ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸ್ಯಾಸ್ಪದ ವಕಾಲತ್ತು

Last Updated 22 ಜನವರಿ 2012, 19:30 IST
ಅಕ್ಷರ ಗಾತ್ರ

ಸ್ವಾಮಿ ವಿವೇಕಾನಂದರ ಬಗ್ಗೆ ತುಂಬ ಗೌರವದಿಂದಲೇ ಅವರ ಮಾನವೀಯ ಮುಖದ ಬಗ್ಗೆ ಬರೆದಿರುವ ದಿನೇಶ್ ಅಮಿನ್‌ಮಟ್ಟು ಅವರ ಲೇಖನವನ್ನು ಕಂಡು ವಿವೇಕಾನಂದರ ಬಗ್ಗೆ ಪ್ರಚಲಿತ ಅತಿ ರಂಜಿತ ಚಿತ್ರವನ್ನಷ್ಟೇ ಬಲ್ಲ ರಘು ಅವರಂಥವರಿಗೆ ಅಚ್ಚರಿಯಾಗಿರುವುದರಲ್ಲಿ ಆಶ್ಚರ್ಯವಿಲ್ಲ (ಪ್ರವಾ. ಜ.20). ಆದರೆ `ಅದನ್ನು ವಿವೇಕಾನಂದರ ವಿರುದ್ಧ ಮಾಡಿರುವ ಚಾರ್ಜ್‌ಶೀಟ್~ ಎಂದು ಕರೆದು ತಾವು ಅವರ ಸಮರ್ಥನೆಯ ವಕಾಲತ್ತು ವಹಿಸಿರುವುದು ಹಾಸ್ಯಾಸ್ಪದವಾಗಿದೆ.

ವಿವೇಕಾನಂದರಂಥ ಪ್ರಖರ ವೈಚಾರಿಕ ವ್ಯಕ್ತಿತ್ವವನ್ನು ನಮ್ಮ ಚಲನಚಿತ್ರಗಳ ಸರ್ವಗುಣ ಸಂಪನ್ನ ಚಾಕಲೇಟ್ ನಾಯಕನಂತೆ ಕಲ್ಪಿಸಿಕೊಂಡಿದ್ದವರಿಗೆ ವಾಸ್ತವದ ಸಂಗತಿಗಳ ಎದುರು ದಿಕ್ಕೆಟ್ಟಂತಾಗಿರುವುದು ಅರ್ಥವಾಗುವಂಥದು. ರೋಗಿಯಾಗಿದ್ದ ವಿವೇಕಾನಂದರಿಗೆ ಮಾಂಸಾಹಾರ, ಸಿಗರೇಟು ಮೊದಲಾದವುಗಳಲ್ಲಿ ಇದ್ದ ಆಸಕ್ತಿ ಅವರೂ ಮನುಷ್ಯರು ಎನ್ನುವುದನ್ನುತಿಳಿಸುತ್ತದೆ. ವಿವೇಕಾನಂದರು ರೋಗಿಯಾಗಿದ್ದುದಕ್ಕೆ ಅವರ ಆಹಾರ, ಅಭ್ಯಾಸಗಳು ಕಾರಣಗಳಲ್ಲ. ಅವರು ತಿಂಡಿಪೋತ, ಮಾಂಸಾಹಾರಿ ಎಂಬುದು ಅವರ ಆಹಾರದ ಪ್ರೀತಿ ಮತ್ತು ಆಯ್ಕೆಗಳನ್ನು ಮಾತ್ರ ತಿಳಿಸುತ್ತದೆ. ವಿವೇಕಾನಂದರು ಮೀನನ್ನು ತಿನ್ನುವುದಿರಲಿ, ಅನೇಕ ಪೌರಾಣಿಕ ದೇವತೆಗಳು, ಋಷಿಮುನಿಗಳು ಗೋಮಾಂಸವನ್ನೂ ತಿನ್ನುತ್ತಿದ್ದರು. ಜೈನ, ವೀರಶೈವ ಧರ್ಮಗಳ ಅಹಿಂಸೆ, ಸಸ್ಯಾಹಾರಗಳೊಂದಿಗೆ ಸ್ಪರ್ಧಿಸುವುದಕ್ಕಾಗಿ ಪುರೋಹಿತಶಾಹಿ ಮೀನು, ಗೋಮಾಂಸಗಳನ್ನು ಕಳೆದುಕೊಂಡಿತಲ್ಲವೆ?

ದಿನೇಶ್ ಅವರು ತಮ್ಮ ಲೇಖನದ ಆಕರ ಗ್ರಂಥವನ್ನು ತಿಳಿಸಿ ಅದರಲ್ಲಿರುವ ಅಸಂಖ್ಯ ಆಧಾರಗಳ ಬಗ್ಗೆಯೂ ತಿಳಿಸಿದ್ದಾರೆ. ಅವು ವಿವೇಕಾನಂದರ ವಾಸ್ತವ ಸ್ಥಿತಿಯನ್ನು ವಿವರಿಸುವುದು ನಕಾರಾತ್ಮಕವಾಗುವುದಿಲ್ಲ.

ವಿವೇಕಾನಂದರ ಸಾಧನೆಯ ಬಗ್ಗೆ ಅವರ ಜನ್ಮದಿನದ ಸಂದರ್ಭದಲ್ಲಿ ಅವರನ್ನು ಕುರಿತು ತಾವು ಹೊಸದಾಗಿ ಓದಿದ ವಿವರಗಳನ್ನು ದಿನೇಶ್ ಅವರು ಓದುಗರೊಂದಿಗೆ ಮುಕ್ತವಾಗಿ ಹಂಚಿಕೊಂಡಿದ್ದಾರೆ. ಚಾರಿತ್ರಿಕ ವ್ಯಕ್ತಿಗಳ ಬಗೆಗಿನ ಸತ್ಯ ಸಂಗತಿಗಳನ್ನು ತಿರುಚದೆ ಮುಕ್ತವಾಗಿ ಚರ್ಚಿಸುವುದರ ಬಗ್ಗೆ ಬದ್ಧತೆ ಇರಬೇಕೇ ಹೊರತು ಕಲ್ಪಿತ ಅಂಶಗಳ ಬಗ್ಗೆ ಅಲ್ಲ. ದಿನೇಶ್ ಅವರ ಲೇಖನ ಓದಿದ ನಮ್ಮಂಥವರಿಗೆ ವಿವೇಕಾನಂದರ ಬಗ್ಗೆ ಗೌರವ ಕಡಿಮೆಯಾಗುವ ಬದಲು ಮತ್ತಷ್ಟು ಹೆಚ್ಚಾಗಿದೆ. ನಾವು ಗೌರವಿಸುವವರನ್ನು ಸರಿಯಾದ ಕಾರಣಗಳಿಗಾಗಿ ಗೌರವಿಸುವುದೇ ಅವರ ಬಗ್ಗೆ ತೋರುವ ನಿಜವಾದ ಗೌರವ.

(ಇನ್ನಷ್ಟು ಪತ್ರಗಳು ಪ್ರಜಾವಾಣಿ ಇಂಟರ್‌ನೆಟ್ ಆವೃತ್ತಿಯಲ್ಲಿ )

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT