ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂಗಳು ಸಂಘಟಿತರಾಗಲಿ

Last Updated 3 ಅಕ್ಟೋಬರ್ 2011, 5:00 IST
ಅಕ್ಷರ ಗಾತ್ರ

ಧಾರವಾಡ: ವಿಜಯದಶಮಿ ಅಂಗವಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಭಾನುವಾರ ನಗರದಲ್ಲಿ ಆಕರ್ಷಕ ಪಥಸಂಚಲನ ನಡೆಯಿತು. ಗಣವೇಷಧಾರಿಗಳ ಆಗಮನಕ್ಕಾಗಿ ರಸ್ತೆಗಳು ವಿವಿಧ ಬಣ್ಣಗಳ ರಂಗೋಲಿಯಿಂದ ಕಂಗೊಳಿಸಿದವು. ಕಾಮನಕಟ್ಟಿ ಪ್ರದೇಶವಂತೂ ತಳಿರು- ತೋರಣಗಳಿಂದ ಶೃಂಗಾರಗೊಂಡಿತ್ತು.

ಹುರಕಡ್ಲಿ ಅಜ್ಜ ಕಾನೂನು ಕಾಲೇಜಿನ ಮೈದಾನದಿಂದ ಮಧ್ಯಾಹ್ನ ಆರಂಭವಾದ ಪಥಸಂಚಲನ, ಅಂಜುಮನ್ ಕಾಲೇಜು ಎದುರು, ರೀಗಲ್ ಸರ್ಕಲ್, ಗಾಂಧೀಚೌಕ್, ಹೆಬ್ಬಳ್ಳಿ ಅಗಸಿ, ರವಿವಾರಪೇಟ, ಕಾಮನಕಟ್ಟಿ, ಹೊಸಯಲ್ಲಾಪುರ, ಟಿಕಾರೆ ರಸ್ತೆ, ವಿವೇಕಾನಂದ ವೃತ್ತ, ಅಝಾದ್ ರಸ್ತೆ, ಆಲೂರ ವೆಂಕಟರಾವ್ ವೃತ್ತದ ಮೂಲಕ ಮರಳಿ ಕಾನೂನು ಕಾಲೇಜಿನ ಆವರಣಕ್ಕೆ ಆಗಮಿಸಿತು. ಪಥಸಂಚಲನ ವೀಕ್ಷಿಸಲು ರಸ್ತೆಯ ಎರಡೂ ಬದಿಗಳಲ್ಲಿ ಸಾವಿರಾರ ಜನರು ಜಮಾಯಿಸಿದ್ದರು.

ನಂತರ ನಡೆದ ಸಮಾರಂಭದಲ್ಲಿ ಪರಿವಾರ ಪ್ರಬೋಧನ ಅಖಿಲ ಭಾರತ ಸಂಘಟನಾ ಮಂತ್ರಿ ಸು.ರಾಮಣ್ಣ ಮಾತನಾಡಿ, ಭಾರತ ಶಕ್ತಿಶಾಲಿಯಾದಾಗ ಮಾತ್ರ ಜಗತ್ತಿನಲ್ಲಿ ಮಾನ್ಯತೆ ಪಡೆಯಲು ಸಾಧ್ಯ. ಈ ನಿಟ್ಟಿನಲ್ಲಿ ಹಿಂದೂಗಳು ಸಂಘಟಿತರಾಬೇಕು. ಭಾರತ ಪ್ರಾರಂಭದಿಂದಲೂ ಶಕ್ತಿಯನ್ನು ಆರಾಧಿಸಿಕೊಂಡು ಬಂದಿದೆ. ರಾಮ, ಕೃಷ್ಣ ಶಕ್ತಿಯ ಪ್ರತೀಕರಾಗಿದ್ದರು. ರಾಮರಾಜ್ಯ ಆಗಬೇಕಾದರೆ ರಾಮನ ಶಕ್ತಿಯನ್ನು ಆಹ್ವಾನ ಮಾಡಿಕೊಳ್ಳಬೇಕು ಎಂದರು.

ಯಾವುದೇ ಸಂಘಟನೆಗಳು ಹುಟ್ಟಿಕೊಂಡ ನಂತರ ಮುಪ್ಪು ಕಾಣುವುದು ಹೆಚ್ಚು. ಆದರೆ ಆರ್‌ಎಸ್‌ಎಸ್ ಕಳೆದ 86 ವರ್ಷಗಳಿಂದ ಸೇವೆಯಲ್ಲಿದ್ದು, ತನ್ನ ತಾರುಣ್ಯವನ್ನು ಕಳೆದುಕೊಂಡಿಲ್ಲ. ಮುಂದೆಯೂ ಕೂಡ ಯುವ ಪೀಳಿಗೆಯಿಂದ ಆರೋಗ್ಯಕರವಾಗಿ ಬೆಳವಣಿಗೆಯಾಗುತ್ತ ಬರಲಿ ಎಂದು ಆಶಿಸಿದರು.

ರಾಷ್ಟ್ರೀಯತೆ ಅಂತಃಕರಣದ ಭಾವ, ಅದು ಹಕ್ಕಲ್ಲ, ಕರ್ತವ್ಯವಾಗಿದೆ. ರಾಷ್ಟ್ರೀಯತೆಯಲ್ಲಿ ಒಗ್ಗಟ್ಟಿದ್ದು, ಬಿಕ್ಕಟ್ಟಿಲ್ಲ. ಇದರ ಇನ್ನೊಂದು ಹೆಸರು ಹಿಂದೂತ್ವ. ಹಿಂದೂತ್ವದಲ್ಲಿ ಯಾವುದೇ ಜಾತೀಯತೆ ಇಲ್ಲ ಎಂದರು.
ಪಿ.ಎಂ.ಮುದಿಗೌಡರ ಅಧ್ಯಕ್ಷತೆ ವಹಿಸಿದ್ದರು.ಜಿಲ್ಲಾ ಸಹ ಸಂಘಚಾಲಕ ಮಲ್ಲಿಕಾರ್ಜುನ ನಡಕಟ್ಟಿ ವೇದಿಕೆಯಲ್ಲಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT