ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸ್ಯ ಸಿನಿಮಾಗಳ ಯಾನ

ನೂರು ಕಣ್ಣು ಸಾಲದು
Last Updated 1 ಜೂನ್ 2013, 19:59 IST
ಅಕ್ಷರ ಗಾತ್ರ

ಭಾರತೀಯ ಚಲನಚಿತ್ರ ಚರಿತ್ರೆಯಲ್ಲಿ ಹಾಸ್ಯ ಪ್ರಧಾನ ಚಿತ್ರಗಳು ಅಲ್ಲಲ್ಲಿ ಕಂಡರೂ ಹಾಲಿವುಡ್‌ನಂತೆ ಸರಣಿ ಹಾಸ್ಯ ಚಿತ್ರಗಳು ಸಿದ್ಧಗೊಳ್ಳಲಿಲ್ಲ. ಮೂಕಿ ಯುಗದಲ್ಲಾಗಲೀ ಅಥವಾ ಟಾಕಿ ಯುಗದಲ್ಲಾಗಲೀ ಹಾಸ್ಯ ಚಿತ್ರ ತಯಾರಿಕಾ ಪ್ರಯತ್ನಗಳು ಅಲ್ಲಲ್ಲಿ ನಡೆದರೂ ಗಂಭೀರವಾದ ಹಾಸ್ಯ ಕಥಾ ಹಂದರವನ್ನು ಹೊಂದಿದ್ದ ಚಿತ್ರಗಳ ಸಂಖ್ಯೆ ಬಹಳ ವಿರಳ.

ಚಾರ್ಲಿ ಚಾಪ್ಲಿನ್, ಬೂಸ್ಟರ್ ಕೆಂಗ್‌ಸ್ಟನ್, ಹೆರಾಲ್ಡ್ ಲಾಯ್ಡ ಮೊದಲಾದ ಅಗ್ರಮಾನ್ಯ ಹಾಸ್ಯಗಾರರು ಮಾಡಿದ ಹಾಸ್ಯ ಚಿತ್ರ ಪ್ರಯೋಗಗಳು ಭಾರತದ ಪರದೆಯಲ್ಲಿ ಅಪರೂಪವಾಗಿದ್ದವು. ಪೌರಾಣಿಕ ಹಾಗೂ ಐತಿಹಾಸಿಕ ಚಿತ್ರಗಳೇ ಆರಂಭದಲ್ಲಿ ಹೆಚ್ಚಾಗಿ ತಯಾರಾದ ಭಾರತದಲ್ಲಿ ಹಾಸ್ಯ ಪ್ರಸಂಗವೆನ್ನುವುದು ಸನ್ನಿವೇಶಗಳ ಬದಲಾವಣೆಗೆ ಅಥವಾ ಏಕತಾನತೆ ಮುರಿಯಲು ಮಾತ್ರ ಎಂಬ ಅಭಿಪ್ರಾಯವಿತ್ತು. ದಾದಾ ಸಾಹೇಬ್ ಅವರ ಚಿತ್ರಗಳಲ್ಲಿಯೂ ಹಾಸ್ಯಕ್ಕೆ ಹೆಚ್ಚಿನ ಒತ್ತು ಸಿಕ್ಕಿರಲಿಲ್ಲ. 

ಧಿರೇನ್ ಗಂಗೂಲಿ ಮೂಕಿ ಚಿತ್ರಯುಗದಲ್ಲಿಯೇ ಹಾಸ್ಯ ಚಿತ್ರಗಳನ್ನು ಮಾಡಲಾರಂಭಿಸಿದರೂ ಅವು ಹೆಚ್ಚು ಪ್ರಾಮುಖ್ಯತೆ ಪಡೆದಿರಲಿಲ್ಲ. ಆದರೆ, ಸ್ವತಃ ಹಾಸ್ಯ ಕಲಾವಿದರಾಗಿದ್ದ ಗಂಗೂಲಿ ತಮಾಷೆ ಪ್ರಸಂಗಗಳ ಚಿತ್ರಗಳ ತಯಾರಿಕೆ ನಿಲ್ಲಿಸಲಿಲ್ಲ. ಬಂಗಾಲಿಯಲ್ಲಿ `ಬೈಲಾತ್ ಪರಾತ್' ಎಂಬ ಮೂಕಿ ಚಿತ್ರವೇ ಭಾರತದ ಮೊದಲ ಹಾಸ್ಯಪ್ರಧಾನ ಚಿತ್ರವೆನ್ನಬಹುದು. ಇದನ್ನು ತಯಾರಿಸಿದ ಧಿರೇನ್ ಗಂಗೂಲಿ ಚಲನಚಿತ್ರಗಳಿಗೆ  ಮಾತು ಬಂದ ಮೇಲೆ ನ್ಯೂ ಥಿಯೇಟರ್ಸ್‌ನ ಬಿ. ಎನ್. ಸರ್ಕಾರ್‌ರವರೊಂದಿಗೆ ಅನೇಕ ಹಾಸ್ಯ ಚಿತ್ರಗಳ ತಯಾರಿಕೆಗೆ ಕೈಹಾಕಿದರು. ಆ ಸಂದರ್ಭದಲ್ಲಿ ಇವರು ತಯಾರಿಸಿದ ಹತ್ತಾರು ಮೂಕಿ ಹಾಗೂ ಟಾಕಿ ಹಾಸ್ಯ ಚಿತ್ರಗಳು ಸಾಮಾನ್ಯ ಯಶಸ್ಸನ್ನು ಪಡೆದವು. 

ಧಿರೇನ್ ಗಂಗೂಲಿ ತಯಾರಿಸಿದ `ಎಕ್ಸ್‌ಕ್ಯೂಸ್ ಮಿ ಸರ್' ತುಂಬಾ ಪರಿಣಾಮಕಾರಿಯಾದ ಹಾಸ್ಯ ಚಿತ್ರವಾಗಿತ್ತು ಎಂಬ ಪ್ರಶಂಸೆ ಪಡೆದಿದೆಯಾದರೂ ಆ ಮೂಕಿ ಚಿತ್ರ ಈಗ ಅಲಭ್ಯ. 

ವಿಡಂಬನಾತ್ಮಕ ಚಿತ್ರಗಳು ವಿದೇಶಗಳಲ್ಲಿ ಹೆಚ್ಚು ಸುದ್ದಿ ಮಾಡಿದ್ದರೂ ಭಾರತದಲ್ಲಿ ಅಂತಹ ರೀತಿಯ ಚಿತ್ರಗಳು ಸಿದ್ಧಗೊಳ್ಳಲಿಲ್ಲ. ಪಿ. ಬರೂವಾ ಅವರು ಅನೇಕ ಚಲನಚಿತ್ರಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದವರು. ಶರತ್‌ಚಂದ್ರರ `ದೇವ್‌ದಾಸ್' ಚಿತ್ರವನ್ನು ಬಂಗಾಲಿ ಭಾಷೆಯಲ್ಲಿ ತಯಾರಿಸಿದ ಬರೂವಾ ತೆಳು ಹಾಸ್ಯದ ವಿಡಂಬನಾ ಕೃತಿಯೊಂದನ್ನು ಸಿದ್ಧಗೊಳಿಸಿದರು. ಅದು ವುಡ್‌ಹೌಸ್‌ರವರ ಕಾದಂಬರಿಯೊಂದರ ಆಧಾರಿತ. `ರಜತ್ ಜಯಂತಿ' ಎಂಬ ಹೆಸರಿನಲ್ಲಿ ತಯಾರಾದ ಈ ಕೃತಿ ಹಾಸ್ಯ ಪ್ರಧಾನ ಚಿತ್ರವೆಂದು 1930ರ ದಶಕದಲ್ಲಿ ಖ್ಯಾತಿ ಪಡೆಯಿತು. ಜನಪ್ರಿಯತೆ ಪಡೆದು ಲಾಭವನ್ನೂ ಮಾಡಿದ `ರಜತ್ ಜಯಂತಿ' ಪ್ರತಿ ಕೂಡ ಈಗ ದೊರೆಯುತ್ತಿಲ್ಲ.

ಸನ್ನಿವೇಶಕ್ಕಾಗಿ ಹಾಸ್ಯ ಪ್ರಸಂಗಗಳನ್ನು ಜೋಡಿಸುವ ಪ್ರವೃತ್ತಿ ಹಲವಾರು ಮೂಕಿ ಹಾಗೂ ಟಾಕಿ ಚಿತ್ರಗಳಲ್ಲಿ ಕಂಡುಬರುವುದಾದರೂ ಮಹಾರಾಷ್ಟ್ರದ ಮಾಸ್ಟರ್ ವಿನಾಯಕ್ ಈ ಸಂಪ್ರದಾಯವನ್ನು ಮುರಿದು ಭಾರತದ ಹಾಸ್ಯ ಪ್ರಧಾನ ಚಿತ್ರಗಳಿಗೆ ಹೊಸ ಹಾದಿಯನ್ನು ಹಾಕಿಕೊಟ್ಟರು. `ಅಯೋಧ್ಯಾಚೇ ರಾಜಾ' ಚಿತ್ರದಲ್ಲಿ ಹಾಡುಗಾರ ನಾರದನ ಪಾತ್ರ ವಹಿಸಿದ್ದ ಮಾಸ್ಟರ್ ವಿನಾಯಕ್ ಪ್ರಸಿದ್ಧ ನಿರ್ದೇಶಕ ನಟ ವಿ. ಶಾಂತರಾಂ ಅವರ ಸಂಬಂಧಿ. ಜಾಗತಿಕ ಸಾಹಿತ್ಯದ ಪ್ರಮುಖರ ಕೃತಿಗಳನ್ನು ಅಭ್ಯಾಸ ಮಾಡಿದ್ದ ಮಾಸ್ಟರ್ ವಿನಾಯಕ್ ತಮ್ಮ ಸಂಬಂಧಿಗಳಾದ ಶಾಂತರಾಂ ಹಾಗೂ ಬಾಬುರಾವ್ ಪೆಂಡಾರ್‌ಕರ್ ಅವರೊಡನೆ ನಟರಾಗಿ, ಸಹ ನಿರ್ದೇಶಕರಾಗಿ, ಹಾಡುಗಾರರಾಗಿ ಕೆಲಸ ಮಾಡಿದರು. 

ಎಲ್ಲ ಚಿತ್ರಗಳೂ ಏಕತಾನತೆಯನ್ನೇ ತೋರುತ್ತಿದ್ದ ಆ ಸಂದರ್ಭದಲ್ಲಿ `ವಿಲಾಸಿ ಈಶ್ವರ್' ಎಂಬ ಮೋಜಿನ ಚಿತ್ರವನ್ನು ನಿರ್ದೇಶಿಸಿದರೂ ಅದು ವಿನಾಯಕ್ ಅವರಿಗೆ ಹೆಸರು ತಂದುಕೊಡಲಿಲ್ಲ, ಬಾಕ್ಸ್ ಆಫೀಸ್‌ನಲ್ಲಿಯೂ ವಿಫಲವಾಯಿತು. ಆದರೆ, ವಿನಾಯಕ್ ಮುಂದಿನ ಹೆಜ್ಜೆಗಳು ಬಹಳ ದೃಢವಾಗಿದ್ದವು. ಮರಾಠಿ ಹಾಗೂ ಹಿಂದಿ ಚಿತ್ರರಂಗಗಳಲ್ಲಿ ಹಲವಾರು ಹಾಸ್ಯ ಪ್ರಧಾನವಾದ ಚಲನಚಿತ್ರಗಳನ್ನು ನಿರ್ಮಿಸುವ ಮೂಲಕ ಹೆಸರು ಪಡೆದ ಅವರು ಪೌರಾಣಿಕ ಹಾಗೂ ಸಾಮಾಜಿಕ ಚಿತ್ರಗಳಲ್ಲೂ ಅರ್ಥವತ್ತಾದ ಹಾಸ್ಯವನ್ನು ಅಳವಡಿಸಿದ್ದರು. 

ಗಾಯಕ, ಕಲಾವಿದ ಹಾಗೂ ನಿರ್ದೇಶಕರಾಗಿ ಪ್ರಸಿದ್ಧರಾದ ಮಾಸ್ಟರ್ ವಿನಾಯಕ್ ಬಹುಮುಖ ಹಾಸ್ಯ ನಟರಾಗಿ ಜನಮನ ಸೆಳೆದರು. `ಆಚಾರ್ಯ ಅತ್ರೆ', `ಬ್ರಹ್ಮಚಾರಿ' ಮೊದಲಾದ ಸಾಮಾಜಿಕ ಚಿತ್ರಗಳಲ್ಲಿ ವಿಡಂಬನಾತ್ಮಕ ಕಥಾವಸ್ತುಗಳನ್ನು ಒಳಗೊಳ್ಳುವುದರ ಮೂಲಕ ಜನರ ಗಮನ ಸೆಳೆದ ವಿನಾಯಕ್ ಅವರ ಬ್ರಹ್ಮಚಾರಿ ಎಲ್ಲಾ ಸ್ತರದ ಪ್ರೇಕ್ಷಕರ ಪ್ರಶಂಸೆಗೆ ಪಾತ್ರವಾಯಿತು. ವಿವಾಹವಾಗದೇ ಜೀವನ ಪರ್ಯಂತ ಇರಬಯಸಿದ್ದ ಬ್ರಹ್ಮಚಾರಿಯೊಬ್ಬ ಕೊನೆಗೂ ಆಧುನಿಕ ಯುವತಿಯೊಬ್ಬಳ ತೆಕ್ಕೆಗೆ ಬೀಳುವ ಕಥಾವಸ್ತುವಿದ್ದ `ಬ್ರಹ್ಮಚಾರಿ' ಆ ಕಾಲಕ್ಕೆ ಅತ್ಯಂತ ಯಶಸ್ವಿ ಚಿತ್ರವಾಗಿ ಹೊರಹೊಮ್ಮಿತ್ತು. ಈ ಚಿತ್ರದಲ್ಲಿ ಆಧುನಿಕ ಯುವತಿ ಪಾತ್ರ ವಹಿಸಿದ್ದ ಮೀನಾಕ್ಷಿ ತಮ್ಮ ಹಾವಭಾವಗಳಿಂದ ಪ್ರೇಕ್ಷಕರ ಗಮನ ಸೆಳೆದರು. ಇವರು ಬಹಳ ದಿನ ವಿನಾಯಕ್ ಅವರ ಸಹನಟಿಯಾಗಿ ಅನೇಕ ಚಿತ್ರಗಳಿಗೆ ಕೆಲಸಮಾಡಿದರು. 

ಚಿತ್ರಗಳ ಮೂಲಕ ಪ್ರಭುತ್ವದ ನಿರ್ಧಾರಗಳನ್ನು ವಿಡಂಬನೆ ಮಾಡುವ ಹೊಸ ಮಾರ್ಗವನ್ನು ಮಾಸ್ಟರ್ ವಿನಾಯಕ್ ಸಾಮಾನ್ಯ ಭಾರತೀಯರ ಆಶಯಗಳನ್ನು ತಮ್ಮ ಚಿತ್ರಗಳಲ್ಲಿ ಬಿಂಬಿಸತೊಡಗಿದರು. `ಬ್ರಾಂದಿಚೀ ಬಾಟ್ಲಿ', `ಸರ್ಕಾರಿ ಪಹೂನೆ' ಮೊದಲಾದ ಚಿತ್ರಗಳಂತೂ ಆಡಳಿತ ಯಂತ್ರದ ಮೇಲೆ ಚಾಟಿ ಏಟು ಬೀಸಿದವು. ಜನತೆಯ ಆಶೋತ್ತರಗಳನ್ನು ಎತ್ತಿಹಿಡಿಯಬೇಕಾದ ಸರ್ಕಾರಗಳು ಕೈಗೊಳ್ಳುವ ತಪ್ಪು ನಿರ್ಧಾರಗಳನ್ನು ಬೊಟ್ಟು ಮಾಡಿ ತೋರುವ ಇಂತಹ ಚಿತ್ರಗಳಿಂದ ಜನತೆ ಜಾಗೃತಗೊಳ್ಳುವಂತಾಯಿತು. 

ಮಾಸ್ಟರ್ ವಿನಾಯಕ್ ಮರಾಠಿ ಹಾಗೂ ಹಿಂದಿ ಚಿತ್ರ ಜಗತ್ತಿನಲ್ಲಿ ಹಾಸ್ಯ ಮತ್ತು ವಿಡಂಬನೆಗಳನ್ನು ಹರಡುತ್ತಿದ್ದರೆ, ನ್ಯೂ ಥಿಯೇಟರ್ಸ್‌ ಮೂಲಕ ಬರುವಾ, ಬಿಮಲ್ ರಾಯ್ ಅವರುಗಳು ಬಂಗಾಲಿಯಲ್ಲಿ ಇಂತಹ ಪ್ರಯತ್ನಗಳನ್ನು ಕೈಗೆತ್ತಿಕೊಂಡರು. ಹಾಸ್ಯ ಬರಹಗಾರರು ಬರೆದ ಬರಹಗಳನ್ನು ಆಧಾರವಾಗಿರಿಸಿಕೊಂಡು ಅದನ್ನು ಸಮಕಾಲೀನ ಪರಿಸ್ಥಿತಿಗಳಿಗೆ ಅಳವಡಿಸುವ ಮೂಲಕ ಸಮಾಜದ ಅಂಕುಡೊಂಕುಗಳ ಮೇಲೆ ಬೆಳಕು ಚೆಲ್ಲುವ ಪ್ರಯೋಗಗಳನ್ನು ಬಿಮಲ್ ರಾಯ್ ಆರಂಭಿಸಿದರು. `ಮಂತ್ರಮುಗ್ಧ' ಇಂತಹ ಚಿತ್ರಗಳಲ್ಲೊಂದು. ಯುವಕ ಯುವತಿಯ ಪ್ರೇಮ ಪ್ರಸಂಗಗಳನ್ನು ಆಧರಿಸಿ ಅದರಲ್ಲಿ ಸಮಾಜದ ಮೌಢ್ಯಗಳನ್ನು ಪ್ರಶ್ನಿಸುವ ಹಾಗೂ ನಿರಾಕರಿಸುವ ದೃಶ್ಯಗಳನ್ನು ಬಿಮಲ್ ಅಳವಡಿಸಿದರು. 

ಪ್ರಾದೇಶಿಕ ಸೊಗಡಿನ ಸಾಂಸ್ಕೃತಿಕ ಚಿತ್ರಣವನ್ನು ಭಾರತದ ಎಲ್ಲಾ ರಾಜ್ಯಗಳಲ್ಲೂ ತಯಾರಾಗುತ್ತಿದ್ದ ಚಿತ್ರಗಳು ಹೊತ್ತು ತಂದವು. ಇವುಗಳಲ್ಲಿ ಪೌರಾಣಿಕ ಹಾಗೂ ಧಾರ್ಮಿಕ ಕಥೆಗಳನ್ನು ಆಧರಿಸಿದ ಚಿತ್ರಗಳೇ ಹೆಚ್ಚಾಗಿದ್ದವು. ಇವುಗಳು ಜನ ಮನ್ನಣೆ ಪಡೆದವಲ್ಲದೇ ಹಾಕಿದ ಬಂಡವಾಳಕ್ಕೆ ಮೋಸ ಮಾಡುತ್ತಿರಲಿಲ್ಲ. ಜನರಿಗೆ ಆಪ್ತವಾಗಿದ್ದ ಕಥಾ ವಸ್ತುಗಳು ಪರದೆಯ ಮೇಲೆ ಮೂಡಿಬಂದಾಗ ಅದನ್ನು ಆಸ್ವಾದಿಸುವುದು ಸಾಮಾನ್ಯವಾಗಿದೆ.  ಸ್ವಾತಂತ್ರ್ಯಾನಂತರ ಸಾಮಾಜಿಕ ಕಥನಗಳೂ ಕೂಡ ತೆರೆಯ ಮೇಲೆ ಬರಲಾಂಭಿಸಿದವು. ಹಾಸ್ಯ ಸನ್ನಿವೇಶಗಳು ಸಾಮಾಜಿಕ ಚಿತ್ರಗಳ ಪ್ರಮುಖ ಭಾಗಗಳಾಗಿ ಮೂಡಿಬರುತ್ತಿದ್ದವು. ವಿನಾಯಕ್ ಸೃಷ್ಟಿಸಿದ ಚಿತ್ರಗಳು ಬಹುಕಾಲ ಮನಸ್ಸಿನಲ್ಲಿ ಉಳಿಯುವಂತಹದ್ದು. ತಮ್ಮ ಚಿತ್ರಗಳಲ್ಲಿ ಅವರು ಅರ್ಥಪೂರ್ಣ ವಿವರಗಳನ್ನು ಅಳವಡಿಸುತ್ತಿದ್ದರು. ಅವರ ನಂತರ ಇಂತಹ ಪ್ರಯತ್ನಗಳು ಗಂಭೀರವಾಗಿ ನಡೆಯಲೇ ಇಲ್ಲ. 

1950-60ರ ದಶಕಗಳಲ್ಲಿ ಭಾರತ ಚಿತ್ರ ಜಗತ್ತಿನಲ್ಲಿ ಹಲವಾರು ಬದಲಾವಣೆಗಳಾದವು. ಜನಪ್ರಿಯ ತಾರೆಯರನ್ನು ಕೇಂದ್ರವಾಗಿಟ್ಟುಕೊಂಡ ಚಿತ್ರಗಳೇ ಹೆಚ್ಚು ಬರತೊಡಗಿದವು. ಇಂತಹ ಚಿತ್ರಗಳಲ್ಲಿ ಒಂದೆರೆಡು ಹಾಸ್ಯ ಸನ್ನಿವೇಶಗಳು ಮಾತ್ರ ಇರುತ್ತಿದ್ದವು. ಅದು ಸಣ್ಣ ಪುಟ್ಟ ಹಾಸ್ಯ ನಟರ ಮೂಲಕ ಅನಾವರಣಗೊಳ್ಳುತ್ತಿದ್ದರೂ ಹೆಚ್ಚಿನ ಪರಿಣಾಮ ಮಾಡುತ್ತಿರಲಿಲ್ಲ. ಕೊನೆ ಕೊನೆಗೆ ಒಬ್ಬರೋ ಇಬ್ಬರೋ ಚಿತ್ರಗಳಲ್ಲಿ ಹಾಸ್ಯ ಸಂಭಾಷಣೆ ಹೇಳಿ ಮುಖ ತೋರಿಸುವ ಸಂಪ್ರದಾಯವೂ ನಡೆಯಿತು. ನಂತರ ಎಲ್ಲಾ ಚಿತ್ರಗಳಲ್ಲೂ ಹಾಸ್ಯ ನಟ ಅಥವಾ ನಟಿ ಚಿತ್ರದ ಓಘದಲ್ಲಿ ಬಂದು ಹೋಗುವ ಸಾಮಾನ್ಯ ಸನ್ನಿವೇಶಗಳಲ್ಲಿ ಕಾಣಿಸಿಕೊಳ್ಳತೊಡಗಿದರು. ತಾರೆಯರ ನಡುವೆ ಹಾಸ್ಯ ಪಾತ್ರಧಾರಿಗಳು ಕಳೆದು ಹೋದರು. 

ಮುಂದಿನ ದಶಕದಲ್ಲಿ ಹಾಸ್ಯ ಪಾತ್ರಧಾರಿಗಳು ಪ್ರೇಮ ಸನ್ನಿವೇಶಗಳಲ್ಲಿ ಕಾಣಿಸಿಕೊಂಡು ಮರಸುತ್ತುವ ಪ್ರಸಂಗಗಳನ್ನು ಒಳಗೊಂಡ ಚಿತ್ರಗಳು ತಯಾರಾದವು. ಇದರಲ್ಲಿ ಗಂಭೀರ ಹಾಸ್ಯವೂ ಇರಲಿಲ್ಲ. ಯಾವುದೇ ಬಗೆಯ ಪರಿಣಾಮ ಬೀರುವಂತಹ ಸಂದೇಶಗಳೂ ಕಂಡು ಬರಲಿಲ್ಲ.

ವಿನಾಯಕ್‌ರವರ ಮರಣಾ ನಂತರ ಬಹು ವರ್ಷಗಳ ಕಾಲ ವಿಡಂಬನಾತ್ಮಕ ಅಥವಾ ಹಾಸ್ಯ ಪ್ರಧಾನವಾದ ಚಿತ್ರಗಳು ತಯಾರಾಗಲಿಲ್ಲ. ಹಿಂದಿಯಲ್ಲಿ ನಟ ಹಾಗೂ ನಿರ್ದೇಶಕ ಭಗವಾನ್ ಸಂಗೀತಮಯ ಹಾಸ್ಯ ಚಿತ್ರವೊಂದರ ಮೂಲಕ ಮತ್ತೆ ಇಂತಹ ಚಿತ್ರಗಳ ತಯಾರಿಕೆಗೆ ನಾಂದಿ ಹಾಡಿದರು. `ಅಲ್ಬೆಲಾ' ಚಿತ್ರ ಭಗವಾನ್ ಅವರು ಹೆಚ್ಚು ಶ್ರಮ ವಹಿಸಿ ಸಿದ್ಧ ಮಾಡಿದ ಹಾಸ್ಯ ಚಿತ್ರ. ಅದು ದೇಶದಾದ್ಯಂತ ಜನ ಮನ್ನಣೆ ಪಡೆಯಿತು.

ನಂತರ ರಾಷ್ಟ್ರೀಯ ಭಾವೈಕ್ಯವನ್ನು ಒಳನೋಟವಾಗಿ ಇರಿಸಿಕೊಂಡ `ಬೇಗಂ ಭಾಗ್' ಎಂಬ ಚಿತ್ರವನ್ನು ಭಗವಾನ್ ತೆರೆಗಿತ್ತರು. ವಿವಿಧ ಭಾಷೆಗಳ ಹಾಗೂ ವಿವಿಧ ಉಡುಗೆ ತೊಡುಗೆಗಳ ಹೂರಣವಿದ್ದ ಬೇಗಂ ಭಾಗ್ ಗಟ್ಟಿಯಾದ ಕಥಾವಸ್ತುವನ್ನು ಹೊಂದಿರಲಿಲ್ಲ. ಹೀಗಾಗಿ ಆ ಚಿತ್ರವೇನು ಭಗವಾನ್ ಅವರಿಗೆ ಹೆಸರು ತರಲಿಲ್ಲ. 

ಪ್ರಾದೇಶಿಕ ವಿಭಿನ್ನತೆಗಳನ್ನು ಉಪಯೋಗಿಸಿಕೊಂಡು ಹಾಸ್ಯ ಪ್ರಧಾನವಾದ ಚಿತ್ರಗಳನ್ನು ಹಿಂದಿ ಚಿತ್ರರಂಗ ತಯಾರಿಸಿತು. ಉತ್ತರ ಹಾಗೂ ದಕ್ಷಿಣ ಭಾರತದ ಉಡುಪುಗಳನ್ನು ತೊಟ್ಟುಕೊಂಡು ಆಯಾ ಭಾಷೆಗಳನ್ನು ಆಡುವ ಮೂಲಕ ಪ್ರಣಯದ ಕಥೆಗಳನ್ನು ಒಳಗೊಂಡ ಚಿತ್ರಗಳು ಹೆಚ್ಚಿನ ಗಮನ ಸೆಳೆಯಲಿಲ್ಲ. ಉತ್ತರ ಭಾರತದ ನಾಯಕರು ದಕ್ಷಿಣ ಭಾರತದ ನಾಯಕಿಯರು ಇರುವಂತಹ ಅನೇಕ ತಮಾಷೆಯ ಚಿತ್ರಗಳು ಸಿದ್ಧವಾದರೂ ಹಾಕಿದ ಬಂಡವಾಳವನ್ನು ವಾಪಸ್ಸು ಪಡೆಯಲು ಪ್ರಯಾಸ ಪಡಬೇಕಾಯಿತು. 

ಹಿಂದಿ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ಹಲವು ಹಾಸ್ಯ ನಟ ನಟಿಯರು ಪ್ರಸಿದ್ಧಿಗೆ ಬಂದರು. ಎಲ್ಲಾ ಚಿತ್ರಗಳಲ್ಲೂ ಅವರ ಪಾತ್ರ ಪೋಷಣೆ ಇರುತ್ತಿತ್ತಾದರೂ ಅದು ಪರಿಣಾಮಕಾರಿಯಾಗಿ ಮೂಡಿ ಬರುತ್ತಿದ್ದ ಘಟನೆಗಳು ಕಡಿಮೆಯಿದ್ದವು. ಹಿಂದಿಯಲ್ಲಿ ಗೋಪಿ, ಟುನ್‌ಟುನ್, ಅಸಿಕ್ ಸೇನ್, ಪೋಲ್ ಸನ್, ಓಂಪ್ರಕಾಶ್, ರಿರ‌್ಕೂ ಮೊದಲಾದವರು ಮೊದಲ ತಲೆಮಾರಿನ ಹಾಸ್ಯ ನಟರಲ್ಲಿ ಕೆಲವರು. ನಂತರ ಯಾಕೂಬ್, ಜಾನಿ ವಾಕರ್, ಕೇಷ್ಟೂ ಮುಖರ್ಜಿ, ಕನಯ್ಯಲಾಲ್ ಮುಂತಾದವರು ಹಿಂದಿ ಚಿತ್ರರಂಗದಲ್ಲಿ ಹಾಸ್ಯನಟರಾಗಿ ಗುರುತಿಸಲ್ಪಟ್ಟರು. ಇವರಲ್ಲಿ ಬಹುತೇಕರು ಪ್ರತಿಭಾವಂತರಾದರೂ ಅವರ ಪ್ರತಿಭೆಯನ್ನು ಸಮರ್ಥವಾಗಿ ಉಪಯೋಗಿಸಿಕೊಳ್ಳುವ ನಿರ್ದೇಶಕರ ಕೊರತೆಯಿತ್ತು. ನಾಯಕ ನಾಯಕಿಯರೇ ಪ್ರಧಾನವಾಗಿ ಕಾಣಿಸಿಕೊಳ್ಳುವ ಚಲನಚಿತ್ರಗಳಲ್ಲಿ ಹಾಸ್ಯನಟರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಯಿತು. 

ತಮಿಳಿನಲ್ಲಿ ತಾಯ್ ನಾಗೇಶ್, ಸೆಂದಿಲ್, ಗೊಂಡಮಣಿ, ತೆಲುಗಿನಲ್ಲಿ ಪದ್ಮನಾಭನ್, ರಾಜ್ ಬಾಬು, ಬ್ರಹ್ಮಾನಂದಮ್, ಆಲಿ, ರಮಣ, ಸುನಿಲ್ ಕನ್ನಡದಲ್ಲಿ ಬಾಲಕೃಷ್ಣ, ನರಸಿಂಹರಾಜು, ರತ್ನಾಕರ್, ದ್ವಾರಕೀಶ್, ಉಮೇಶ್, ಮುಸುರಿ ಕೃಷ್ಣಮೂರ್ತಿ, ಎನ್.ಎಸ್. ರಾವ್, ದೊಡ್ಡಣ್ಣ, ಉಮಾಶ್ರೀ, ಬಿ. ಜಯಾ, ಕೋಮಲ್, ಶರಣ್ ಮೊದಲಾದವರು ಹಾಸ್ಯನಟರ ಸಾಲಿನಲ್ಲಿ ಬರುತ್ತಾರೆ. ಕೆಲವು ಹಾಸ್ಯನಟರು ನಾಯಕ ನಟರಿಗಿಂತ ಜನಪ್ರಿಯರಾಗಿದ್ದ ಕಾಲವೊಂದಿತ್ತು. ಕೆಲವು ಹಾಸ್ಯನಟರ ಕಾಲ್‌ಶೀಟ್ ಪಡೆದ ನಂತರ ನಾಯಕ ನಟ ನಟಿಯರನ್ನು ಗೊತ್ತು ಮಾಡುವ ಪರಿಪಾಠ ಹಿಂದೆ ಇದ್ದುದಕ್ಕೆ ಪುರಾವೆಗಳಿವೆ.

ಒಂದೇ ಬಗೆಯ ಪಾತ್ರಗಳಿಂದಾಗಿ ಅನೇಕ ಪ್ರತಿಭಾನ್ವಿತ ಹಾಸ್ಯನಟರು ಹೆಚ್ಚಿನ ಜನಮನ್ನಣೆ ಪಡೆಯದೇ ಹೋದರು. ಕೆಲವು ಹಾಸ್ಯನಟರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡು ಹೆಸರು ಮಾಡಿದ ಘಟನೆಗಳೂ ಇವೆ.  ಹಿಂದಿ ಚಿತ್ರರಂಗದಲ್ಲಿ ಮೆಹಮೂದ್ ಸಹಜ ಹಾಸ್ಯ ಕಲಾವಿದ. ಅನೇಕ ಚಿತ್ರಗಳಲ್ಲಿ ಅವರು ನಾಯಕ ನಟರಿಗೂ ಸೆಡ್ಡು ಹೊಡೆಯುವಂತಹ ಪಾತ್ರ ಮಾಡಿದ್ದರು. `ಪ್ಯಾರ್ ಕಿಯೇ ಜಾ' ಚಿತ್ರದಲ್ಲಂತೂ ಅವರ ಅಭಿನಯ ಬಹುಕಾಲ ನೆನಪಿನಲ್ಲಿ ಉಳಿಯುವಂತಹದ್ದು. ಓಂಪ್ರಕಾಶ್ ಇಂತಹ ಪ್ರತಿಭೆಯಿದ್ದ ಇನ್ನೊಬ್ಬ ಹಾಸ್ಯ ಕಲಾವಿದ.

ಮೆಹಮೂದ್ ಹಿಂದಿ ಚಿತ್ರರಂಗದ ಪ್ರಖ್ಯಾತ ಹಾಸ್ಯ ನಟರಾಗಿ ಖ್ಯಾತರಾದ ನಂತರ ತಮ್ಮದೇ ಆದ ಲಾಂಛನದಲ್ಲಿ ಹಾಸ್ಯಕ್ಕೆ ಒತ್ತುಕೊಟ್ಟು ಹಲವಾರು ಚಲನಚಿತ್ರಗಳನ್ನು ತಯಾರಿಸಿದರು. ಅವು ದೇಶದಾದ್ಯಂತ ಯಶಸ್ವಿಯಾಗಿ ಪ್ರದರ್ಶನಗೊಂಡವು. ಮೆಹಮೂದ್ ಅವರ `ಪಡೋಸನ್' ಇಂತಹ ಚಿತ್ರಗಳಲ್ಲೊಂದು. ಚಿತ್ರದುದ್ದಕ್ಕೂ ನಕ್ಕು ನಲಿಸುವ `ಪಡೋಸನ್' ದಕ್ಷಿಣ ಹಾಗೂ ಉತ್ತರ ಭಾರತೀಯರನ್ನು ಬೆಸೆಯುವ ಹಾಸ್ಯಮಯ ಚಿತ್ರ. ಅನೇಕ ಖ್ಯಾತ ಖಳ ನಾಯಕರೂ ಕೂಡ ಹಾಸ್ಯ ಪಾತ್ರಧಾರಿಗಳಾಗಿ ಹೆಸರು ಮಾಡಿದ್ದನ್ನು ಭಾರತೀಯ ಚಿತ್ರರಂಗ ಕಂಡಿದೆ. ಹಿಂದಿಯ ಪ್ರಾಣ್, ಅನುಪಮ್ ಖೇರ್ ಇವರಲ್ಲಿ ಕೆಲವರು. 

ಹಾಸ್ಯ ಚಿತ್ರಗಳು ಲಘು ದಾಟಿಯಲ್ಲಿ ಮನಸ್ಸಿಗೆ ಮುದ ಕೊಡುವಂತಹ ಸನ್ನಿವೇಶಗಳನ್ನು ಆರಂಭಿಕ ಚಿತ್ರಗಳು ಹೊಂದಿರುತ್ತಿದ್ದವು. ನಂತರದ ದಿನಗಳಲ್ಲಿ ವಿಡಂಬನಾತ್ಮಕ ಚಿತ್ರಗಳ ಪರಂಪರೆ ಹೋಗಿ ತಾರಾವರ್ಚಸ್ಸಿನ ನಟ ನಟಿಯರ ಆಧಾರದ ಮೇಲೆ ಕಥೆಗಳು ರೂಪುಗೊಂಡಾಗ ಹಾಸ್ಯ ನಟರ ವ್ಯಾಪ್ತಿ ಕುಂಠಿತಗೊಂಡಿತು. ಕೇವಲ ಆಂಗಿಕ ಚರ್ಯೆಗಳಿಂದ ದ್ವಂದ್ವಾರ್ಥ ಸಂಭಾಷಣೆಗಳನ್ನು ಹೇಳಿಸುವ ಮೂಲಕ ಹಾಸ್ಯ ನಟರ ಅಪ್ಪಟ ಪ್ರತಿಭೆಯನ್ನು ಮೂಲೆಗೆಸೆಯಲಾಯಿತು. ಹೀಗಾಗಿ ಹಾಸ್ಯ ಸನ್ನಿವೇಶಗಳು ಹಾಸ್ಯಾಸ್ಪದವಾಗತೊಡಗಿದವು.

ಈಚಿನ ವರ್ಷಗಳಲ್ಲಿ ನಾಯಕರೇ ಹಾಸ್ಯ ಸನ್ನಿವೇಶಗಳಲ್ಲಿ ಪಾಲ್ಗೊಳ್ಳುತ್ತಿರುವುದು ಇನ್ನೊಂದು ಟ್ರೆಂಡ್. ಹಾಸ್ಯ ನಟರಲ್ಲಿ ಕೆಲವರು ಹೀರೋಗಳಾಗಿ ಮಿಂಚುತ್ತಿರುವುದು ಮತ್ತೊಂದು ವಿಶೇಷ.

ಹಾಸ್ಯ ಪಾತ್ರಗಳು ಹಾಗೂ ಸನ್ನಿವೇಶಗಳು ವರ್ಚಸ್ವಿ ಕಲಾವಿದರ ಚಿತ್ರಗಳಲ್ಲಿ ನೆಪ ಮಾತ್ರವಾಗಿರುವಾಗ ಹೊಸ ಅಲೆಯ ಚಿತ್ರಗಳಲ್ಲಿ ವಿಡಂಬನಾತ್ಮಕ ಚಲನಚಿತ್ರಗಳು ಪ್ರಭಾವಶಾಲಿಯಾಗಿ ತೆರೆಗೆ ಬರುತ್ತಿವೆ. ನವ್ಯ ಸಿನಿಮಾಗಳ ನಿರ್ದೇಶಕರು ತಮ್ಮ ಚಿತ್ರಗಳಲ್ಲಿ ಅರ್ಥಪೂರ್ಣವಾದ ವಿಡಂಬನೆಗಳನ್ನು ಅಳವಡಿಸಿಕೊಂಡು ಜನರ ಮನತಟ್ಟುವಂತೆ ಅನಾವರಣಗೊಳಿಸುತ್ತಿದ್ದು, ಆ ದಿಕ್ಕಿನಲ್ಲಿ ಚಿತ್ರಗಳ ತಯಾರಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT