ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಮ್ಮೆಟ್ಟಿದ ಆನೆ ಹಿಂಡು: ನಿಲ್ಲದ ಆತಂಕ

42 ಆನೆಗಳು ಮತ್ತೆ ಬರದಂತೆ ತಡೆಯಲು ಆಗ್ರಹ
Last Updated 23 ಡಿಸೆಂಬರ್ 2013, 5:54 IST
ಅಕ್ಷರ ಗಾತ್ರ

ಬಂಗಾರಪೇಟೆ: ತಾಲ್ಲೂಕಿನ ಗಡಿ ಪ್ರದೇಶ­ದಲ್ಲಿ ತಿಂಗಳಿಂದ ರೈತರ ಜಮೀನು­ಗಳಿಗೆ ನುಗ್ಗಿ ಅಪಾರ ಬೆಳೆ ನಾಶ ಮಾಡಿದ್ದ ಆನೆ ಹಿಂಡನ್ನು ಶುಕ್ರ­ವಾರ ರಾತ್ರಿಯೇ ಗಡಿಯಿಂದ ಆಚೆಗೆ ಹಿಮ್ಮೆಟ್ಟಿಸಲಾಗಿದೆ.

ಆದರೆ, ಯಾವುದೇ ಕ್ಷಣದಲ್ಲೂ ಆನೆಗಳು ಬರಬಹುದು ಎಂಬ ಆತಂಕ ಮಾತ್ರ ಗಡಿಯಂಚಿನ ಗ್ರಾಮಗಳ ಜನ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ­ಯಲ್ಲಿ ಮುಂದುವರಿದಿದೆ. ಈ ಆತಂಕದ ನಡುವೆಯೇ ಅರಣ್ಯ ಇಲಾಖೆ  ಸಿಬ್ಬಂದಿ ಆಂಧ್ರ ಪ್ರದೇಶ ಗಡಿಯಲ್ಲಿ ಕಾವಲು ಕಾಯುತ್ತಿದ್ದಾರೆ.


ನ.20ರಂದು ಗಡಿ ಭಾಗದ ತಪಟಮಾಕನಹಳ್ಳಿ ಮೂಲಕ ಪ್ರವೇ­ಶಿಸಿದ ಆನೆ ಹಿಂಡು ಯರಗೋಳು ಮೂಲಕ  ಬಂಗಾನೆತ್ತ, ಚಾಮನಹಳ್ಳಿ ಮೂಲಕ ಕಳವಂಚಿ, ಚಿನ್ನಕಾಮನಹಳ್ಳಿ, ಪೋಲೇನಹಳ್ಳಿ, ಕುಂದರಸನಹಳ್ಳಿ ಬತ್ತಲ­ಹಳ್ಳಿ ಕಾಡಿಗೆ ತಲುಪಿದ್ದವು.

ಅಲ್ಲಿಂದ ತಮಿಳುನಾಡಿನತ್ತ ಮುಖ ಮಾಡಿದ್ದ ಆನೆ ಹಿಂಡು ಮೂತನೂರು ಕಾಡಿಗೆ ಸಂಚರಿಸಿದ್ದವು. ಮತ್ತೆ ನಡೆದ ಹಾದಿಯಲ್ಲಿ ಹಿಂತಿರುಗಿದ್ದ ಆನೆಗಳು ಕೀರುಮಂದೆ, ಬೊಂಪಲ್ಲಿ, ನಡಂಪಲ್ಲಿ, ಹಾರ್ಮಾನಹಳ್ಳಿ, ಬೋಡೇಪಲ್ಲಿ ಮೂಲಕ ಗುರುವಾರ ರಾತ್ರಿ ಕಾಮ­ಸಮುದ್ರ ಕಾಡಿನ 6ನೇ ಬ್ಲಾಕ್‌ ಬಳಿ ಕಂಡುಬಂದಿದ್ದವು.

ಹಲ ಗುಂಪುಗಳಾಗಿ ಸಂಚರಿಸಿದ್ದ ಆನೆಗಳು ಗಡಿ ಭಾಗದಲ್ಲಿ ಬೆಳೆದಿದ್ದ ಬತ್ತ, ರಾಗಿ, ಜೋಳ, ಟೊಮೆಟೊ, ಕಲ್ಲಂಗಡಿ, ಬಾಳೆ, ತೆಂಗು ಆಲೂಗಡ್ಡೆ ತಿಂದು ನಾಶ ಮಾಡಿದ್ದವು. ಪ್ರಾರಂಭ­ದಲ್ಲಿ 25 ಆನೆಗಳು ಮಾತ್ರ ಗಡಿ­ಯೊಳಕ್ಕೆ ನುಸುಳಿದೆ ಎಂದು ಅರಣ್ಯ ಇಲಾಖೆ ತಿಳಿದಿತ್ತು. ನಂತರ ಒಟ್ಟು 42 ಆನೆಗಳ ದೊಡ್ಡ ಗುಂಪು ಇರುವುದನ್ನು ಮನಗೊಂಡ ಅಧಿಕಾರಿಗಳು ಆತಂಕಕ್ಕೆ ಒಳಗಾಗಿದ್ದರು.

ಎರಡು ವಾರಗಳಿಂದ ಎರಡು ಮೂರು ಗುಂಪುಗಳಾಗಿ ಚದುರಿ­ಹೋಗಿದ್ದ ಆನೆ ಹಿಂಡನ್ನು ನಿಯಂತ್ರಿ­ಸುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹರಸಾಹಸ ಪಟ್ಟಿದ್ದರು. ಬನ್ನೇರುಘಟ್ಟ, ಕಡ್ಲೀಪುರದಿಂದ ಕರೆಸಿದ್ದ ವಿಶೇಷ ತಂಡಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿ­ದ್ದವು.

ಪೊಲೀಸರು ಸೇರಿದಂತೆ ಒಟ್ಟು 120 ಮಂದಿ ಹಗಲು ಇರಳು ಎನ್ನದೆ ಕಾಡಿನ ಅಂಚಿನಲ್ಲಿ ಆನೆ ನಿಯಂತ್ರಣಕ್ಕೆ ಹೆಣಗಾಡಿ­ದ್ದರು. ಎಲ್ಲ ಆನೆಗಳನ್ನು ಒಟ್ಟಿಗೆ ಸೇರಿಸಿ ಶುಕ್ರವಾರ ರಾತ್ರಿ ಬತ್ತಲಹಳ್ಳಿಯ ಮಲ್ಲಪ್ಪನ ಬೆಟ್ಟ ಮಾರ್ಗದ ಮೂಲಕ ಗಡಿಯಾಚೆಗೆ ಓಡಿಸಲಾಗಿದೆ ಎಂದು ಬಂಗಾರಪೇಟೆ ವಲಯ ಅರಣ್ಯ ಅಧಿಕಾರಿ ಚಂದ್ರ­ಶೇಖರ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿ­ದ್ದಾರೆ.

ಮೂರು ವರ್ಷಗಳಿಂದ ಸತತವಾಗಿ ಗಡಿಯೊಳಕ್ಕೆ ನುಗ್ಗುತ್ತಿರುವ ಆನೆಗಳು ಒಟ್ಟು 8 ಮಂದಿಯನ್ನು ಬಲಿ ತೆಗೆದು­ಕೊಂಡಿವೆ. ಈ ಹಿನ್ನೆಲೆಯಲ್ಲಿ ಭಯ­ಗೊಂಡಿದ್ದ ಜನರು ಈ ಬಾರಿ ಆನೆ ವೀಕ್ಷಣೆಗೆ ಮುಂದಾಗಿಲ್ಲ.

ಅರಣ್ಯ ಅಧಿಕಾರಿಗಳ ಕಟ್ಟುನಿಟ್ಟಿನ ಕ್ರಮಗಳೂ ಜನರನ್ನು ಅರಣ್ಯದತ್ತ ಹೋಗದಂತೆ ಎಚ್ಚರಿಸಿದ್ದವು. ಪರಿಣಾಮ ಅಪಾರ ಬೆಳೆ ಹಾನಿ ಆಗಿದ್ದರೂ ಯಾವುದೆ ಪ್ರಾಣ­ಹಾನಿ ಆಗಿಲ್ಲ­ವೆಂಬುದು ಗಮನಾರ್ಹ ಎಂದು ಅವರು ಹೇಳುತ್ತಾರೆ.

15 ದಿನಗಳ ಕಾಲ ಗ್ರಾಮದ ಕಾಡಿ­ನಲ್ಲಿ ನೆಲೆಯೂರಿದ್ದ ಆನೆ ಹಿಂಡು ಗ್ರಾಮಸ್ಥರ ಬಹುತೇಕ ಬೆಳೆಗಳನ್ನು ನಾಶಪಡಿಸಿವೆ. ಈ ಬಾರಿ ಬಿದ್ದ ಅಲ್ಪಸ್ವಲ್ಪ ಮಳೆಗೆ ಉತ್ತಮ ರಾಗಿ ಇಳುವರಿ ನಿರೀ­ಕ್ಷಿಸಲಾಗಿತ್ತು. ಆದರೆ ಆನೆ ದಾಳಿಯಿಂದ ಅದೆಲ್ಲ ಹುಸಿಯಾಗಿದೆ ಎಂದು ಬತ್ತಲಹಳ್ಳಿ ಗ್ರಾಮದ ವೆಂಕಟೇಶಪ್ಪ ನೊಂದು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT