ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದುಳಿದವರ ಅಭಿವೃದ್ಧಿಗೆ ಬಜೆಟ್‌ನಲ್ಲಿ ಹಣ

Last Updated 20 ಫೆಬ್ರುವರಿ 2011, 19:15 IST
ಅಕ್ಷರ ಗಾತ್ರ

ಬೆಂಗಳೂರು: ‘ಹಿಂದುಳಿದ ವರ್ಗಗಳ ಅಭಿವೃದ್ಧಿ ಮತ್ತು ಕಲ್ಯಾಣ ಕಾರ್ಯಕ್ರಮಗಳಿಗೆ ಬರುವ ಬಜೆಟ್‌ನಲ್ಲಿ ಕನಿಷ್ಠ ರೂ 1000 ಕೋಟಿ ಹಣವನ್ನು ಮೀಸಲಿರಿಸಲಿದ್ದೇನೆ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ನಗರದಲ್ಲಿ ಭಾನುವಾರ ಕರ್ನಾಟಕ ಕ್ಷತ್ರಿಯ ಮರಾಠಾ ಪರಿಷತ್ ಏರ್ಪಡಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವದಲ್ಲಿ ಅವರ ಅನುಪಸ್ಥಿತಿಯ ಹಿನ್ನೆಲೆಯಲ್ಲಿ ಅವರು ಕಳುಹಿಸಿದ ಸಂದೇಶವನ್ನು ಸಚಿವ ವಿ.ಸೋಮಣ್ಣ ಅವರು ವಾಚಿಸಿದರು.

 ‘2004-05ರಲ್ಲಿ ಅಂದಿನ ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರ ಹಿಂದುಳಿದ ವರ್ಗಗಳ ಕಲ್ಯಾಣ ಕಾರ್ಯಕ್ರಮಗಳಿಗಾಗಿ ರೂ 111 ಕೋಟಿ ನೀಡಿತ್ತು. ಈ ಮೊತ್ತವನ್ನು ಕಳೆದ ಬಜೆಟ್‌ನಲ್ಲಿ ರೂ 223 ಕೋಟಿಗೆ ಹೆಚ್ಚಿಸಿದ್ದೇನೆ. ಹಿಂದುಳಿದ ವರ್ಗಗಳ ಆರು ಲಕ್ಷ ಫಲಾನುಭವಿಗಳಿಗೆ ಮಾತ್ರ ಪ್ರಯೋಜನ ದೊರೆಯುತ್ತಿತ್ತು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಈ ಸಂಖ್ಯೆಯನ್ನು 14 ಲಕ್ಷಕ್ಕೆ ಹೆಚ್ಚಿಸಲಾಗಿದೆ’ ಎಂದಿದ್ದಾರೆ.

 ‘ಪರಿಶಿಷ್ಟರು, ಅಲ್ಪಸಂಖ್ಯಾತರು ಮತ್ತು ಶೋಷಿತರನ್ನು ಮತಬ್ಯಾಂಕ್ ಎಂದು ಪರಿಗಣಿಸಲು ಬಿಜೆಪಿ ಬಯಸುವುದಿಲ್ಲ. ಬದಲಾಗಿ ಈ ವರ್ಗದವರು ಸಬಲೀಕರಣಕೊಳ್ಳಲು ಅವಶ್ಯಕವಾದ ಹಲವು ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುತ್ತಿದೆ ಎಂದಿದ್ದಾರೆ. 

 ಶಿವಾಜಿ ಮಹಾರಾಜರ ದೇಶಪ್ರೇಮ, ತಾಯ್ನಾಡಿಗೆ ಅವರು ಹೊಂದಿದ್ದ ನಿಷ್ಠೆ ಹಾಗೂ ಪ್ರಜೆಗಳ ಬಗ್ಗೆ ಹೊಂದಿದ್ದ ಕಾಳಜಿಯನ್ನು ನಾವು ಗೌರವಿಸಬೇಕು ಎಂದು ಸಲಹೆ ನೀಡಿದ್ದಾರೆ. 

 ನಂತರ ಸೋಮಣ್ಣ ಅವರು, ಜಗನ್ನಾಥರಾವ್ ಬಹುಳೆ ಸಂಪಾದಿಸಿದ ‘ಕನ್ನಡದ ಬೆಳಕಿನಲ್ಲಿ ಛತ್ರಪತಿ ಶಿವಾಜಿ’ ಕೃತಿ ಮತ್ತು ಮರಾಠಾ ಪರಿಷತ್‌ನ ವಾರ್ತಾ ಸಂಚಿಕೆಯನ್ನು ಬಿಡುಗಡೆ ಮಾಡಿದರು.

ಶಿವಾಜಿ ಮಹಾರಾಜರ ಭಾವಚಿತ್ರವನ್ನು ಅನಾವರಣ ಮಾಡಿದ ಜೆಡಿಎಸ್ ಕಾರ್ಯಾಧ್ಯಕ್ಷ ಪಿ.ಜಿ.ಆರ್.ಸಿಂಧ್ಯ ಮಾತನಾಡಿ, ಮರಾಠಾ ಜನಾಂಗದವರಿಗೆ ಸೌಕರ್ಯ ಕಲ್ಪಿಸಲು ಸರ್ಕಾರ ಈ ಜನಾಂಗವನ್ನು 2ಎ ಪ್ರವರ್ಗಕ್ಕೆ ಸೇರಿಸಬೇಕು ಎಂದು ಮನವಿ ಮಾಡಿದರು.

ಚಿತ್ರದುರ್ಗ ಜಿಲ್ಲೆಯ ಬೂದಿಗೆರೆಯಲ್ಲಿರುವ ಷಹಾಜಿ ಸಮಾಧಿ ಸ್ಥಳವನ್ನು ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ವಿಶೇಷ ಹಣವನ್ನು ಬಿಡುಗಡೆ ಮಾಡಬೇಕು. ಈ ಬಗ್ಗೆಯೂ ಮುಖ್ಯಮಂತ್ರಿಗಳೊಂದಿಗೆ ಮಾತನಾಡುವುದಾಗಿ ಅವರು ತಿಳಿಸಿದರು.

ಶಾಸಕ ಎಲ್.ಎ.ರವಿಸುಬ್ರಹ್ಮಣ್ಯ, ಗೋಸಾಯಿ ಮಠದ ಸುರೇಶ್ವರಾನಂದ ಸ್ವಾಮೀಜಿ, ಮರಾಠಾ ಪರಿಷತ್ ಅಧ್ಯಕ್ಷ ರಾಣೋಜಿರಾವ್ ಸಾಠೆ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT