ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂಸಾಚಾರಕ್ಕೆ ಐವರು ಬಲಿ

ಬಾಂಗ್ಲಾ: ಶಾಂತಿ ಮಾತುಕತೆಗೆ ಖಲೀದಾಗೆ ಆಹ್ವಾನ
Last Updated 6 ಜನವರಿ 2014, 19:30 IST
ಅಕ್ಷರ ಗಾತ್ರ

ಢಾಕಾ (ಪಿಟಿಐ/ಐಎಎನ್‌ಎಸ್‌): ಬಾಂಗ್ಲಾ­ದೇಶದಲ್ಲಿ ಸಾರ್ವತ್ರಿಕ ಚುನಾ­ವಣೆ ನಂತರ ನಡೆದ ಹಿಂಸಾಚಾರದಲ್ಲಿ ಆಡಳಿತಾರೂಢ ಆವಾಮಿ ಲೀಗ್‌ಪಕ್ಷದ ಯುವ ಕಾರ್ಯಕರ್ತ ಸೇರಿ ಕನಿಷ್ಠ ಐವರು ಬಲಿಯಾಗಿದ್ದಾರೆ. ಭಾನು­ವಾರ ನಡೆದ ಘರ್ಷಣೆಯಲ್ಲಿ 21 ಜನರು ಸಾವನ್ನಪ್ಪಿದ್ದರು ಎಂದು ಮೂಲಗಳು ಹೇಳಿವೆ.

ಈ ಮಧ್ಯೆ, ಯಾವುದೇ ಕಾರಣಕ್ಕೂ ಮುಗ್ಧರು ಸಾಯಬಾರದು. ಸರ್ಕಾರ ಮತ್ತು ಜನರ ಆಸ್ತಿಗಳಿಗೆ ರಕ್ಷಣೆ ನೀಡಲು ಆದ್ಯತೆ ನೀಡಬೇಕು ಎಂದು ಪ್ರಧಾನಿ ಶೇಖ್‌ ಹಸೀನಾ ಅವರು ಭದ್ರತಾ ಪಡೆಗಳಿಗೆ ಆದೇಶಿಸಿದ್ದಾರೆ.

ಹಿಂಸಾಚಾರಕ್ಕೆ ಕಾರಣವಾಗಿರುವ ಪ್ರತಿಭಟನೆಯನ್ನು ಕೈಬಿಟ್ಟು ಶಾಂತಿಯುವಾಗಿ ಮಾತುಕತೆಗೆ ಬರುವುದಾದರೆ ಬಾಂಗ್ಲಾದೇಶ ರಾಷ್ಟ್ರೀಯ ಪಕ್ಷದ (ಬಿಎನ್‌ಪಿ) ಬೇಡಿಕೆಗಳ ಬಗ್ಗೆ ಚರ್ಚೆ ನಡೆಸುವುದಾಗಿ ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಬದ್ಧ ರಾಜಕೀಯ ವೈರಿಯಾದ ಬಿಎನ್‌ಪಿ ಮುಖ್ಯಸ್ಥೆ ಖಲೀದಾ ಜಿಯಾ ಅವರೊಂದಿಗೆ ಶಾಂತಿ ಸಂಧಾನಕ್ಕೆ ಮುಂದಾ­­ಗಿರುವ ಹಸೀನಾ ಅವರು, ಉಗ್ರರ ಸಂಘಟನೆ­ಯಾದ ಜಮಾತ್‌ ಮತ್ತು ಯುದ್ಧಾಪರಾಧಿಗಳ ಸಖ್ಯ ತೊರೆದು  ಮಾತುಕತೆಗೆ ಬರುವಂತೆ ಆಹ್ವಾನ ನೀಡಿದ್ದಾರೆ.

ಚುನಾವಣೆ ನಡೆದ ರೀತಿಯನ್ನು ಆಕ್ಷೇಪಿಸಿ ಬಿಎನ್‌ಪಿ ವ್ಯಕ್ತಪಡಿಸಿರುವ ಟೀಕೆಗೆ ಪ್ರತಿಕ್ರಿಯಿಸಿದ ಹಸೀನಾ, ಚುನಾವಣೆ ಕಾನೂನು­ ಬದ್ಧವಾಗಿ ನಡೆದಿದೆ. ಇನ್ನಿತರ ಪಕ್ಷಗಳು ಚುನಾವಣೆಯಲ್ಲಿ ಭಾಗವಹಿಸಿವೆ ಎಂದಿದ್ದಾರೆ.

ದೇಶದಲ್ಲಿ ಪ್ರಜಾತಂತ್ರ ವ್ಯವಸ್ಥೆ ಸುಸ್ಥಿರವಾಗಿ ಮುಂದು­ವರಿಯಲು ಅಂತರರಾಷ್ಟ್ರೀಯ ಸಮುದಾಯ ನೆರವು ನೀಡಬೇಕು ಎಂದೂ ಕೋರಿದ್ದಾರೆ.
ಒಂದು ವೇಳೆ ಮಾತುಕತೆಯಲ್ಲಿ ಒಮ್ಮತ ಮೂಡಿದರೆ ಹೊಸದಾಗಿ ಚುನಾವಣೆ ನಡೆಸುವ ಸಾಧ್ಯತೆಯೂ ಇದೆ ಎಂಬ ಇಂಗಿತವನ್ನು ಹಸೀನಾ ವ್ಯಕ್ತಪಡಿಸಿದ್ದಾರೆ.

ಭಯೋತ್ಪಾದನೆ ಮತ್ತು ಮೂಲಭೂತವಾದಿಗಳ ಉಪಟಳವನ್ನೂ ಸಹಿಸುವುದಿಲ್ಲ ಎಂದ ಅವರು, ಬಾಂಗ್ಲಾ ವಿಮೋ­ಚ­ನೆಯ ಸಂದರ್ಭದಲ್ಲಿ ನಡೆದ ಯುದ್ಧಾಪರಾಧ ಪ್ರಕರ­ಣಗಳ ವಿಚಾರಣೆ ಮುಂದುವರಿಯಲಿದೆ ಎಂದಿದ್ದಾರೆ.

ಬಿಕ್ಕಟ್ಟು ಪರಿಹಾರಕ್ಕೆ ಆದ್ಯತೆ: ಭಾರತ– ಬಾಂಗ್ಲಾದೇಶಗಳ ಮಧ್ಯೆ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಗಡಿ ವಿವಾದ ಸೇರಿದಂತೆ ವಿವಿಧ ಒಪ್ಪಂದಗಳ ಬಿಕ್ಕಟ್ಟುಗಳನ್ನು ಬಗೆ­ಹರಿ­ಸಿ­ಕೊಳ್ಳಲು ಆದ್ಯತೆ ನೀಡುವುದಾಗಿ ಹಸೀನಾ ಹೇಳಿದ್ದಾರೆ.

ಮುಷ್ಕರಕ್ಕೆ ಕರೆ: ಸಂಸತ್ತಿಗೆ ನಡೆದ ಚುನಾವಣೆಯು ‘ದೊಡ್ಡ ನಾಟಕ’ ಎಂದು ದೂರಿರುವ ಪ್ರತಿಪಕ್ಷಗಳು, ಚುನಾವಣೆಯ ಸಿಂಧುತ್ವವನ್ನೇ ಪ್ರಶ್ನಿಸಿವೆ. ಸೋಮವಾರದಿಂದ  ರಾಷ್ಟ್ರದಾ­ದ್ಯಂತ 48 ತಾಸುಗಳ ಮುಷ್ಕರಕ್ಕೆ ಕರೆ ನೀಡಿವೆ. 

ಭಾನುವಾರ ನಡೆದ ಚುನಾವಣೆಯನ್ನು ಪ್ರಮುಖ ವಿರೋಧ ಪಕ್ಷ ಬಿಎನ್‌ಪಿ ನೇತೃತ್ವದ 18 ಪಕ್ಷಗಳ ಮೈತ್ರಿಕೂಟ ಬಹಿಷ್ಕರಿಸಿದ್ದವು.

ಸರ್ಕಾರ ರಚನೆಗೆ ಸಿದ್ಧತೆ
ವಿವಾದಾತ್ಮವಾಗಿ ನಡೆದಿರುವ ಈ ಚುನಾವಣೆ­ಯಲ್ಲಿ ಹಸೀನಾ ನೇತೃತ್ವದ ಆವಾಮಿ ಲೀಗ್‌ ಪಕ್ಷವು ನಾಲ್ಕನೇ ಮೂರರಷ್ಟು ಬಹುಮತ ಪಡೆ­ದು­ಕೊಂಡಿದ್ದು, ಸರ್ಕಾರ ರಚನೆಗೆ ಸಿದ್ಧತೆ ನಡೆಸಿದೆ.

ಘರ್ಷಣೆ ಮಧ್ಯೆ ನಡೆದ ಈ ಚುನಾವಣೆಯಲ್ಲಿ ಕಡಿಮೆ ಪ್ರಮಾಣದಲ್ಲಿ ಮತದಾನವಾಗಿರುವುದು ವಿವಾದಕ್ಕೆ ಕಾರಣವಾಗಿದೆ. ಮತದಾರರು ಬಾರದ ಕಾರಣ 41 ಮತಗಟ್ಟೆಗಳಲ್ಲಿ ಮತದಾನವೇ ನಡೆ­ದಿಲ್ಲ. ಆವಾಮಿ ಲೀಗ್‌ ಪಕ್ಷವು 127 ಕ್ಷೇತ್ರಗಳಲ್ಲಿ ಅವಿರೋಧ­ವಾಗಿ ಮತ್ತು ಚುನಾವಣೆ ನಡೆದ 147 ಕ್ಷೇತ್ರಗಳಲ್ಲಿ 104ರಲ್ಲಿ ಜಯಗಳಿ­ಸಿದೆ.

ಒಟ್ಟಾರೆ 231 ಕ್ಷೇತ್ರಗಳಲ್ಲಿ ಆವಾಮಿ ಲೀಗ್‌ ಅಭ್ಯರ್ಥಿಗಳು ಆಯ್ಕೆ ಆಗಿ, 10ನೇ ಸಂಸತ್‌ಗೆ ನಡೆದ ಈ ಚುನಾವಣೆಯಲ್ಲಿ ನಾಲ್ಕನೇ ಮೂರರಷ್ಟು ಬಹುಮತ ಪಡೆದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT