ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂಸೆಗೆ ಪ್ರತಿ ಹಿಂಸೆ ಪರಿಹಾರವಲ್ಲ

Last Updated 12 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಳ್ತಂಗಡಿ ತಾಲೂಕಿನಲ್ಲಿ ಇತ್ತೀಚೆಗೆ ನಕ್ಸಲರೊಂದಿಗೆ ನಡೆಯಿತೆನ್ನಲಾದ ಗುಂಡಿನ ಚಕಮಕಿ ಹಾಗೂ ಪೊಲೀಸ್ ಯೋಧ ಮಹದೇವ ಮಾನೆಯ ಹತ್ಯೆ, ನಕ್ಸಲ್ ಸಮಸ್ಯೆ ಇನ್ನೂ ಜ್ವಲಂತ ಎಂದು ತೋರಿಸಿಕೊಟ್ಟಿದೆ.

ಯೋಜನಾ ಆಯೋಗ ನೇಮಿಸಿದ್ದ ಡಿ. ಬಂದ್ಯೋಪಾಧ್ಯಾಯರ ಅಧ್ಯಕ್ಷತೆಯ ತಜ್ಞರ ಸಮಿತಿಯ ವರದಿ. ಸಮಿತಿಯಲ್ಲಿ ಹಲವಾರು ಕ್ಷೇತ್ರಗಳಲ್ಲಿ - ಪೊಲೀಸ್ ಇಲಾಖೆಯೂ ಸೇರಿ- ಅನುಭವ ಮತ್ತು ಸಾಮಾಜಿಕ ಕಾಳಜಿ ಹೊಂದಿದ್ದ 17 ಮಂದಿ ಸದಸ್ಯರಿದ್ದರು. 2008ರ ಏಪ್ರಿಲ್‌ನಲ್ಲಿ ಬಂದ ಈ ವರದಿಯಲ್ಲಿ ಇಡೀ ಸಮಸ್ಯೆಗೆ ಕಾರಣಗಳನ್ನು ಹುಡುಕಿ ಅದಕ್ಕೆ ಅಗತ್ಯ ಪರಿಹಾರವನ್ನು ಕೊಡಲಾಗಿದೆ.

ಸಮಿತಿಯ ಅಭಿಪ್ರಾಯದಂತೆ ಸಂವಿಧಾನದತ್ತ ಕೊಡಮಾಡಿದ ಮೂಲಭೂತ ಹಕ್ಕುಗಳನ್ನು ಸಮಾಜದ ವಿವಿಧ ವರ್ಗಗಳಿಗೆ ತಲುಪಿಸುವಲ್ಲಿ ಆಗಿರುವ ನಮ್ಮ ಸಾಮೂಹಿಕ ವೈಫಲ್ಯವೇ ನಕ್ಸಲೀಯ ಪಿಡುಗಿಗೆ ಕಾರಣ. ಪರಿಣಾಮವಾಗಿ ದೇಶ ಈಗ ಹಿಂಸೆ ಮತ್ತು ಪ್ರತಿ ಹಿಂಸೆಯ ವಿಷವರ್ತುಲದಲ್ಲಿ ಸಿಕ್ಕಿಹಾಕಿಕೊಂಡಿದೆ. ಈಗ ಸಂವಿಧಾನದ ಪೀಠಿಕೆಯಲ್ಲಿನ ಗುರಿಗಳು, ರಾಷ್ಟ್ರೀಯ ನೀತಿಯ ನಿರ್ದೇಶಕ ತತ್ವಗಳು, ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು. ಇವುಗಳ ಮೂಲಕ ಭವಿಷ್ಯವನ್ನು ಹಸನುಗೊಳಿಸುವಲ್ಲಿ ರಾಷ್ಟ್ರಮಟ್ಟದಲ್ಲಿಯೇ ಒಂದು ಅಭೂತಪೂರ್ವವಾದ ಬದ್ಧತೆ ಅಗತ್ಯ ಎಂದೂ ಹೇಳಿದೆ. `ಕಾನೂನು ರೀತಿ ಬರಬೇಕಾದ ಸೌಲಭ್ಯಗಳನ್ನು ಮತ್ತು ಇರುವ ಹಕ್ಕುಗಳನ್ನು ಉಪಯೋಗಿಸಿಕೊಳ್ಳುವ ಅವಕಾಶವನ್ನು ಪ್ರತಿ ಪುರುಷ, ಸ್ತ್ರೀ ಮತ್ತು ಮಗುವಿಗೆ ಒದಗಿಸಿಕೊಟ್ಟು ಪ್ರತಿಯೊಬ್ಬರೂ ದೇಶದ ಅವಿಭಾಜ್ಯ ಅಂಗವೆಂಬ ಭಾವನೆ ಬೆಳೆಯುವಂತೆ ಮಾಡುವ ಸಂಕಲ್ಪ ಮಾಡಬೇಕು~ (ಪಾರಾ 6.2) ಎಂಬುದು ಸಮಿತಿಯ ಸಲಹೆ.

ವರದಿ ಬಂದು ಮೂರು ವರ್ಷಗಳೇ ಕಳೆದರೂ ಅದರಲ್ಲಿ ಅಡಕವಾಗಿರುವ ಶಿಫಾರಸುಗಳನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವಾಗಲೀ, ರಾಜ್ಯ ಸರ್ಕಾರಗಳಾಗಲೀ ಗಣನೀಯ ಹೆಜ್ಜೆಗಳನ್ನು ತೆಗೆದುಕೊಂಡಂತೆ ಕಾಣುವುದಿಲ್ಲ. ಛತ್ತೀಸ್‌ಗಡ ಮತ್ತು ಒಡಿಶಾ ರಾಜ್ಯಗಳಲ್ಲಿ ಭಯ ಹುಟ್ಟಿಸುವ ಘಟನೆಗಳ ಬಗ್ಗೆ ಆಗಾಗ ವರದಿ ಬರುತ್ತಲೇ ಇವೆ. ವಿಪರ್ಯಾಸವೆಂದರೆ ಅಭಿವೃದ್ಧಿಯ ಹೆಸರಿನಲ್ಲಿ ಮತ್ತಷ್ಟು ಶೋಷಣೆ, ಬಡತನ ಮತ್ತು ನಿರ್ವಸತಿ ಹಲವೆಡೆ ಮುಂದುವರಿದಿದೆ. ತಜ್ಞರ ವರದಿಯೂ ಈ ತರದ ಅಭಿವೃದ್ಧಿಯ ಬಗ್ಗೆ ತನ್ನ ಅಭಿಪ್ರಾಯ ಮಂಡಿಸಿತ್ತು.

ಹಳ್ಳಿಗಳಲ್ಲಿ ಇನ್ನೂ ಕುಡಿಯುವ ನೀರು ಮತ್ತು ವಿದ್ಯುತ್ ಇಲ್ಲದ ಮನೆಗಳು, ಡಾಂಬರು ಕಾಣದ ರಸ್ತೆಗಳು, ಸಾರ್ವಜನಿಕ ವಾಹನ ಸೌಕರ್ಯ ಇಲ್ಲದಿರುವುದು, ಅಂಗನವಾಡಿ, ಶಾಲೆ ಮತ್ತು ಆರೋಗ್ಯ ಕೇಂದ್ರಗಳಿಲ್ಲದ ಪರಿಸ್ಥಿತಿ -ಇವುಗಳು ದೇಶದ ಗೋಳಿನ ಕಥೆ. ಸರ್ಕಾರದ ಮತ್ತು ಜನಸಾಮಾನ್ಯರ ಭೂಮಿಯನ್ನು ಕಿತ್ತುಕೊಂಡು ಬೃಹತ್ ಉದ್ದಿಮೆಗಳಿಗೆ ಕೊಡುವ ಪ್ರಕ್ರಿಯೆ, ಉತ್ಪಾದಿತ ವಿದ್ಯುತ್ತನ್ನು ಶ್ರಿಮಂತರಿಗೆ ನೀಡುವುದು, ಬಡವರ ಭೂಮಿಯಲ್ಲಿ ವಿಮಾನ ನಿಲ್ದಾಣಗಳು ಮತ್ತು ರಾಷ್ಟ್ರೀಯ ಹೆದ್ದಾರಿಗಳು - ಇವುಗಳೆಲ್ಲಾ ಅಭಿವೃದ್ಧಿ ಹೊಂದುತ್ತಿರುವ ಇನ್ನೊಂದು ಭಾರತದ ಚಿತ್ರ. ಹಿಂದುಳಿದ ಪ್ರದೇಶದ ಅಭಿವೃದ್ಧಿಗೋಸ್ಕರ ಕೋಟಿಗಟ್ಟಲೆ ಅನುದಾನ ಬಿಡುಗಡೆಯಾಗಿಯೂ ಆ ಪ್ರದೇಶದಲ್ಲಿ ಕಾಣದಿರುವ ಬದಲಾವಣೆ ಸರ್ಕಾರದ ಯೋಜನೆಗಳು ಇನ್ನೂ ಕಾಗದದಲ್ಲೇ ಉಳಿದಿರುವುದು ಸಮಸ್ಯೆಗೆ ಕಾರಣ.

ಸುಮಾರು ಎರಡು ವರ್ಷಗಳ ಹಿಂದೆ ಮಂಗಳೂರು ವಿಶೇಷ ಆರ್ಥಿಕ ವಲಯದ (ಎಂಎಸ್‌ಇಜೆಡ್) ವಿರುದ್ಧದ ಸಾರ್ವಜನಿಕ ಚಳವಳಿಯಲ್ಲಿ ಭಾಗಿಯಾಗಿದ್ದಾಗಿನ ಒಂದು ಘಟನೆ.  ಹುಲುಸಾಗಿ ಬೆಳೆದಿದ್ದ ಕೃಷಿಕರ ಬತ್ತದ ಪೈರನ್ನು ಎಂಎಸ್‌ಇಜೆಡ್‌ನ ಬುಲ್‌ಡೋಜರು ನಡುರಾತ್ರಿ ನೆಲಸಮಮಾಡಿ ನೀರಿನ ತೋಡನ್ನು ಮಣ್ಣಿನಿಂದ ಮುಚ್ಚಿತ್ತು. ಅದಕ್ಕೆ ಪ್ರತಿಭಟನೆ ತೋರಿಸಿದ ಕೃಷಿಕರ ಮೇಲೆ ಕ್ರಿಮಿನಲ್ ಮೊಕದ್ದಮೆಗಳನ್ನು ಹಾಕಿದ ಸರ್ಕಾರ, ಅದೇ ಜಾಗದಲ್ಲಿ ಶ್ರಿಮಂತರ ಭವ್ಯ ಮನೆ ಮತ್ತು ಅವರ ದೈವ ಹಾಗೂ ನಾಗಬನಗಳಿಗೆ ಹೊಸ ತಾಣಗಳನ್ನು ನಿರ್ಮಿಸಲು ಅವಕಾಶ ನೀಡಿತು. ಚಳವಳಿಯ ಕಾರ್ಯಕರ್ತರಲ್ಲಿ ಅಳಲು ತೋಡಿಕೊಂಡ ಕೆಲವು ಯುವ ಕೃಷಿಕಾರ್ಮಿಕರು  `ನಮಗೆ ರಕ್ಷಣೆ ನೀಡಬೇಕಾದ ಸರ್ಕಾರವೇ ನಮ್ಮ ವಿರುದ್ಧ ಮೊಕದ್ದಮೆ ಹೂಡಿದರೆ ನಮಗೇನು ಉಳಿದಿದೆ, ನಾವು ನಕ್ಸಲ್‌ಗಳಾಗಬೇಕೇ~ ಎಂದು ಹಾಕಿದ ಹತ್ತಾರು ಪ್ರಶ್ನೆಗಳು ಅರ್ಥಗರ್ಭಿತವಾಗಿದ್ದುವು.

ಸರ್ಕಾರವೇ ನೇಮಿಸಿದ್ದ ಬಂದ್ಯೋಪಾಧ್ಯಾಯ ಸಮಿತಿಯ ವರದಿ ಒಟ್ಟು ಅಭಿವೃದ್ಧಿಯ ಪ್ರಯೋಜನಗಳನ್ನು ಅತ್ಯಂತ ಹಿಂದುಳಿದ ವರ್ಗದವರಿಗೆ ತಲುಪಿಸಬೇಕೆಂಬುದರ ಬಗೆಗೆ ಇದೆ. ನಕ್ಸಲರು ಹಿಂಸೆಯ ಮಾರ್ಗವನ್ನು ಹಿಡಿಯುವುದರ ಮೂಲಕ ಸಮಾಜದ ಅಸಮಾನತೆಯನ್ನು ಹೋಗಲಾಡಿಸಲು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ಅಸಮಾನತೆಯ ವಿರುದ್ಧದ ಧ್ವನಿಯನ್ನು ಸರ್ಕಾರದ ಪ್ರತಿಹಿಂಸೆಯ ಮೂಲಕ ಅಡಗಿಸುವುದು ಕೂಡ ಅಸಾಧ್ಯ. ಹೆಚ್ಚು ಶಕ್ತಿ ಹೊಂದಿದ ಸರ್ಕಾರದ ಆದ್ಯ ಕರ್ತವ್ಯವೆಂದರೆ ಸಾಮಾಜಿಕ ಯೋಜನೆಗಳ ಮತ್ತು ನಿರ್ದಿಷ್ಟ ಕಾನೂನುಗಳಲ್ಲಿ ಅಡಕವಾಗಿರುವ ಹಕ್ಕುಗಳ ಉದ್ದೆೀಶ ಮತ್ತು ಗುರಿ ತಲುಪುವಲ್ಲಿ ನೈಜ ಕಾಳಜಿ ವಹಿಸಿ ಪ್ರಾಮಾಣಿಕ ಪ್ರಯತ್ನ ನಡೆಸುವುದು. ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ವಂಚಿತರಾದವರಿಗೆ ವಿಶ್ವಾಸ ಬರುವಂತೆ ಮಾಡಲು ಸರ್ಕಾರದ ಪ್ರಾಮಾಣಿಕ ಪ್ರಯತ್ನವೇ ಮೊದಲ ಹೆಜ್ಜೆಯಾಗಬೇಕೇ ಹೊರತು ಗುಂಡಿಗೆ ಪ್ರತಿಗುಂಡಲ್ಲ.

ರಾಷ್ಟ್ರಮಟ್ಟದಲ್ಲಿಯೂ ತಜ್ಞರ ವರದಿಯನ್ನಾಧರಿಸಿ ನಿರ್ದಿಷ್ಟ ಕಾಲಮಿತಿಯೊಳಗೆ ನಮ್ಮ ಯೋಜನೆಗಳ ಅನುಷ್ಠಾನದಲ್ಲಿ  ಪ್ರಾಮಾಣಿಕತೆ, ನಿಷ್ಠೆ ಹಾಗೂ ಮಾನವೀಯತೆಯನ್ನು ಮೆರೆಯಬೇಕು. ಪ್ರಧಾನಿಗಳ ದೃಷ್ಟಿಯಲ್ಲಿ ನಕ್ಸಲರು ಆಂತರಿಕ ಭದ್ರತೆಗೆ ದೊಡ್ಡ ಸವಾಲಾದರೆ ಅದಕ್ಕೆ ಶಾಶ್ವತ ಪರಿಹಾರವು ಅಭಿವೃದ್ಧಿಯ ಪ್ರಯೋಜನವು ಉದ್ದೇಶಿತ ಫಲಾನುಭವಿಗಳಿಗೆ ಬೇಗನೆ ಸಿಗುವಂತೆ ಮಾಡುವಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT