ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂ ಶಕ್ತಿ ಸಂಗಮ ಶಿಬಿರ ಆರಂಭ

Last Updated 27 ಜನವರಿ 2012, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಆ ನಲವತ್ತು ಎಕರೆ ಪ್ರದೇಶದ ವಿಶಾಲವಾದ ಮೈದಾನದಲ್ಲಿ ಎಲ್ಲಿ ನೋಡಿದಲ್ಲಿ ಗಣವೇಷಧಾರಿಗಳೇ ತುಂಬಿದ್ದರು. ತಲೆ ಮೇಲೊಂದು ಕರಿ ಟೊಪ್ಪಿಗೆ, ಕೈಯಲ್ಲಿ ದಂಡ ಹಿಡಿದ ಈ ಸ್ವಯಂಸೇವಕರು, ಶಾರೀರಿಕ ಪ್ರಮುಖರ ಸೂಚನೆಗೆ ತಕ್ಕಂತೆ ಅತ್ತಿತ್ತ ಸರಿದಾಗ ಸಮುದ್ರದ ಅಲೆಯೇ ತೇಲಿದಂತೆ ಭಾಸವಾಗುತ್ತಿತ್ತು. ದೂಳಿನ ಮೋಡವನ್ನು ಸೃಷ್ಟಿಸುತ್ತಿದ್ದ ಗಾಳಿ, `ಭಾರತ್ ಮಾತಾ ಕಿ ಜೈ~ ಎಂಬ ಘೋಷಣೆಯನ್ನೂ ಜತೆ-ಜತೆಗೆ ಹೊತ್ತು ತರುತ್ತಿತ್ತು.

ನಗರದ ಹೊರವಲಯದ ತಾರಿಹಾಳ ಪ್ರದೇಶದಲ್ಲಿ ನಿರ್ಮಿಸಿರುವ `ವಿಜಯನಗರ~ದಲ್ಲಿ ಶುಕ್ರವಾರ ನಡೆದ `ಹಿಂದೂ ಶಕ್ತಿ ಸಂಗಮ~ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಕಂಡುಬಂದ ನೋಟ ಇದು. ಉದ್ಘಾಟನಾ ಸಮಾರಂಭ ಆರಂಭವಾಗುವ ಸಮಯಕ್ಕಿಂತ ಸಾಕಷ್ಟು ಮುಂಚಿತವಾಗಿ 25,000ಕ್ಕೂ ಹೆಚ್ಚಿನ ಗಣವೇಷಧಾರಿಗಳು ತಮ್ಮ ಡೇರೆಗಳಿಂದ ಹೊರಬಂದು ಮೈದಾನದಲ್ಲಿ ಸೇರಿದ್ದರು.

ಸರಿಯಾಗಿ 10.45ಕ್ಕೆ ಸರಕಾರ್ಯವಾಹ ಸುರೇಶ (ಭಯ್ಯಾಜಿ) ಜೋಶಿ, ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಅವರೊಂದಿಗೆ ವೇದಿಕೆ ಏರಿದರು. ಸ್ವಯಂಸೇವಕರು ವೇದಿಕೆ ಮುಂಭಾಗದಲ್ಲಿ ನೆಡಲಾದ 80 ಅಡಿ ಉದ್ದದ ಭಗವಾ ಧ್ವಜವನ್ನು ಆರೋಹಣ ಮಾಡಿದರು. ಬಳಿಕ ಧ್ವಜ ವಂದನೆ ಸಲ್ಲಿಸಲಾಯಿತು. ಹಿಂದೆಯೇ ಸಂಘದ ಗೀತೆ `ನಮಸ್ತೆ ಸದಾ ವತ್ಸಲೇ ಮಾತೃಭೂಮಿ~ ಕೋರಸ್‌ನಲ್ಲಿ ಕೇಳಿಬಂತು.

ನೆಲದ ಮೇಲೆ ಕೂಡಲಾಗದ ಸಂಘದ ಜೇಷ್ಠ ಪ್ರಚಾರಕರು ಕುರ್ಚಿಗಳಲ್ಲಿ ಆಸೀನರಾಗಿದ್ದರು. ವೇದಿಕೆ ಎಡಭಾಗದಲ್ಲಿ 1,750ಕ್ಕೂ ಅಧಿಕ ಸ್ವಯಂಸೇವಕರು ಘೋಷವಾದ್ಯವನ್ನು ಮೊಳಗಿಸಿದರು. ಭಯ್ಯಾಜಿ ಅವರ ಉದ್ಘಾಟನಾ ಭಾಷಣ ಮುಗಿಯುತ್ತಿದ್ದಂತೆಯೇ ಸಮಾರಂಭಕ್ಕೆ ತೆರೆಬಿತ್ತು. ಘೋಷವಾದ್ಯ ತಂಡಗಳ ನೇತೃತ್ವದಲ್ಲಿ ಸ್ವಯಂಸೇವಕರು ತಮ್ಮ ಡೇರೆಗಳಿಗೆ ತೆರಳಿದರು.

ತುಸು ವಿರಾಮದ ಬಳಿಕ ಆಯಾ ಜಿಲ್ಲೆಗಳಿಗೆ ಮೀಸಲಾಗಿದ್ದ ಡೇರೆಗಳ ಬೌದ್ಧಿಕ ಮಂಟಪದಲ್ಲಿ ಬೈಠಕ್ ನಡೆಯಿತು. ಸಂಘದ ಸಂಘಟನೆ ಮತ್ತು ಹಿಂದೂ ಸಂಸ್ಕೃತಿ ರಕ್ಷಣೆ `ಪಾಠ~ವನ್ನು ಈ ಬೈಠಕ್ ಹೊಂದಿತ್ತು ಎಂದು ಮೂಲಗಳು ತಿಳಿಸಿವೆ. ಮಧ್ಯಾಹ್ನದ ಊಟದ `ಮೆನು~ವಿನಲ್ಲಿ ಶೇಂಗಾ ಹೋಳಿಗೆ, ರೊಟ್ಟಿ-ಚಪಾತಿ ಮತ್ತು ಅನ್ನ-ಸಾರು ಸೇರಿತ್ತು. ಸಂಜೆ ಸ್ವಯಂಸೇವಕರೆಲ್ಲ ಶಾರೀರಿಕ ವ್ಯಾಯಾಮ ನಡೆಸಿದರು.

ಶಿಬಿರದ ಅಂಗವಾಗಿ ಆಯೋಜಿಸಲಾದ `ಯುಗದೃಷ್ಟಿ~ ಪ್ರದರ್ಶಿನಿಗೆ ಶುಕ್ರವಾರವೂ ದೊಡ್ಡ ಸಂಖ್ಯೆಯಲ್ಲಿ ಜನ ಭೇಟಿ ನೀಡಿದರು. ನಗರದ ಹಲವು ಶಾಲೆಗಳ ವಿದ್ಯಾರ್ಥಿಗಳನ್ನು ತಂಡ-ತಂಡವಾಗಿ ಕರೆತಂದು ಪ್ರದರ್ಶನವನ್ನು ತೋರಿಸಲಾಯಿತು. `ವಿಜಯನಗರ ವೈಭವ~ ಕಥಾವಸ್ತುವನ್ನು ಒಳಗೊಂಡ ಗೊಂಬೆಯಾಟವನ್ನು ಬೆಂಗಳೂರಿನ `ಧಾತು~ ಸಂಸ್ಥೆ ಪ್ರದರ್ಶಿಸಿತು. ಸಂಘದ ಸಾಹಿತ್ಯ ಮಾರಾಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು.

ಶನಿವಾರ ಪಥ ಸಂಚಲನ ನಡೆಯಲಿದ್ದು, ಹುಬ್ಬಳ್ಳಿಯ ಮೂರು ಮತ್ತು ಧಾರವಾಡದ ಒಂದು ಸೇರಿದಂತೆ ನಾಲ್ಕು ಮಾರ್ಗಗಳಲ್ಲಿ ನಡೆಯುವ ಈ ಮೆರವಣಿಗೆಯಲ್ಲಿ 25,000 ಸ್ವಯಂಸೇವಕರು ಪಾಲ್ಗೊಳ್ಳಲಿದ್ದಾರೆ.

ಮೂರೂ ಪಥ ಸಂಚಲನಗಳು ಸಂಗಮಿಸುವ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಈಗಾಗಲೇ ಬೃಹತ್ ಭಗವಾ ಧ್ವಜಗಳು ಎದ್ದು ನಿಂತಿದ್ದು, ನಗರದಲ್ಲಿ ಕೇಸರಿ ಅಲೆಯನ್ನು ಎಬ್ಬಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT