ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದುಳಿದ ವರ್ಗ ಅಭಿವೃದ್ಧಿಗೆ ಸಾವಿರ ಕೋಟಿ

Last Updated 13 ಫೆಬ್ರುವರಿ 2012, 8:15 IST
ಅಕ್ಷರ ಗಾತ್ರ

ಮಂಗಳೂರು: ಈ ಸಲದ ಮುಂಗಡಪತ್ರದಲ್ಲಿ ಹಿಂದುಳಿದ ವರ್ಗದ ಅಭಿವೃದ್ಧಿಗೆ ಸಾವಿರ ಕೋಟಿ ರೂಪಾಯಿ ಮೀಸಲಿಡುವುದಾಗಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಘೋಷಿಸಿದರು.

ನಗರದ ಪುರಭವನದಲ್ಲಿ ಭಾನುವಾರ ನಡೆದ ಅಖಿಲ ಭಾರತ ಬಿಲ್ಲವರ ಯೂನಿಯನ್‌ನ ಶತಮಾನೋತ್ಸವ ಸಂಭ್ರಮ ಉದ್ಘಾಟನೆ ಹಾಗೂ ಬಿಲ್ಲವ ಹಾಸ್ಟೆಲ್ ಕಟ್ಟಡದ ಶಿಲಾನ್ಯಾಸ ಸಮಾರಂಭದಲ್ಲಿ ಅವರು ಮಾತನಾಡಿದರು.

ಹಿಂದುಳಿದ ವರ್ಗ ಎಂಬುದೇ ಇರಬಾರದು. ಎಲ್ಲರೂ ಸಮಾನರು ಎಂಬ ಭಾವನೆ ಬರಬೇಕು. ಈ ನಿಟ್ಟಿನಲ್ಲಿ ಸರ್ಕಾರ ವಿಶೇಷ ಅನುದಾನ ನೀಡುತ್ತಿದೆ. 2010-11ರ ಮುಂಗಡಪತ್ರದಲ್ಲಿ 606 ಕೋಟಿ ರೂಪಾಯಿ, 2011-12ರ ಮುಂಗಡಪತ್ರದಲ್ಲಿ 760 ಕೋಟಿ ರೂಪಾಯಿ ಮೀಸಲಿಡಲಾಗಿತ್ತು ಎಂದು ಅವರು ತಿಳಿಸಿದರು.

ಎಣ್ಮೂರು ಅಭಿವೃದ್ಧಿಗೆ ಕ್ರಮ: ತುಳುನಾಡಿನ ವೀರಪುರುಷರಾದ ಕೋಟಿ ಚೆನ್ನಯರ ಜನ್ಮಸ್ಥಳ ಎಣ್ಮೂರಿನಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆ ಮೂಲಕ ನೀಲಿ ನಕಾಶೆ ತಯಾರಿಸಿ ಮುಂದುವರಿಯಲಾಗುವುದು ಎಂದು ಅವರು ಹೇಳಿದರು.

ಕಾರ್ಕಳದಲ್ಲಿ 100 ಎಕರೆ ಜಾಗದಲ್ಲಿ ರೂ 1.8 ಕೋಟಿ ವೆಚ್ಚದಲ್ಲಿ ಕೋಟಿ ಚೆನ್ನಯ ಥೀಮ್ ಪಾರ್ಕ್ ಲೋಕಾರ್ಪಣೆ ಮಾಡಲಾಗಿದ್ದು, ದೇಯಿ ಬೈದೆತಿ ಉದ್ಯಾನವನ ನಿರ್ಮಿಸಲು ಉದ್ದೇಶಿಸಲಾಗಿದೆ. ಅಲ್ಲಿನ ಅಭಿವೃದ್ಧಿಗೆ ಇನ್ನಷ್ಟು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಬಿಲ್ಲವರ ಹಾಸ್ಟೆಲ್‌ಗೆ ರಾಜ್ಯ ಸರ್ಕಾರದಿಂದ ಎರಡು ಕೋಟಿ ರೂಪಾಯಿ ನೀಡಲಾಗುವುದು. ಕೆಲಸ ಆರಂಭಿಸಿದ ಕೂಡಲೇ ಒಂದು ಕೋಟಿ ರೂಪಾಯಿ ನೀಡಲಾಗುವುದು. ಹೆಚ್ಚಿನ ಅನುದಾನ ಬೇಕಾದರೆ ನೀಡಲಾಗುವುದು ಎಂದು ಅವರು ಘೋಷಿಸಿದರು.

ಎಂಜಿನಿಯರ್ ಆಗಲಿ: ಹಿರಿಯರು ಮೂರ್ತೆದಾರಿಕೆ ಮುಂದುವರಿಸಿ. ಆದರೆ ಮಕ್ಕಳನ್ನು ಮೂರ್ತೆದಾರರನ್ನಾಗಿ ಮಾಡಬೇಡಿ. ಅವರನ್ನು ಡಾಕ್ಟರ್, ಎಂಜಿನಿಯರ್ ಮಾಡಿ. ಬಿಲ್ಲವರು ಕೀಳರಿಮೆ ಬಿಟ್ಟು ಹಿಂದುಳಿದ ಹಣೆಪಟ್ಟಿಯಿಂದ ಹೊರಗೆ ಬರಬೇಕು ಎಂದು ಅವರು ಕಿವಿಮಾತು ಹೇಳಿದರು.

ಎಸ್. ಬಂಗಾರಪ್ಪ ಮುಖ್ಯಮಂತ್ರಿಯಾಗಿ ಅದ್ಭುತ ಕೆಲಸ ಮಾಡಿದ್ದಾರೆ. ಜನಾರ್ದನ ಪೂಜಾರಿ ಅವರ ಕಾರ್ಯವೂ ಮಹತ್ತರವಾದುದು. ಗೋಕರ್ಣನಾಥ ದೇವಳ ಪ್ರವಾಸಿ ಕೇಂದ್ರವಾಗುವ ಎಲ್ಲ ಲಕ್ಷಣಗಳು ಇವೆ ಎಂದು ಗಮನ ಸೆಳೆದರು.

ಮುಖ್ಯಮಂತ್ರಿ ಸ್ಥಾನಕ್ಕೆ ತಾವು ಏರಲು ಬಿಲ್ಲವರ ಆಶೀರ್ವಾದವೇ ಕಾರಣ ಎಂದು ಸ್ಮರಿಸಿಕೊಂಡ ಅವರು, ಸಂಘಟನೆ ದಿನದಿಂದ ದಿನಕ್ಕೆ ಎತ್ತರೆತ್ತರಕ್ಕೆ ಹೋಗುತ್ತಿದೆ ಎಂದರು.

ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನಚಂದ್ರ ಡಿ.ಸುವರ್ಣ ಮಾತನಾಡಿ, ಕೋಟಿ ಚೆನ್ನಯರ ಜನ್ಮಸ್ಥಳ ಎಣ್ಮೂರಿನ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ಬಿಲ್ಲವರ ಸಭಾಭವನ, ಗರಡಿ, ಗುರುಮಂದಿರ ಅಭಿವೃದ್ಧಿಗೆ ಬಜೆಟ್‌ನಲ್ಲಿ ಅನುದಾನ ಘೋಷಿಸಬೇಕು. ಬಿಲ್ಲವ ಅರ್ಚಕರಿಗೆ ಮಾಸಾಶನ ನೀಡಬೇಕು. ಬಿಲ್ಲವರಿಗೆ ಹೆಚ್ಚಿನ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂದು ಮನವಿ ಮಾಡಿದರು.

ಕೇಂದ್ರದ ಮಾಜಿ ಸಚಿವ ಆರ್.ಎಲ್.ಜಾಲಪ್ಪ, ಎಐಸಿಸಿ ಕಾರ್ಯದರ್ಶಿ ವಿನಯ ಕುಮಾರ್ ಸೊರಕೆ, ವಿಧಾನಸಭೆ ಉಪಸಭಾಧ್ಯಕ್ಷ ಎನ್. ಯೋಗೀಶ್ ಭಟ್, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಬೇಳೂರು ಗೋಪಾಲಕೃಷ್ಣ, ಭಟ್ಕಳ ಶಾಸಕ ಜೆ.ಡಿ. ನಾಯಕ್, ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘದ ಅಧ್ಯಕ್ಷ ಜೆ.ಪಿ. ನಾರಾಯಣ ಸ್ವಾಮಿ, ಮಾಜಿ ಸಚಿವ ವಸಂತ ಸಾಲ್ಯಾನ್, ಮಾಜಿ ಶಾಸಕ ರುಕ್ಮಯ ಪೂಜಾರಿ, ಪ್ರಭಾಕರ ಬಂಗೇರ, ಜಿ.ಪಂ. ಅಧ್ಯಕ್ಷೆ ಕೆ.ಟಿ.ಶೈಲಜಾ ಭಟ್, ಮೇಯರ್ ಪ್ರವೀಣ್, ಬಹರೇನ್ ಗಲ್ಫ್ ಬಿಲ್ಲವ ಸಂಘ ಅಧ್ಯಕ್ಷ ರಾಜ್ ಕುಮಾರ್, ಉಡುಪಿ ನಗರಸಭೆ ಅಧ್ಯಕ್ಷ ಕಿರಣ್ ಕುಮಾರ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT