ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂಸಾಕಾಂಡದ ಕಳಂಕ ತೊಳೆವ ಯತ್ನ,ಮೋದಿ ಸದ್ಭಾವನಾ ನಿರಶನ

Last Updated 20 ಜನವರಿ 2012, 19:35 IST
ಅಕ್ಷರ ಗಾತ್ರ

ಗೋಧ್ರಾ, ಗುಜರಾತ್ (ಪಿಟಿಐ) ಹತ್ತು ವರ್ಷಗಳ ಹಿಂದೆ ನಡೆದ ಗೋಧ್ರಾ ಹತ್ಯಾಕಾಂಡದ ಕಳಂಕ ತೊಡೆದು ಹಾಕಲು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಯತ್ನಿಸುತ್ತಿದ್ದು, ಶುಕ್ರವಾರ ಗೋಧ್ರಾದಲ್ಲಿ ಕೋಮು ಸೌಹಾರ್ದದ ಕಾರಣ ಮುಂದಿಟ್ಟುಕೊಂಡು ಸದ್ಭಾವನಾ ನಿರಶನ ನಡೆಸಿದರು.

ಗೋಧ್ರಾ ದುರಂತ ನಡೆದು ಹತ್ತು ವರ್ಷಗಳಾಗುತ್ತಿರುವ ಸಂದರ್ಭದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಭ್ರಾತೃತ್ವ ಭಾವನೆ ಉತ್ತೇಜಿಸಲು ಆ ಪಟ್ಟಣದಲ್ಲಿ ಮೋದಿ ನಡೆಸಿದ ನಿರಶನ, ವರ್ಚಸ್ಸು ಹೆಚ್ಚಿಸಿಕೊಳ್ಳಲು ಅವರು ನಡೆಸಿದ ಯತ್ನ ಎಂದು ಅರ್ಥೈಸಲಾಗುತ್ತಿದೆ.

ದಿನ ಇಡೀ ಉಪವಾಸ ಕುಳಿತ ಮೋದಿ ಜನರನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ, `ಮತಬ್ಯಾಂಕ್ ರಾಜಕಾರಣ ಬೇಕೋ ಅಥವಾ ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿಯ ರಾಜಕಾರಣ ಬೇಕೋ ಎಂದು ನಿರ್ಧರಿಸುವ ಕಾಲ ಇದಾಗಿದೆ~ ಎಂದರು.

ಇದೇ ವೇದಿಕೆಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಮೇಲೆ ವಾಗ್ದಾಳಿ ನಡೆಸಿದ ಮೋದಿ, ಅಪೌಷ್ಟಿಕತೆಯ ಸಮಸ್ಯೆಯ ಕುರಿತು ಅರಿಯಲು ಅರ್ಥಶಾಸ್ತ್ರಜ್ಞರೂ ಆದ ಪ್ರಧಾನಿಗೆ ಇಷ್ಟು ವರ್ಷ ಬೇಕಾಯಿತೇ ಎಂದು ವ್ಯಂಗ್ಯವಾಡಿದರು.
 

ಈ ನಿರಶನಕ್ಕೆ ಪ್ರತಿಯಾಗಿ  ಗೋಧ್ರಾದಲ್ಲಿ `ನ್ಯಾಯದ ಹುಡುಕಾಟ~ದಲ್ಲಿ ಎಂಬ ಸಮಾವೇಶ ನಡೆಸಲು ಯತ್ನಿಸಿದ ಸಾಮಾಜಿಕ ಕಾರ್ಯಕರ್ತೆ ಶಬನಮ್ ಹಶ್ಮಿ ಹಾಗೂ ಸರ್ಕಾರೇತರ ಸಂಸ್ಥೆಯ ಐವರು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.

ಮೋದಿ ವಿರುದ್ಧ ಗೋಧ್ರಾದಲ್ಲಿ ಮೆರವಣಿಗೆ ನಡೆಸಲು ಯೋಜಿಸಿದ್ದ ಬಿಜೆಪಿಯ ಮಾಜಿ ನಾಯಕ ನಳಿನ್ ಭಟ್ ಅವರನ್ನೂ ಶುಕ್ರವಾರ ಬೆಳಿಗ್ಗೆ ವಡೋದರಾದ ಅವರ ನಿವಾಸದಿಂದ ಪೊಲೀಸರು ವಶಕ್ಕೆ ತೆಗೆದುಕೊಂಡರು.

2002ರ ಫೆಬ್ರುವರಿಯಲ್ಲಿ ಗೋಧ್ರಾದಲ್ಲಿ ಕರಸೇವಕರಿದ್ದ  ರೈಲಿನ ಮೇಲೆ ನಡೆದ ದಾಳಿಗೆ ಪ್ರತಿಯಾಗಿ ಗುಜರಾತಿನಾದ್ಯಂತ ಮುಸ್ಲಿಮರ ಮೇಲೆ ಹಿಂಸಾಕೃತ್ಯ ನಡೆದಿತ್ತು. 

ಈ ಗಲಭೆಗಳಲ್ಲಿ 1500ಕ್ಕೂ ಹೆಚ್ಚು ಅಮಾಯಕರು ಪ್ರಾಣ ತೆತ್ತಿದ್ದರು. ಕೋಮುಗಲಭೆ ಸಂದರ್ಭದಲ್ಲಿ ಸರ್ಕಾರಿ ಯಂತ್ರ ಹಂತಕರ ಪರವಾಗಿ ನಿಂತಿತ್ತು ಎಂಬ ಆರೋಪ ಕೇಳಿಬಂದಿದ್ದು,  ನರೇಂದ್ರ ಮೋದಿ ಅವರಿಗೆ ಅಲ್ಪಸಂಖ್ಯಾತರ ವಿರೋಧಿ ಎಂಬ ಹಣೆಪಟ್ಟಿ ಅಂಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT