ ಬೇರೆ ವಿಚಾರಗಳೇ ಸದ್ದು ಮಾಡುತ್ತವೆ. ಸಾಹಿತ್ಯ ಪರಿಷತ್ತು ಪ್ರಭುತ್ವದ ಆಶ್ರಯದಿಂದ ಹೊರಬರಬೇಕಿದೆ. ಆಗ ಮಾತ್ರ ಸಮ್ಮೇಳನ ರಾಜಕೀಯದಿಂದ ಹೊರತಾಗುತ್ತದೆ. ಪರಿಷತ್ತು ಹಾಸಿಗೆ ಇದ್ದಷ್ಟು ಕಾಲು ಚಾಚಿದರೆ ಇದು ಸಾಧ್ಯ ಎನ್ನುತ್ತಾರೆ ಪಾಟೀಲ ಪುಟ್ಟಪ್ಪ.

ಕಸಾಪ ತನ್ನ ದತ್ತಿನಿಧಿ ಹಾಗೂ ಸಾರ್ವಜನಿಕರಿಂದ ಹಣ ಪಡೆದು ಸಾಹಿತ್ಯ ಸಮ್ಮೇಳನ ಆಯೋಜಿಸಿದರೆ ಸರ್ಕಾರದ ಮರ್ಜಿ ಕಾಯುವುದು ತಪ್ಪುತ್ತದೆ ಎಂಬುದು ಅವರ ಸಲಹೆ.

ಬರೀ ಸಮ್ಮೇಳನದ ವೇದಿಕೆ ನಿರ್ಮಿಸಲು 40ರಿಂದ 50 ಲಕ್ಷ ರೂಪಾಯಿ ವ್ಯಯಿಸುವುದು ನಾಚಿಕೆಗೇಡು. ಮೆನು ಹೇಳಿ ಸಾಹಿತ್ಯಾಸಕ್ತರನ್ನು ಆಕರ್ಷಿಸುವುದು ಸಲ್ಲ. ಊಟದ ಬಗ್ಗೆ ಅಷ್ಟೊಂದು ಪ್ರಚಾರ ಅಗತ್ಯವಿಲ್ಲ. ಸಾಹಿತ್ಯ ಸಮ್ಮೇಳನ ಎಂದರೆ ಮನೆ ಅಳಿಯನನ್ನು ಸಂಪ್ರೀತಗೊಳಿಸುವುದಲ್ಲ. ಅಲ್ಲಿ ಊಟ ಕೊಡುವ ಅಗತ್ಯವೂ ಇಲ್ಲ. ಬದಲಿಗೆ ಸಾಹಿತ್ಯದ ಸಮಾರಾಧನೆ ಆಗಬೇಕಿದೆ.

ಸಮ್ಮೇಳನಕ್ಕೆ ಸರ್ಕಾರಿ ನೌಕರರ ಒಂದು ದಿನದ ಸಂಬಳ ಪಡೆಯುವುದು, ಅನ್ಯ ಕಾರ್ಯ ನಿಮಿತ್ತ (ಒಒಡಿ) ರಜೆ ನೀಡುವುದು ಸಲ್ಲ. ರಜೆಯ ಕಳೆಯಲು ಬಂದವರು ಕಾಲಹರಣ ಮಾಡುತ್ತಾರೆ. ಇದರಿಂದ ಸಮ್ಮೇಳನದ ಗಂಭೀರತೆ ಕಳೆದುಹೋಗುತ್ತಿದೆ ಎಂಬುದು ಪಾಪು ಕಳವಳ.

ಸಾಹಿತ್ಯಾಸಕ್ತರು ಸ್ವ-ಇಚ್ಛೆಯಿಂದ ಸಮ್ಮೇಳನಕ್ಕೆ ಬರಬೇಕಿದೆ. ಸಮ್ಮೇಳನದಲ್ಲಿ ಇಲ್ಲಿಯವರೆಗೂ ಕೈಗೊಂಡಿರುವ ಗೊತ್ತುವಳಿಯಲ್ಲಿ ಒಂದೂ ಕಾರ್ಯರೂಪಕ್ಕೆ ಬಂದಿಲ್ಲ. ಇದು ಪ್ರಭುತ್ವದ ನಿರ್ಲಕ್ಷ್ಯ ಹಾಗೂ ರಾಜಸೇವಾಸಕ್ತ ಕನ್ನಡ ಸಾಹಿತ್ಯ ಪರಿಷತ್ತಿನ ಅಸಹಾಯಕತೆ ಬಿಂಬಿಸುತ್ತದೆ ಎನ್ನುತ್ತಾರೆ.

ಸಾಹಿತ್ಯ ಸಮ್ಮೇಳನವನ್ನು ಅರ್ಥಪೂರ್ಣವಾಗಿ ನಡೆಸುವಲ್ಲಿ ಪಕ್ಕದ ಮಹಾರಾಷ್ಟ್ರ ನಮಗೆ ಮಾದರಿ. ಅಲ್ಲಿ ಮರಾಠಿ ಸಾಹಿತ್ಯ ಸಮ್ಮೇಳನಕ್ಕೆ ಯಾವುದೇ ರಾಜಕಾರಣಿಯನ್ನು ಆಹ್ವಾನಿಸುವುದಿಲ್ಲ. ಇದಕ್ಕೆ ನಿದರ್ಶನವಾಗಿ 60ರ ದಶಕದಲ್ಲಿ ಯಶವಂತರಾವ್ ಚವ್ಹಾಣ್ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದರು.ಅವರ ಸ್ವಂತ ಊರಾದ ಸತಾರ ಜಿಲ್ಲೆ ಕರಾಡದಲ್ಲಿ ಮರಾಠಿ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿತ್ತು. ಸಮ್ಮೇಳನಕ್ಕೆ ಬಂದಿದ್ದ ಯಶವಂತರಾವ್ ಸಾಮಾನ್ಯ ಪ್ರೇಕ್ಷಕರಂತೆ ಕುಳಿತು ಗೋಷ್ಠಿಗಳನ್ನು ಆಸ್ವಾದಿಸಿದ್ದರು. ಈಗಲೂ ಅದೇ ಪರಂಪರೆ ಅಲ್ಲಿ ಮುಂದುವರೆದಿದೆ. ಮುಖ್ಯಮಂತ್ರಿ ಜಗದೀಶ ಶೆಟ್ಟರ್ ರಾಜ್ಯದಲ್ಲಿ ಈ ಬಾರಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಲಿ ಎಂದು ಪಾಪು ಸಲಹೆ ನೀಡುತ್ತಾರೆ.

ಸಮ್ಮೇಳನದ ವೇದಿಕೆ ಅಕಾಡೆಮಿಕ್ ಹಿನ್ನೆಲೆ ಇರುವವರಿಗೆ ಮಾತ್ರ ಎಂಬಂತಾಗಿದೆ. ಅಲ್ಲಿ ಚರ್ಚೆಗೆ ಬರುವ ವಿಚಾರಗಳು ಬಹುತೇಕ ಅವರನ್ನೇ ಕೇಂದ್ರೀಕರಿಸಿರುತ್ತವೆ. ಸಾಹಿತಿ ಬೆಟಗೇರಿ ಕೃಷ್ಣಶರ್ಮರಿಗೆ ಅಕಾಡೆಮಿಕ್ ಹಿನ್ನೆಲೆ ಇರಲಿಲ್ಲ. ಆದರೆ ಅವರು ವಿದ್ವತ್ತಿನಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದ ಯಾವುದೇ ಸಾಹಿತಿಗಿಂತ ಕಡಿಮೆ ಇರಲಿಲ್ಲ. ಅಕಾಡೆಮಿಕ್ ಹಿನ್ನೆಲೆ ಇರುವವರಲ್ಲಿ ಹಲವರು ಇಂಗ್ಲಿಷ್ ಸೇರಿದಂತೆ ಬೇರೆ ಬೇರೆ ಭಾಷೆಗಳಿಂದ ಕದ್ದು ತಂದು ಬರೆದವರಿದ್ದಾರೆ. ಅಕಾಡೆಮಿಕ್ ಹಿನ್ನೆಲೆ ಇಲ್ಲದವರಿಗೂ ಅಲ್ಲಿ ಪ್ರಾಶಸ್ತ್ಯ ದೊರೆಯಬೇಕಿದೆ ಅವರೇ ನಿಜವಾದ ಮಡಿವಂತರು ಎಂಬುದು ಪಾಪು ನಿಲುವು.

ಸಾಹಿತ್ಯಕ್ಕೆ ಜಾತಿಯ ಅಥವಾ ಲೈಂಗಿಕ ಸ್ವರೂಪ ಕೊಡುವ ಅಗತ್ಯವಿಲ್ಲ. ಜಾತಿ ಸ್ವರೂಪ ನೀಡಿದಲ್ಲಿ ಮೇಲ್ಜಾತಿಯವರಿಗಿಂತ ಚೆನ್ನಾಗಿ ಬರೆಯುವ ದಲಿತ ಲೇಖಕ ಅಲ್ಲಿಯೇ ಕಳೆದುಹೋಗುವ ಅಪಾಯ ಇರುತ್ತದೆ. ಬದಲಿಗೆ ಮೌಲಿಕತೆಗೆ  ಬೆಲೆ ನೀಡಬೇಕಿದೆ. ಸಮ್ಮೇಳನದ ಸಂಖ್ಯೆಗೆ ಅನುಗುಣವಾಗಿ ಪುಸ್ತಕಗಳನ್ನು ಬಿಡುಗಡೆಯ ಕ್ರಮ ತಪ್ಪು. 5ರಿಂದ 6 ಉತ್ತಮ ಕೃತಿಗಳ ಪ್ರಕಟಿಸುವುದು ಸೂಕ್ತ. ಸಮ್ಮೇಳನದಲ್ಲಿ ಆದಷ್ಟು ಕಡಿಮೆ ಬೆಲೆಗೆ ಕನ್ನಡ ಪುಸ್ತಕಗಳು ಮಾರಾಟವಾಗುವಂತೆ ನೋಡಿಕೊಳ್ಳಬೇಕಿದೆ.  ಸಮ್ಮೇಳನ ಒಟ್ಟಾರೆ ಕನ್ನಡಿಗರ ಆತ್ಮವಿಮರ್ಶೆಗೆ ವೇದಿಕೆಯಾಗಬೇಕಿದೆ ಎಂಬುದು ಪಾಪು ಆಶಯ.

-ಪಾಟೀಲ ಪುಟ್ಟಪ್ಪ,
(ಬೆಳಗಾವಿಯಲ್ಲಿ ನಡೆದ 70ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು.)
ನಿರೂಪಣೆ: ವೆಂಕಟೇಶ್ ಜಿ.ಎಚ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT