ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದುಳಿದ ಕ್ಷೇತ್ರ ಹಣೆಪಟ್ಟಿ ಹೆಗ್ಗಳಿಕೆ

Last Updated 3 ಏಪ್ರಿಲ್ 2013, 6:22 IST
ಅಕ್ಷರ ಗಾತ್ರ

ಗದಗ: ಶಿರಹಟ್ಟಿ ತಾಲ್ಲೂಕು ಜಿಲ್ಲೆಯ ಅತಿ ಹಿಂದುಳಿದ ತಾಲ್ಲೂಕು ಎಂಬ ಹಣೆಪಟ್ಟಿ ಹೊತ್ತಿದ್ದರೂ ಕ್ಷೇತ್ರದ ಮತದಾರರು ಜಿಲ್ಲೆಯ ಏಕೈಕ ಮಹಿಳಾ ಶಾಸಕಿ ಆಯ್ಕೆ ಮಾಡಿದ ಹೆಗ್ಗಳಿಕೆ ಹೊಂದಿದ್ದಾರೆ.

ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ಮಹಿಳೆಯರಿಗೆ ಅವಕಾಶ ದೊರೆತಿರುವುದು ತೀರಾ ವಿರಳ. 1957ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ 16,644 ಮತ ಪಡೆದು ವಿಧಾನಸಭೆ ಪ್ರವೇಶಿಸಿದ ಲೀಲಾವತಿ ಮಾಗಡಿ ಅವರು ಜಿಲ್ಲೆಯ ಪ್ರಥಮ ಮಹಿಳಾ ಶಾಸಕಿ. ಪಕ್ಷೇತರರಾಗಿ ಸ್ಪರ್ಧಿಸಿದ್ದ ಎಸ್.ವಿ.ಕಾಶೀಮಠ (8,343 ಮತ) ಮತ್ತು ಎಸ್.ಸಿ.ರಾನಡೆ (2,703 ಮತ) ಪಡೆದರು ಸೋಲು ಕಂಡಿದ್ದರು.

ಮೊದಲ ಪ್ರಯತ್ನದಲ್ಲೇ ಗೆಲುವು ಸಾಧಿಸಿ ಅಂದಿನ ಬಿ.ಡಿ.ಜತ್ತಿ ಸರ್ಕಾರದಲ್ಲಿ ಗ್ರಾಮೀಣ ಕೈಗಾರಿಕೆ ಸಚಿವೆಯಾಗಿ ಇತಿಹಾಸ ಬರೆದ ಲೀಲಾವತಿ ಮಾಗಡಿ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿ ಕೊಂಡಿದ್ದರು. ಗಾಂಧೀಜಿ ಆದರ್ಶ ಅಳವಡಿಸಿಕೊಂಡು ನೇರ, ನುಡಿಯ ದಿಟ್ಟ ಮಹಿಳೆಯಾಗಿದ್ದರು.

1962ರ ಚುನಾವಣೆಯಲ್ಲಿ ಸ್ವತಂತ್ರ ಪಕ್ಷದ ಕೆ.ಎಸ್.ವೀರಯ್ಯ (17,347 ಮತ) ಅವರು ಕಾಂಗ್ರೆಸ್ ಅಭ್ಯರ್ಥಿ ಲೀಲಾವತಿ (16,832 ಮತ) ಅವರನ್ನು ಸೋಲಿಸಿದರು. 1967ರ ಚುನಾವಣೆಯಲ್ಲೂ ಮತ್ತೆ ಅದೃಷ್ಟ ಕೈಕೊಟ್ಟಿತು. ಆಗ ಮತದಾರರು ಎಸ್.ವಿ.ಕಾಶೀಮಠ  (23,646 ಮತ) ಅವರನ್ನು ಗೆಲ್ಲಿಸಿದರು. ಲೀಲಾವತಿ (22,661 ಮತ) ಪಡೆದು ಸೋತರು.

ಈ ಕ್ಷೇತ್ರದಲ್ಲಿ ಸ್ಪರ್ಧಿಸಿದವರು ಹೆಚ್ಚು ಅಂದರೆ ಎರಡು ಸಲ ಗೆಲುವು ಸಾಧಿಸಿದ್ದಾರೆ. ಉಪನಾಳ ಗೊಳಪ್ಪನವರು ಆರು ಸಲ ವಿಧಾನಸಭೆಗೆ ಸ್ಪರ್ಧಿಸಿ 1978 ಮತ್ತು 1983ರಲ್ಲಿ ಗೆಲುವು ಕಂಡಿದ್ದರು. ಜಿ.ಎಸ್.ಗಡ್ಡದೇವರ ಮಠ 1999 ಮತ್ತು 2004ರಲ್ಲಿ ಆಯ್ಕೆಯಾಗಿದ್ದರು. 2008ರಲ್ಲಿ ಶಿರಹಟ್ಟಿ ಮೀಸಲು ಕ್ಷೇತ್ರವಾದ್ದರಿಂದ ಅವರ ಹ್ಯಾಟ್ರಿಕ್ ಕನಸು ನನಸಾಗಲಿಲ್ಲ. 12 ಚುನಾವಣೆಯಲ್ಲಿ ಆರು ಬಾರಿ ಕಾಂಗ್ರೆಸ್ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

ನೂಲಿನ ಗಿರಣಿ ಸೇರಿ ಅನೇಕ ಅಭಿವೃದ್ಧಿ ಕಾರ್ಯ ಕೈಗೊಂಡು ಜನಪ್ರಿಯರಾಗಿದ್ದ ಉಪನಾಳ ಗೂಳಪ್ಪನವರು 1978ರಲ್ಲಿ ಕಾಂಗ್ರೆಸ್ ಅಭ್ಯಥಿರ್ಯಾಗಿ ಸ್ಪರ್ಧಿಸಿ ಗೆಲುವು ಕಂಡರು. 1983ರಲ್ಲಿ ಕಾಂಗ್ರೆಸ್ ಟಿಕೆಟ್ ವಂಚಿತ ಗೂಳಪ್ಪನವರು ಪಕ್ಷೇತರರಾಗಿ ಸ್ಪರ್ಧಿಸಿ 25,825 ಮತ ಪಡೆದು ಜಯಸಾಧಿಸಿದರು.

ಚುನಾವಣೆ ಪ್ರಚಾರಕ್ಕೆ ಆಗಮಿಸಿದ್ದ ಅಂದಿನ ಪ್ರಧಾನಿ ಇಂದಿರಾಗಾಂಧಿ ಹಾಗೂ ಮುಖ್ಯಮಂತ್ರಿ ಆರ್.ಗುಂಡೂರಾವ್ ಅವರು ಗೂಳಪ್ಪನವರ ಜನಪ್ರಿಯತೆ ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ್ ನಾಲ್ಕು ಬಾರಿ ಚುನಾವಣೆ ಎದುರಿಸಿ ಒಮ್ಮೆ ಶಾಸಕರಾಗಿದ್ದರು. 2008ರಲ್ಲಿ ಬಿಜೆಪಿ ಅಭ್ಯರ್ಥಿ ರಾಮಣ್ಣ
ಲಮಾಣಿ (39,859 ಮತ) ಪಡೆದು ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾದರು.

ಚುನಾವಣಾ ಫಲಿತಾಂಶ ವಿವರ:
*1983ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಅಖಾಡಕ್ಕಿಳಿದ ಹಾಲಿ ಶಾಸಕ ಜಿಎಫ್.ಉಪನಾಳ ಪುನರಾಯ್ಕೆಯಾದರು. ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ ಎನ್.ಜಿ.ಕುಲಕರ್ಣಿ, ಜೆ.ಪಿ. ಪಾರ್ಟಿಯಿಂದ ಎಸ್.ವಿ.ಬಳಿಗಾರ ಸೇರಿದಂತೆ ಒಟ್ಟು ಎಂಟು ಅಭ್ಯರ್ಥಿಗಳು ಕಣದಲ್ಲಿದ್ದರು.

*1985ರಲ್ಲಿ ಜನತಾ ಪಕ್ಷದ ಟಿ.ಬಿ.ಬಾಳಿಕಾಯಿ 24,362 ಮತ ಪಡೆದು ಗೆಲುವು ಸಾಧಿಸಿದರು. ಕಾಂಗ್ರೆಸ್‌ನಿಂದ ಎಸ್.ಎನ್.ಪಾಟೀಲ, ಪಕ್ಷೇತರರಾಗಿ ಜಿ.ಎಫ್.ಉಪನಾಳ ಸೇರಿ ಎಂಟು ಮಂದಿ ಸ್ಪರ್ಧೆಯಲ್ಲಿದ್ದರು.

*1989ರಲ್ಲಿ ಕಾಂಗ್ರೆಸ್‌ನ ಎಸ್.ಎನ್.ಪಾಟೀಲ 24,882 ಮತ ಪಡೆದು ಜಯ ಗಳಿಸಿದರು. ಜನತಾ ದಳದ ಗಂಗಣ್ಣ ಮಹಾಂತಶೆಟ್ಟರ್, ಪಕ್ಷೇತರ ಅಭ್ಯರ್ಥಿ ಜಿ.ಎಫ್.ಉಪನಾಳ, ರೈತ ಸಂಘದಿಂದ ಎಚ್.ಎನ್.ಬಟಕುರ್ಕಿ, ಲೋಕದಳ (ಬಿ) ದಿಂದ ಎನ್.ಎ.ಶಾಲಗಾರ, ಜೆಪಿ ಪಾರ್ಟಿಯಿಂದ ಜೆ.ಜೆ.ಹೆಸರೂರ, ಬಿಜೆಪಿಯಿಂದ ವಿ.ಎಸ್.ಕುಬೇರ ಸೇರಿ 9 ಮಂದಿ ಕಣದಲ್ಲಿದ್ದರು.

*1994ರಲ್ಲಿ ಜನತಾ ದಳದ ಗಂಗಣ್ಣ ಮಹಾಂತಶೆಟ್ಟರ 26,449 ಮತ ಪಡೆದು ಪ್ರಥಮ ಬಾರಿ ವಿಧಾನಸಭೆ ಪ್ರವೇಶಿಸಿದರು. ಪಕ್ಷೇತರ ಅಭ್ಯರ್ಥಿ ಜಿ.ಎಫ್.ಉಪನಾಳ, ಕಾಂಗ್ರೆಸ್‌ನಿಂದ ಎನ್.ಎಸ್.ಪಾಟೀಲ, ಕೆಸಿಪಿಯಿಂದ ಎಫ್.ಎಸ್.ಗಂಜಿ ಸೇರಿ 11 ಅಭ್ಯರ್ಥಿಗಳು ಕಣದಲ್ಲಿದ್ದರು.

*1999ರಲ್ಲಿ ಕಾಂಗ್ರೆಸ್‌ನ ಜಿ.ಎಸ್.ಗಡ್ಡದೇವರ ಮಠ 34,547 ಮತ ಪಡೆದು ಆಯ್ಕೆಯಾದರು. ಜೆಡಿಯುನಿಂದ ಗಂಗಣ್ಣ ಮಹಾಂತ ಶೆಟ್ಟರ್, ಜೆಡಿಎಸ್‌ನಿಂದ ಬಿ.ಎನ್.ಬೆಟಗೇರಿ, ಬಿಜೆಪಿಯಿಂದ ಜಿ.ಎಸ್.ಜಗಳಿ, ಬಿಎಸ್‌ಪಿಯಿಂದ ಎಂ.ಎಚ್.ಬಸವರಾಜ ಸೇರಿ ಹತ್ತು ಮಂದಿ ಕಣದಲ್ಲಿದ್ದರು.

*2004ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಹಾಲಿ ಶಾಸಕ ಜಿ.ಎಸ್.ಗಡ್ಡದೇವರ ಮಠ 34,151 ಮತ ಪಡೆದು ಪುನರಾ ಯ್ಕೆಯಾದರು.  ಜೆಡಿಯುನಿಂದ ಗಂಗಣ್ಣ ಮಹಾಂತಶೆಟ್ಟರ, ಜೆಡಿಎಸ್‌ನಿಂದ ವಿ.ಬಿ. ಕಪ್ಪತ್ತನವರ, ಸಿ.ಎಫ್.ಅರಮನಿ, ಕೆಎನ್‌ಪಿಯಿಂದ ಎ.ಎಫ್.ಡಾಲಾಯತ್ ಖುರ್ಷಿದ್, ಪಕ್ಷೇತರರಾಗಿ ರಾಜೇಶ ಸಿದ್ದಯ್ಯ ಕಾಶೀಮಠ ಅಖಾಡದಲ್ಲಿದ್ದರು.

*2008ರಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿದ್ದ ರಾಮಣ್ಣಲಮಾಣಿ 39,859 ಮತ ಪಡೆದು ಜಯಭೇರಿ ಬಾರಿಸಿದರು. ಕಾಂಗ್ರೆಸ್‌ನ ಎಚ್.ಆರ್.ನಾಯಕ, ಜೆಡಿಎಸ್‌ನ ಅಲ್ಕೋಡ ಹನುಮಂತಪ್ಪ, ಪಕ್ಷೇತರ ಅಭ್ಯರ್ಥಿ ಜಯಶ್ರೀ ಹಳ್ಳೆಪ್ಪನವರ ಕಣದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT