ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸ್ಟೆಲ್ ಊಟ ಮಾಡಿ: ಡಿ.ಸಿಗಳಿಗೆ ಸಿ.ಎಂ ತಾಕೀತು

Last Updated 5 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: `ಜಿಲ್ಲಾಧಿಕಾರಿಗಳು ಕೇವಲ ಕಚೇರಿಗೆ ಸೀಮಿತವಾಗದೆ ಇಡೀ ಜಿಲ್ಲೆಯಲ್ಲಿ ಪ್ರವಾಸ ಮಾಡಬೇಕು, ಯೋಜನೆಗಳ ಅನುಷ್ಠಾನದ ಮೇಲೆ ನಿಗಾ ಇಡಬೇಕು, ಜನಸಂಪರ್ಕ ಸಭೆಗಳನ್ನು ನಡೆಸುವುದರ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು, ಹಾಸ್ಟೆಲ್‌ಗಳಲ್ಲಿ ಊಟ ಮಾಡಿ, ಅದರ ಗುಣಮಟ್ಟ ಪರಿಶೀಲಿಸಬೇಕು. ಈ ಕೆಲಸ ಮಾಡದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುತ್ತೇನೆ'....ವಿಧಾನಸೌಧದಲ್ಲಿ ನಡೆದ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಹೀಗೆ ಗುಡುಗಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ.

`ಕಳೆದ ಬಾರಿ ನಡೆದ ಜಿಲ್ಲಾಧಿಕಾರಿಗಳ ಸಭೆಯಲ್ಲಿನ ಸೂಚನೆಗಳನ್ನು ಎಲ್ಲ ಅಧಿಕಾರಿಗಳೂ ಪಾಲಿಸಿಲ್ಲ. ಇದು ಸರಿಯಾದ ಪರಿಪಾಠ ಅಲ್ಲ' ಎಂದು ಎಚ್ಚರಿಕೆ ನೀಡಿದ ಅವರು `ಮುಂದಿನ ದಿನಗಳಲ್ಲಿ ಇಂತಹ ವರ್ತನೆಯನ್ನು ಸಹಿಸುವುದಿಲ್ಲ. ಸಬೂಬು ಹೇಳದೆ ಅಧಿಕಾರಿಗಳು ಜನಸೇವೆ ಮಾಡಬೇಕು' ಎಂದು ತಾಕೀತು ಮಾಡಿದರು.

`ಜಿಲ್ಲಾ ಮಟ್ಟದಲ್ಲಿ ಆಗುವ ಎಲ್ಲ ಲೋಪಗಳಿಗೂ ಜಿಲ್ಲಾಧಿಕಾರಿಗಳನ್ನೇ ಹೊಣೆ ಮಾಡಲಾಗುತ್ತದೆ. ಹೀಗಾಗಿ ಅವರು ಹೆಚ್ಚು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಪ್ರತಿ ತಿಂಗಳು ಸಂಬಂಧಪಟ್ಟ ಜಿಲ್ಲೆಗಳಿಗೆ ಭೇಟಿ ನೀಡಿ, ಪ್ರಗತಿ ಪರಿಶೀಲನೆ ನಡೆಸಬೇಕು. ನಂತರ ಸರ್ಕಾರಕ್ಕೆ ಕಡ್ಡಾಯವಾಗಿ ವರದಿ ನೀಡಬೇಕು' ಎಂದೂ ಅವರು ಸೂಚಿಸಿದರು.

ಕೇಂದ್ರ ಸರ್ಕಾರ ಕಳೆದ ವರ್ಷ ಕೊಟ್ಟಿದ್ದ ಬೆಳೆ ಪರಿಹಾರವನ್ನು ಇನ್ನೂ ಬಿಡುಗಡೆ ಮಾಡದ ಅಧಿಕಾರಿಗಳ ವಿರುದ್ಧವೂ ಮುಖ್ಯಮಂತ್ರಿ ಕೆಂಡಕಾರಿದರು. `ಸುಮಾರು 327 ಕೋಟಿ ರೂಪಾಯಿಗಳಲ್ಲಿ ಕೇವಲ 240 ಕೋಟಿ ಮಾತ್ರ ರೈತರಿಗೆ ಕೊಟ್ಟಿದ್ದು ಉಳಿದ ಹಣ ಕೂಡ ಇದೇ ತಿಂಗಳ 15ರೊಳಗೆ ಪಾವತಿ ಮಾಡಬೇಕು. ಅರ್ಜಿ ಜಾಸ್ತಿ ಇದೆ, ಸಿಬ್ಬಂದಿ ಇಲ್ಲ ಎಂದು ಸಬೂಬು ಹೇಳಬಾರದು' ಎಂದು  ಎಚ್ಚರಿಸಿದರು.

`ವಾರಕ್ಕೊಮ್ಮೆ ಹೋಬಳಿ ಮಟ್ಟದಲ್ಲಿ ಪಿಂಚಣಿ ಅದಾಲತ್‌ಗಳನ್ನು ನಡೆಸಲು ಸೂಚಿಸಲಾಗಿತ್ತು. ಇದುವರೆಗೂ ಕೇವಲ 120 ಪಿಂಚಣಿ ಅದಾಲತ್‌ಗಳನ್ನು ನಡೆಸಲಾಗಿದೆ. ಈ ತಿಂಗಳ 25ರೊಳಗೆ ಬಾಕಿ ಇರುವ ಕಡೆಯೂ ಉಪ ವಿಭಾಗಾಧಿಕಾರಿಗಳು ಅದಾಲತ್‌ಗಳನ್ನು ನಡೆಸಬೇಕು. ಇದನ್ನು ಜಿಲ್ಲಾಧಿಕಾರಿಗಳು ಮೇಲ್ವಿಚಾರಣೆ ಮಾಡಬೇಕು' ಎಂದು ಸೂಚಿಸಿದರು.

`ಅನ್ನಭಾಗ್ಯ ಮತ್ತು ಕ್ಷೀರಭಾಗ್ಯ ಯೋಜನೆಗಳ ಅನುಷ್ಠಾನದ ಕಡೆ ಜಿಲ್ಲಾಧಿಕಾರಿಗಳು ಹೆಚ್ಚು ಗಮನ ನೀಡಬೇಕು. ಯಾವುದೇ ಕಾರಣಕ್ಕೂ ಬಡವರಿಗೆ ಅನ್ಯಾಯ ಆಗದಂತೆ ಎಚ್ಚರ ವಹಿಸಬೇಕು. ಕೆಜಿ ಅಕ್ಕಿಗೆ ಒಂದು ರೂಪಾಯಿಗಿಂತ ಹೆಚ್ಚು ಹಣ ಪಡೆಯುವ ಬಗ್ಗೆ ದೂರುಗಳು ಬಂದಿದ್ದು, ಅದಕ್ಕೆ ಕಡಿವಾಣ ಹಾಕಬೇಕು. ಈ ಬಗ್ಗೆ ಜನಜಾಗೃತಿ ಮೂಡಿಸಬೇಕು' ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.

ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ವಿದ್ಯಾರ್ಥಿನಿಲಯಗಳಿಗೆ ಅಗತ್ಯ ಇರುವ ಸರ್ಕಾರಿ ಜಮೀನನ್ನು ತಕ್ಷಣ ಮಂಜೂರು ಮಾಡಬೇಕು. ಸಂಬಂಧಪಟ್ಟ ಇಲಾಖೆಗಳಿಂದ ಭೂಮಿಗೆ ಬೇಡಿಕೆ ಬಂದ ತಕ್ಷಣ ಜಮೀನು ಹಸ್ತಾಂತರ ಮಾಡಬೇಕು. ಈ ವಿಷಯದಲ್ಲಿ ವಿಳಂಬ ಆಗಬಾರದು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಭೂ ಕಂದಾಯ ಕಟ್ಟುವುದಕ್ಕೆ ಡಿಸೆಂಬರ್ 31ರವರೆಗೂ ಸಮಯ ನೀಡಲಾಗಿದೆ ಎಂದರು.

ಚಿಕ್ಕಮಗಳೂರು ಡಿ.ಸಿಗೆ ತರಾಟೆ
`ಕ್ಷೀರಭಾಗ್ಯ' ಯೋಜನೆ ಜಾರಿ ಕುರಿತು ಮಾಹಿತಿ ಇಲ್ಲದ ಚಿಕ್ಕಮಗಳೂರು ಜಿಲ್ಲಾಧಿಕಾರಿ ವಿ.ಯಶವಂತ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡರು.

ಜಿಲ್ಲಾಧಿಕಾರಿಗಳ ಸಭೆಯಲ್ಲಿ ಅವರು ಕ್ಷೀರಭಾಗ್ಯ ಯೋಜನೆಯ ಬಗ್ಗೆ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕ್ಷೀರಭಾಗ್ಯ ಈ ಯೋಜನೆ ಅನುಷ್ಠಾನವಾಗಿದೆಯೇ ಎಂದು ಜಿಲ್ಲಾಧಿಕಾರಿಯನ್ನು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಯಶವಂತ್, `ಈ ಯೋಜನೆ ಆರಂಭವಾದಾಗ ನಾನು ಜಿಲ್ಲೆಯಲ್ಲಿ ಇರಲಿಲ್ಲ. ರಜೆಯಲ್ಲಿ ಇದ್ದೆ. ಹೀಗಾಗಿ ಸರಿಯಾದ ಮಾಹಿತಿ ಇಲ್ಲ' ಎಂದರು. ಇದರಿಂದ ಸಿಡಿಮಿಡಿಗೊಂಡ ಸಿದ್ದರಾಮಯ್ಯ `ಡೊಂಟ್ ಟಾಕ್...ನಿಮಗೆ ಯಾಕೆ ಗೊತ್ತಾಗಿಲ್ಲ. ಹೊಸಕೋಟೆಯಲ್ಲಿ ನಾನೇ ಉದ್ಘಾಟಿಸಿದ್ದೇನೆ. ಪತ್ರಿಕೆಗಳು, ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಈ ವಿಷಯ ಬಂದಿದೆ. ಮಾಹಿತಿ ಇಲ್ಲ ಎಂದರೆ ಏನು ಅರ್ಥ ? ನೀವೆಲ್ಲ (ಡಿ.ಸಿ.ಗಳು) ಜವಾಬ್ದಾರಿ ಇರುವವರು. ಈ ರೀತಿ ಆದರೆ ಹೇಗೆ? ಇದಕ್ಕೆಲ್ಲ ಅವಕಾಶ ನೀಡಬಾರದು' ಎಂದು ಎಚ್ಚರಿಕೆ ನೀಡಿದರು.

ನೋಟಿಸ್ ನೀಡಲು ಸೂಚನೆ: ಹಾವೇರಿ ಜಿಲ್ಲಾಧಿಕಾರಿ ಪಾಂಡುರಂಗ ನಾಯಕ್ ಅವರು ಮುಖ್ಯಮಂತ್ರಿ ಕರೆದಿದ್ದ ಜಿಲ್ಲಾಧಿಕಾರಿಗಳ ಸಭೆಗೆ ಗೈರು ಹಾಜರಾಗಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿದ್ದರಾಮಯ್ಯ, ನಾಯಕ್ ಸೇರಿದಂತೆ ಸಭೆಗೆ ಗೈರು ಹಾಜರಾಗಿರುವ ಎಲ್ಲ ಜಿಲ್ಲಾಧಿಕಾರಿಗಳಿಗೆ ನೋಟಿಸ್ ನೀಡುವಂತೆ ಸೂಚಿಸಿದರು.

್ಙ 300 ಕೋಟಿ ನಷ್ಟ:  ಕರಾವಳಿ ಮತ್ತು ಮಲೆನಾಡಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾದ ಕಾರಣ ಪ್ರವಾಹ ಉಂಟಾಗಿದ್ದು, ಇದರಿಂದ ಸುಮಾರು ್ಙ 300 ಕೋಟಿ  ಆಸ್ತಿ-ಪಾಸ್ತಿ ನಷ್ಟ ಆಗಿದೆ. ್ಙ 12.39 ಕೋಟಿ ಮೊತ್ತದ ಬೆಳೆ ನಷ್ಟ ಆಗಿದೆ. ್ಙ 139 ಕೋಟಿ  ಮೊತ್ತದ ರಸ್ತೆ ಮತ್ತು ಸೇತುವೆಗಳಿಗೆ ಹಾನಿಯಾಗಿದೆ. ಶೀಘ್ರ ಸಮಗ್ರ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬಳಿಕ ಪರಿಹಾರಕ್ಕಾಗಿ ಕೇಂದ್ರ ಸರ್ಕಾರವನ್ನೂ ಕೋರಲಾಗುವುದು.

ರಾಜ್ಯದ 51 ತಾಲ್ಲೂಕುಗಳಲ್ಲಿ ವಾಡಿಕೆಗಿಂತ ಶೇ 20ರಷ್ಟು ಕಡಿಮೆ ಮಳೆಯಾಗಿದೆ. ಈ ತಾಲ್ಲೂಕುಗಳ ಪರಿಸ್ಥಿತಿ ಅವಲೋಕಿಸಿದ ನಂತರ ಬರಪೀಡಿತ ಎಂದು ಘೋಷಿಸಲಾಗುವುದು ಎಂದು ಹೇಳಿದರು.

ಸರ್ಕಾರಕ್ಕೆ ನೂರು ದಿನ: ಇದೇ 20ಕ್ಕೆ ಸರ್ಕಾರಕ್ಕೆ ನೂರು ದಿನ ಆಗುತ್ತದೆ. ಅಂದೇ ದೇವರಾಜ ಅರಸು ಮತ್ತು ರಾಜೀವ್‌ಗಾಂಧಿ ಜಯಂತಿ ಕೂಡ ಇದೆ. ಇದು ಕಾಕತಾಳೀಯ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT