ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಟ್ಲರನ ನೆಲದಿಂದ ಬಂದ ಅಮ್ಮ...

Last Updated 11 ಜನವರಿ 2011, 9:10 IST
ಅಕ್ಷರ ಗಾತ್ರ

ಇವರು ಡಾಕ್ಟರ್ ಹೆಲ್ಲಾ ಮುಂಡ್ರಾ. ಜರ್ಮನಿಯ ನೆಲದಲ್ಲಿ ಹುಟ್ಟಿ ಭಾರತಕ್ಕೆ ಸೊಸೆಯಾಗಿ ಬಂದವರು. ಅತಿ ಕ್ರೂರಿ ‘ನಾಜಿ’ ಹಿಟ್ಲರ್‌ನ ನಾಡಿನಿಂದ ಬಂದಿದ್ದರೂ ಅನಾಥ ಮಕ್ಕಳಿಗೆ ಕರುಣಾಮಯಿ ‘ಅಮ್ಮ’. ಇವರನ್ನು ಕಾಣಬೇಕಿದ್ದರೆ, ತೊದಲು ಮಾತಿನ ಮುದ್ದುಮುದ್ದಾದ ಮಕ್ಕಳನ್ನು ನೋಡಬೇಕೆಂದರೆ  ಹಲಸೂರಿನಲ್ಲಿರುವ ‘ಶಿಶು ಮಂದಿರ’ಕ್ಕೆ ಭೇಟಿ ನೀಡಬೇಕು.

ಭಾರತದ ಬಗ್ಗೆ ಬಾಲ್ಯದಿಂದಲೂ ಅದೇನೊ ವ್ಯಾಮೋಹ, ಮಮಕಾರ. ಇದುವೇ  ದೂರದ ಜರ್ಮನಿಯಿಂದ ಇಲ್ಲಿಗೆ ಬಂದು ಜನಸೇವೆ ಮಾಡಲು ಪ್ರೇರೇಪಿಸಿತು’ ಎಂದು ನೆನಪಿಸಿಕೊಳ್ಳುತ್ತಾರೆ ಡಾ. ಹೆಲ್ಲಾ.

‘ಇಲ್ಲಿನ ನಿರ್ಗತಿಕ ಮಕ್ಕಳು, ಬಡವರು, ಅವರಲ್ಲಿನ ಬುದ್ಧಿವಂತಿಕೆ ಮತ್ತು ಈ ದೇಶದ ಏಕತೆ ಒಂದು ವಿಸ್ಮಯವಾಗಿ ಕಾಣುತ್ತಿತ್ತು. ಜರ್ಮನಿಯಲ್ಲಿ ಭೇಟಿಯಾದ ರಾಜಸ್ತಾನ ಮೂಲದ ವೈದ್ಯ ದ್ವಾರಕಾದಾಸ್ ಮುಂಡ್ರಾ ಅವರನ್ನು ವಿವಾಹವಾದ ಬಳಿಕ ಭಾರತದ ಸೊಸೆಯಾಗಿ ಬರುವ ಸುವರ್ಣ ಅವಕಾಶ ಒದಗಿ ಬಂತು’ ಎಂದು ಹೇಳುವಾಗ ಅವರ ಕಣ್ಣುಗಳಲ್ಲಿ ಅದೇನೋ ಹೊಳಪು.

ವೈದ್ಯಕೀಯ ಕೋರ್ಸ್ ಮುಗಿಸಿ ಬೆಂಗಳೂರಿಗೆ ಬಂದು ವೃತ್ತಿ ಆರಂಭಿಸಿದರು  ಡಾ.ಹೆಲ್ಲಾ ಮತ್ತು ಡಾ.ದ್ವಾರಕಾ ದಾಸ್ ಮುಂಡ್ರಾ.‘ ಜೀವನದಲ್ಲಿ ಗಂಡನಿಂದಾಗಿ ಶುದ್ಧ ಸಸ್ಯಾಹಾರಿ ಆದೆ. ಅಪ್ಪಟ ಭಾರತೀಯ ಸಂಪ್ರದಾಯದ ಹೆಣ್ಣು ಮಗಳು ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ’ ಅನ್ನುವ ಹೆಲ್ಲಾ ದಂಪತಿಗೆ ಇಬ್ಬರು ಮಕ್ಕಳು.  ಮಗ ದೇವದಾಸ್ ಮುಂಡ್ರಾ ಆರ್ಕಿಟೆಕ್ಟ್ ಮತ್ತು ಮಗಳು ಯಾಮಿನಿ ನಾಗರಾಜ್ ವೈದ್ಯೆ. ಪತಿಯೊಂದಿಗೆ ಜರ್ಮನಿಯಲ್ಲಿ ನೆಲೆಸಿದ್ದಾರೆ.

ಶಿಶು ಮಂದಿರ: ಬೆಂಗಳೂರಿನಲ್ಲಿ ನರ್ಸಿಂಗ್ ಹೋಂ ಪ್ರಾರಂಭಿಸಿದ ಸಂದರ್ಭದಲ್ಲಿ ಉಚಿತವಾಗಿ ವೈದ್ಯಕೀಯ ಸೇವೆಯನ್ನು ನೀಡುತ್ತಿದ್ದರು. ಅವರ ಬಳಿ ಒಬ್ಬ ಮಹಿಳೆ ಕೆಲಸಕ್ಕಿದ್ದರು. ಆಕೆ ತನ್ನ ಪುಟ್ಟ ಮಗುವನ್ನು ಮನೆಯಲ್ಲಿ ಬೀಗ ಹಾಕಿ ಬಿಟ್ಟು ಬರುತ್ತಿದ್ದರು. ಒಂದು ದಿನ ಆ ಮಗು ತುಂಬಾ ಅಸ್ವಸ್ಥಗೊಂಡಿತ್ತು. ಅದನ್ನು ನೋಡಿ  ಹೆಲ್ಲಾ ಅವರ ಮನಸ್ಸಿಗೆ ನೋವಾಯಿತು.  ಅದೇ ಪ್ರೇರಣೆಯಿಂದ 1983ರಲ್ಲಿ ಶಿಶು ಮಂದಿರ ಆರಂಭಿಸಿದರು.

ಕೀಳರಿಮೆ, ಸಂಕೋಚ, ನಾಚಿಕೆ ಸ್ವಭಾವದ ಮಕ್ಕಳು, ಬುದ್ಧಿಮಾಂದ್ಯ ಮಕ್ಕಳು ಇಲ್ಲಿ ಚುರುಕುತನದಿಂದ ಜಾಣರಾಗುತ್ತಾರೆ. ಉತ್ತಮ ವ್ಯಕ್ತಿತ್ವವುಳ್ಳವರಾಗಿ ರೂಪಗೊಳ್ಳಲು ಬೇಕಾದ ಆತ್ಮ ವಿಶ್ವಾಸ, ಕೌಟುಂಬಿಕ ಸಾಮಾಜಿಕ ಜವಾಬ್ದಾರಿ ಇತ್ಯಾದಿ ಗುಣಗಳನ್ನು ತಮ್ಮಲ್ಲಿ ಅಳವಡಿಸಿಕೊಳ್ಳುತ್ತಾರೆ. ಇದು ಇಲ್ಲಿನ ವೈಶಿಷ್ಟ್ಯ.

ಮಕ್ಕಳಿಗಾಗಿ ಶಾಲೆ: 1990 ರ ನಂತರ ಖಾಸಗಿ ಪ್ರಾಯೋಜಕರ ನೆರವು ದೊರೆಯಿತು. ಇದರಿಂದ ಹೆಚ್ಚಿನ ಮಕ್ಕಳ ಬಗ್ಗೆ ಕಾಳಜಿ ವಹಿಸಲು ಸಾಧ್ಯವಾಯಿತು. ಮಕ್ಕಳ ಸಂಖ್ಯೆ 30 ಕ್ಕೆ ಏರಿತು. ಆದರೆ ಸಮಸ್ಯೆ ಎಂದರೆ ಅಂದು ಈ  ಮಕ್ಕಳು ಸಾಮಾನ್ಯ ಶಾಲಾ ಪದ್ಧತಿಗೆ ಸರಿಸಮಾನವಾಗಿ ನಿಲ್ಲಲು ಅಸಮರ್ಥರಾಗಿದ್ದರು ಇದಕ್ಕಾಗಿ ’ಶಿಶುಮಂದಿರ’ದಿಂದ ಶಾಲೆಯೂ ಆರಂಭವಾಯಿತು.

1993 ರಲ್ಲಿ ಪ್ರಯೋಗಾತ್ಮಕ ಆಧಾರದ ಮೇಲೆ ಒಂದು ಚಿಕ್ಕ ಶಾಲೆ ಆರಂಭವಾಯಿತು. ಇಲ್ಲಿ ಶಿಶು ಶಿಕ್ಷಣ ವಿಶೇಷ ಪದ್ಧತಿಯನ್ನು ಅನುಸರಿಸಲಾಯಿತು. ಒಂದು ವರ್ಷದಲ್ಲಿ ಈ ಪ್ರಯೋಗವು ಅಭೂತಪೂರ್ವ ಯಶಸ್ವಿ ಪಡೆಯಿತು. ಮಕ್ಕಳ ಸಂಖ್ಯೆ ಹೆಚ್ಚಾದಾಗ ಪ್ರತ್ಯೇಕ ಶಾಲಾಕಟ್ಟಡದ  ಬೇಕಾಯಿತು.

ಬಹಳ ಪರಿಶ್ರಮದಿಂದ ಬೆಂಗಳೂರಿನ ಹೊರವಲಯವಾದ ಕಿತ್ತಗನೂರು ಮುಖ್ಯರಸ್ತೆಯ ಬಳಿ 2000ನೇ ವರ್ಷದಲ್ಲಿ ’ಶಿಶು ಮಂದಿರ ಶಿಕ್ಷಣ ಕೇಂದ್ರ’ ಎಂಬ ಹೆಸರಿನಲ್ಲಿ ಒಂದು ಶಾಲಾ ಕಟ್ಟಡ ಸ್ಥಾಪನೆಯಾಯಿತು. ಇಲ್ಲಿ ಸುಸಜ್ಜಿತ ಶಾಲಾ ಕೊಠಡಿಗಳು,  ಪ್ರಯೋಗಾಲಯಗಳು, ಗ್ರಂಥಾಲಯಗಳು, ಗಣಕಯಂತ್ರಗಳು, ಸಂಗೀತ, ಕಲೆ ಮತ್ತು ಕ್ರೆಡೆಗಳಿಗಾಗಿ ಪ್ರತ್ಯೇಕ ಕೊಠಡಿಗಳ ವ್ಯವಸ್ಥೆ ಇದೆ.

ವೃತ್ತಿರಂಗ: ಪ್ರತಿ ಮಗುವೂ ಶೈಕ್ಷಣಿಕವಾಗಿ  ವೃತ್ತಿಪರ ಮುಂದುವರಿಯಲು ಅವಶ್ಯವಾದ 10ನೇ ತರಗತಿಯ ಪ್ರಮಾಣ ಪತ್ರವನ್ನು ಯಶಸ್ವಿಯಾಗಿ ಗಳಿಸುವಂತೆ ಮಾಡುವುದೆ ಇದರ ಮೂಲ ಗುರಿ. ಫಲಿತಾಂಶವೂ ಕೂಡ ನಿರೀಕ್ಷೆಗಿಂತ ಮಿಗಿಲಾಗಿ ಬಂದಿದೆ. ಈಗಾಗಲೇ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಸಂಸ್ಥೆಯ ಸಹಾಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇಬ್ಬರು ಶುಶ್ರೂಷಕಿಯರಾಗಿದ್ದಾರೆ.

ಉದ್ಯೋಗ ತರಬೇತಿ: ಜನವರಿ 2008 ರಲ್ಲಿ  ರಜತ ಮಹೋತ್ಸವ ಅಂಗವಾಗಿ ‘ಔದ್ಯೋಗಿಕ ತರಬೇತಿ ಕೇಂದ್ರ’ ಆರಂಭವಾಯಿತು. ಇದರಲ್ಲಿ ಕಂಪ್ಯೂಟರ್, ಎಲೆಕ್ಟ್ರಿಕಲ್, ಮರಗೆಲಸ, ನೀರುಪೂರೈಕೆ, ಹೊಲಿಗೆ ಶ್ರೇಣಿ ಮತ್ತು ಫಿಟ್ಟರ್ ತರಬೇತಿ ಪ್ರಾರಂಭಿಸಲಾಗಿದೆ.  ಪ್ರತಿ  ಬ್ಯಾಚ್‌ನಲ್ಲಿ 30 ಬಡ, ಶಾಲೆ ಬಿಟ್ಟ ವಿದ್ಯಾರ್ಥಿಗಳು ಉಚಿತ ತರಬೇತಿಯನ್ನು ಪಡೆಯುತ್ತಿದ್ದಾರೆ.

ಶೈಕ್ಷಣಿಕ ಕೇಂದ್ರದ ಹೊರತಾಗಿ ಶಿಶು ಮಂದಿರವು ಗ್ರಾಮ ವಿಕಾಸ ಯೋಜನೆಯ ಅಡಿಯಲ್ಲಿ ಮಕ್ಕಳ ಕುಟುಂಬಗಳಿಗೆ ಚಿಕ್ಕ ಮನೆ ನಿರ್ಮಿಸಿಕೊಳ್ಳಲು 60 ಸಾವಿರ ರೂ ವರೆಗೂ ನೆರವು ಒದಗಿಸಿಕೊಡುತ್ತಿದೆ. ಕಿತ್ತಗನೂರು ಹಳ್ಳಿಯಲ್ಲಿ ಶಿಶುವಿಹಾರಕ್ಕಾಗಿ ಸಮುದಾಯ ಭವನವನ್ನು ನಿರ್ಮಿಸಲಾಗಿದೆ. ಇದಲ್ಲದೆ ಮಧ್ಯದಲ್ಲಿ ಶಾಲಾ ವಿದ್ಯಾಭ್ಯಾಸವನ್ನು ಮೊಟುಕುಗೊಳಿಸಿದ ಮಕ್ಕಳಿಗಾಗಿ ಸಂಜೆ ಕಲಿಕಾ ಕೇಂದ್ರಗಳಿವೆ.

 ‘ಶಿಶುಮಂದಿರ’ಕ್ಕೆ  ಆರ್ಥಿಕ ನೆರವು, ಮಕ್ಕಳ ದತ್ತು ಸ್ವೀಕಾರ, ಗ್ರಾಮ ವಿಕಾಸ ಯೋಜನೆಗೆ ನೆರವು ಇತ್ಯಾದಿಗಳ ಮೂಲಕ ಸಾರ್ವಜನಿಕರು ಡಾ. ಹೆಲ್ಲಾ ಅವರ ಪ್ರಯತ್ನದಲ್ಲಿ ಕೈ ಜೋಡಿಸಬಹುದು.

ವಿಳಾಸ: ಶಿಶುಮಂದಿರ, ನಂ.17/11 ಕೇಂಬ್ರಿಜ್ ರಸ್ತೆ, ಹಲಸೂರು. ದೂ: 99162 09820. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT