ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿನ್ನಡೆಯ ತೀರ್ಪು

Last Updated 12 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಸಲಿಂಗ ಕಾಮ ಅಪರಾಧ ಎಂದು ಸುಪ್ರೀಂ ಕೋರ್ಟ್  ತೀರ್ಪು  ನೀಡಿದೆ. ಇದರಿಂದ, ಸಲಿಂಗ ಕಾಮವನ್ನು ಅಪರಾಧಮುಕ್ತಗೊಳಿಸಿ 2009ರಲ್ಲಿ ದೆಹಲಿ  ಹೈಕೋರ್ಟ್ ನೀಡಿದ್ದ ಮಹತ್ವದ ತೀರ್ಪು ವಜಾ­ಗೊಂಡಿದೆ. ಈ ಹೊಸ ತೀರ್ಪಿನಿಂದ ಉದಾರ ಮೌಲ್ಯಗಳು ಹಾಗೂ ನಾಗರಿಕ ಹಕ್ಕುಗಳಿಗೆ ದೊಡ್ಡ ಹೊಡೆತ ಬಿದ್ದಂತಾಗಿದೆ.

ಸಲಿಂಗ ಕಾಮವನ್ನು ಅಪರಾಧವಾಗಿಸುವ ಭಾರತೀಯ ದಂಡ ಸಂಹಿತೆಯ 377ನೇ ಸೆಕ್ಷನ್ ರದ್ದುಪಡಿಸುವ ಅಧಿಕಾರ ಸಂಸತ್ ಗಷ್ಟೇ ಇದೆ ಎಂದು  ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.  ವಾಸ್ತವವಾಗಿ ಸೆಕ್ಷನ್ 377, ಒಂದೂವರೆ ಶತಮಾನಕ್ಕೂ ಹಳೆಯ ಕಾನೂನು.

ಇದು ನಾವು ರಚಿಸಿದ್ದಲ್ಲ. ಬ್ರಿಟಿಷರ ಕಾಲದಲ್ಲಿ ಜಾರಿಗೆ  ಬಂದ ಈ ಕಾನೂನನ್ನು ಈ ಆಧುನಿಕ ಕಾಲದಲ್ಲೂ  ಹಾಗೇ ಉಳಿಸಿಕೊಂಡಿರುವುದೇ  ದೊಡ್ಡ ವಿಪರ್ಯಾಸ. ಈಗ  ಬ್ರಿಟನ್ ಸೇರಿದಂತೆ ಅಮೆರಿಕ, ರಷ್ಯಾ, ನೇಪಾಳ ಮುಂತಾದ ಅನೇಕ ದೇಶಗಳು ಸಲಿಂಗ ಕಾಮವನ್ನು ಒಪ್ಪಿಕೊಂಡಿವೆ. ಆದರೆ ಭಾರತ ಈ ವಿಚಾರದಲ್ಲಿ ಹಿಂದೆ ಬಿದ್ದಿದೆ. ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಕಾನೂನುಗಳಲ್ಲೂ ಬದಲಾವಣೆ  ಮಾಡುವುದು ಪ್ರಗತಿಯ ದ್ಯೋತಕ.

ವಾಸ್ತವವಾಗಿ ಭಾರತದಲ್ಲಿ ಬಹಳ ಹಿಂದಿನಿಂದಲೇ ಸಲಿಂಗ ಕಾಮ  ಅಸ್ತಿತ್ವದಲ್ಲಿದೆ. ಸಲಿಂಗರತಿಯನ್ನು ಅನೈಸರ್ಗಿಕ ಅಥವಾ ಭಾರತೀಯತೆಗೆ ವಿರುದ್ಧ ಎನ್ನುವವರು ಇದನ್ನು ಮೊದಲು ಗಮನಿಸಬೇಕು.  ನಮ್ಮ  ಅನೇಕ ದೇವಾಲಯಗಳಲ್ಲಿರುವ ಶಿಲ್ಪಗಳೇ ಇದಕ್ಕೆ ಸಾಕ್ಷಿ. ಸಲಿಂಗ ಕಾಮವನ್ನು ಅಪರಾಧ ಎಂದು ಪರಿಗಣಿಸುವುದು, ಸಂವಿಧಾನದತ್ತವಾದ ಸಮಾನತೆ ಹಾಗೂ ವೈಯಕ್ತಿಕ ಸ್ವಾತಂತ್ರ್ಯದ ಉಲ್ಲಂಘನೆಯೂ ಆಗುತ್ತದೆ.

ಶಾಸಕಾಂಗ, ಕಾರ್ಯಾಂಗಗಳು ವಿಫಲವಾದ ಸಂದರ್ಭಗಳಲ್ಲಿ ನ್ಯಾಯಾಂಗ ಕ್ರಿಯಾಶೀಲ­ವಾಗಿ ಕಾರ್ಯ ನಿರ್ವಹಿಸಿರುವ ಉದಾಹರಣೆಗಳು ನಮ್ಮ ನಡುವೆ ಇವೆ. ಶಿಕ್ಷಣದ ಹಕ್ಕು ಜಾರಿಗೊಳಿಸುವ ಸಂದರ್ಭದಲ್ಲಿ ಇಂತಹ ಕ್ರಿಯಾಶೀಲತೆ­ಯನ್ನು ಮೆರೆದಿದ್ದ  ಸುಪ್ರೀಂಕೋರ್ಟ್, ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಯಲ್ಲಿ ಹಿಂದೆ ಬಿದ್ದಿದ್ದು ದುರದೃಷ್ಟಕರ.  ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ನ ದ್ವಿಮುಖ ಧೋರಣೆ ಎದ್ದು ಕಾಣಿಸುತ್ತದೆ. ಮೊದಲೇ ಸಾಮಾಜಿಕವಾಗಿ ದಮನಿತವಾದ ಲೈಂಗಿಕ ಅಲ್ಪಸಂಖ್ಯಾತ ಸಮುದಾಯ­ವನ್ನು ಶೋಷಿಸಲು ಈಗ ಕಾನೂನಿನ ಅಸ್ತ್ರವೇ ಸಿಕ್ಕಿರುವುದು ವಿಷಾದದ ಸಂಗತಿ.

ಹಾಗೆಯೇ ಲೈಂಗಿಕ ಅಲ್ಪಸಂಖ್ಯಾತರನ್ನು ಅಪರಾಧಿಗಳಂತೆ ನೋಡುವುದರಿಂದ ಎಚ್‌ಐವಿ–ಏಡ್ಸ್ ವೈದ್ಯಕೀಯ ಕಾರ್ಯಕ್ರಮಗಳಲ್ಲಿ ಅವರನ್ನು ತೊಡಗಿಸಿಕೊಳ್ಳುವುದು ಕಷ್ಟವಾಗುತ್ತದೆ. ಇದು ಸಾರ್ವಜನಿಕ ಆರೋಗ್ಯದ ಮೇಲೆ ಬೀರಬಹುದಾದ ಪರಿಣಾಮಗಳನ್ನು ನಿರ್ಲಕ್ಷಿಸ­ಲಾಗದು. ಸಾಮಾಜಿಕವಾಗಿ ತುಳಿತಕ್ಕೊಳಗಾದ ಸಮುದಾಯದ ಹಕ್ಕು­ಗಳಂತಹ ಸೂಕ್ಷ್ಮ ವಿಚಾರದ ಬಗ್ಗೆ ಸುಪ್ರೀಂಕೋರ್ಟ್‌ನ ದ್ವಿಸದಸ್ಯ ಪೀಠ ನಿರ್ಧಾರವನ್ನು ಕೈಗೊಂಡಿದ್ದು ಮತ್ತೊಂದು ವಿಪರ್ಯಾಸ.

ಈ ವಿಚಾರದ ಬಗ್ಗೆ ಇನ್ನೂ ಹೆಚ್ಚು ಸದಸ್ಯರಿರುವಂತಹ ಸಾಂವಿಧಾನಿಕ ಪೀಠ ನಿರ್ಧಾರ ಕೈಗೊಳ್ಳಬೇಕಿತ್ತು. ಈಗ ಈ ವಿಚಾರದಲ್ಲಿ ಶಾಸನ ರೂಪಿಸುವುದೂ ಅಷ್ಟು ಸುಲಭವಲ್ಲ. ಲೋಕಸಭೆ ಚುನಾವಣೆ ಸನಿಹದಲ್ಲೇ ಇದೆ. ಇಂತಹ ಕಾಲಘಟ್ಟದಲ್ಲಿ ರಾಜಕೀಯ ಪಕ್ಷಗಳ ಮಧ್ಯೆ ಸಹಮತ ಮೂಡಿಸುವುದು  ಅಷ್ಟು ಸುಲಭವಲ್ಲ. ಮಾನವ ಘನತೆಗೆ ಸಂಬಂಧಿಸಿದ ಇಂತಹ ವಿಚಾರಗಳ ಬಗ್ಗೆ ಕೇಂದ್ರ ಸರ್ಕಾರ ಲಘು ಧೋರಣೆ ಪ್ರದರ್ಶಿಸದೆ ಮುಂದಿನ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT