ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದುಳಿದವರಲ್ಲಿ ವೈಚಾರಿಕತೆ ಕೊರತೆ

Last Updated 6 ಮೇ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಸಮಾಜದಲ್ಲಿ ಹಿಂದುಳಿದ ವರ್ಗದ ಮಂದಿ ತಮ್ಮದೇ ಆದ ಒಂದು ಸಾಮಾಜಿಕ ಹಾಗೂ ಸೈದ್ಧಾಂತಿಕ ಚೌಕಟ್ಟಿಗೆ ಒಳಗೊಳ್ಳುವವರೆಗೆ ಸಾಮಾಜಿಕ ಕ್ರಾಂತಿ ಅಸಾಧ್ಯ~ ಎಂದು ಹೈದರಾಬಾದ್‌ನ ಕೇಂದ್ರೀಯ ವಿಶ್ವವಿದ್ಯಾಲಯದ ಮೌಲಾನಾ ಆಜಾದ್ ಆಂತರಿಕ ಮತ್ತು ಬಾಹ್ಯ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಕಾಂಚಾ ಐಲಯ್ಯ ಪ್ರತಿಪಾದಿಸಿದರು.

ನಗರದ ಯವನಿಕ ಸಭಾಂಗಣದಲ್ಲಿ ಭಾನುವಾರ ವಡ್ಡರ್ಸೆ ರಘುರಾಮ ಶೆಟ್ಟಿ ಪ್ರತಿಷ್ಠಾನ ಉದ್ಘಾಟಿಸಿ ಅವರು ಮಾತನಾಡಿ `ಡಾ.ಬಿ.ಆರ್.ಅಂಬೇಡ್ಕರ್ ಅವರ ಸೈದ್ಧಾಂತಿಕ ಹಾಗೂ ತಾತ್ವಿಕ ನಿಲುವುಗಳಿಗೆ ದಲಿತರು ಬದ್ಧರಾಗಿದ್ದಾರೆ. ಆದರೆ ಹಿಂದುಳಿದ ವರ್ಗದ ಮಂದಿ ಅಂಬೇಡ್ಕರ್ ಅವರನ್ನು ಅರ್ಥ ಮಾಡಿಕೊಳ್ಳುವಲ್ಲಿ ಎಡವಿದ್ದು, ತಮ್ಮ ಸಾಮಾಜಿಕ ಹಾಗೂ ರಾಜಕೀಯ ಚಿಂತನೆಗಳಿಗೆ ಯಾವುದೇ ಸೂಕ್ತ ಮಾದರಿಗಳಿಲ್ಲದೆ ಮೇಲ್ವರ್ಗದವರ ಆಕಾಂಕ್ಷೆಗೆ ತಕ್ಕಂತೆ ಬದುಕುತ್ತಿದ್ದಾರೆ~ ಎಂದರು.

`ಹಿಂದುಳಿದ ವರ್ಗದವರಲ್ಲಿ ವೈಚಾರಿಕ ಶಕ್ತಿಯ ಕೊರತೆ ಇದೆ. ಹೆಚ್ಚಿನ ಶಿಕ್ಷಣ ಪಡೆದು ಓದಿನಲ್ಲಿ ತೊಡಗುವ ಮೂಲಕ ಅವರು ಬ್ರಾಹ್ಮಣಶಾಹಿಯ ಸಂಚನ್ನು ಅರ್ಥಮಾಡಿಕೊಳ್ಳಬೇಕು. ಇಲ್ಲದಿದ್ದರೆ ಹಲವು ಶತಮಾನಗಳ ಕಾಲ ಬ್ರಾಹ್ಮಣರ ಪದತಲದಲ್ಲೇ ಕುಳಿತುಕೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ಹಿಂದುಳಿದ ವರ್ಗಗಳಿಗೆ ತಮ್ಮದೇ ಆದ ತತ್ವ ಸಿದ್ಧಾಂತಗಳ ಅವಶ್ಯಕತೆ ಇದೆ. ಅದು ಜಾತಿಯಾಧಾರಿತ ಹಿಂದೂ ಧರ್ಮದಿಂದ ಅಸಾಧ್ಯ. ಹಿಂದೂ ಧರ್ಮವನ್ನು ತ್ಯಜಿಸಿ ಬೇರೆ ಧರ್ಮಕ್ಕೆ ಸೇರುವ ಅವಶ್ಯಕತೆ ಇದೆ~ ಎಂದು ಅವರು ಅಭಿಪ್ರಾಯಪಟ್ಟರು.

`ದೇಶದ ಸಂಪನ್ಮೂಲ ಸೃಷ್ಟಿಯಲ್ಲಿ ಹಿಂದುಳಿದ ವರ್ಗದ ಜನರ ಶ್ರಮ ಅಪಾರವಾದುದು. ಆದರೆ ಆ ಸಂಪತ್ತು ಬ್ರಾಹ್ಮಣರು ಹಾಗೂ ಬನಿಯಾಗಳ ಕೈವಶವಾಗಿದ್ದು, ಮಾರುಕಟ್ಟೆ, ಉದ್ಯಮ, ದೇವಸ್ಥಾನ ಮತ್ತು ಮಠಗಳಲ್ಲಿ ಗುಪ್ತಧನವಾಗಿ ಸಂಗ್ರವಾಗಿದೆ. ಈ ದೇಶದ ಪಟ್ಟಭದ್ರರು ಸುಮಾರು 3 ಸಾವಿರ ವರ್ಷಗಳಿಂದ ಹಿಂದುಳಿದ ವರ್ಗಗಳು ಉತ್ಪಾದಿಸಿದ ಎಲ್ಲಾ ಸಂಪತ್ತನ್ನು ಕೈವಶ ಮಾಡಿಕೊಂಡಿದ್ದಾರೆ. ಈಗ ಆ ವರ್ಗಗಳನ್ನೇ ನಾಶ ಮಾಡಲು ಹೊರಟಿದ್ದಾರೆ~ ಎಂದು ಅವರು ಬೇಸರ ವ್ಯಕ್ತಪಡಿಸಿದರು.

`ಕರಕುಶಲಕರ್ಮಿಗಳಾದ ಕ್ಷೌರಿಕರು, ಧೋಬಿ ಗಳು, ಕುಂಬಾರರು, ಚಮ್ಮಾರರು , ಕಬ್ಬಿಣ, ಚಿನ್ನ ಮುಂತಾದ ಕೆಲಸ ಮಾಡುತ್ತಿರುವವರು ಹಿಂದುಳಿದ ವರ್ಗದ ಜನರೇ ಆಗಿದ್ದು, ಇವರೇ ನಿಜವಾದ  ಎಂಜಿನಿಯರ್‌ಗಳು. ಆದರೆ ಇಂದು ಇವರನ್ನೆಲ್ಲ ತಮ್ಮ ಕುಲಕುಸುಬುಗಳಿಂದ ವಂಚಿಸುತ್ತಿರುವ ಬ್ರಾಹ್ಮಣಶಾಹಿ ವ್ಯವಸ್ಥೆ ಈ ವರ್ಗಗಳಿಗೆ ಐಐಟಿ, ಐಐಎಂನಂತಹ ಸಂಸ್ಥೆಗಳಲ್ಲಿ ಮೀಸಲಾತಿ ನೀಡಲು ವಿರೋಧ ವ್ಯಕ್ತಪಡಿಸುತ್ತಿದೆ. ಜತೆಗೆ ಹಿಂದುಳಿದ ವರ್ಗಗಳನ್ನು ವಂಚಿಸಲು ಅಲ್ಲಿನ ಉಪನ್ಯಾಸಕರ ನಿವೃತ್ತಿ ವಯಸ್ಸನ್ನು 60ರಿಂದ 70 ವರ್ಷಕ್ಕೆ ಏರಿಸುವ ಸಂಚು ನಡೆಯುತ್ತಿದೆ~ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಗೋಮಾಂಸ ನಮ್ಮ ಹಕ್ಕು: `ಶಂಕರಾಚಾ ರ್ಯರಿಂದ ಹಿಡಿದು ಇಲ್ಲಿಯವರೆಗೂ ಈ ದೇಶದ ಬಹು ಸಂಸ್ಕತಿ ಹಾಗೂ ಬಹು ಆಹಾರ ಪದ್ಧತಿಯ ಮೇಲೆ ದಬ್ಬಾಳಿಕೆಗಳು ನಡೆಯುತ್ತಲೇ ಬಂದಿವೆ. ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಗೋಮಾಂಸ ಮೇಳಕ್ಕೆ ಹಿಂದೂ ಮೂಲಭೂತವಾದಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಆದರೆ ಗೋಮಾಂಸ ತಿನ್ನುವುದು ಈ ದೇಶದ ದಲಿತ, ಹಿಂದುಳಿದ, ಅಲ್ಪ ಸಂಖ್ಯಾತರ ಹಕ್ಕು. ಬೇರೆಯವರು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ತಮ್ಮ ಹಬ್ಬಗಳನ್ನು ಆಚರಿಸುವಂತೆ ನಾವು ಗೋಮಾಂಸ ಮೇಳವನ್ನು ಆಚರಿಸುತ್ತೇವೆ. ಇದಕ್ಕೆ ಯಾರ ಅಪ್ಪಣೆಯೂ ಬೇಕಾಗಿಲ್ಲ~ ಎಂದು ಅವರು ಕಟುವಾಗಿ ನುಡಿದರು.

ಆ ಬಳಿಕ ನಡೆದ ಸಂವಾದದಲ್ಲಿ ಬೆಂಗಳೂರು ವಿವಿಯ ಇಂಗ್ಲಿಷ್ ಪ್ರಾಧ್ಯಾಪಕ ಡಾ.ನಟರಾಜ್ ಹುಳಿಯಾರ್, ಇತಿಹಾಸ ಪ್ರಾಧ್ಯಾಪಕಿ ಡಾ.ಎಂ. ವಿ.ವಸು ಭಾಗವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ವಿ.ಆರ್.ಸುದರ್ಶನ್ ಅಧ್ಯಕ್ಷತೆ ವಹಿಸಿದ್ದರು. ವಡ್ಡರ್ಸೆ ರಘುರಾಮ ಶೆಟ್ಟಿ ಪ್ರತಿಷ್ಠಾನದ ಅಧ್ಯಕ್ಷ ಡಾ.ಕೆ.ಪುಟ್ಟಸ್ವಾಮಿ ಉಪಸ್ಥಿತರಿದ್ದರು.
 

`ಹಿಂದುಳಿದವರು ಒಂದಾಗಬೇಕು~
`ದೇಶದಲ್ಲಿ ಹಿಂದುಳಿದ ವರ್ಗಗಳು, ದಲಿತರು ಹಾಗೂ ಅಲ್ಪಸಂಖ್ಯಾತರು ಒಂದಾಗದೆ ಕೇವಲ ಹಿಂದುಳಿದ ವರ್ಗಗಳಿಂದ ಸಾಮಾಜಿಕ ಬದಲಾವಣೆ ಅಸಾಧ್ಯ~ ಎಂದು `ಪ್ರಜಾವಾಣಿ~ ಸಹಾಯಕ ಸಂಪಾದಕ ದಿನೇಶ್ ಅಮಿನ್‌ಮಟ್ಟು ಪ್ರತಿಪಾದಿಸಿದರು.
ಪ್ರತಿಷ್ಠಾನದ ಉದ್ಘಾಟನೆಯ ಬಳಿಕ ನಡೆದ ಸಂವಾದದಲ್ಲಿ ಅವರು ಮಾತನಾಡಿ, `ಉತ್ತರ ಪ್ರದೇಶದಂತಹ ರಾಜ್ಯದಲ್ಲಿ ದಲಿತರು ಮತ್ತು ಬ್ರಾಹ್ಮಣರು ಒಂದಾಗುವುದಾದರೆ, ದಲಿತರು ಹಾಗೂ ಹಿಂದುಳಿದ ವರ್ಗಗಳ ಹೊಂದಾಣಿಕೆ ಏಕೆ ಸಾಧ್ಯವಿಲ್ಲ? ಬೌದ್ಧಿಕವಾಗಿ ದಾಸ್ಯದಿಂದ ಬಿಡುಗಡೆಯಾಗದ ಹೊರತು ಹಿಂದುಳಿದವರ ಬಿಡುಗಡೆ ಅಸಾಧ್ಯ~ ಎಂದರು.

`ಹಿಂದುಳಿದ ವರ್ಗಗಳಿಗೆ ಮಾಜಿ ಮುಖ್ಯಮಂತ್ರಿ ದೇವರಾಜ ಅರಸ್ ಇಂದಿಗೂ ಮಾದರಿ ವ್ಯಕ್ತಿಯಾಗಿದ್ದಾರೆ. ಅವರ ಆಶಯ ಉತ್ತಮವಾದುದು. ಅದನ್ನು ಸಾಧಿಸಲು ಹಿಡಿದ ದಾರಿ ಬಗ್ಗೆ ಭಿನ್ನಾಭಿಪ್ರಾಯ ಇದೆ. ಅರಸು ಅವರದ್ದು ಅವಸರದ ಕ್ರಾಂತಿಯಾಗಿದ್ದು, ಅದು ಚಳವಳಿಯ ಉತ್ಪನ್ನವಾಗಿ ಬರುವಲ್ಲಿ ವಿಫಲವಾಯಿತು. ಆ ಬಳಿಕ ಬಂದ ಈ ವರ್ಗದ ನಾಯಕರ ವಿವಿಧ ರಾಜಕೀಯ ಕಾರಣಗಳಿಂದಾಗಿ ಇಂದು ಹಿಂದುಳಿದ ವರ್ಗಗಳ ಜನರು ಸಂಘಪರಿವಾರದ ಕಡೆಗೆ ವಾಲುವಂತಾಗಿದೆ. ಹಿಂದುಳಿದ ವರ್ಗಗಳ ಜನರಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರಜ್ಞೆಯನ್ನು ಮೂಡಿಸುವ ಅಗತ್ಯವಿದೆ~ ಎಂದರು.  ಹಿರಿಯ ಪತ್ರಕರ್ತ ಇಂದೂಧರ ಹೊನ್ನಾಪುರ ಮಾತನಾಡಿ, `ಹಿಂದುಳಿದ ವರ್ಗಗಳು ಎಲ್ಲಿಯವರೆಗೆ ವೈದಿಕರ ಹಿಡಿತದಲ್ಲಿರುತ್ತವೆಯೋ, ಎಲ್ಲಿಯವರೆಗೆ ತಮ್ಮದೇ ಆದ ಧಾರ್ಮಿಕ ಮತ್ತು ಸಾಮಾಜಿಕ ಪರ್ಯಾಯವನ್ನು ಕಟ್ಟಿಕೊಳ್ಳುವುದಿಲ್ಲವೋ, ಅಲ್ಲಿಯವರೆಗೆ ಈ ಜನಾಂಗದ ಮುಕ್ತಿ ಹಾಗೂ ಏಕತೆ ಸಾಧ್ಯವಿಲ್ಲ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT