ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂಸೆಯ ಅಬ್ಬರ

Last Updated 12 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಚಿತ್ರ: ಕೋಟೆ

ಎರಡು ದಶಕಗಳಿಂದ ಈಚೆಗೆ ಬಂದ ಖಳರನ್ನು ಸಂಹಾರ ಮಾಡುವ ಸಿನಿಮಾಗಳನ್ನು ಒಮ್ಮೆ ನೆನಪಿಸಿಕೊಳ್ಳಿ. ಮಚ್ಚು, ಪಿಸ್ತೂಲಿನಿಂದ ರೌಡಿಗಳನ್ನು-ಕೇಡಿಗಳನ್ನು ಕನ್ನಡದ ಅನೇಕ ನಾಯಕರು ಸಿನಿಮಾಗಳಲ್ಲಿ ಹೊಡೆದು ಹಾಕಿದ್ದಾರೆ. ಅವರು ತೆರೆಯ ಮೇಲೆ ಬೀಳಿಸಿದ ಹೆಣಗಳಿಗೆ ಲೆಕ್ಕವಿಲ್ಲ. ಇದೀಗ ಆ ಸಾಲಿಗೆ, ಹಳೆಯ ಕಥೆಯ ಹೊಸ ಸೇರ್ಪಡೆ ಪ್ರಜ್ವಲ್ ದೇವರಾಜ್ ನಾಯಕರಾಗಿರುವ ‘ಕೋಟೆ’.

ಬುದ್ಧಿವಂತ ನಾಯಕ ಹಾಗೂ ದುಷ್ಟ ಖಳನಾಯಕನ ನಡುವಿನ ತಿಕ್ಕಾಟವನ್ನು ವಸ್ತುವಾಗುಳ್ಳ ‘ಕೋಟೆ’ಯನ್ನು ಶ್ರೀನಿವಾಸರಾಜು ನಿರ್ದೇಶಿಸಿದ್ದಾರೆ. ಫೇರ್ ಅಂಡ್ ಲವ್ಲಿ ಜಾಹೀರಾತಿನಲ್ಲಿ ಬರುವಂಥ ಸುಂದರಿ ಡಿಂಪಲ್ ಇದಕ್ಕೆ ನಾಯಕಿ. ಹೀಗಿದ್ದ ಮೇಲೆ ಕಥೆಯ ಕುರಿತಾಗಿ, ಅದರ ನಿರೂಪಣೆಯ ಕುರಿತಾಗಿ ಹೇಳಬೇಕಾದುದೇನಿಲ್ಲ. ಕನ್ನಡ ಸಿನಿಮಾದಲ್ಲಿ ಚರ್ವಿತಚರ್ವಣವಾಗಿರುವ ಬಿಸಿರಕ್ತದ ಹುಡುಗನೇ ಮುಂದೆ  ಪೊಲೀಸ್ ಅಧಿಕಾರಿಯಾಗಿ ಖಳರನ್ನು ಸಾಲುಸಾಲಾಗಿ ಗುಂಡು ಹೊಡೆದು ಮಟ್ಟಹಾಕುವ ಯಾವುದೇ ಹೊಸ ದೃಶ್ಯಗಳಿಲ್ಲದ ಸಿನಿಮಾ ಇದು. ಪ್ರೇಕ್ಷಕರಲ್ಲಿ ಯಾವುದೇ ರೋಮಾಂಚನವನ್ನು, ಅಚ್ಚರಿಯನ್ನು ಹುಟ್ಟಿಸಲು ಅದು ಶಕ್ತವಾಗಿಲ್ಲ. ಇಂಥದ್ದೇ ಸಿನಿಮಾಗಳು ತೆರೆಯ ಮೇಲೆ ಈ ಹಿಂದೆ ದುರಂತ ಅಂತ್ಯ ಕಂಡಿದ್ದನ್ನು ಈಗಾಗಲೇ ಪ್ರೇಕ್ಷಕರು ಮನಗಂಡಿದ್ದಾರೆ.

‘ನಿನ್ನ ಪೂಜೆಗೆ ಬಂದೆ ಮಹದೇಶ್ವರಾ...’ ಎಂಬ ಹಾಡಿನಿಂದ ಪ್ರೇಕ್ಷಕರಲ್ಲಿ ಕೊಂಚ ಭರವಸೆ ಹುಟ್ಟಿಸಿದ್ದ ರಘು ದೀಕ್ಷಿತ್ ಇದಕ್ಕೆ ಸಂಗೀತ ನೀಡಿದ್ದಾರೆ. ಅವರ ಸಂಗೀತ ಕೂಡ ಸಿನಿಮಾದ ಜಾಡಿನಲ್ಲಿಯೇ ಇದೆ. ಅದಕ್ಕೆ ಯಾವುದೇ ಇಂಪು, ತಂಪಿಲ್ಲ. ಹೇಳುವಂಥ, ಕೇಳುವಂಥ ಸಂಗೀತ ನೀಡುವಲ್ಲಿ ರಘು ದೀಕ್ಷಿತ್ ವಿಫಲರಾಗಿದ್ದಾರೆ. ಹಾಗಾಗಿ ಈ ವಿಭಾಗದಲ್ಲೂ ನಿರಾಶೆಯಾಗುತ್ತದೆ.

ನಾಯಕ ಪ್ರಜ್ವಲ್ ಕೂಲ್ ಆಗಿ, ನಾಯಕಿ ಡಿಂಪಲ್ ಹಾಟ್ ಆಗಿ ನಟಿಸಿದ್ದು ಈ ಸಿನಿಮಾದಲ್ಲಿ ಹುಡುಕಿದರೆ ಕಾಣುವ ಒಂದೇ ಒಂದು ವಿಶೇಷ. ಪ್ರಜ್ವಲ್ ಜೊತೆಗಿನ ಒಂದು ಹಾಡಿನಲ್ಲಿ ಡಿಂಪಲ್ ಸಾಕಷ್ಟು ಹಾಟ್ ಆಗಿ ಕಾಣಿಸಿಕೊಂಡಿದ್ದು, ಅದು ಪಡ್ಡೆ ಹುಡುಗರಲ್ಲಿ ಸಾಕಷ್ಟು ಬಿಸಿಯನ್ನು ಹುಟ್ಟಿಸುವ ಸಾಧ್ಯತೆ ಇದೆ. ಇದರೊಂದಿಗೆ ಖಳಪಾತ್ರ ನಿರ್ವಹಿಸಿದ ರವಿಶಂಕರ್ ಅವರ ನಟನೆಯಲ್ಲಿ ಅಬ್ಬರವಿದ್ದರೂ ಸಹನೀಯವಾಗಿದೆ. ಇಲ್ಲಿ ಯಾವುದೇ ಪಾತ್ರಗಳ ಪೋಷಣೆ ಸರಿಯಾಗಿ ಆಗಿಲ್ಲದೇ ಇರುವುದರಿಂದ ಯಾವ ಪಾತ್ರವೂ ನೋಡುಗರನ್ನು ತಾಕುವಷ್ಟು ಶಕ್ತವಾಗಿಲ್ಲ. ನಾಯಕನ ಖಳ ಸಂಹಾರದ ಅಬ್ಬರದಲ್ಲಿ ಪ್ರೇಕ್ಷಕ ಖರ್ಚು ಮಾಡಿಕೊಂಡು ಸುಸ್ತಾಗುತ್ತಾನೆ ಎಂಬುದಷ್ಟೇ ಈ ಸಿನಿಮಾದ ಮಹತ್ವ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT