ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಟ್ನಾಳ ಶಾಲೆ: ಎಲ್ಲೆಲ್ಲೂ ಹಸಿರು

Last Updated 1 ಜನವರಿ 2014, 9:54 IST
ಅಕ್ಷರ ಗಾತ್ರ

ಮುನಿರಾಬಾದ್‌: ಇಲ್ಲಿಗೆ ಸಮೀಪ ಹಿಟ್ನಾಳ ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ಸುತ್ತಲಿನ ಆವರಣ ನೋಡಿದರೆ ಹಸಿರಿನಲ್ಲೇ ಹುಟ್ಟಿದೆ ಎಂಬ ಭಾವನೆ, ಒಳನಡೆದರೆ ಮಕ್ಕಳ ವಿವಿಧ ಪ್ರತಿಭೆಗಳ ಅನಾವರಣ.

1954ರಲ್ಲಿ ಅಂದಿನ ಸಚಿವ ಬಿ.ಡಿ.ಜತ್ತಿ ಅವರ ಅಮೃತ ಹಸ್ತದಿಂದ ಉದ್ಘಾಟನೆಯಾದ ಗ್ರಾಮದ ಹೆಮ್ಮೆಯ ಶಾಲೆ ಇದಾಗಿದ್ದು, ಸುತ್ತಲೂ ತೆಂಗು, ಮಾವು, ಚಿಕ್ಕು ಹಣ್ಣುಗಳ ಮರಗಳಿದ್ದು ಅವುಗಳ ಮಧ್ಯೆ ಸುಂದರವಾಗಿ ಕಾಣುವ ಶಾಲೆ ಅನಕ್ಷರಸ್ಥರಲ್ಲೂ ಅಕ್ಷರದ ಬಗ್ಗೆ ಅಭಿಮಾನ ಹುಟ್ಟಿಸುತ್ತದೆ. ಅಂದಿನ ಶಾಲೆಯ ಶಿಕ್ಷಕರಾದ ಮೋಹನಚಂದ ಕೀರಣಗಿ, ಗುಲಾಮ ಜಿಲಾನಿ ಇತರ ಶಿಕ್ಷಕರು ಮತ್ತು ಗ್ರಾಮದ ಶಿಕ್ಷಣ ಪ್ರೇಮಿಗಳು ಸೇರಿ ಸ್ವತಹ ಶ್ರಮದಾನ ಮಾಡಿ ಬಾವಿ ತೋಡಿ, ಮರಗಳನ್ನು ಬೆಳೆಸಿದ ಹೆಗ್ಗಳಿಕೆಯನ್ನು ಶಾಲೆ ಹೊಂದಿದೆ.

ಶಾಲೆಯ ಇತಿಹಾಸದಲ್ಲಿ ಎರಡು ಬಾರಿ ಉತ್ತಮ ಶಾಲೆ ಹಾಗೂ ಉತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿಯನ್ನು ಪಡೆದಿದೆ. ಉತ್ತಮ  ಎಸ್‌ಡಿಎಂಸಿ ಪ್ರಶಸ್ತಿ ಮತ್ತು ಕರ್ನಾಟಕ ಮೌಲ್ಯಾಂಕನ ಹಾಗೂ ಅಂಗೀಕರಣ ಪರಿಷತ್ತು(ಕೆಎಸ್‌ಕ್ಯೂಇಎ) ಬೆಂಗಳೂರು ಇವರು ನಡೆಸಿದ 3,5,7ನೇ ತರಗತಿ ಪರೀಕ್ಷೆಯಲ್ಲಿ ಜಿಲ್ಲೆಗೆ ಎರಡನೇ, ರಾಜ್ಯಕ್ಕೆ ಐದನೇ ಸ್ಥಾನ ಪಡೆದಿದೆ. ಶಾಲೆಯಲ್ಲಿನ ಗೋಡೆ ಬರಹದಲ್ಲಿ ಚಿತ್ರಿಸಲಾಗಿರುವ ಅನೇಕ ಚಿತ್ರಗಳು ಗಮನ ಸೆಳೆಯುತ್ತವೆ.

ಶಾಲಾ ಮಕ್ಕಳ ಪ್ರತಿಭೆಗೆ ಇಲ್ಲಿ ಕೊರತೆ ಇಲ್ಲ. ಮಕ್ಕಳು ಸಂಗೀತದ ಜೊತೆ ಹಾಡುವ ನಾಡಗೀತೆ ಮತ್ತು ರೈತಗೀತೆಗೆ ತಲೆದೂಗದವರಿಲ್ಲ. ಶಾಲೆಯ ಮೇಲುಸ್ತುವಾರಿಗೆ ಗ್ರಾಮದ ಸಮಿತಿಯ ಅಧ್ಯಕ್ಷ ಅಶೋಕ ಈಳಿಗೇರ, ವಲಯ ಸಂಯೋಜಕ ಹನುಮಂತಪ್ಪ ನಾಯಕ್‌, ಸಂಪನ್ಮೂಲ ವ್ಯಕ್ತಿ ಉಮೇಶ ಸುರ್ವೆ ಅವರ ಸೇವೆ ಅನನ್ಯ. ಈಚೆಗೆ ಶಾಲೆಗೆ ಭೇಟಿ ನೀಡಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಪೂಜಾರ್‌ ಮೆಚ್ಚುಗೆ ಸೂಚಿಸಿದ್ದನ್ನು ಶಿಕ್ಞಕರು ಮತ್ತು ಗ್ರಾಮಸ್ಥರು ನೆನೆಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT