ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂಸೆ ಪರಿಹಾರವಲ್ಲ

Last Updated 10 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಥಾಯ್ಲೆಂಡ್‌ನಲ್ಲಿ ಕೆಲವು  ವಾರಗಳಿಂದ ನಡೆದಿದ್ದ ಸರ್ಕಾರ ವಿರೋಧಿ ದಂಗೆ, ಭಾರೀ ಪ್ರತಿಭಟನೆಗೆ ಮಣಿದ ಪ್ರಧಾನಿ ಯಿಂಗ್ಲಕ್‌ ಶಿನವತ್ರಾ ಕೊನೆಗೂ ಸಂಸತ್ತನ್ನು ವಿಸರ್ಜಿಸಿರುವುದು ವಿವೇಕ­ಪೂರ್ಣ ನಡೆ. ಇಲ್ಲದೇ ಹೋಗಿದ್ದರೆ ಇನ್ನಷ್ಟು ಜೀವಹಾನಿ, ಆಸ್ತಿ ಹಾನಿ ನಡೆ­ಯುವ ಎಲ್ಲ ಲಕ್ಷಣಗಳೂ ಇದ್ದವು.

ಅದಕ್ಕೆಲ್ಲ ಈಗ ತಾತ್ಕಾಲಿಕ ತಡೆ ಬಿದ್ದಂತಾಗಿದೆ. ಆದರೆ ಪ್ರತಿಭಟನೆಯ ನೇತೃತ್ವ ವಹಿಸಿರುವ ಪ್ರತಿ­ಪಕ್ಷ ಮುಖಂಡ ಸುಥೆಪ್‌ ತೌಗ್ಸುಬಾನ್‌ ಅವರಿಗೆ ಪ್ರಧಾನಿಯ ನಿರ್ಧಾರ  ಸಮಾಧಾನ­ವನ್ನೇನೂ ತಂದಿಲ್ಲ. ‘ಪ್ರಧಾನಿ ಹುದ್ದೆಯಿಂದ ಯಿಂಗ್ಲಕ್‌ ಇಳಿಯಬೇಕು, ಪ್ರಜಾಸತ್ತಾತ್ಮಕ ಸುಧಾರಣಾ ಸಮಿತಿಗೆ ಅಧಿಕಾರ ಒಪ್ಪಿಸಬೇಕು’ ಎಂಬ ಬೇಡಿಕೆ ಮುಂದಿಟ್ಟಿದ್ದಾರೆ. ಇದನ್ನು ಪ್ರಧಾನಿ ತಿರಸ್ಕರಿಸಿದ್ದಾರೆ.

ಅಷ್ಟಕ್ಕೂ ಈ ಬಿಕ್ಕಟ್ಟು ಪ್ರಧಾನಿಯ ಸ್ವಯಂಕೃತ ಅಪ­ರಾಧ­ದಿಂದ ಶುರುವಾ­ದದ್ದು. ಭ್ರಷ್ಟರಿಗೆ ಕ್ಷಮಾ­ದಾನ ನೀಡುವ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿದ್ದೇ ಅವರ ವಿರುದ್ಧ ಜನಾಂದೋಲನಕ್ಕೆ ಇಳಿಯಲು ಪ್ರತಿಪಕ್ಷಗಳಿಗೆ ಅಸ್ತ್ರ ಒದಗಿಸಿತು. ಸಂಸತ್ತಿನ ಕೆಳಮನೆ­ಯಲ್ಲಿ ಅಂಗಿಕಾರವಾದ ಮಸೂದೆ ಮೇಲ್ಮನೆಯಲ್ಲಿ ಪರಾಭವ­ಗೊಂಡ ನಂತರವೂ ಸರ್ಕಾರಿ ವಿರೋಧಿ ದಂಗೆ ನಿಲ್ಲುವ ಬದಲು ಹೆಚ್ಚಿತು.

ಇದ­ರಿಂದ ವಿಚಲಿತ­ಗೊಂಡ ಪ್ರಧಾನಿ, ಇನ್ನೆಂದೂ ಇಂಥ ಮಸೂದೆ ಸಂಸತ್ತಿನ ಮುಂದೆ ಬರುವುದೇ ಇಲ್ಲ ಎಂದು ಹೇಳಿದರೂ ಫಲ ಸಿಗಲಿಲ್ಲ.

‘ಭ್ರಷ್ಟಾಚಾರ ನಡೆಸಿ ಸೇನಾ ಕ್ರಾಂತಿಯಲ್ಲಿ ಪದಚ್ಯುತಗೊಂಡು ವಿದೇಶದಲ್ಲಿ ತಲೆ­ಮರೆಸಿಕೊಂಡಿರುವ ಮಾಜಿ ಪ್ರಧಾನಿಯೂ ಆದ ತಮ್ಮ ಸೋದರ ಥಕ್ಸಿನ್‌ ಶಿನವತ್ರಾ ಅವರನ್ನು ದೋಷ­­ಮುಕ್ತಗೊಳಿಸಿ ದೇಶಕ್ಕೆ ಮರಳುವಂತೆ ಮಾಡುವ ಉದ್ದೇಶ­ದಿಂದ ಇಂಥ ಮಸೂದೆ ತಂದಿದ್ದರು’ ಎಂಬ ಕಳಂಕ ಪ್ರಧಾನಿ ಯಂಗ್ಲಿಕ್‌ಗೆ ಅಂಟಿ­ಕೊಂಡಿತು. ಅದರಿಂದ ಹೊರಬರುವಲ್ಲಿ ಅವರು ವಿಫಲ­ರಾದರು.

ಜತೆಗೆ ಥಕ್ಸಿನ್‌ ವಿದೇಶದಲ್ಲಿ ಇದ್ದುಕೊಂಡೇ ಸೋದರಿಯ ಮೂಲಕ ಥಾಯ್ಲೆಂಡ್‌ನ ಆಡಳಿತ ನಿಯಂತ್ರಿ­ಸುತ್ತಿದ್ದಾರೆ ಎಂಬ ಆಕ್ರೋಶವೂ ಪ್ರತಿ­ಭಟನೆಗೆ ತುಪ್ಪ ಸುರಿಯಿತು. ಡೆಮಾ­ಕ್ರಟಿಕ್‌ ಪಕ್ಷದ ಸಂಸದರು ಸಾಮೂಹಿಕ ರಾಜೀ­­ನಾಮೆ ಕೊಟ್ಟಾಗ ಸಂಸತ್‌ ವಿಸರ್ಜಿ­ಸ­ದೆ ಪ್ರಧಾನಿಗೆ ಬೇರೆ ದಾರಿಯೇ ಉಳಿಯಲಿಲ್ಲ. ದೇಶದ ಸಂವಿಧಾನ­ದ ಪ್ರಕಾರ ಬರುವ ಫೆಬ್ರುವರಿ ಎರಡರ ಒಳಗೆ ಚುನಾವಣೆಗಳು ನಡೆಯ­ಬೇಕಿದೆ. ಅದರಲ್ಲಿಯೂ ಶಿನವತ್ರಾ ಅವರ ಪಕ್ಷವೇ ಮತ್ತೆ ಅಧಿಕಾರಕ್ಕೆ ಬರ­ಬಹುದು ಎಂಬುದು ರಾಜಕೀಯ ವಿಶ್ಲೇಷಕರ ಲೆಕ್ಕಾಚಾರ.

ಏಕೆಂದರೆ ಬಡವರು, ಜನಸಾಮಾನ್ಯರಲ್ಲಿ  ಶಿನವತ್ರಾ ಕುಟುಂಬದ ಬಗ್ಗೆ ಹೆಚ್ಚು ಒಲವಿದೆ. ಅಂಥ ಸಂದರ್ಭ ಬಂದರೆ ಬಿಕ್ಕಟ್ಟು ಮತ್ತೆ ಮುಂದು­ವರಿ­ಯ­ಲೂಬಹುದು. ಜನತಂತ್ರದಲ್ಲಿ ಶಾಂತಿಯುತ ಪ್ರತಿಭಟನೆ ತಪ್ಪಲ್ಲ. ಆದರೆ ಅದನ್ನು ರಾಜಕಾರಣದ  ದಾಳವಾಗಿ ಬಳಸಲು ಮುಂದಾದರೆ ಪ್ರಜಾಸತ್ತೆ ದುರ್ಬಲ­ವಾಗುತ್ತದೆ.

ಈ ವಿಷಯದಲ್ಲಿ ಎಡವಿದರೆ, ರಾಜಕೀಯ ಮಹತ್ವಾ­ಕಾಂಕ್ಷೆ ಹೊಂದಿರುವ ಸೇನೆಗೆ ಅವಕಾಶ ಕೊಟ್ಟಂತಾದೀತು. ಥಾಯ್‌ ರಾಜಕಾರಣಿಗಳು ಜನತಂತ್ರವನ್ನು ಬಲಹೀನ ಮಾಡುವ ಗೋಜಿಗೆ ಹೋಗದೆ ಪ್ರಜಾಸತ್ತೆ ಚೌಕಟ್ಟಿನಲ್ಲೇ ಪರಿಹಾರ ಕಂಡುಕೊಳ್ಳುವುದು ಅಪೇಕ್ಷಣೀಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT