ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಜಡಾ ಅನು ಮೊಗದಲ್ಲಿ ಮೂಡಿದ ನಗು

Last Updated 4 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಆಕೆ~ಗೆ ಶನಿವಾರ ಲೋಕವನ್ನೇ ಜಯಿಸಿದ ಅನುಭವ. ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ನ್ಯಾಯಮೂರ್ತಿಗಳ ಪಕ್ಕದಲ್ಲಿ ನಿಲ್ಲಬಹುದು ಎಂಬ ಬಗ್ಗೆ ಕನಸು ಮನಸಿನಲ್ಲಿಯೂ ಯೋಚಿಸಿರದ ಆಕೆ ಅಕ್ಷರಶಃ ಪುಳಕಗೊಂಡಿದ್ದಳು.

ಇದು ಹೈಕೋರ್ಟ್‌ನಲ್ಲಿ ಕಂಡುಬಂದ ದೃಶ್ಯ. ಹೈಕೋರ್ಟ್ ಹಾಗೂ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ `ಮೆಗಾ ಲೋಕ ಅದಾಲತ್~ ಸಮಾರೋಪ ಸಮಾರಂಭದಲ್ಲಿ ಕಾಣಿಸಿತು.

ಅವರು ಹಿಜಡಾ `ಅನು~. ವಯಸ್ಸು 24. ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅಲ್ತಮಸ್ ಕಬೀರ್, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಸೇರಿದಂತೆ ನ್ಯಾಯಾಂಗದ ಗಣ್ಯ ವ್ಯಕ್ತಿಗಳ ಮುಂದೆ ವೇದಿಕೆಯ ಮೇಲೆ ಅನು ಬೀಗುತ್ತ ನಿಂತಿದ್ದರು. ಕಾರಣ, ಹೈಕೋರ್ಟ್‌ನಲ್ಲಿಯೇ ಕೆಲಸ ನೀಡುವ ಸಂಬಂಧ ನೇಮಕಾತಿ ಪತ್ರ ನೀಡಲು ಅವರನ್ನು ಕರೆದಿದ್ದರು. ಪತ್ರವನ್ನು ಧನ್ಯತಾ ಭಾವದಿಂದ ಅನು ಸ್ವೀಕರಿಸಿದರು.

`ಹೈಕೋರ್ಟ್ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಹಿಜಡಾ ಒಬ್ಬರಿಗೆ ಉದ್ಯೋಗ ನೀಡಲಾಗುತ್ತಿದೆ. ಅನು ಓದಿದ್ದು 6ನೇ ಇಯತ್ತೆ. ಆದುದರಿಂದ ಅವರಿಗೆ `ಗ್ರೂಪ್-ಡಿ~ ಹುದ್ದೆ (ಸಹಾಯಕಿ)  ನೀಡಲಾಗಿದೆ~ ಎಂದು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಬಿ.ಕೃಷ್ಣ ಭಟ್ ಅವರು `ಪ್ರಜಾವಾಣಿ~ ಗೆ ಮಾಹಿತಿ ನೀಡಿದರು.

`ಸಮಾಜದಿಂದ ಕಡೆಗಣನೆಗೆ ಒಳಗಾಗಿರುವ ಇಂತಹ ಜನರಿಗೆ ಅಧಿಕಾರ ನೀಡಬೇಕು ಎನ್ನುವುದು ನ್ಯಾ. ಸೇನ್ ಹಾಗೂ ನ್ಯಾ. ಕಬೀರ್ ಅವರ ಆಸೆಯಾಗಿತ್ತು. ಆದುದರಿಂದ ಒಂದು ವರ್ಷದಿಂದ ಹೈಕೋರ್ಟ್ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆಗ ಕೆಲವು ಹಿಜಡಾಗಳು ನಮ್ಮ ಗಮನಕ್ಕೆ ಬಂದರು. ಅವರಲ್ಲಿ ಶಾಲೆ ಕಲಿತಿರುವ ಕೆಲವರನ್ನು ಗುರುತಿಸಲಾಯಿತು. ಅನು ಕೂಡ ಅವರಲ್ಲಿ ಒಬ್ಬರು. ಉದ್ಯೋಗಕ್ಕೆ ಇವರು ಸೂಕ್ತರು ಎನಿಸಿತು. ಆದುದರಿಂದ ನೇಮಕ ಮಾಡಿಕೊಳ್ಳಲಾಯಿತು~ ಎಂದರು.

`ಸಹಾಯಕರ ಹುದ್ದೆಗೆ ತಿಂಗಳಿಗೆ ಐದು ಸಾವಿರ ರೂಪಾಯಿ ಸಂಬಳ ನೀಡಲಾಗುತ್ತಿದ್ದು, ಅದರಂತೆ ಅನು ಅವರಿಗೂ ನೀಡಲಾಗುವುದು~ ಎಂದು ಭಟ್ ಅವರು ವಿವರಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ನ್ಯಾ. ಕಬೀರ್ ಅವರು, `ಇಂತಹ ಜನರಿಗೆ ಎಲ್ಲ ಕ್ಷೇತ್ರಗಳಲ್ಲಿ ಉದ್ಯೋಗ ಒದಗಿಸುವ ಅಗತ್ಯವಿದೆ~ ಎಂದರು.

`ಜನರಲ್ಲಿ ತಮ್ಮ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿದೆ. ಆದುದರಿಂದ ಕೋರ್ಟ್ ಮೊರೆ ಹೋಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಲೋಕ್ ಅದಾಲತ್‌ನಲ್ಲಿ ರಾಜಿ ಮೂಲಕ ಪ್ರಕರಣ ಇತ್ಯರ್ಥಗೊಳ್ಳಲಿರುವ ಹಿನ್ನೆಲೆಯಲ್ಲಿ, ಕೋರ್ಟ್‌ಗಳ ಮೇಲಿನ ಒತ್ತಡ ಕಡಿಮೆಯಾಗುತ್ತಿದೆ. ಶೀಘ್ರದಲ್ಲಿ ಪ್ರಕರಣಗಳು ವಿಲೇವಾರಿಗೊಳ್ಳುತ್ತಿವೆ~ ಎಂದರು. ಕಳೆದ ಅಕ್ಟೋಬರ್‌ನಿಂದ ಜನವರಿ ವರೆಗೆ ನಡೆದ ಲೋಕ ಅದಾಲತ್‌ನಲ್ಲಿ ಇತ್ಯರ್ಥಗೊಂಡ ಅಪಘಾತ ಪ್ರಕರಣಗಳಲ್ಲಿ ಪರಿಹಾರ ಪಡೆದ ನಾಲ್ವರಿಗೆ ಸಾಂಕೇತಿಕವಾಗಿ ಚೆಕ್ ವಿತರಿಸಲಾಯಿತು.

ಈ ಲೋಕ ಅದಾಲತ್‌ನಲ್ಲಿ ಸುಮಾರು 80,000 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ ಎಂದು ನ್ಯಾ.ವಿಕ್ರಮಜಿತ್ ಸೇನ್ ತಿಳಿಸಿದರು.

ಕರ್ನಾಟಕ ರಾಜ್ಯ ನ್ಯಾಯಾಂಗ ಸೇವೆಗಳ ಪ್ರಾಧಿಕಾರದ ಕಾರ್ಯಕಾರಿ ಅಧ್ಯಕ್ಷ ಕೆ. ಶ್ರೀಧರರಾವ್, ಹೈಕೋರ್ಟ್ ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷ ನ್ಯಾ. ಎನ್.ಕೆ. ಪಾಟೀಲ್ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT