ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿತ ರಕ್ಷಣೆಗೆ ಮುಂದಾಗಲಿ

Last Updated 2 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ತಮಿಳುನಾಡಿಗೆ ಕಾವೇರಿ ನೀರು ಹರಿಯ ಬಿಡುವ ವಿಷಯ ಈಗ ಕಾವೇರಿದ್ದು, ಬೆಂಗಳೂರು- ಮೈಸೂರು ಹೆದ್ದಾರಿ ಬಂದ್ ಆಗಿದೆ. ರೈಲು ಸಂಚಾರ ಅಸ್ತವ್ಯಸ್ತವಾಗಿದೆ. ನಾಲ್ಕು ಜಿಲ್ಲೆಗಳಲ್ಲಿ ಪರಿಸ್ಥಿತಿ ದಿನೇದಿನೇ ಉದ್ವಿಗ್ನವಾಗುತ್ತಿದೆ. ರಾಜಕೀಯ ನಾಯಕರ ವಿಭಿನ್ನ ನಿಲುವುಗಳಿಂದಾಗಿ, ಜನಸಾಮಾನ್ಯರು ಈ ವಿವಾದದ ಬುಗುರಿಗಳಾಗಬೇಕಾಗಿರುವುದು ದುರ್ದೈವ. ನಾಲ್ಕು ದಶಕಗಳಿಂದ ರಾಜ್ಯದ ಎಲ್ಲ ಮುಖ್ಯಮಂತ್ರಿಗಳನ್ನೂ ಅಗ್ನಿಪರೀಕ್ಷೆಗೆ ಒಡ್ಡಿರುವ ಕಾವೇರಿ ನೀರಿನ ವಿವಾದಕ್ಕೆ ಒಪ್ಪಿತ ಸೂತ್ರವೊಂದನ್ನು ಕಂಡುಕೊಳ್ಳಲಾಗದೆ ಕಾವೇರಿ ನದಿ ಪ್ರಾಧಿಕಾರ ಪರದಾಡುತ್ತಿರುವುದು ಕೂಡ ವಿಸ್ಮಯ. ಪ್ರಧಾನಮಂತ್ರಿಗಳ ಅಧ್ಯಕ್ಷತೆಯ ಕಾವೇರಿ ನದಿ ಪ್ರಾಧಿಕಾರದ ಸಭೆ ಒಂಬತ್ತುವರ್ಷಗಳ ಅಂತರದ ನಂತರ ಸಭೆ ಸೇರಿತ್ತು. ಮಳೆ ಕೊರತೆಯಿಂದ ತತ್ತರಿಸುತ್ತಾ, ತೀವ್ರ ಬರ ಎದುರಿಸುತ್ತಿರುವ ಸಮಯದಲ್ಲಿ ಸಮರ್ಥವಾಗಿ ನೀರಿನ ಅಭಾವ, ನೀರು ಬಿಡದಿರಲು ಸಕಾರಣವನ್ನು ಸಮರ್ಥವಾಗಿ ಮಂಡಿಸುವ ಸುವರ್ಣಾವಕಾಶ ಕರ್ನಾಟಕಕ್ಕೆ ಇತ್ತು. ಮೂರು ವಾರಗಳ ಕಾಲ ಪ್ರತಿನಿತ್ಯ 9000 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡಬೇಕೆಂಬ ತೀರ್ಪನ್ನು ಪ್ರಧಾನಿಯವರು ನೀಡಿದಾಗ, ರಾಜ್ಯದಲ್ಲಿ ನೀರಿನ ಕೊರತೆ ಇರುವ ಸಂಗತಿಯನ್ನು ಪ್ರಧಾನಿಯವರಿಗೂ, ಸಭೆಯಲ್ಲಿ ಉಪಸ್ಥಿತರಿದ್ದ ಇತರ ಮುಖ್ಯಮಂತ್ರಿಗಳಿಗೂ ಮನದಟ್ಟು ಮಾಡಿಕೊಡುವ ಅವಕಾಶ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರಿಗಿತ್ತು. ಆದರೆ ಅದನ್ನು ಮರೆತು ಅವರು ಸಭಾತ್ಯಾಗ ಮಾಡುವ ಮೂಲಕ `ಹೀರೋ~ ಆಗಲು ಹೊರಟರು. ಇದಕ್ಕಿಂತ ದೊಡ್ಡ ಆಭಾಸ ಮತ್ತೊಂದಿಲ್ಲ.  ನಾವು ಸಭಾತ್ಯಾಗ ಮಾಡಲಿಲ್ಲ ಎನ್ನುವ ಸ್ಪಷ್ಟೀಕರಣವನ್ನು ಈಗ ನೀಡುವುದೂ ಕೂಡ ಹಾಸ್ಯಾಸ್ಪದ ನಡವಳಿಕೆ. ಇದರಿಂದಾಗಿ ಸುಪ್ರೀಂಕೋರ್ಟ್‌ನಿಂದ ಪ್ರಹಾರವೇ ಆಗುವ ಸ್ಥಿತಿ ಬಂದಿತು.

 ಪ್ರಧಾನಿಯವರೂ ಕೂಡ ಪರಿಸ್ಥಿತಿಯ ಅಧ್ಯಯನ, ಎರಡೂ ಪಕ್ಷಗಳ ವಾದ ಎಲ್ಲವನ್ನೂ ಕೂಲಂಕಷವಾಗಿ ಅಧ್ಯಯನ ಮಾಡಿ, ಸಮರ್ಥ ತೀರ್ಪು ಕೊಟ್ಟಂತೆ ಮೇಲ್ನೋಟಕ್ಕೆ ಕಾಣುವುದಿಲ್ಲ. ತೀರ್ಪಿಗೆ ಯಾವ ಮಾನದಂಡವನ್ನು ಅಳವಡಿಸಿಕೊಂಡರು ಎನ್ನುವುದು ಸ್ಪಷ್ಟವಿಲ್ಲ. ಒಂದು ರೀತಿಯಲ್ಲಿ ಅವೈಜ್ಞಾನಿಕ ತೀರ್ಪು. ಪ್ರಧಾನಮಂತ್ರಿಗಳು ಎರಡೂ ದಡದ ಮೇಲೆ ಕಾಲಿಟ್ಟಿದ್ದಾರೆ. ರಾಜ್ಯ ಸರ್ಕಾರ, ತೀರ್ಪಿನ ಮರುಪರಿಶೀಲನೆಗೆ ಮನವಿ ಮಾಡಿಕೊಳ್ಳುವುದು, ಮತ್ತೊಮ್ಮೆ ಪರಿಣತರ ತಂಡ ಕಳುಹಿಸಿ ಪರಿಸ್ಥಿತಿಯ ಅವಲೋಕನ ಮಾಡಿಸುವಂತೆ ಮನವಿ ಮಾಡುವುದು ಸರಿಯಾದ  ನಿರ್ಧಾರವಾಗಬಹುದು.

ರಾಜಕಾರಣಿಗಳೂ ಕೂಡ ಈ ಸಮಸ್ಯೆಯನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಿಲ್ಲ. ದಿನಕ್ಕೊಂದು ಹೇಳಿಕೆ ಕೊಡುವ ಮೂಲಕ ಅಸಹಾಯಕತೆಯನ್ನು ತೋರ್ಪಡಿಸಿಕೊಳ್ಳುತ್ತಿದ್ದಾರೆಯೇ ವಿನಾ ದಕ್ಷತೆ ತೋರುತ್ತಿಲ್ಲ. ಇಲ್ಲಿ ರಾಜಕಾರಣ ಬೇಡ. ಇದು ರಾಜ್ಯದ ರೈತರ ಹಿತಾಸಕ್ತಿಯನ್ನು ರಕ್ಷಿಸಬೇಕಾದ ವಿಷಯ. ಕೆಲವು ರಾಜಕಾರಣಿಗಳು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ  ಪ್ರಹಸನ ಮಾಡುತ್ತಿರುವದೂ ಕೂಡ ಪಲಾಯನವಾದವಲ್ಲದೆ ಬೇರಲ್ಲ. ಸಮಸ್ಯೆ ಕಗ್ಗಂಟಾದಾಗ ಜವಾಬ್ದಾರಿ ಮೆರೆಯಬೇಕಾದ ಜನಪ್ರತಿನಿಧಿ, ರಾಜೀನಾಮೆ ಮೂಲಕ ನುಣುಚಿಕೊಳ್ಳುವ ಯತ್ನ ಮಾಡಬಾರದು. ನೀರಿನ ವಿಷಯವನ್ನು ಭಾವನಾತ್ಮಕವಾಗಿ ಪರಾಕಾಷ್ಠೆಗೆ ತೆಗೆದುಕೊಂಡು ಹೋಗುವುದಕ್ಕಿಂತ ಎರಡೂ ರಾಜ್ಯಗಳ ರೈತರ ಹಿತ ದೃಷ್ಟಿಯಿಂದ ಪರಿಹಾರ ಸೂತ್ರವೊಂದನ್ನು ಕಂಡುಕೊಳ್ಳುವುದು ಹೆಚ್ಚು ಯುಕ್ತವಾಗಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT