ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಹಿಮಾಲಯ' ನಾಲ್ಕು ಪ್ರಶ್ನೆಗಳು

Last Updated 22 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

`ಹಿಮಾಲಯ'-ಅದೇನು? ಏಕೆ ಈ ಹೆಸರು?
* ಹಿಮಾಲಯ-ನಿಮಗೂ ತಿಳಿದಂತೆ ಅದು ವಿಶ್ವಪ್ರಸಿದ್ಧವಾದ ಒಂದು ಪರ್ವತ ಪಂಕ್ತಿ. ಭಾರತ ಉಪಖಂಡದ ಉತ್ತರದಂಚಿನ ಉದ್ದಕ್ಕೂ ಹರಡಿರುವ ಈ ಪರ್ವತಸ್ತೋಮ (ಚಿತ್ರ-1 ರಲ್ಲಿ ಬಾಣದ ಗುರುತು ಗಮನಿಸಿ) ಎರಡು ಸಾವಿರದ ನಾಲ್ಕುನೂರು ಕಿ.ಮೀ. ಉದ್ದಕ್ಕೆ ಹಬ್ಬಿ ನಿಂತಿದೆ. 160 ಕಿ.ಮೀ.ನಿಂದ 320 ಕಿ.ಮೀ.ವರೆಗೆ ವಿವಿಧ ದಪ್ಪಗಳಲ್ಲಿ ಹರಡಿರುವ ಈ ಪರ್ವತ ಪಂಕ್ತಿಯ ಭಾರೀ ಉನ್ನತಿಯಿಂದಾಗಿ ಅದರ ಅಸಂಖ್ಯ ಉನ್ನತೋನ್ನತ ಶಿಖರಗಳೆಲ್ಲ ಹಿಮಾಹಾಸಿನಿಂದ ಆವರಿಸಲ್ಪಟ್ಟಿವೆ.

ಹಾಗಾಗಿ ಈ ಇಡೀ ಪರ್ವತಸ್ತೋಮ ಧವಳ ಕಾಂತಿಯಿಂದ ಕಂಗೊಳಿಸುತ್ತ ಉಪಗ್ರಹ ಚಿತ್ರಗಳಲ್ಲೂ (ಚಿತ್ರ-4) ಸ್ಪಷ್ಟ ಗೋಚರ. ಹಿಮದ ಶಾಶ್ವತ ಹೊದಿಕೆ ಧರಿಸಿರುವ ಈ ಪರ್ವತ ಅದೇ ಕಾರಣದಿಂದಲೇ `ಹಿಮಾಲಯ' ಎಂಬ ಹೆಸರು ಗಳಿಸಿದೆ.

`ಹಿಮಾಲಯ' ಹಿರಿಮೆಗಳು ಏನೇನು?
ಹಿಮಾಲಯದ ಹಿರಿಮೆಗಳದು ಒಂದು ಸುದೀರ್ಘ ಪಟ್ಟಿ. ಆಯ್ದ ಅಂಥ ಕೆಲ ಪ್ರಮುಖ ಅಂಶಗಳು:
* ಹಿಮಾಲಯದ ಸರಾಸರಿ ಎತ್ತರ ಸಮುದ್ರಮಟ್ಟದಿಂದ 18000 ಅಡಿ. ಇಷ್ಟು ಸರಾಸರಿ ಔನ್ನತ್ಯದ ಭೂಪ್ರದೇಶ ಇಡೀ ಧರೆಯಲ್ಲಿ ಇನ್ನಾವುದೂ ಇಲ್ಲ.

* ಹಿಮಾಲಯದ ಶಿಖರಗಳ ಸರಾಸರಿ ಎತ್ತರ 19000 ಅಡಿ. ಇಪ್ಪತ್ತು ಸಾವಿರ ಅಡಿಗೂ ಅಧಿಕ ಎತ್ತರದ ಐನೂರು ಶಿಖರಗಳು, ಇಪ್ಪತ್ನಾಲ್ಕು ಸಾವಿರ ಅಡಿ ಮೀರಿದ (ಚಿತ್ರ-2) ಎಂಬತ್ನಾಲ್ಕು ಶಿಖರಗಳು ಇಲ್ಲಿವೆ. ಜಗತ್ತಿನ ಮೊದಲ ಹತ್ತು ಅತ್ಯುನ್ನತ ಪರ್ವತ ಶಿಖರಗಳ ಪೈಕಿ ಒಂಬತ್ತು ಶಿಖರಗಳು ಹಿಮಾಲಯದಲ್ಲೇ ಇವೆ! ಪ್ರಥಮ ಸ್ಥಾನದ ಗೌರೀಶಂಕರ (ಎತ್ತರ 29028 ಅಡಿ), ಕೆ-2(28250 ಅಡಿ), ಕಾಂಚನ್‌ಜಂಗಾ (28165 ಅಡಿ), ಲ್ಹೋಟ್ಸೆ (27890 ಅಡಿ), ಧವಳಗಿರಿ (26811 ಅಡಿ), ಚೋ-ಓಯ (26750 ಅಡಿ), ಮಕಾಲು (27824 ಅಡಿ), ನಂಗ್ ಪರ್ವತ್ (26620 ಅಡಿ) ಮತ್ತು ಅನ್ನಪೂರ್ಣ (26493 ಅಡಿ) ಇವು ಹಿಮಾಲಯದ ವಿಶ್ವಪ್ರಸಿದ್ಧ ಶಿಖರಗಳು.

* ಹಿಮಾಲಯದಲ್ಲಿ ಒಟ್ಟು 32540 `ಹಿಮನದಿ'ಗಳಿವೆ (ಚಿತ್ರ-5). ಅವುಗಳ ಒಟ್ಟು ವಿಸ್ತಾರ 77310 ಚದರ ಕಿ.ಮೀ.! ಧ್ರುವಪ್ರದೇಶಗಳನ್ನು ಬಿಟ್ಟರೆ ಅತ್ಯಧಿಕ ಹಿಮನದೀ ವಿಸ್ತೀರ್ಣ ಇರುವುದು ಹಿಮಾಲಯದಲ್ಲೇ.

* ಪೃಥ್ವಿಯ ಪರ್ವತ ಪಂಕ್ಷಿಗಳಲ್ಲೆಲ್ಲ ಅತ್ಯಂತ ಕಿರಿಯ ವಯಸ್ಸಿನ ಪರ್ವತ ಪಂಕ್ತಿಯಾಗಿರುವುದೂ ಹಿಮಾಲಯದ ಇನ್ನೊಂದು ಹಿರಿಮೆ. ಹಿಮಾಲಯದ ವಯಸ್ಸು ಆರೂವರೆ ಕೋಟಿ ವರ್ಷ, ಅಷ್ಟೆ!

ಹಿಮಾಲಯದ ಮಹತ್ವ ಏನು?
* ಭಾರತ ಉಪಖಂಡದ ಬದುಕು-ಸ್ವಾಸ್ಥ್ಯಗಳಲ್ಲಿ ಹಿಮಾಲಯದ ಮಹತ್ವ ಅಸೀಮ, ಅನನ್ಯ. ಅತ್ಯಂತ ಮುಖ್ಯವಾಗಿ-

* ನೈರುತ್ಯದಿಂದ ಬರುವ `ಮಾನ್ಸೂನ್' ಮಳೆ ಮಾರುತವನ್ನು, ಅದು ಹೊತ್ತು ತರುವ ಮೋಡಗಳ ರಾಶಿಯನ್ನು ತಡೆದು, ಮುಂಗಾರು ಮಳೆ ಸುರಿಸುವ ಮಹತ್ಕಾರ್ಯವನ್ನು ಹಿಮಾಲಯ ನಿರ್ವಹಿಸುತ್ತಿದೆ. ನಮ್ಮ ದೇಶವೂ ಸೇರಿದಂತೆ ಹಿಮಾಲಯದ ದಕ್ಷಿಣದ ಹಲವಾರು ರಾಷ್ಟ್ರಗಳು ಕುಡಿವ ನೀರಿಗೆ, ಕೃಷಿಗೆ, ಕೈಗಾರಿಕಾ ಬಳಕೆಗೆ, ವಿದ್ಯುದುತ್ಪಾದನೆಗೆ.... ಹಾಗೆ ಇಡೀ ವರ್ಷದ ಜಲ

ದಾಸ್ತಾನಿಗೆ ನೈರುತ್ಯ ಮಾನ್ಸೂನ್-ಅನ್ನೇ ಪ್ರಮುಖವಾಗಿ ಅವಲಂಬಿಸಿರುವುದು ನಿಮಗೂ ಗೊತ್ತಲ್ಲ?
* ಹಿಮಾಲಯದ ಹಿಮನದಿಗಳಿಂದ ಕರಗಿ ಧುಮುಕುವ ಜಲಧಾರೆಗಳು (ಚಿತ್ರ-6) ಏಷಿಯದ ಏಳು ಪ್ರಮುಖ ನದಿಗಳ ನೀರಿನ ಆಕರವಾಗಿದೆ. ಗಂಗಾ, ಇಂಡಸ್, ಬ್ರಹ್ಮಪುತ್ರ, ಸಾಲ್ವೀನ್, ಮೇಕಾಂಗ್, ಯಾಂಗ್ಸೇ ಮತ್ತು ಹ್ವಾಂಗ್-ಹೋ ನದಿಗಳಲ್ಲಿ ಪ್ರವಹಿಸುವ ನೀರೆಲ್ಲ ಹಿಮಾಲಯ ಮೂಲದ್ದೇ. ಅವೇ ಅಲ್ಲದೆ ನೂರಾರು ಸಣ್ಣ ನದಿಗಳು (ಚಿತ್ರ-7) ಹಿಮಾಲಯದ ಹಿಮನದಿಗಳಿಂದಲೇ ಪೋಷಣೆಗೊಳ್ಳುತ್ತಿವೆ.

* ಮಳೆ ರಹಿತ ಋತುಮಾನಗಳಲ್ಲಿ ಗಂಗಾ, ಇಂಡಸ್ ಮತ್ತು ಬ್ರಹ್ಮಪುತ್ರ ನದಿಗಳ ಜಲಪ್ರವಾಹದ ಶತಾಂಶ 80 ರಷ್ಟು ನೀರು ಹಿಮಾಲಯದ ಹಿಮನದಿಗಳದು. ಹಿಮಾಲಯ ಇಲ್ಲದಿದ್ದರೆ ಈ ನದಿಗಳಲ್ಲೂ ಮಳೆಗಾಲದಲ್ಲಷ್ಟೇ ಅಷ್ಟಿಷ್ಟು ನೀರು.
* ಪ್ರಪಂಚದ ಒಟ್ಟೂ ಜನಸಂಖ್ಯೆಯ ಶೇಕಡ ಹದಿನೇಳರಷ್ಟು ಮನುಷ್ಯರ ಬದುಕು ಹಿಮಾಲಯದ ನೀರನ್ನೇ ಆಶ್ರಯಿಸಿದೆ.

ಹಿಮಾಲಯ ಹುಟ್ಟಿದ್ದು ಹೇಗೆ?
* ಈಗ್ಗೆ ಸುಮಾರು ಇಪ್ಪತ್ತು ಕೋಟಿ ವರ್ಷಗಳ ಹಿಂದಿನ ಕಾಲದಲ್ಲಿ ನಮ್ಮ `ಭರತ ಖಂಡ' ಆಸ್ಟ್ರೇಲಿಯಾ ಮತ್ತು ಅಂಟಾರ್ಕ್ಟಿಕಾಗಳ ಜೊತೆಗಿತ್ತು (ಚಿತ್ರ-10). ಹದಿನೆಂಟು ಕೋಟಿ ವರ್ಷ ಹಿಂದೆ ಭಾರತದ ಭೂಭಾಗ ಬೇರ್ಪಟ್ಟು ಉತ್ತರದಿಕ್ಕಿನತ್ತ ನಿಧಾನವಾಗಿ ಚಲಿಸತೊಡಗಿತು (ಚಿತ್ರ-11). ಈಗ್ಗೆ ಆರೂವರೆ ಕೋಟಿ ವರ್ಷ ಹಿಂದಿನ ಸುಮಾರಿಗೆ ಆಗಿನ ಏಷಿಯದ ಕಡಲಂಚನ್ನು ತಲುಪಿದ ಭಾರತ ಆ ಭೂಖಂಡದಂಚನ್ನು ಬಲವಾಗಿ ಒತ್ತತೊಡಗಿತು (ಚಿತ್ರ-13). ಭಾರತದ ಈ ಪ್ರಳಯಶಕ್ತಿಯ ಒತ್ತುವಿಕೆಯಿಂದ ಕಡಲ ತಳದ ನೆಲವೆಲ್ಲ ಮಡಚಿಕೊಳ್ಳತೊಡಗಿತು. ಕೆಲ ಕಾಲದಲ್ಲೇ ಕಡಲಂಚಿನುದ್ದಕ್ಕೂ ಮಡಿಕೆ ಮಡಿಕೆಯಾಗಿದ್ದ ಶಿಲಾಪದರಗಳ ಸುದೀರ್ಘ ಪಂಕ್ತಿ ಕೋಟೆಯಂತೆ ಸಾಗರದಿಂದ ಮೇಲೆದ್ದು ನಿಂತಿತ್ತು. ಹಿಮಾಲಯ ಜನಿಸಿದ್ದು ಹೀಗೆ.

ಏಷಿಯಾ ಮತ್ತು ಭಾರತ-ಆಗಿನ ಈ ಎರಡೂ ಭೂಭಾಗಗಳ ಎದುರು ಬದುರು ಒತ್ತುವಿಕೆ ಈಗ್ಗೆ ಮೂರು ಕೋಟಿ ವರ್ಷ ಹಿಂದೆ ಗರಿಷ್ಠಮಟ್ಟ ಮುಟ್ಟಿತ್ತು. ನಿಶ್ಚಲ ಏಷಿಯಾ ಮತ್ತು ಮುಂತಳ್ಳುತ್ತಿದ್ದ ಭಾರತ ಇವುಗಳ ನಡುವೆ ನಡುವೆ ಸಿಲುಕಿದ ಕಡಲ ನೆಲ `ಬುಲ್‌ಡೋಜರಿನಿಂದ ಬಾಚಿ ತಳ್ಳಲ್ಪಟ್ಟ ಮಣ್ಣಿನಂತೆ' ಮುದುಡಿ ಮೇಲೇಳುತ್ತಲೇ ಸಾಗಿತು (ಚಿತ್ರ 8, 9 ಮತ್ತು 14 ರಲ್ಲಿ ನೋಡಿ).
ಹೀಗೆ ನಿಧಾನವಾಗಿ ಮೇಲೇಳುತ್ತಿದ್ದ ಹಿಮಾಲಯ ಈಗ್ಗೆ ಆರು ಲಕ್ಷ ವರ್ಷಗಳ ಹಿಂದೆ ಹನ್ನೆರಡು ಸಾವಿರ ಅಡಿ ಎತ್ತರ ತಲುಪಿತ್ತು.

ಆ ವೇಳೆಗೆ ಏಷಿಯಾದ ಬುಡವನ್ನೇ ಒತ್ತುತ್ತಿದ್ದ ಭಾರತದ ಒತ್ತಡ ಭೂತೊಗಟೆಯ ಕೆಳಗಿನ ಕವಚಕ್ಕೂ ವ್ಯಾಪಿಸಿತು. ಹಾಗಾದಾಗ ಚಿಪ್ಪಿನ ಶಿಲಾಪಾಕ ರಭಸದಿಂದ ಮೇಲೆದ್ದು, ಚಿಮ್ಮಿ ರಾಶಿ ರಾಶಿ ಪೇರಿಸಿಕೊಂಡು ತಣ್ಣಗಾಗಿ ಹಿಮಾಲಯದ ಉನ್ನತ ಶಿಖರಗಳನ್ನು ರೂಪಿಸಿತು. ಬಹು ಶಿಖರಗಳ ಪ್ರೌಢ ಹಿಮಾಲಯ ಅವತರಿಸಿತು.ವಾಸ್ತವ ಏನೆಂದರೆ ಭಾರತದ ಮುನ್ನಡೆ ಇನ್ನೂ ನಿಂತಿಲ್ಲ. ಇನ್ನು ಹತ್ತು ಕೋಟಿ ವರ್ಷ ವೇಳೆಗೂ (ಆಗಿನ ಭೂಖಂಡಗಳ ಸ್ಥಾನಗಳನ್ನು ಚಿತ್ರ-12 ರಲ್ಲಿ ಗಮನಿಸಿ) ಈ ಒತ್ತುವಿಕೆ ನಿಲ್ಲುವುದಿಲ್ಲ. ಆದ್ದರಿಂದಲೇ ಹಿಮಾಲಯ ಎತ್ತರವಾಗುತ್ತಲೇ ಇದೆ ವರ್ಷಕ್ಕೆ ಒಂದೆರಡು ಸೆಂ.ಮೀ. ನಷ್ಟು ಇದೇ ಕಾರಣದಿಂದಲೇ ಹಿಮಾಲಯ ಪ್ರದೇಶದಲ್ಲಿ ಭೂಕಂಪಗಳೂ ಸಾಮಾನ್ಯ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT