ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಮಾಲಯದ ನೆತ್ತಿಯ ಮೇಲೆ ವಿಹಾರ

Last Updated 13 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಆಕಾಶವನ್ನೇ ಚುಂಬಿಸ ಹೊರಟ ಎತ್ತರದ ಬೆಳ್ಳಿಯ ರಾಶಿಯಂತೆ ಕಂಗೊಳಿಸುವ ಹಿಮಾಲಯದ ಪರ್ವತ ಸಾಲು ನಮಗಿಂತಲೂ ಕುಬ್ಜವಾಗಿ ಕೈ ಚಾಚಿದರೆ ಎಟಕುವಂತೆ ಕಂಡರೆ?

ಕೈಗೆಟುಕುವ ಮಾತಿರಲಿ, ಶಿಖರಾರೋಹಣದ ಕಷ್ಟಗಳನ್ನು ನೆನಪಿಸಿಕೊಳ್ಳಿ: ಹಿಮಶಿಖರವೇರಲು ಗುಂಡಿಗೆ ಗಟ್ಟಿಯಾಗಿರಬೇಕು, ಆಮ್ಲಜನಕವಿಲ್ಲದ ಹಾದಿಯಲ್ಲಿ ಗಾಳಿಯನ್ನು ಹೊತ್ತು ಸಾಗಬೇಕು, ಹಿಮಗಾಳಿಯ ಹೊಡೆತದಲ್ಲಿ ರಕ್ತ ಹೆಪ್ಪುಗಟ್ಟಿಸುವ ಚಳಿಯನ್ನು ಸೈರಿಸಿಕೊಳ್ಳುವ ಕಸುವು ಬೇಕು. ಹೀಗೆ ಲೆಕ್ಕ ಹಾಕುತ್ತಾ ಹೋದರೆ ಹಿಮಾಲಯ ನೋಡುವುದು ಕನಸಿನ ಮಾತೇ ಸರಿ ಎನಿಸುವುದು ಸಹಜ.

ಆದರೆ ಹತ್ತಲಾಗದ ವಯಸ್ಸಿನಲ್ಲೂ ಹಿಮಾಲಯದ ಮೇಲೆ ತೇಲಾಡುತ್ತಾ ಅದರ ರಮಣೀಯ ಸೌಂದರ್ಯವನ್ನು ಆಸ್ವಾದಿಸಲು ಅವಕಾಶವಿದೆ. ಹಿಮಾಲಯದ ತಪ್ಪಲಿನ ಗಿರಿಶೃಂಗಗಳ ಮೇಲೆ ಮೆಲ್ಲನೆ ಹಾರಾಡುವ ವಿಮಾನದ ಮೂಲಕ ಅದನ್ನು ಸವಿಯಲು ನೇಪಾಳದಲ್ಲಿ ವ್ಯವಸ್ಥೆಯಿದೆ.

ಅಲ್ಲಿನ ಬುದ್ಧ ಏರ್‌ಲೈನ್ಸ್ ಕಠ್ಮಂಡುವಿನಿಂದ ಹಿಮಾಲಯ ವೀಕ್ಷಣೆಗೆ ವಿಶೇಷ ಸೌಲಭ್ಯ ಒದಗಿಸಿದೆ. ತಲಾ 4,500 ರೂಪಾಯಿ ಟಿಕೆಟ್ ದರ. ಈ ಸೌಲಭ್ಯ ಕೊಂಚ ದುಬಾರಿ ಎನಿಸಿದರೂ ಹಿಮಾಲಯದ ತಪ್ಪಲಿನ ಅದ್ಭುತ ಪರಿಸರವನ್ನು ಆಗಸದಲ್ಲಿ ಹಾರುತ್ತಾ ನೋಡುವ ಅವಕಾಶದ ಮುಂದೆ ಏನೂ ಅಲ್ಲ ಎನ್ನಬಹುದು.

ಪ್ರತ್ಯೇಕ ಸೀಟುಗಳಿರುವುದರಿಂದ ಪ್ರತಿಯೊಬ್ಬರೂ ಕಿಟಕಿ ಮೂಲಕ ಹೊರಗಿನ ಹಿಮದ ಲೋಕವನ್ನು ನೋಡಲು ಅವಕಾಶವಿದೆ. ಮೇಲಿಂದ ನೋಡಿದರೆ ಹಾಲಿನ ಸಮುದ್ರದಂತೆ ಚೆಲ್ಲಾಡಿರುವ ಹಿಮದ ರಾಶಿಯ ಮನಮೋಹಕ ನೋಟ ಕಣ್ಣು ತಣಿಸುತ್ತದೆ.

ಶುಭ್ರ ನೀಲಾಕಾಶದಲ್ಲಿ ಅಲ್ಲಲ್ಲಿ ಕಾಣುವ ಬೆಳ್ಳಿಮೋಡಗಳೇ ಧರೆಗಿಳಿದು ನಿಂತಿವೆಯೇನೋ ಎಂಬಂತೆ ಭಾಸವಾಗುವ ಎತ್ತರದ ಶ್ರೇಣಿಯ ಪರ್ವತಗಳು ಬೆರಗು ಹುಟ್ಟಿಸುತ್ತವೆ. ವಿಮಾನದಲ್ಲಿ ಹಾರಾಡುವಾಗ ಕೈಗೆಟಕುವಂತೆ ಕಾಣಿಸುವ, ಇವೇ ಏನು ಚಿತ್ರಗಳಲ್ಲಿ ನಾವು ನೋಡಿದ್ದ ಗಗನಕ್ಕೆ ತಾಗಿದಂತೆ ನಿಂತಿರುವಂತಹ ಬೆಟ್ಟಗಳು ಎಂದು ಅಚ್ಚರಿ ಮೂಡಿಸುತ್ತವೆ.

ಬಿಳಿಮೋಡದ ಮರೆಯಿಂದ ಆಗಾಗೆ ಇಣುಕುವ ಸೂರ್ಯನ ಕಿರಣಗಳು ಹಿಮದ ರಾಶಿಯನ್ನು ಹೊದ್ದು ನಿಂತ ಬೆಟ್ಟಗಳ ಮೇಲೆ ಪ್ರತಿಫಲಿಸಿದಾಗ ಕಣ್ಣೆದುರಿಗೆ ಸ್ಪಟಿಕದ ಶಿಲೆಗಳೇ ಮೈದಳೆದು ನಿಂತಿವೆಯೇನು ಎನಿಸುತ್ತದೆ.

ಭಾರತದ ಉತ್ತರ ಭಾಗದಲ್ಲಿ ಗಡಿಯಿಂದ ಹೊರಭಾಗದಲ್ಲಿ ನೇಪಾಳ-ಟಿಬೆಟ್ ನಡುವೆ ಹರಡಿ ನಿಂತಿರುವ ದೈತ್ಯಾಕಾರದ ಪರ್ವತ ಶ್ರೇಣಿ ಸುಮಾರು 2,400 ಕಿ.ಮೀ ಉದ್ದದವರೆಗೂ ಚಾಚಿಕೊಂಡಿದೆ. ಇದೇ ಸಾಲಿನಲ್ಲೇ ಎವರೆಸ್ಟ್ ಶಿಖರವೂ ಇದೆ.

ಕಡಿದು ನಿಲ್ಲಿಸಿರುವ ಗೋಡೆಗಳಂತೆ ಕಾಣುವ ಶಿಖರಗಳಲ್ಲಿ ಯಾವುದು ಎತ್ತರ ಎಂಬುದು ಕಣ್ಣಳೆತೆಗೆ ನಿಲುಕುವುದಿಲ್ಲ. ಮೆಲ್ಲನೆ ಚಲಿಸುವ ವಿಮಾನದ ಮೂಲಕ ಕಣ್ಣು ಹಾಯಿಸಿದಾಗ ಕೆಳಗೆ ಹರಡಿರುವ ಶುಭ್ರ ಹಿಮದ ರಾಶಿ ನೊರೆಹಾಲಿನ ಸಮುದ್ರವೇ ಹರಿಯುತ್ತಿದೆಯೇನೋ ಎಂಬ ಅನುಭವ ನೀಡುತ್ತದೆ.

ವಿಶ್ವಖ್ಯಾತಿಯ ಹಿಮಾಲಯದ ಪರ್ವತಗಳ ಅಂದವನ್ನು ಆಗಸದ ಮೂಲಕ ಸವಿಯುವ ಈ ಸೌಲಭ್ಯವನ್ನು ನೇಪಾಳ ಒದಗಿಸಿದೆ. ನೇಪಾಳ ಪ್ರವಾಸಕ್ಕೆ ತೆರಳಿದಾಗ ವಿಮಾನಯೇರಿ ಹಿಮಾಲಯಕ್ಕೆ ಒಂದು ಸುತ್ತು ಹಾಕಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT