ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಗ್ ಬಾಸನ್ ಕಣಗಳು: ಮತ್ತಷ್ಟು ದಾಖಲೆ ಅಗತ್ಯ

Last Updated 4 ಜುಲೈ 2012, 19:30 IST
ಅಕ್ಷರ ಗಾತ್ರ

ಜಿನೀವಾ (ಪಿಟಿಐ): `ಹಿಗ್ ಬಾಸನ್ ಕಣಗಳ ಅಸ್ತಿತ್ವ ದೃಢಪಡಿಸಲು ಇನ್ನೂ ಕೆಲವು ದಾಖಲೆ, ಆಧಾರದ ಅಗತ್ಯವಿದೆ~ ಎಂದು ಸಿಇಆರ್‌ಎನ್ ಅಭಿಪ್ರಾಯಪಟ್ಟಿದೆ.

ವಿಶ್ವದ ಉಗಮದ ರಹಸ್ಯ ಅರಿಯುವ ನಿಟ್ಟಿನಲ್ಲಿ ಮಹತ್ವದ ಕೊಂಡಿಯಾಗಿರುವ ದೇವ ಕಣ ಸಿದ್ಧಾಂತದ ಬಗ್ಗೆ ಅಧಿಕೃತ ಘೋಷಣೆ ಹೊರಬೀಳುವ ಐತಿಹಾಸಿಕ ಸಂದರ್ಭಕ್ಕೆ ಎಡಿನ್‌ಬರೊ ವಿಶ್ವವಿದ್ಯಾಲಯದ ಭೌತಶಾಸ್ತ್ರದ ಗೌರವ ಪ್ರಾಧ್ಯಾಪಕ ಮತ್ತು ಸಿದ್ಧಾಂತದ ಪ್ರತಿಪಾದಕ ಪೀಟರ್ ಹಿಗ್ ಕೂಡಾ ಸಾಕ್ಷಿಯಾದರು.

`ನನ್ನ ಜೀವಿತಾವಧಿಯಲ್ಲಿಯೇ ಈ ಅಪರೂಪದ ಮತ್ತು ಐತಿಹಾಸಿಕ ಸಂದರ್ಭಕ್ಕೆ ಸಾಕ್ಷಿಯಾಗುತ್ತೇನೆ ಎಂದು ಖಂಡಿತವಾಗಿಯೂ ಭಾವಿಸಿರಲಿಲ್ಲ. ಮನೆಯ ರೆಫ್ರಿಜರೇಟರ್‌ನಲ್ಲಿ ಶಾಂಪೇನ್ ಸಿದ್ಧಪಡಿಸಿ ಇಡುವಂತೆ ಹೇಳಿದ್ದೇನೆ~ ಎಂದು ಹಿಗ್ ಪ್ರತಿಕ್ರಿಯಿಸಿದ್ದಾರೆ.

ಸುಮಾರು 13.7 ಶತಕೋಟಿ ವರ್ಷಗಳ ಪೂರ್ವದಲ್ಲಿ ನಡೆದಿದೆ ಎನ್ನಲಾದ `ಮಹಾ ಸ್ಫೋಟ~ (ಬಿಗ್‌ಬ್ಯಾಂಗ್ ಥಿಯರಿ) ವಿಶ್ವ ಮತ್ತು ನಕ್ಷಗಳ ರಚನೆಗೆ ಕಾರಣ ಎಂದು ಭಾವಿಸಲಾಗಿದೆ.

ಸ್ಫೋಟದ ನಂತರ ವಿಶ್ವದ ಉಗಮಕ್ಕೆ ಮೂಲ ಕಾರಣವಾದ ಅಣುಗಳಿಗೆ ಒಂದು ನಿರ್ದಿಷ್ಟ ರೂಪ, ಆಕಾರ ಮತ್ತು ದ್ರವ್ಯರಾಶಿಯನ್ನು ನೀಡಿದ್ದೇ ಈ ದೇವಕಣಗಳು ಎನ್ನುವುದು ವಿಜ್ಞಾನಿಗಳ ವಾದ.

ಶತಮಾನದ ಬೃಹತ್ ಯೋಜನೆ

`ದೇವ ಕಣ~ಗಳ ಅಸ್ತಿತ್ವದ ಅಧ್ಯಯನ ಮತ್ತು ಸಂಶೋಧನೆಗಾಗಿ ಮೂರು ಶತಕೋಟಿ ಯುರೊ  ವೆಚ್ಚದ ಯೋಜನೆಯೊಂದನ್ನು ರೂಪಿಸಲಾಗಿತ್ತು.

ಇದಕ್ಕಾಗಿ ಸ್ವಿಟ್ಜರ್‌ರ್ಲೆಂಡ್-ಫ್ರಾನ್ಸ್ ಗಡಿಯಲ್ಲಿ ಕೃತಕ ಸುರಂಗ ನಿರ್ಮಿಸಲಾಗಿತ್ತು. ಸುಮಾರು ನೂರು ಮೀಟರ್ ಭೂಮಿಯ ಆಳಕ್ಕೆ ಸುರಂಗ ಕೊರೆದು 27 ಕಿ.ಮೀ ಉದ್ದಕ್ಕೆ ಕೊಳವೆ ಅಳವಡಿಸಲಾಗಿತ್ತು. ಈ ಕೊಳವೆಯಲ್ಲಿ ಮಹಾಸ್ಫೋಟಕ್ಕೆ ಬೇಕಾದ ಕೃತಕ ವಾತಾವರಣವನ್ನು  ನಿರ್ಮಿಸಲಾಗಿತ್ತು.

ವಿರುದ್ಧ ದಿಕ್ಕಿನಲ್ಲಿ ಅತಿ ವೇಗದಲ್ಲಿ ಎರಡು ಪ್ರೋಟಾನ್ ಕಣಗಳ ಪ್ರವಾಹ ಪರಸ್ಪರ ಡಿಕ್ಕಿ ಹೊಡೆದಾಗ ಪ್ರತಿ ಸೆಕೆಂಡ್‌ಗೆ ಕೋಟ್ಯಂತರ ಕಣಗಳು ಹೊರಹೊಮ್ಮತ್ತವೆ. ಮಹಾಸ್ಫೋಟ ಘಟಿಸಿದ ಕೆಲವೇ ಕ್ಷಣಗಳ ನಂತರ ಉಂಟಾದ ವಾತಾವರಣ ಈ ಕೊಳವೆಯಲ್ಲಿ ನಿರ್ಮಾಣವಾಗಿತ್ತು. ದೇವಕಣಗಳನ್ನು ಅರಿಯಲು ಈ ಪ್ರಯೋಗ ನಿರ್ಣಾಯಕ ಪಾತ್ರ ವಹಿಸಿತ್ತು. ಇದೇ ಹಂತದಲ್ಲಿ ಹಿಗ್, ದೇವಕಣಗಳ ಬಗ್ಗೆ ದೃಢ ನಿಶ್ಚಯ ತಾಳಿದರು ಎನ್ನಲಾಗಿದೆ.

ಭಾರತೀಯರ ಕೊಡುಗೆ
ವಿಶ್ವವೇ ಕುತೂಹಲದಿಂದ ಎದುರು ನೋಡುತ್ತಿದ್ದ `ದೇವಕಣ~ಗಳ ಅಸ್ತಿತ್ವದ ಘೋಷಣೆ ಐತಿಹಾಸಿಕ ಸಂದರ್ಭ ಭಾರತೀಯರ ಪಾಲಿಗೂ ಹೆಮ್ಮೆಯ ಗಳಿಗೆಯಾಗಿತ್ತು. 

 `ದೇವಕಣ~ಕ್ಕೆ ಇಡಲಾಗಿರುವ `ಹಿಗ್ ಬೊಸನ್~ ಹೆಸರಿನಲ್ಲಿ ಭಾರತೀಯ ಭೌತವಿಜ್ಞಾನಿ ಸತ್ಯೇಂದ್ರನಾಥ ಅವರ ಹೆಸರು ಇರುವುದು ಬಹುತೇಕ ಜನರಿಗೆ ಗೊತ್ತಿರಲಿಕ್ಕಿಲ್ಲ.

ಸತ್ಯೇಂದ್ರನಾಥ ಬೋಸ್ ಅವರು ಸಾಪೇಕ್ಷ ಸಿದ್ಧಾಂತದ ಪ್ರತಿಪಾದಕ ಮತ್ತು ಶತಮಾನದ ಖ್ಯಾತ ಭೌತವಿಜ್ಞಾನಿ ಅಲ್ಬರ್ಟ್ ಐನ್‌ಸ್ಟಿನ್ ಸಮಕಾಲೀನರು. ಬೋಸ್ ಪ್ರತಿಪಾದಿಸಿದ್ದ `ಕಣ ಭೌತ ಸಿದ್ಧಾಂತ~ವನ್ನು (ಕ್ವಾಂಟಮ್ ಮೆಕಾನಿಕ್ಸ್) ಐನ್‌ಸ್ಟಿನ್ ತಮ್ಮ ಸಾಪೇಕ್ಷ ಸಿದ್ಧಾಂತದಲ್ಲಿ ಅಳವಡಿಸಿಕೊಂಡಿದ್ದರು. ಅದನ್ನು `ಬೋಸ್-ಐನ್‌ಸ್ಟಿನ್ ಸಿದ್ಧಾಂತ~ ಎಂದೂ ಕರೆಯಲಾಗುತ್ತದೆ.

ಹಿಗ್ ಬೋಸನ್ ಹೋಲುವ ಹೊಸ ಕಣ
*  ದೇವಕಣಗಳ ಪತ್ತೆಗೆ `ಸಿಇಆರ್‌ಎನ್~ ರೂಪಿಸಿರುವ ನೂರಾರು ಯೋಜನೆಗಳ ಅಡಿಯಲ್ಲಿ ನೂರಕ್ಕೂ ಹೆಚ್ಚು ಭಾರತೀಯ ವಿಜ್ಞಾನಿಗಳು ನಿರಂತರವಾಗಿ ಕೆಲಸ ಮಾಡಿದ್ದರು. 

* ಕಳೆದ ವರ್ಷ ಸ್ವಿಟ್ಜರ್‌ರ್ಲೆಂಡ್-ಫ್ರಾನ್ಸ್ ಗಡಿಯಲ್ಲಿ ಕೃತಕ ಮಹಾಸ್ಫೋಟ ನಡೆಸಲಾಗಿತ್ತು. 14 ಶತಕೋಟಿ ವರ್ಷಗಳ ಹಿಂದೆ ಭೂಮಂಡಲದ ಉಗಮಕ್ಕೆ ಕಾರಣವಾದ ಮಹಾಸ್ಫೋಟದ ರೀತಿಯಲ್ಲಿಯೇ ಇದು ನಡೆದಿತ್ತು.

* ಇಡೀ ವಿಶ್ವ 12 ವಿಭಿನ್ನ ಕಣಗಳು ಹಾಗೂ ನಾಲ್ಕು ಶಕ್ತಿಗಳಿಂದ ಸೃಷ್ಟಿಯಾಗಿದೆ.

* ಕಣ ಭೌತಶಾಸ್ತ್ರದ ಪ್ರಮಾಣಬದ್ಧ ಮಾದರಿಯು ಈ ಕಣಗಳ ಸ್ವರೂಪವನ್ನು ವಿವರಿಸುತ್ತದೆ

* ನೂತನ ದೇವ ಕಣದ ಅಸ್ತಿತ್ವದ ಬಗ್ಗೆ ಶೇ 99.99ರಷ್ಟು ಭರವಸೆ ಸಿಕ್ಕಿದೆ

* ಹೊಸ ಕಣವು ಹಿಗ್ ಬೋಸನ್ ಕಣವನ್ನು ಹೋಲುತ್ತದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT