ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂಗಾರು ತಯಾರಿ ಜೋರು

Last Updated 1 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಹಿಂಗಾರು ಹಂಗಾಮು ಆರಂಭಗೊಂಡಿದೆ. ಮುಂಗಾರು ವೈಫಲ್ಯದಿಂದ ಕಂಗೆಟ್ಟಿದ್ದ ಕೃಷಿಕರು ಚುರುಕಾಗಿದ್ದಾರೆ. ಬೆಳೆ ನಾಶವಾದ ಹೊಲ ಹಸನುಗೊಳಿಸಿ ಮತ್ತೊಮ್ಮೆ ಬಿತ್ತನೆಗೆ ಸಿದ್ಧರಾಗಿದ್ದಾರೆ. ಕೆಲವರು ಈಗಿರುವ ಹಸಿಯಲ್ಲೇ ಬಿತ್ತುವ ಉಮೇದಿನಲ್ಲಿದ್ದಾರೆ.

ರೈತರು ಬೆಳೆಗಿಂತ ಜಾನುವಾರು ಮೇವು ಬೆಳೆಯಲು ಆದ್ಯತೆ ನೀಡುತ್ತಿದ್ದಾರೆ. ಬರದ ತೀವ್ರತೆಯಿಂದ ದಿಕ್ಕೆಟ್ಟಿದ್ದು, ಜಾನುವಾರು ಉಳಿವಿಗೆ ಅನ್ಯ ಮಾರ್ಗವಿಲ್ಲದೆ ಮೇವಿನ ಬೆಳೆಗೆ ಮೊರೆ ಹೋಗಿದ್ದಾರೆ. ಇದರ ಜತೆ ಕೆಲವರು ತಮಗಾಗಿರುವ ನಷ್ಟ ಭರ್ತಿ ಮಾಡಿಕೊಳ್ಳಲು ಸಹ ಮೇವು ಬೆಳೆ ಬೆಳೆಯುತ್ತಿದ್ದಾರೆ. ಇದರಲ್ಲಿ ಹಲವರು ಲಾಭ ಕಂಡುಕೊಂಡಿದ್ದಾರೆ.

ಪ್ರಸ್ತುತ ಮುಸುಕಿನ ಜೋಳ, ಹಿಂಗಾರಿ ಜೋಳ, ಬಿಳಿ ಜೋಳ, ಕೆಂಪು ಜೋಳ, ಅಲಸಂದೆ, ಹುರುಳಿ, ನವಣೆ, ಸೂರ್ಯಕಾಂತಿ, ಒಣಬತ್ತ, ಹುರುಳಿ, ಹೆಸರು, ಉದ್ದು ಬಿತ್ತಬಹುದು.

ಮುಸುಕಿನ ಜೋಳ
ಮುಸುಕಿನ ಜೋಳ ರೈತರ ಪಾಲಿನ ಆಪದ್ಬಾಂಧವ. ಮೂರುವರೆ ತಿಂಗಳ ಬೆಳೆ. ಹೆಕ್ಟೇರ್‌ಗೆ 20 ಕ್ವಿಂಟಲ್ ಇಳುವರಿ, 3.5 ಟನ್ ಮೇವು ಸಿಗುತ್ತದೆ. ಕ್ವಿಂಟಲ್ ಜೋಳಕ್ಕೆ 1000- 1500 ರೂಪಾಯಿ ಬೆಲೆ ನಿರೀಕ್ಷಿಸಬಹುದು. ಜೋಳದ ಕಡ್ಡಿಗೆ ಬಂಪರ್ ಬೆಲೆ.

ಹೊಲದಲ್ಲಿ ಬೆಳೆ ಫಸಲು ಬರುವ ಮುನ್ನವೇ ಸೊಪ್ಪೆ ಬೆಳೆದಿರುವ ಪ್ರಮಾಣಕ್ಕೆ ಬೆಲೆ ನಿಗದಿ ಪಡಿಸಲಾಗುತ್ತಿದೆ. ಬರದ ಹಿನ್ನೆಲೆಯಲ್ಲಿ ಮೇವಿನ ಜೋಳಕ್ಕೆ ಹೆಚ್ಚಿನ ಬೇಡಿಕೆ ಇದ್ದು, ಎಕರೆಗೆ 35 ರಿಂದ 45 ಸಾವಿರ ರೂಪಾಯಿ ತನಕ ಹೊಲದಲ್ಲೇ ಬಿಕರಿಯಾಗಿದೆ.

ಈ ಸಮಯ ಹೈಬ್ರಿಡ್ ಬಿತ್ತನೆ ಬೀಜ ಬಳಸಬಹುದು. ಶಿಲೀಂಧ್ರ ರೋಗ ತಗಲುವ ಸಾಧ್ಯತೆ ಹೆಚ್ಚು. ಇಳುವರಿ ಕುಂಠಿತಗೊಂಡರೂ ಮೇವಿಗೆ, ಲಾಭಕ್ಕೆ ಮೋಸವಿಲ್ಲ.

ಬೀಜೋಪಚಾರ ನಡೆಸಿದರೆ ರೋಗ ತಡೆಗಟ್ಟಬಹುದು. ಒಂದು ಕಿಲೊ ಬೀಜಕ್ಕೆ ಎರಡು ಗ್ರಾಂ ಡೈಥಿನ್ ಎಂ-45 ಅಥವಾ ರೆಮೊಡಿನ್ ಮಿಶ್ರಣವನ್ನು ನೀರಿನಲ್ಲಿ ಬೆರೆಸಿ ಬೀಜೋಪಚಾರ ಮಾಡಬೇಕು ಎನ್ನುವುದು ಕೃಷಿ ತಜ್ಞರ ಸಲಹೆ.

ಹಿಂಗಾರಿ ಜೋಳ
ಜಾನುವಾರುಗಳಿಗೆ ಅತ್ಯಂತ ಪ್ರಿಯವಾದ ಮೇವು ಇದು. ಅಕ್ಟೋಬರ್ ಎರಡನೇ ವಾರದವರೆಗೂ ಬಿತ್ತಬಹುದು. ಹೆಕ್ಟೇರ್‌ಗೆ 10-14 ಕ್ವಿಂಟಲ್ ಜೋಳ, ಮೂರರಿಂದ ನಾಲ್ಕು ಟನ್ ಮೇವು ಸಿಗುತ್ತದೆ. ರೈತರು ಮೇವಿಗಾಗಿಯೇ ಈ ಜೋಳ ಬೆಳೆಯುತ್ತಾರೆ.

ಜೋಳದ ಸೊಪ್ಪೆ (ಕಡ್ಡಿ) ಚಿಕ್ಕ ಗಾತ್ರಕ್ಕಿದ್ದರೆ ಜಾನುವಾರುಗಳು ತಿನ್ನುತ್ತವೆ ಎಂಬ ಕಾರಣಕ್ಕೆ ಇಡೀ ಹೊಲಕ್ಕೆ ದಟ್ಟವಾಗಿ ಬೀಜ ಚೆಲ್ಲುವುದು ವಾಡಿಕೆ. ಭೂಮಿಯಲ್ಲಿನ ತೇವಾಂಶ ನೋಡಿ ಬಿತ್ತಲಾಗುತ್ತದೆ. ಎರಡರಿಂದ-ಮೂರು ಹದ ಮಳೆ ಬಿದ್ದರೇ ಸಾಕು. ಇಬ್ಬನಿ ಇದ್ದರೆ ಜೋಳ ಬೆಳೆಯುತ್ತದೆ. ಹಿತ್ತಲಲ್ಲಿ ಬಣವೆ ಸಿದ್ಧ. ರೊಟ್ಟಿಗೆ ಎರಡರಿಂದ ಮೂರು ವರ್ಷ ಚಿಂತೆ ಇರಲ್ಲ.

ಕಡಲೆ
ಕಪ್ಪು ಮಣ್ಣಿನ ಬೆಳೆ. ಕೆಲವೆಡೆ ಕಡು ಕೆಂಪು ಮಣ್ಣಿನಲ್ಲೂ ಬೆಳೆಯುತ್ತಾರೆ. 95- 100 ದಿನದ ಅವಧಿ. ಅಕ್ಟೋಬರ್ ಎರಡನೇ ವಾರದಿಂದ ನವೆಂಬರ್ ಎರಡನೇ ವಾರದವರೆಗೂ ಬಿತ್ತನೆಗೆ ಸೂಕ್ತ. ಹದ ಮಳೆಯ ತೇವಾಂಶ ಸಾಕು. ಇಬ್ಬನಿಗೆ ಬಂಪರ್ ಬೆಳೆ.

ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯಿದ್ದು, ಮುಂಗಾರಿನ ನಷ್ಟ ತುಂಬಿಕೊಡುವ ಸಾಮರ್ಥ್ಯವಿದೆ. ಹೆಕ್ಟೇರ್‌ಗೆ 8 ರಿಂದ 10 ಕ್ವಿಂಟಲ್ ಇಳುವರಿ. ಸೊಪ್ಪು ಜಾನುವಾರು- ಕುರಿ ಮೇವಿಗೆ ಹೇಳಿ ಮಾಡಿಸಿದ್ದು.

ಅವರೆ
ಅವರೆ ಇಬ್ಬನಿ ಬೆಳೆ. ಬಿತ್ತನೆಗೆ ಹದ ಮಳೆ ಸಾಕು. ಚಳಿಗಾಲದಲ್ಲಿ ಮುಂಜಾನೆ ಸುರಿಯುವ ಇಬ್ಬನಿಯೇ ಇದಕ್ಕೆ ಆಧಾರ. ಹೆಬ್ಬಾಳ ಅವರೆ, ಎಚ್‌ಎ-3, ಎಚ್‌ಎ-4 ತಳಿ ಉತ್ತಮ ಇಳುವರಿ ನೀಡುತ್ತವೆ. ಕೀಟಬಾಧೆಗೆ ಆಗಾಗ್ಗೆ ಕೀಟನಾಶಕ ಸಿಂಪಡಿಸಿದರೆ ಬಂಪರ್ ಫಸಲು.

ಕಿರುಧಾನ್ಯ
ಅಲ್ಪಾವಧಿ ಬೆಳೆಗಳಾದ ಕಿರುಧಾನ್ಯ ನವಣೆ, ಸಾಮೆ ಬಿತ್ತನೆಗೂ ಸಕಾಲ. ನವಣೆ ಆರ್‌ಎಸ್-118, ಕೆ 221-1 ಬಿತ್ತನೆ ಬೀಜ ಉತ್ತಮ. ಸಾಮೆಯಲ್ಲಿ ಸಿಒ2, ಒಎಲ್‌ಎಂ-201 ತಳಿ ಬಿತ್ತನೆಗೆ ಸೂಕ್ತ. ಈ ಬೆಳೆಗಳಿಂದ ಮನೆಗೆ ಆಹಾರ ಧಾನ್ಯವೂ, ಜಾನುವಾರುಗಳಿಗೆ ಪೌಷ್ಟಿಕಾಂಶ ಭರಿತ ಮೆದು ಹುಲ್ಲು ಸಿಗುತ್ತದೆ.

ದ್ವಿದಳ ಧಾನ್ಯ
ಅಲ್ಪಾವಧಿ ತಳಿಯ ದ್ವಿದಳ ಧಾನ್ಯ ಬಿತ್ತಬಹುದು. ಹೆಸರು, ಉದ್ದು, ಅಲಸಂದೆ ಕಾಳು- ಬೇಳೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯಿದೆ. 70 ರಿಂದ 80 ದಿನಕ್ಕೆ ಫಸಲು ಸಿಗುವ ಹೆಸರು, ಮೂರು ತಿಂಗಳ ಬೆಳೆ ಅಲಸಂದೆ, ಉದ್ದು ರೈತನ ಕೈ ಹಿಡಿಯುತ್ತವೆ.

ಜಮೀನಿನಲ್ಲಿ ತೊಗರಿ ಬೆಳೆ ಇದ್ದರೂ, ಮಿಶ್ರ ಬೆಳೆಯಾಗಿ ದ್ವಿದಳ ಧಾನ್ಯ ಬೆಳೆಯಬಹುದು. ಇದರಿಂದ ರೈತನ ಲಾಭ ದುಪ್ಪಟ್ಟು. ಜತೆಗೆ ಮಣ್ಣಿನ ಫಲವತ್ತತೆಯೂ ಹೆಚ್ಚುತ್ತದೆ.

ಮನೆಯಲ್ಲೂ ಹೇರಳವಾಗಿ ಬಳಸಬಹುದು ಎನ್ನುತ್ತಾರೆ ಪಾವಗಡ ತಾಲ್ಲೂಕು ರಾಜವಂತಿ ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ. ಪ್ರಭು ಗಾಣಿಗೇರ.

ಸೂರ್ಯಕಾಂತಿ

ಸೂರ್ಯಕಾಂತಿ 110 ದಿನದ ವಾಣಿಜ್ಯ ಬೆಳೆ. ಮಾಡರ್ನ್ ತಳಿ ಮಾತ್ರ 90 ದಿನದ್ದು. ಅಕ್ಟೋಬರ್-ನವೆಂಬರ್‌ನಲ್ಲಿ ಬಿತ್ತನೆ. ರೋಗ ಭೀತಿ ಇದ್ದದ್ದೇ. ಬೀಜೋಪಚಾರ ಅತ್ಯಗತ್ಯ. ಖಾಸಗಿ ಕಂಪೆನಿಗಳ ಬೀಜ ಬಳಸುವರೇ ಹೆಚ್ಚು. ರೈತರು ಗುಂಪು-ಗುಂಪಾಗಿ ಬೆಳೆಯುತ್ತಾರೆ. ಹೆಕ್ಟೇರ್‌ಗೆ ನಾಲ್ಕರಿಂದ ಐದು ಕ್ವಿಂಟಲ್ ಇಳುವರಿ ಸಿಗುವ ಸಾಧ್ಯತೆ ಇದೆ.

ಆಶಾಭಾವನೆ
`ನಮಗೆ ಮೇವು ಮುಖ್ಯ. ರಾಗಿ ಮನೆ ಬಳಕೆಗೆ ಸಾಕು. ಆದರೆ ಮಳೆ ಮೇಲೆ ಎಲ್ಲವೂ ಅವಲಂಬನೆ. ದೇಸಿ ತಳಿ `ಗುಟ್ಟೆ~ ರಾಗಿ ಬಿತ್ತಬಹುದು. ಮಳೆ ಕಡಿಮೆಯಾದರೂ; ಸಾಮಾನ್ಯ ಇಳುವರಿಗೆ ತೊಂದರೆಯಿಲ್ಲ~ ಎನ್ನುತ್ತಾರೆ ಕೊರಟಗೆರೆ ತಾಲ್ಲೂಕು ಬಿಸಾಡಿಹಳ್ಳಿ ವೀರಣ್ಣ.

`ಈಗಾಗಲೇ ರಾಗಿ, ನವಣೆ, ಸಜ್ಜೆ ಮತ್ತಿತರ ಧಾನ್ಯಗಳ ಬಿತ್ತನೆ ಸಮಯ ಮುಗಿದಿದ್ದರೂ ಮಳೆ ಬಿತ್ತುವ ಛಲ ಹುಟ್ಟಿಸಿದೆ. ಈ ಹಿಂದೆ ಮಳೆಗಾಲದ ಕೊನೆಯ ಉತ್ತರೆ ಮಳೆ ಬಂದಾಗಲೇ ರಾಗಿ ಬಿತ್ತಿ ಬೆಳೆದಿದ್ದೇವೆ. ಅದಕ್ಕಿಂತ ಮೊದಲೇ ಮಳೆ ಬಿದ್ದಿದೆ. ಉತ್ತರೆ, ಹಸ್ತ, ಚಿತ್ತ, ಸ್ವಾತಿಯಂಥ ಗಂಡು ಮಳೆಗಳೇ ಇರುವಾಗ ಬಿತ್ತನೆಗೆ ಅನುಮಾನ ಏಕೆ~ ಎನ್ನುತ್ತಾರೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ರೈತ ಸಾಲ್ಕಟ್ಟೆ ಮಲ್ಲಿಕಾರ್ಜುನಯ್ಯ.

`ಇದೀಗ ಬಿದ್ದ ಮಳೆಯಿಂದ ಬಿತ್ತಲು ಹಾಗೂ ಬೆಳೆಗೆ ಪ್ರಯೋಜನವಿಲ್ಲ. ಜಾನುವಾರು ಮೇವಿಗಾಗಿ ಜೋಳದ ಜತೆ ಇತರ ಬೆಳೆ ಬೆಳೆದು ಕೊಳ್ಳುತ್ತೇವೆ ಎನ್ನುತ್ತಾರೆ~ ಮಧುಗಿರಿ ತಾಲ್ಲೂಕು ಐ.ಡಿ.ಹಳ್ಳಿಯ ವಜೀರ್ ಸಾಬ್.

`ಮುಂಗಾರು ಹಂಗಾಮಿನಲ್ಲಿ ಸಕಾಲಕ್ಕೆ ಮಳೆ ಬರಲಿಲ್ಲ. ಸೆಪ್ಟಂಬರ್-ಅಕ್ಟೋಬರ್ ತಿಂಗಳ ಹಿಂಗಾರು ಹಂಗಾಮು ಚೆನ್ನಾಗಿ ನಡೆಸಿದರೆ ಜೋಳ, ಕಡಲೆ ಇತರ ಬೆಳೆ ಬೆಳೆದುಕೊಳ್ಳಬಹುದು~ ಎನ್ನುತ್ತಾರೆ ಮಧುಗಿರಿ ತಾಲ್ಲೂಕಿನ ರೈತ ದಾಸನಾಯ್ಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT