ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂಸೆಗೆ ತಿರುಗಿದ ಮುತ್ತಿಗೆ ಯತ್ನ

ನ್ಯಾ. ಸದಾಶಿವ ಆಯೋಗ ವರದಿ ಅಂಗೀಕಾರಕ್ಕೆ ಒತ್ತಾಯ
Last Updated 11 ಡಿಸೆಂಬರ್ 2012, 19:39 IST
ಅಕ್ಷರ ಗಾತ್ರ

ಸುವರ್ಣ ವಿಧಾನಸೌಧ (ಬೆಳಗಾವಿ): ನ್ಯಾ. ಎ.ಜೆ. ಸದಾಶಿವ ಆಯೋಗದ ವರದಿ ಅಂಗೀಕರಿಸಬೇಕು ಎಂದು ಸರ್ಕಾರದ ಮೇಲೆ ಒತ್ತಡ ಹೇರಲು ಸುವರ್ಣ ವಿಧಾನಸೌಧ ಮುತ್ತಿಗೆಗೆ ಯತ್ನಿಸಿ, ಕಲ್ಲು ತೂರಾಟದಲ್ಲಿ ನಿರತರಾಗಿದ್ದ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಷೆಲ್ ಸಿಡಿಸಿ, ಲಾಠಿ ಪ್ರಹಾರ ನಡೆಸಿದರು.

ಕಲ್ಲು ತೂರಾಟ ಮತ್ತು ಲಾಠಿ ಪ್ರಹಾರದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಪಾಟೀಲ ಸೇರಿದಂತೆ ನಾಲ್ವರು ಪೊಲೀಸರು, ಹಲವು ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ 50ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆಯಲ್ಲಿ 30ಕ್ಕೂ ಹೆಚ್ಚು ವಾಹನಗಳು ಜಖಂಗೊಂಡಿವೆ. ರಾಜ್ಯ ಸಾರಿಗೆ ಸಂಸ್ಥೆಯ ಎರಡು ಬಸ್ಸುಗಳು ಸೇರಿದಂತೆ ಕೆಲ ವಾಹನಗಳ ಗಾಜುಗಳು ಪುಡಿಯಾಗಿವೆ. ವಿವಿಧ ಜಿಲ್ಲೆಗಳಿಂದ ಪ್ರತಿಭಟನಾಕಾರರು ಬಂದಿದ್ದ ವಾಹನಗಳ ಗಾಜುಗಳನ್ನು ನಂತರ ಪೊಲೀಸರು ಪುಡಿಪುಡಿ ಮಾಡಿದ್ದಾರೆ.

ಮಾದಿಗ ಮೀಸಲಾತಿ ಹೋರಾಟ ಸಮಿತಿ ಹಾಗೂ ನ್ಯಾ. ಸದಾಶಿವ ಆಯೋಗದ ವರದಿ ಅನುಷ್ಠಾನ ಸಮಿತಿ ಜಂಟಿಯಾಗಿ ಪ್ರತಿಭಟನೆ ಹಮ್ಮಿಕೊಂಡು, ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಉದ್ದೇಶಿಸಿದ್ದವು.

ವಿವಿಧ ಜಿಲ್ಲೆಗಳಿಂದ ನೂರಾರು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ನಾನಾ ವಾಹನಗಳಲ್ಲಿ ಬಂದು ಅಲ್ಲಿ ಬೆಳಿಗ್ಗೆಯಿಂದಲೇ ಜಮಾಯಿಸಿದ್ದರು.

ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ನುಗ್ಗಿದ ಪ್ರತಿಭಟನಾಕಾರರನ್ನು ಪೊಲೀಸರು ಬ್ಯಾರಿಕೇಡ್ ಬಳಸಿ ತಡೆದರು. ಇದರಿಂದ ಕುಪಿತರಾದ ಪ್ರತಿಭಟನಾಕಾರರು ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿದರು. ಆ ವೇಳೆಗೆ ಅಲ್ಲಿಗೆ ಆಗಮಿಸಿದ ಇನ್ನೊಂದು ಗುಂಪು ಸಹ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ಲಾಠಿ ಪ್ರಹಾರ ಮಾಡಿದರು.

ಲಾಠಿ ಏಟಿಗೆ ಹೆದರಿ ಚದುರಿದ ಪ್ರತಿಭಟನಾಕಾರರು ಕಲ್ಲು ತೂರಾಟದಲ್ಲಿ ತೊಡಗಿದರು. ಪೊಲೀಸರು ವಿಚಲಿತರಾದಾಗ ಮತ್ತೆ ಸುವರ್ಣ ವಿಧಾನಸೌಧಕ್ಕೆ ನುಗ್ಗಲು ಯತ್ನಿಸಿದರು. ಹೆಚ್ಚಿನ ಪೊಲೀಸ್ ಬಲ ಬಳಸಿ ಪ್ರತಿಭಟನಾಕಾರರನ್ನು ಮನಸೋ ಇಚ್ಛೆ ಥಳಿಸಲಾಯಿತು. ಅಲ್ಲದೇ, 10 ಸುತ್ತು ಅಶ್ರುವಾಯು ಷೆಲ್‌ಗಳನ್ನು ಸಿಡಿಸಲಾಯಿತು.

ಕ್ಷಣಾರ್ಧದಲ್ಲಿಯೇ ಸುವರ್ಣ ವಿಧಾನಸೌಧ ಎದುರು ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ತಪ್ಪಿಸಿಕೊಳ್ಳಲು ಓಡಿದ ಪ್ರತಿಭಟನಾಕಾರರು ದಾರಿ ತಿಳಿಯದೇ ತಾವೇ ಬಂಧನಕ್ಕೊಳಗಾದರು.

ವಾಹನ ಸಂಚಾರ ಅಸ್ತವ್ಯಸ್ತ: ರಸ್ತೆ ತಡೆ ಮತ್ತು ಹಿಂಸಾಚಾರದಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೂರು ತಾಸಿಗೂ ಹೆಚ್ಚು ಕಾಲ ವಾಹನ ಸಂಚಾರ ಬಂದ್ ಆಗಿತ್ತು. ಮೂರು ಕಿ.ಮೀವರೆಗೆ ವಾಹನಗಳು ನಿಂತಿದ್ದವು.

ಳಗಾವಿ ಹಾಗೂ ಹಿರೇಬಾಗೇವಾಡಿ ಕಡೆಗೆ ಹೋಗುವ ರಸ್ತೆಗಳಲ್ಲಿ ಪೊಲೀಸರು ನಾಕಾ ಬಂದ್ ಮಾಡಿ, ಪ್ರತಿಭಟನಾಕಾರರನ್ನು ಬಂಧಿಸಿದರು.

`ಒಂದು ಗಂಟೆಗೂ ಹೆಚ್ಚು ಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿದರೂ ಪೊಲೀಸರು ತಾಳ್ಮೆಯಿಂದಲೇ ವರ್ತಿಸಿದರು. ಪರಿಸ್ಥಿತಿ ಕೈಮೀರುವ ಸೂಚನೆ ಕಂಡಾಗ ಲಾಠಿ ಪ್ರಹಾರ ಮಾಡಿ ಚದುರಿಸಬೇಕಾಯಿತು. ಅಶ್ರುವಾಯು ಸಿಡಿಸಿ ಜನರನ್ನು ಚದುರಿಸಲಾಯಿತು. 15 ನಿಮಿಷದೊಳಗೆ ಪರಿಸ್ಥಿತಿ ತಿಳಿಗೊಳಿಸಲಾಯಿತು' ಎಂದು ಉತ್ತರ ವಲಯ ಐಜಿಪಿ ಕೆ.ಎಸ್.ಆರ್. ಚರಣ ರೆಡ್ಡಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT