ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂ ಸಂಸ್ಕೃತಿಯ ಆಳವಾದ ದ್ವೇಷಿ ನಾನು: ಅನಂತಮೂರ್ತಿ

Last Updated 22 ಡಿಸೆಂಬರ್ 2010, 9:05 IST
ಅಕ್ಷರ ಗಾತ್ರ

ಉಡುಪಿ:  ‘ಕೆಲವರನ್ನು ಮುಟ್ಟಬಾರದು ಎನ್ನುವ ಅಸ್ಪೃಶ್ಯತೆಯನ್ನು ಪೋಷಿಸಿಕೊಂಡು ಬಂದ ನಮ್ಮ ಹಿಂದೂ ಸಂಸ್ಕೃತಿಯ ಆಳವಾದ ದ್ವೇಷಿ ನಾನು’...
ಹೀಗೆ ನೇರ ಹಾಗೂ ಸ್ಪಷ್ಟವಾಗಿ ನುಡಿದವರು ಹಿರಿಯ ಸಾಹಿತಿ ಡಾ.ಯು.ಆರ್.ಅನಂತಮೂರ್ತಿ.

ಉಡುಪಿ ರಥಬೀದಿ ಗೆಳೆಯರು ಮತ್ತು ಶಿವಮೊಗ್ಗದ ಅಹರ್ನಿಶಿ ಸಂಸ್ಥೆ ಸಹಯೋಗದಲ್ಲಿ ಮಂಗಳವಾರ ಇಲ್ಲಿನ ಎಂಜಿಎಂ ಕಾಲೇಜು ರವೀಂದ್ರ ಮಂಟಪದಲ್ಲಿ ಆಯೋಜಿಸಿದ್ದ ಅನಂತಮೂರ್ತಿ 79ನೇ ಹುಟ್ಟುಹಬ್ಬದ ಅಭಿನಂದನೆ ಮತ್ತು ‘ಅನಂತಮೂರ್ತಿ ಮಾತುಕತೆ: 10 ಸಮಸ್ತರ ಜೊತೆ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಅಸ್ಪೃಶ್ಯತೆಯನ್ನು ನಾನು ಅಷ್ಟೊಂದು ದ್ವೇಷಿಸದೇ ಇದ್ದರೆ ನನ್ನ ಬದುಕಿನ ಉತ್ತಮವಾದವುಗಳನ್ನು ನಾನು ನೀಡಲು ಸಾಧ್ಯವಾಗುತ್ತಲೇ ಇರಲಿಲ್ಲ. ಅದು ನನ್ನನ್ನು ಬಹುವಾಗಿ ಕಾಡಿದೆ. ಪಶ್ಚಿಮದವರು ವರ್ಣಭೇದ ನೀತಿಯನ್ನು ಬಿಡದೇ ಇದ್ದರೆ ಇಂದು ಇಷ್ಟೊಂದು ಮುಂದುವರಿದವರಾಗುತ್ತಿರಲಿಲ್ಲ, ಅಮೆರಿಕ, ಯುರೋಪ್ ದೇಶಗಳೆಲ್ಲ ಅಸ್ಪೃಶ್ಯತೆಯನ್ನು ಬಿಟ್ಟಿವೆ. ನಾವಿನ್ನೂ ಬಿಟ್ಟಿಲ್ಲ. ಅದು ಹೋದರೆ ಮಾತ್ರ ನಾವು ಮನುಷ್ಯರಾಗುತ್ತೇವೆ’ ಎಂದರು.

ಜಾತಿ ಪದ್ಧತಿ ಕೂಡ ಅಷ್ಟೇ ಕೆಟ್ಟದ್ದು. ಆಯಾ ಜಾತಿಯವರು ತಮಗೆ ಬೇಕಾದ್ದನ್ನು ಮಾತ್ರ ಮಾಡುತ್ತಾ ಹೋಗುತ್ತಾರೆ. ಆದರೆ ಕ್ರಮೇಣ ಇದು ಹೋಗುತ್ತದೆ. ಎಲ್ಲೆಡೆ, ಎಲ್ಲ ಜಾತಿಗಳಲ್ಲಿಯೂ ಬುದ್ಧಿಶಾಲಿಗಳು ಹೆಚ್ಚಿದ್ದಾರೆ. ತಮಗೆ ಅಗತ್ಯವಾದುದನ್ನು ಅವರೇ ಕಂಡುಕೊಳ್ಳುತ್ತಾರೆ. ಹೀಗಾಗಿ ಜಾತೀಯತೆ ಬಗ್ಗೆ ಅಷ್ಟಾಗಿ ನಾನು ಮಾತನಾಡುವುದಿಲ್ಲ’ ಎಂದರು.

ಕಾಡಿದ ‘ಚೋಮನದುಡಿ’: ನನಗೀಗ 79 ವರ್ಷ. ನನ್ನನ್ನು ಬಹುವಾಗಿ ಅಲುಗಾಡಿಸಿದ್ದು ಡಾ. ಶಿವರಾಮ ಕಾರಂತ ‘ಚೋಮನ ದುಡಿ’ ಕಾದಂಬರಿ. ನಾನು ಬಾಲಕನಾಗಿದ್ದಾಗ ನಮ್ಮ ಮನೆಗೆ ಸೆಗಣಿ ಬಳಿಯಲು ಬರುತ್ತಿದ್ದ ಕೊರಗನೊಬ್ಬ ವ್ಯಕ್ತಿಯಾಗಿ ಕಾಣದೇ ವಸ್ತುವಾಗಿ ಕಾಣುತ್ತಿದ್ದ. ಆದರೆ ಆ ವಯಸ್ಸಿನಲ್ಲಿ ಆ ಕಾದಂಬರಿ ಓದಿದ ನಂತರ ಈ ಕೊರಗನಿಗೂ ಒಂದು ಒಳಮನಸ್ಸಿದೆ. ಆತನಿಗೂ ಮನುಷ್ಯನಾಗುವ ಆಸೆಯಿದೆ ಅಂತ ಅನ್ನಿಸಲು ಶುರುವಾಯಿತು. ಹೀಗಾಗಿ ಅಸ್ಪೃಶ್ಯತೆನನ್ನನ್ನು ನಿರಂತರವಾಗಿ ಕಾಡುತ್ತಲೇ ಬಂದಿದೆ. ಹೀಗಾಗಿ ನಾನು ಸಮಾಜವಾದಕ್ಕೆ ತೊಡಗಿದ್ದು ಚೋಮನದುಡಿಯಿಂದ. ನನ್ನ ಒಳಮನಸ್ಸಿನ ಮೇಲೆ ಬಹಳ ದೊಡ್ಡ ಕೆಲಸ ಮಾಡಿದವೆಲ್ಲ ಸಾಹಿತ್ಯ ಕೃತಿಗಳೇ ಎಂದರು.

ಧರ್ಮಗುರು ಇಲ್ಲ; ಇದ್ದವರು ಭೂಗಳ್ಳರು: ‘ನಮ್ಮ ದೇಶದ ಧಾರ್ಮಿಕತೆ ದಿವ್ಯವಾದದ್ದು. ಆದರೆ ಬುದ್ಧ, ರಾಮಕೃಷ್ಣ, ರಮಣರ ನಂತರ ಒಬ್ಬನೇ ಒಬ್ಬ ಧರ್ಮಗುರುವೂ ನಮ್ಮ ರಾಷ್ಟ್ರದಲ್ಲಿ ಮೂಡಿ ಬರಲಿಲ್ಲ. ಈಗಿನವರೆಲ್ಲ ಭೂಗಳ್ಳರು. ಬೆಂಗಳೂರಿನಲ್ಲಿಯಂತೂ ಒಬ್ಬ ಬಹುದೊಡ್ಡ ಭೂಗಳ್ಳ ಗುರುವಿದ್ದಾರೆ. ನಾನು ಅವರ ಹೆಸರನ್ನು ಬಹಿರಂಗ ಪಡಿಸುವುದಿಲ್ಲ. ಈಗಿನ ಧರ್ಮಗುರುಗಳಿಂದ ಏನನ್ನೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ’ ಎಂದು ಕಿಡಿಕಾರಿದರು.

ಇದಕ್ಕೂ ಮುನ್ನ ಅನಂತಮೂರ್ತಿ ಮತ್ತು ಎಸ್ತರ್ ದಂಪತಿಯನ್ನು ಲೇಖಕ ಜಿ.ರಾಜಶೇಖರ್, ರಥಬೀದಿ ಗೆಳೆಯರು ಬಳಗದ ಅಧ್ಯಕ್ಷ ಪ್ರೊ. ಮುರಳೀಧರ ಉಪಾಧ್ಯ ಹಾಗೂ ಲೇಖಕಿ ವೈದೇಹಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಬಿಡುಗಡೆಯಾದ ಎಚ್.ಪಟ್ಟಾಭಿರಾಮ ಸೋಮಯಾಜಿ ಸಂಪಾದಕತ್ವದ ಅನಂತಮೂರ್ತಿ ಅವರ ಪುಸ್ತಕದ ಬಗ್ಗೆ ಹಿರಿಯ ಕವಿ ಡಾ.ಎಚ್.ಎಸ್.ಶಿವಪ್ರಕಾಶ್ ಮಾತನಾಡಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT