ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದಿ ಸರಸ್ವತಿಯ ಸಿರಿ ಹೆಚ್ಚಿಸಿದ ಶುಕ್ಲಾ, ಅಮರ್‌ಕಾಂತ್

Last Updated 24 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಇತ್ತೀಚೆಗಷ್ಟೆ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿರುವ ಹಿಂದಿಯ ಖ್ಯಾತ ಕಾದಂಬರಿಕಾರರಾದ ಶ್ರೀಲಾಲ್ ಶುಕ್ಲಾ ಹಾಗೂ ಅಮರ್‌ಕಾಂತ್ ಸ್ವಾತಂತ್ರ್ಯೋತ್ತರ ಭಾರತದ ಹಿಂದಿ ಸಾಹಿತ್ಯಕ್ಕೆ ಹೊಸ ಆಯಾಮ ಕೊಟ್ಟಂಥ ದಿಗ್ಗಜರು.

ವಸಾಹತೋತ್ತರ ಭಾರತದ ಆರಂಭಿಕ ಘಟ್ಟದ ರಾಜಕೀಯ ಹಾಗೂ ಸಾಮಾಜಿಕ ತಲ್ಲಣಗಳನ್ನು ಅತ್ಯಂತ ಸಮರ್ಥವಾಗಿ ಹಿಡಿದಿಟ್ಟ ಕೆಲವೇ ಕೆಲವು ಹಿಂದಿ ಲೇಖಕರಲ್ಲಿ ಇವರಿಬ್ಬರ ಹೆಸರು ಪ್ರಜ್ವಲಿಸುತ್ತದೆ.
 
ಐಎಎಸ್ ಅಧಿಕಾರಿಯಾಗಿದ್ದ ಶುಕ್ಲಾ ಅವರ ಸಾಹಿತ್ಯದಲ್ಲಿ ವಿಡಂಬನೆ ಪ್ರತಿಧ್ವನಿಸಿದರೆ, ಅಮರ್‌ಕಾಂತ್ ತಮ್ಮ ಕೃತಿಗಳಲ್ಲಿ ದಮನಿತರಿಗೆ ದನಿ ನೀಡುತ್ತಾರೆ.

 ಶ್ರೀಲಾಲ್ ಶುಕ್ಲಾ: 1925ರಲ್ಲಿ ಉತ್ತರ ಪ್ರದೇಶದ ಲಖನೌದ ಅತ್ರ್‌ಲಿ ಗ್ರಾಮದಲ್ಲಿ ಜನಿಸಿದ ಶುಕ್ಲಾ ಅಲಹಾಬಾದ್ ವಿಶ್ವವಿದ್ಯಾಲಯದ ಪದವೀಧರರು. 1949ರಲ್ಲಿ ಅವರು ಉತ್ತರ ಪ್ರದೇಶ ಸರ್ಕಾರದಲ್ಲಿ  ಪ್ರಾಂತೀಯ ಆಡಳಿತ ಸೇವಾ ಅಧಿಕಾರಿಯಾಗಿ (ಪಿಎಸ್‌ಸಿ) ಸೇವೆ ಆರಂಭಿಸುತ್ತಾರೆ.
 
ಆ ಬಳಿಕ ಐಎಎಸ್ ಅಧಿಕಾರಿಯಾಗಿಯೂ ಕಾರ್ಯನಿರ್ವಹಣೆ. ಅಧಿಕಾರದಲ್ಲಿ ಇದ್ದಾಗ ನೋಡಿದ ಕೇಡುಗಳನ್ನೆಲ್ಲ ಅವರು ತಮ್ಮ ಕೃತಿಗಳಲ್ಲಿ ಪಡಿಮೂಡಿಸಲು ಯತ್ನಿಸಿದ್ದಾರೆ.

ಉತ್ತರ ಪ್ರದೇಶದ ಗ್ರಾಮೀಣ ಹಾಗೂ ನಗರದ ಬದುಕಿನ ನೇತ್ಯಾತ್ಮಕ ಅಂಶಗಳೇ ಅವರ ಎಲ್ಲ ಕೃತಿಗಳ ಸ್ಥಾಯಿ ಭಾವ. ಶುಕ್ಲಾ ಅವರದ್ದು ವಿಡಂಬನಾ ಸಾಹಿತ್ಯ ಪ್ರಕಾರದಲ್ಲಿ ಎತ್ತಿದ್ದ ಕೈ. ಅಂತೆಯೇ ಅವರ ಎಲ್ಲ ಕಾದಂಬರಿಗಳೂ ಸಮಕಾಲೀನ ವ್ಯಂಗ್ಯದಲ್ಲಿ ಅದ್ದಿ ತೆಗೆದಂಥವು.

1968ರಲ್ಲಿ ಪ್ರಕಟವಾದ ಕಾದಂಬರಿ `ರಾಗ್ ದರ್ಬಾರಿ~ ರಾಜಕೀಯ ವಿಡಂಬನೆಗೆ ಅತ್ಯುತ್ತಮ ಉದಾಹರಣೆ. ಇದಕ್ಕೆ 1969ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.

ವಸಾಹತೋತ್ತರ ಭಾರತದಲ್ಲಿ ರಾಷ್ಟ್ರೀಯ ಚಳವಳಿಯ ಆದರ್ಶಗಳು ಕಣ್ಮರೆಯಾಗಿದ್ದಕ್ಕೆ ವಿಷಾದ, ಮಾನವೀಯ ಮೌಲ್ಯಗಳ ಅಸ್ತಿತ್ವವನ್ನು ಭ್ರಷ್ಟಾಚಾರ ಹಾಗೂ ದುರಾಸೆಗಳು ಅತಿಕ್ರಮಿಸಿಕೊಂಡಿರುವುದಕ್ಕೆ ಹತಾಶೆ, ಭ್ರಮನಿರಸನಗೊಳಿಸಿದ ವ್ಯವಸ್ಥೆಯ ಬಗ್ಗೆ ವ್ಯಂಗ್ಯ, ಸಿನಿಕತೆ-ಇವೇ ಮುಂತಾದ ಅಂಶಗಳಿಂದ ಇದಕ್ಕೆ  ಹಿಂದಿ ಸಾಹಿತ್ಯದಲ್ಲಿ ಮೇರು ಕೃತಿ ಎಂಬ ಮನ್ನಣೆ.

ಈ ಕಾದಂಬರಿಯ ನಾಯಕ ರಮಾನಾಥ ವ್ಯವಸ್ಥೆಯ ಕರಾಳ ಮುಖವನ್ನು ನೋಡಿ ಭ್ರಮನಿರಸನಗೊಂಡ ನೊಂದ ಜನರ ಪ್ರತಿನಿಧಿ. ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾಗ ಮಾನವೀಯ ಮೌಲ್ಯಗಳು, ಆದರ್ಶಗಳ ಬಗ್ಗೆ ಅಪಾರ ನಂಬಿಕೆ ಇಟ್ಟುಕೊಂಡಿದ್ದ ಈತನಿಗೆ ಸ್ವಾರ್ಥವೇ ಮೂರ್ತಿವೆತ್ತ ತನ್ನ ಚಿಕ್ಕಪ್ಪನನ್ನು ಅರಗಿಸಿಕೊಳ್ಳುವುದೇ ಕಷ್ಟ.

ತಾನು ನೆಚ್ಚಿಕೊಂಡ ನಂಬಿಕೆಗಳಿಗೆ ಅರ್ಥವಿಲ್ಲ, ವಾಸ್ತವ ಸ್ಥಿತಿಯೇ ಬೇರೆ ಎಂಬ ಅರಿವಾದಾಗ ಬೆಚ್ಚಿ ಬೀಳುತ್ತಾನೆ. ಇಡೀ ಕಾದಂಬರಿಯಲ್ಲಿ ಉತ್ತರ ಪ್ರದೇಶದ ಅಪ್ಪಟ ಗ್ರಾಮೀಣ ಬದುಕಿನ ಸೊಗಡು ಗಮನ ಸೆಳೆಯುತ್ತದೆ.

ಬುದ್ಧಿ ಹಾಗೂ ಭಾವಕ್ಕೆ ನಿಲುಕದ ತರ್ಕ ಈ ಕಾದಂಬರಿಯಲ್ಲಿ ಬಳಕೆಯಾದ ಒಂದು ವಿಶಿಷ್ಟವೂ, ವಿಚಿತ್ರವೂ ಆದ ಪ್ರಯೋಗ. ವ್ಯವಸ್ಥೆಯ ಕಟು ವಿಮರ್ಶೆಗೆ ಶುಕ್ಲಾ ಈ ತಂತ್ರವನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದಾರೆ.

`ರಾಗ್  ದರ್ಬಾರಿ~  ಕನ್ನಡ, ಇಂಗ್ಲಿಷ್ ಸೇರಿದಂತೆ ಒಟ್ಟು 14 ಭಾರತೀಯ ಭಾಷೆಗಳಿಗೆ ಅನುವಾದಗೊಂಡಿದೆ. 80ರ ದಶಕದಲ್ಲಿ ಈ ಕಾದಂಬರಿ ಆಧಾರಿತ ಧಾರಾವಾಹಿ ಕೂಡ ಪ್ರಸಾರವಾಗಿತ್ತು.

1957ರಲ್ಲಿ ಚೊಚ್ಚಲ ಕಾದಂಬರಿ `ಸೂನಿ ಘಾಟಿಕಾ ಸೂರಜ್~ ಮೂಲಕ ಅಭಿವ್ಯಕ್ತಿ ಕ್ಷೇತ್ರಕ್ಕೆ ಬಡ್ತಿ. ಅಜ್ಞಾತವಾಸ (1962), ಆದ್ಮಿ ಕಾ ಜಹರ್ (1972), ಸೀಮಾಯೇ ಟೂಟ್ತಿ ಹೇ (1973), ಮಕಾನ್ (1976), ಪೆಹಲಾ ಪಡಾವ್ (1987), ಬಿಸ್ರಾಂಪುರ್ ಕಾ ಸಂತ್ (1998), ಬಬ್ಬರ್ ಸಿಂಗ್ ಔರ್ ಉಸ್ಕಾ ಸಾಥಿ (1999) ಮತ್ತು ರಾಗ್ ವಿರಾಗ್ (2001) ಶುಕ್ಲಾ ಅವರ ಪ್ರಮುಖ ಕಾದಂಬರಿಗಳು.

`ಅಂಗದ್ ಕಾ ಪಾಂವ್, ಯಹಾ ಸೇ ವಹಾ, ಅಗ್ಲಿ ಶತಾಬ್ದಿ ಕಾ ಶಹರ್ ಮತ್ತಿತರ ಕಥೆಗಳ ಮೂಲಕ ಸಮಕಾಲೀನ ಕಥಾ ಸಾಹಿತ್ಯದಲ್ಲಿಯೂ ಶುಕ್ಲಾ ತಮ್ಮ ಛಾಪು ಮೂಡಿಸಿದ್ದಾರೆ. ಸಾಹಿತ್ಯ ವಿಮರ್ಶೆಯಲ್ಲಿಯೂ ಪಳಗಿರುವ ಅವರು ಅನೇಕ ಸಣ್ಣಕಥಾ ಸಂಕಲನಗಳನ್ನು ಹೊರತಂದಿದ್ದಾರೆ.

ಶುಕ್ಲಾ ಅವರ `ಬಿಸ್ರಾಂಪುರ್ ಕಾ ಸಂತ್~ ಕಾದಂಬರಿಗೆ 1999ರಲ್ಲಿ ಬಿರ್ಲಾ ಪ್ರತಿಷ್ಠಾನದ ವ್ಯಾಸ ಸಮ್ಮಾನ ದೊರೆತಿದೆ. 2008ರಲ್ಲಿ ಪದ್ಮಭೂಷಣದ ಗರಿಯಾದರೆ, ಇದೀಗ ಜ್ಞಾನಪೀಠ ಪ್ರಶಸ್ತಿಯ ಸಂಭ್ರಮ.

ಶುಕ್ಲಾ ಅವರದ್ದು ಮೂವರು ಹೆಣ್ಣು ಮಕ್ಕಳು, ಒಬ್ಬ ಮಗ, ಎಂಟು ಮೊಮ್ಮಕ್ಕಳ ತುಂಬು ಕುಟುಂಬ. ಹೆಣ್ಣು ಮಕ್ಕಳಾದ ರೇಖಾ ಅವಸ್ಥಿ, ಮಧುಲಿತಾ ಮೆಹ್ತಾ, ವಿನಿತಾ ಮಾಥೂರ್ ಎಲ್ಲರೂ ಸಾಹಿತ್ಯ, ಸಂಗೀತದಲ್ಲಿ ಆಸಕ್ತಿ ಹೊಂದಿದ್ದರೂ ಎರಡನೇ ಮಗಳು ಮಧುಲಿತಾ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
 
ಉದ್ಯಮಿಯಾಗಿರುವ ಮಗ ಅಶುತೋಷ್ ಸಹ ಸಾಹಿತ್ಯ, ಸಂಗೀತದಲ್ಲಿ ಆಸಕ್ತಿ ಹೊಂದಿದ್ದಾರೆ. ಶುಕ್ಲಾ ಪತ್ನಿ ಗಿರಿಜಾ ಕೆಲ ವರ್ಷಗಳ ಹಿಂದೆ ಅಗಲಿದ್ದು, ಅವರು ಸಂಗೀತ ಪ್ರೇಮಿಯಾಗಿದ್ದರು.

ಅಮರ್‌ಕಾಂತ್: ಹಿಂದಿ ಸಾಹಿತ್ಯ ಲೋಕದಲ್ಲಿ ಅಮರ್‌ಕಾಂತ್ ಹೆಸರು ಅನೇಕ ಕಾರಣಗಳಿಂದ ಗಮನ ಸೆಳೆಯುತ್ತದೆ. ಸಾಮಾನ್ಯ ಸಂಗತಿಗಳನ್ನು ಹೆಕ್ಕಿ ತೆಗೆದು ಅದಕ್ಕೊಂದು ಅಸಾಮಾನ್ಯ ರೂಪ ಕೊಟ್ಟು ಪರಿಣಾಮಕಾರಿಯಾದ ಕಥೆ ಹೆಣೆಯುವುದರಲ್ಲಿ ಇವರು ನಿಷ್ಣಾತರು.
 
ಶಬ್ದಗಳ ಆಡಂಬರವಿಲ್ಲದ ಸರಳ ಶೈಲಿಯಿಂದಾಗಿಯೇ ಇವರು ಹಿಂದಿ ಸಾಹಿತ್ಯದಲ್ಲಿ ಅತ್ಯುತ್ತಮ ಸಣ್ಣಕಥೆಗಾರರಾಗಿಯೂ ಗುರುತಿಸಿಕೊಂಡಿದ್ದಾರೆ. ಶುಕ್ಲಾ ಅವರಂತೆಯೇ ಇವರೂ ತಮ್ಮ ಕೃತಿಗಳಲ್ಲಿ ಕುಸಿಯುತ್ತಿರುವ ಮಾನವೀಯ ಮೌಲ್ಯಗಳ ಬಗ್ಗೆ ಕಳವಳ ವ್ಯಕ್ತಪಡಿಸುತ್ತಾರೆ.

ಸ್ವತಃ ಬಡತನವನ್ನು ಕಂಡುಂಡ ಅನುಭವದಿಂದಲೋ ಏನೋ ಅಮರ್‌ಕಾಂತ್ ಕೃತಿಗಳಲ್ಲಿ ಬಡತನ ಹಾಗೂ ಬದುಕಿನ ಕಠೋರತೆಗಳು ಹೆಚ್ಚು ಪ್ರಸ್ತಾಪವಾಗಿವೆ.

ಬೀಚ್ ಕಿ ದೀವಾರ್, ಗ್ರಾಮ್‌ಸೇವಿಕಾ, ಆಕಾಶ್ ಪಕ್ಷಿ, ಇನ್ಹಿ ಹತ್ಯಾರೋಂಸೆ ಸೇರಿದಂತೆ ಸುಮಾರು 12 ಕಾದಂಬರಿಗಳನ್ನು ಬರೆದಿರುವ ಅಮರ್‌ಕಾಂತ್, ತಮ್ಮ ಎಲ್ಲ ಕೃತಿಗಳಲ್ಲಿ ಮಾನವೀಯ ಸ್ವಭಾವದ ಆಳ ಅಧ್ಯಯನ ಮಾಡುತ್ತಾರೆ. ಇವರ ಸರಳ ಹಾಗೂ ದೇಸಿ ಸೊಗಡಿನ ಭಾಷೆ ಹೆಚ್ಚು ಆಪ್ತ.

ಗ್ರಾಮ್‌ಸೇವಿಕಾ ಕಾದಂಬರಿ ಬಗ್ಗೆ ಹೇಳುವುದಾದರೆ ಇದು ದಿಟ್ಟ ಮಹಿಳೆಯೊಬ್ಬಳು ತನ್ನ ಅಸ್ತಿತ್ವದ ಹುಡುಕಾಟದಲ್ಲಿ ಎದುರಿಸುವ ಸವಾಲುಗಳ ಸುತ್ತ ಹೆಣೆದ ಕಥೆ. `ಇನ್ಹಿ ಹತ್ಯಾರೋಂಸೆ~ ಐತಿಹಾಸಿಕ ಕಾದಂಬರಿ.

`ಕ್ವಿಟ್ ಇಂಡಿಯಾ~ ಚಳವಳಿಯ ಘಟನಾವಳಿಗಳನ್ನು ಒಳಗೊಂಡಿದೆ. ಇದಕ್ಕೆ 2007ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ 2009ರಲ್ಲಿ ವ್ಯಾಸ್ ಸಮ್ಮಾನ.

1925ರಲ್ಲಿ ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯ ಬಗಮಲ್‌ಪುರದಲ್ಲಿ ಜನಿಸಿದ ಅಮರ್‌ಕಾಂತ್, ಅಲಹಾಬಾದ್ ವಿಶ್ವವಿದ್ಯಾಲಯದ ಪದವೀಧರರು. ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯ ಪಾತ್ರ ವಹಿಸಿದ್ದ ಇವರು, ಮನೋರಮಾ ಹಿಂದಿ ಪತ್ರಿಕೆಗೆ ಬಹಳಷ್ಟು ವರ್ಷಗಳ ಕಾಲ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದರು.

ಸೋವಿಯತ್‌ಲ್ಯಾಂಡ್ ನೆಹರು ಪ್ರಶಸ್ತಿ ಮೂಲಕ ಅಂತರರಾಷ್ಟ್ರೀಯ ಮನ್ನಣೆ.
ಬಡತನ ಹಾಗೂ ಅನಾರೋಗ್ಯದಿಂದಾಗಿ ಎರಡು ವರ್ಷಗಳ ಹಿಂದೆ ಅತ್ಯಂತ ಕಡಿಮೆ ಬೆಲೆಗೆ ತಮ್ಮ ಕೆಲವು ಹಸ್ತಪ್ರತಿಗಳನ್ನು ಹಾಗೂ ಪ್ರಶಸ್ತಿಗಳನ್ನು ಮಾರಾಟ ಮಾಡಬೇಕಾಗಿ ಬಂದಿದ್ದು ಮಾತ್ರ ವಿಪರ್ಯಾಸ!

ಅಮರ್‌ಕಾಂತ್ ಅವರಿಗೆ ಇಬ್ಬರು ಪುತ್ರರು ಹಾಗೂ  ಪುತ್ರಿ (ಸಂಧ್ಯಾ ಸಿನ್ಹ) ಇದ್ದಾರೆ. ಮೊದಲ ಪುತ್ರ ಅರುಣ್‌ವರ್ಧನ್ (60) ನವಭಾರತ್ ಟೈಮ್ಸ ಪತ್ರಿಕೆಯಲ್ಲಿ ವಿಶೇಷ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದರು.

ಎರಡನೇ ಪುತ್ರ ಅರವಿಂದ ಬಿಂದು (49) ಅವರಿಗೆ ತಂದೆಯಂತೆ ಸಾಹಿತ್ಯದ ಹುಚ್ಚು. ಇವರು ಪ್ರಕಾಶಕರೂ ಹೌದು. ಪತ್ನಿ ಗಿರಿಜಾದೇವಿ ಮೂರು ವರ್ಷಗಳ ಹಿಂದೆಯೇ ಅಮರ್‌ಕಾಂತ್ ಅವರನ್ನು ಅಗಲಿದ್ದಾರೆ.

82ರ ಇಳಿ ವಯಸ್ಸಿನಲ್ಲಿಯೂ ಬರೆಯುವ ಅದಮ್ಯ ಆಸೆಗೆ ಮಗ ಅರವಿಂದ ಬಿಂದುವೇ ಆಸರೆ. ಲೇಖನಿಯೇ ಸರ್ವಸ್ವ ಎಂಬ ನಂಬಿಕೆಯ ಅಮರ್ ಪ್ರತಿಭಟನೆ ಹಾಗೂ ಬಂಡಾಯದ ಮೂರ್ತರೂಪ.

ಶುಕ್ಲಾ ಮತ್ತು ಅಮರ್‌ಕಾಂತ್ ಅವರಿಗೆ ದೊರೆತ ಜ್ಞಾನಪೀಠ ಗೌರವದಿಂದ ಹಿಂದಿ ಸಾಹಿತ್ಯ ಸರಸ್ವತಿಯ ಸಿರಿ ನೂರ್ಮಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT