ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿತ್ತಲ ಹೂ ಸಿಂಧು

Last Updated 17 ಮೇ 2012, 19:30 IST
ಅಕ್ಷರ ಗಾತ್ರ

ಮನಸೆಳೆಯುವ ಮೋಹಕ ನಗುವಿನ ಹುಡುಗಿ ಸಿಂಧು ಲೋಕನಾಥ್. ಮಡಿಕೇರಿ ಮೂಲದ ಸಿಂಧು ಹುಟ್ಟಿ ಬೆಳೆದದ್ದೆಲ್ಲಾ `ಉದ್ಯಾನನಗರಿ~ಯಲ್ಲಿಯೇ. ಬಯೋಟೆಕ್ನಾಲಜಿಯಲ್ಲಿ ಎಂಎಸ್ಸಿ ಮುಗಿಸಿರುವ ಸಿಂಧು ಕಲಾವಿದೆಯಾಗಿ ಹೆಸರು ಮಾಡಬೇಕು ಎಂದುಕೊಂಡಿದ್ದಾರೆ.

ಅನೀಶ್ ಜೊತೆ `ನಮ್ ಲೈಫಲಿ~, ಅಜಯ್ ರಾವ್ ಜೊತೆ `ಜೈ ಜರಂಗಬಲಿ~, `ಸ್ಯಾಂಡಲ್‌ವುಡ್ ಸರಿಗಮ~, `ಡ್ರಾಮಾ~ ಅವರು ನಟಿಸುತ್ತಿರುವ ಸಿನಿಮಾಗಳು.

ನಿಮ್ಮ ಹೆಸರಿನೊಂದಿಗೆ ಇರುವ ಲೋಕನಾಥ್ ಯಾರು?
ನನ್ನ ತಂದೆ. ಉದ್ಯಮದಲ್ಲಿ ಸಿಂಧು ಹೆಸರಿನವರು ತುಂಬಾ ಜನ ಇರುವ ಕಾರಣ ನಾನು ಸಿಂಧು ಲೋಕನಾಥ್ ಆದೆ.

ನಟಿಯಾಗಬೇಕೆಂದು ಯಾಕನಿಸಿತು?
ಚಿಕ್ಕ ಹುಡುಗಿಯಾಗಿದ್ದಾಗ ನನಗೆ ನೃತ್ಯ ಮಾಡುವುದು ಇಷ್ಟವಾಗುತ್ತಿತ್ತು. ಎಲ್ಲೆಂದರಲ್ಲಿ ಕುಣಿಯುತ್ತಿದ್ದೆ. ಸಿನಿಮಾ ಪತ್ರಿಕೆಗಳ ಚಿತ್ರಗಳನ್ನು ಕತ್ತರಿಸಿ ನೋಟ್ ಪುಸ್ತಕಗಳಲ್ಲಿ ಅಂಟಿಸಿಕೊಳ್ಳುತ್ತಿದ್ದೆ. ಅಮ್ಮ ಬೈಯ್ತಾ ಇದ್ರು.
 
`ಶ್ಯಾಡೋಸ್~ ನೃತ್ಯ ತಂಡದಲ್ಲಿ ಗೆಳತಿ ಭಾವನಾ ರಾವ್ (ಗಾಳಿಪಟ) ಪರಿಚಯವಾಯಿತು. ನಾನು ಕೂಡ ಸಿನಿಮಾದಲ್ಲಿ ನಟಿಸಬೇಕೆನಿಸಿತು. ಅದಕ್ಕಿಂತ ಮೊದಲು ಜಾಹೀರಾತುಗಳಲ್ಲಿ ನಟಿಸಿದ್ದೆ. ರಾಜೇಶ್ ಶೆಟ್ಟಿ ಸಹಾಯದಿಂದ ಪ್ರಯತ್ನಿಸಿದಾಗ `ಪರಿಚಯ~ ಚಿತ್ರದಲ್ಲಿ ಸಣ್ಣ ಅವಕಾಶ ಸಿಕ್ಕಿತು.
 
ಆನಂತರ ಅವಕಾಶಗಳು ಬರಲಿಲ್ಲ. ಮನೆಯಲ್ಲಿ ಕುಳಿತು ತುಂಬಾ ಸಿನಿಮಾಗಳನ್ನು ನೋಡಿ ನನ್ನ ನಟನೆಯನ್ನು ಸುಧಾರಿಸಿಕೊಂಡೆ. ಎರಡು ತಮಿಳು ಮತ್ತು ಎರಡು ತೆಲುಗು ಚಿತ್ರಗಳಲ್ಲಿ ನಟಿಸಿ ಬಂದೆ. `ಲೈಫು ಇಷ್ಟೇನೆ~ ಚಿತ್ರದಲ್ಲಿ ಅವಕಾಶ ಸಿಕ್ಕಿತು.

`ಡ್ರಾಮಾ~ ಚಿತ್ರದ ಅನುಭವ ಹೇಗಿತ್ತು?
ಒಂದು ಶೆಡ್ಯೂಲ್ ಮುಗೀತು. ಹಾಡುಗಳು ಬಾಕಿ ಇವೆ. ಅದರಲ್ಲಿ ನನ್ನದು ಮೂಕಿ ಪಾತ್ರ. ಮಜವಾಗಿದೆ. ನೀನಾಸಂ ಸತೀಶ್ ನನ್ನ ಜೋಡಿ. ಲಂಗ - ದಾವಣಿ, ಜಡೆ ಹಾಕಿಕೊಂಡಿರ‌್ತೀನಿ. ತುಂಬಾ ಎಂಜಾಯ್ ಮಾಡಿದೆ.

ಎಂಥ ಪಾತ್ರಗಳಲ್ಲಿ ನಟಿಸಲು ಇಷ್ಟ?
ಸೈಕೋ ಪಾತ್ರದಲ್ಲಿ ನಟಿಸುವಾಸೆ ಇದೆ. ಹಾಗೆಯೇ ದ್ವಂದ್ವ ವ್ಯಕ್ತಿತ್ವದ ಪಾತ್ರವನ್ನು ನಿರ್ವಹಿಸುವಾಸೆ. ನನ್ನ ಪಾತ್ರ ತೆರೆಯ ಮೇಲೆ ಅರ್ಧ ಗಂಟೆ ಬಂದು ಹೋದರೂ ಸರಿ ನಾನೊಬ್ಬ ಕಲಾವಿದೆ ಎಂದು ಜನ ಗುರುತಿಸಬೇಕು.

ನನ್ನ ವೃತ್ತಿ ಬದುಕಿನಲ್ಲಿ ನಾನು ಆರೇ ಆರು ಸಿನಿಮಾ ಮಾಡಿದರೂ ಸರಿ ಅವೆಲ್ಲಾ ಒಳ್ಳೆಯ ಪಾತ್ರಗಳಾಗಿರಬೇಕು. ಒಳ್ಳೆಯ ಕತೆ, ಒಳ್ಳೆಯ ನಿರ್ದೇಶಕರು, ಒಳ್ಳೆ ಪಾತ್ರ ಇದಿಷ್ಟೇ ನನ್ನ ಬೇಡಿಕೆ.

ನನ್ನನ್ನು ನೋಡಿದರೆ ನಾನು ಸವಾಲಿನ ಪಾತ್ರ ನಿರ್ವಹಿಸಬಲ್ಲೆ ಎಂಬ ನಂಬಿಕೆ ಯಾರಿಗೂ ಬರುವುದಿಲ್ಲ. ಯಾಕೆಂದರೆ ನಾನು ತುಂಬಾ ನಾಚಿಕೆ ಸ್ವಭಾವದವಳು. ಹಾಗೆ ನನ್ನನ್ನು ಯಾರೂ ಜಡ್ಜ್ ಮಾಡದೇ ವಿಶ್ವಾಸ ಇಟ್ಟು ಅವಕಾಶ ನೀಡಿದರೆ ಎಂಥ ಪಾತ್ರ ಬೇಕಾದರೂ ನಿಭಾಯಿಸಬಲ್ಲೆ.

ಗ್ಲಾಮರ್ ರಹಿತ ಪಾತ್ರ ಮಾಡುವಿರಾ?
ಗಂಟೆಗಟ್ಟಲೆ ಕುಳಿತು ಮೇಕಪ್ ಹಾಕಿಸಿಕೊಳ್ಳುವುದು ಎಂದರೆ ನನಗೆ ಬೇಜಾರು. ಮೇಕಪ್ ಇಲ್ಲದ ಪಾತ್ರ ತುಂಬಾ ಇಷ್ಟ. ಅದರ ಜೊತೆಗೆ ಗ್ಲಾಮರ್ ಪಾತ್ರಗಳೂ ಇಷ್ಟ. ಚಿತ್ರರಂಗದಲ್ಲಿ ಗ್ಲಾಮರ್ ಎಂದರೆ ವಲ್ಗರ್ ಅಂದುಕೊಂಡಿದ್ದಾರೆ. ಗ್ಲಾಮರ್ ಎನ್ನುವುದು ಬ್ಯೂಟಿಯ ಮುಂದಿನ ಹಂತ ಎನ್ನುವುದು ನನ್ನ ಅಭಿಪ್ರಾಯ. ಆದರೆ ನಾನು ಎಕ್ಸ್‌ಪೋಸ್ ಮಾಡಲ್ಲ.

ಮನೆಯಲ್ಲಿ ನಿಮ್ಮ ವೃತ್ತಿ ಬದುಕಿಗೆ ಬೆಂಬಲ ಸಿಕ್ಕಿದೆಯೇ?
ಆರಂಭದಲ್ಲಿ ಒಪ್ಪಿಗೆ ನೀಡಿರಲಿಲ್ಲ. ನಾನು ಹಟ ಬಿಡಲಿಲ್ಲ. ನಾನು ಎಂ.ಎಸ್ಸಿಯನ್ನು ಆಸಕ್ತಿಯಿಂದ ಮುಗಿಸಿದೆ. ಉದ್ಯೋಗಕ್ಕೆ ಸೇರಬೇಕು ಎಂಬ ಆಸೆ ನನಗೇನೂ ಇರಲಿಲ್ಲ.
 
ಅದನ್ನೇ ಮನೆಯಲ್ಲೂ ಹೇಳಿದೆ. ನನಗೆ ಇಷ್ಟವಾದದ್ದನ್ನು ಮಾಡಲು ಬಿಡಿ. ನೀವು ಒಪ್ಪಿಗೆ ನೀಡಿದರೂ, ನೀಡದಿದ್ದರೂ ನಾನು ಸಿನಿಮಾಗೆ ಹೋಗ್ತೀನಿ ಎಂದು ಸ್ವೀಟಾಗಿ ಹೇಳಿದೆ. ಅವರು ಒಪ್ಪಿದರು.

ನಿಮಗೆ ಸಿಕ್ಕ ಅತ್ಯುತ್ತಮ ಕಾಂಪ್ಲಿಮೆಂಟ್...
`ಪರಿಚಯ~ ಚಿತ್ರದಲ್ಲಿ ನೀನು ಚೆನ್ನಾಗಿ ಕಾಣ್ತೀಯಾ ಎಂದಿದ್ದರು. `ಲೈಫು ಇಷ್ಟೇನೆ~ ಚಿತ್ರದಲ್ಲಿ ಚೆನ್ನಾಗಿ ನಟಿಸ್ತೀಯಾ ಎಂದರು. ಎರಡನೆಯ ಕಾಂಪ್ಲಿಮೆಂಟ್ ಇಷ್ಟವಾಯ್ತು. ನನ್ನನ್ನು ರಿಜೆಕ್ಟ್ ಮಾಡಿದ ಎಷ್ಟೋ ಜನ `ಲೈಫು ಇಷ್ಟೇನೆ~ ನಂತರ ನನಗೆ ಅವಕಾಶಗಳನ್ನು ನೀಡಿದರು.

ಫಿಟ್ ಆಗಿರೋಕೆ ಏನು ಮಾಡ್ತೀರಿ?
ಅನ್ನ ತಿನ್ನಲ್ಲ. ಚಪಾತಿ ಜಾಸ್ತಿ ತಿನ್ನುತ್ತೇನೆ, ಜ್ಯೂಸ್ ಜಾಸ್ತಿ ಕುಡೀತೀನಿ. ಮನೆಯಲ್ಲಿಯೇ ವರ್ಕ್‌ಔಟ್ ಮಾಡ್ತೀನಿ. ಶಾಲೆಯಲ್ಲಿ ಇದ್ದಾಗಿನಿಂದಲೂ ನಾನು ಅಥ್ಲೀಟ್. ಚಿಕ್ಕಂದಿನಿಂದಲೂ ಈಜುವುದು ನನಗಿಷ್ಟ. ಕಪ್ಪಗಾಗ್ತೀನಿ ಎಂದು ಈಗ ಈಜಲ್ಲ ಅಷ್ಟೇ.

ಎಂಥ ಸಿನಿಮಾಗಳು ಇಷ್ಟವಾಗುತ್ತವೆ?
ನನಗೆ ರಾಜ್‌ಕುಮಾರ್- ಮಂಜುಳಾ ನಟಿಸಿರುವ `ಸಂಪತ್ತಿಗೆ ಸವಾಲ್~ ಚಿತ್ರ ಎಂದರೆ ತುಂಬಾ ಇಷ್ಟ. ಅದರಲ್ಲಿ ಮಂಜುಳಾ ಪಾತ್ರ ಬಿಂದಾಸಾಗಿದೆ. ನಾನು ನಿಜಬದುಕಿನಲ್ಲಿ ಯಾರಿಗೂ ಬೈಯಲ್ಲ. ಸಿನಿಮಾದಲ್ಲಾದರೂ ಅಂಥ ಪಾತ್ರ ಸಿಕ್ಕಿ ಬೈಯುವಂತಾದರೆ ಚೆನ್ನ.

ಸಿನಿಮಾರಂಗದಲ್ಲಿ ಆದ ಕೆಟ್ಟ ಅನುಭವ?
ತುಂಬಾನೇ ಇವೆ. ನಾನು ಈ ಹಂತಕ್ಕೆ ಬರಲು ತುಂಬಾ ಸಮಸ್ಯೆಗಳನ್ನು ಎದುರಿಸಿದ್ದೇನೆ. ಆದರೆ ಒಳ್ಳೆಯ ದಾರಿಯಲ್ಲಿಯೇ ನನ್ನ ಗುರಿ ಸಾಧಿಸಬೇಕು ಎಂದುಕೊಂಡ್ದ್ದಿದೆ. ಒಳ್ಳೆಯದಾಗಿದೆ. ನಾನು ತಾಳ್ಮೆಯಿಂದ ಒಳ್ಳೆಯ ದಿನಗಳಿಗಾಗಿ ಕಾದೆ. ಇಂದಿಗೂ ಸಿನಿಮಾರಂಗದಲ್ಲಿ ನನಗೆ ಯಾರೂ ಗೆಳೆಯರಿಲ್ಲ.

ಬಿಡುವಿದ್ದಾಗ ಏನು ಮಾಡ್ತೀರಿ?
ಪ್ರವಾಸ ಹೋಗುವುದೆಂದರೆ ಇಷ್ಟ. ಜಾಸ್ತಿ ದುಡ್ಡು ಬಂದ ಮೇಲೆ ವರ್ಲ್ಡ್ ಟೂರ್‌ಗೆ ಹೋಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT