ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದುಳಿದವರು, ದಲಿತರು ಎಲ್ಲಿಗೆ ಹೋಗಬೇಕು

Last Updated 23 ಆಗಸ್ಟ್ 2012, 5:15 IST
ಅಕ್ಷರ ಗಾತ್ರ

ಹುಬ್ಬಳ್ಳಿ: `ಕಾಂಗ್ರೆಸ್ ಪಕ್ಷದಲ್ಲಿ ಒಂದು ಜಾತಿಯ ಮುಖಂಡರು ತಮಗೆ ಅನ್ಯಾಯವಾಗಿದೆ ಎಂದು ಕೂಗು ಹಾಕುತ್ತಿದ್ದಾರೆ. ವಾಸ್ತವವಾಗಿ ಅವರೇ ಹೆಚ್ಚು ಅಧಿಕಾರ ಮಾಡಿದ್ದಾರೆ~ ಎಂದು ಶಾಸಕ ದಿನೇಶ್ ಗುಂಡೂರಾವ್ ಟೀಕಿಸಿದರು.

ನಗರದಲ್ಲಿ ಬುಧವಾರ ಆಯೋಜಿಸಲಾಗಿದ್ದ ಮಾಜಿ ಮುಖ್ಯಮಂತ್ರಿ ಆರ್.ಗುಂಡೂರಾವ್ ಅವರ 19ನೇ ಪುಣ್ಯತಿಥಿ ಸಮಾರಂಭದಲ್ಲಿ ಅವರು ಮಾತನಾಡಿದರು.

`ಜಾತಿ ಹೆಸರಿನಲ್ಲಿ ಇವರೇ ಅಧಿಕಾರಕ್ಕೆ ಅಂಟಿಕೊಂಡು ಕುಳಿತರೆ ಹಿಂದುಳಿದವರು, ದಲಿತರು ಇತರೆ ದುರ್ಬಲ ವರ್ಗದವರು ಎಲ್ಲಿಗೆ ಹೋಗಬೇಕು~ ಎಂದು ದಿನೇಶ್ ಪ್ರಶ್ನಿಸಿದರು.

ರಾಜ್ಯ ರಾಜಕಾರಣದಲ್ಲಿ ಇಂದು ಜಾತಿ ಹೆಚ್ಚು ಪ್ರತಿಧ್ವನಿಸುತ್ತಿದೆ. ಜಾತಿ ನಾಯಕರಾಗುವುದು ಬೇಡ ಜನನಾಯಕರು ಬೇಕಾಗಿದ್ದಾರೆ. ಜಾತಿ ಹೆಸರಲ್ಲಿ ಪ್ರಚಾರ ಮಾಡುತ್ತಿರುವುದು ವಿಷಾದನೀಯ. ಜಾತಿ ನಾಯಕರ ಬೆಂಬಲಕ್ಕೆ ಸ್ವಾಮೀಜಿಗಳು ಬೀದಿಯಲ್ಲಿ ನಿಂತು ಸಮಾಜದ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುವುದು ನಾಚಿಕೆಗೇಡು ಎಂದರು.

ಸಾಮಾಜಿಕ ಮೌಲ್ಯಗಳನ್ನು ತುಂಡು ಮಾಡುತ್ತಿರುವ ಜಾತಿ ರಾಜಕಾರಣದ ಬಗ್ಗೆ ರಾಜ್ಯದ ಜನತೆ ಆಲೋಚಿಸಬೇಕಾದ ಕಾಲ ಬಂದಿದೆ. ಜಾತಿ ಮುಖ್ಯ ಆದರೆ ನಾಯಕರಾಗಲು ಸಾಧ್ಯವಿಲ್ಲ ಎಂಬ ಸಂದೇಶ ನೀಡಿ. ಪ್ರಚೋದನೆಗಳಿಗೆ ಒಳಗಾಗಬೇಡಿ ಎಂದು ದಿನೇಶ್ ಗುಂಡುರಾವ್ ಮನವಿ ಮಾಡಿದರು.

`ತಮ್ಮ ತಂದೆ ಗುಂಡುರಾವ್ ಬದುಕಿದ್ದರೆ ತಾವು ರಾಜಕೀಯಕ್ಕೆ ಬರುತ್ತಿರಲಿಲ್ಲ. ದೇವರಾಜ ಅರಸು ಅವರ ಗರಡಿಯಲ್ಲಿ ಬೆಳೆದಿದ್ದ ಅವರು, ಸದಾ ದಲಿತರ ಪರ ನಿಲ್ಲುತ್ತಿದ್ದರು. ಅದಕ್ಕೆ ದ್ಯೋತಕವಾಗಿ ವಿಧಾನಸೌಧದ ಎದುರು ಅಂಬೇಡ್ಕರ್ ಪ್ರತಿಮೆ ನಿರ್ಮಿಸಿ, ಎದುರಿನ ರಸ್ತೆಗೆ ಅಂಬೇಡ್ಕರ್ ಬೀದಿ ಎಂದು ನಾಮಕರಣ ಮಾಡಿದರು. ಅಂಬೇಡ್ಕರ್ ಜಯಂತಿಯನ್ನು ಉತ್ಸವದ ರೀತಿಯಾಗಿ ಆಚರಿಸಲು ಆ ದಿನ ಸಾರ್ವತ್ರಿಕ ರಜೆ ಘೋಷಣೆ ಮಾಡಿದರು ಎಂದರು.


ಗುಂಡೂರಾವ್ ಅವರ ಒಡನಾಡಿ ಆರ್.ವೈ.ಮಿರಜ್‌ಕರ್ ಮಾತನಾಡಿ, ಗುಂಡೂರಾವ್ ಅಕಾಲದಲ್ಲಿ ಸಾಯುತ್ತಿರಲಿಲ್ಲ. ಅಧಿಕಾರದಿಂದ ಕೆಳಗಿಳಿದ ಮೇಲೆ ಅವರು ಬೆಳೆಸಿದವರೇ ಅವರಿಗೆ ಕಿರುಕುಳ ಕೊಟ್ಟರು ಅದರಿಂದ ತೀವ್ರ ಮನನೊಂದಿದ್ದರು ಎಂದರು.  ಗುಂಡೂರಾವ್ ಅವರಂತಹ ನಾಯಕರು ವಿರಳವಾಗಿ ಕಾಂಗ್ರೆಸ್ ಪಕ್ಷ ಇಂದು ರೋಗಪೀಡಿತವಾವಾಗಿದೆ. ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶಗಳು ದೊರೆಯಲಿ. ತಪ್ಪಿದಲ್ಲಿ ಪಕ್ಷ ಶೀಘ್ರ ಸಾಯಲಿದೆ ಎಂದರು.

ಪುಣ್ಯಸ್ಮರಣೆ ಅಂಗವಾಗಿ ಲೇಖಕಿ ಸುಕನ್ಯಾ ಮಾರುತಿ, ಕಲಾವಿದೆ ಸುನಂದಾ ಹೊಸಪೇಟಿ ಅವರನ್ನು ಸನ್ಮಾನಿಸಲಾಯಿತು. ವಿಧಾನಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಮಾಜಿ ಸಚಿವ ಎಸ್.ಆರ್.ಮೋರೆ, ಮಾಜಿ ಸಂಸದ ಮಂಜುನಾಥ ಕುನ್ನೂರ, ಮಾಜಿ ಶಾಸಕ ಸಿ.ಎಸ್.ಶಿವಳ್ಳಿ, ಡಾ.ಗೋವಿಂದ ಮಣ್ಣೂರ, ಡಾ.ಎಂ.ಎಂ.ಜೋಶಿ, ಸದಾನಂದ ಡಂಗನವರ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT