ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯ ಅಧಿಕಾರಿಗಳು ಕಾರಣ?

ಮಾಗಡಿ ಲೋಕೋಪಯೋಗಿ ಇಲಾಖೆ ಹಗರಣ
Last Updated 2 ಏಪ್ರಿಲ್ 2013, 19:27 IST
ಅಕ್ಷರ ಗಾತ್ರ

ಬೆಂಗಳೂರು: ಮಾಗಡಿ ತಾಲ್ಲೂಕಿನಲ್ಲಿ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ವತಿಯಿಂದ ಕೈಗೊಳ್ಳಲಾದ ಕಾಮಗಾರಿಗಳಲ್ಲಿ ಅಕ್ರಮ ನಡೆಯಲು ಇಲಾಖೆಮಟ್ಟದ ಹಿರಿಯ ಅಧಿಕಾರಿಗಳೇ ಕಾರಣರಾಗಿದ್ದಾರೆ ಎಂಬ ಅಭಿಪ್ರಾಯ ಮಂಗಳವಾರ ನಡೆದ ವಿಧಾನಸಭೆಯ ಸದನ ಸಮಿತಿ ಸಭೆಯಲ್ಲಿ ವ್ಯಕ್ತವಾಗಿದೆ.

`ನಾವು ಕೇಳಿದ ಕಡತಗಳನ್ನು ನೀಡಲು ಅಧಿಕಾರಿಗಳು ಆರಂಭದಲ್ಲಿ ಹಿಂದೇಟು ಹಾಕಿದ್ದರು. ಬಳಿಕ ಅವುಗಳನ್ನು ಬಲವಂತವಾಗಿ ತರಿಸಿಕೊಂಡು ಪರಿಶೀಲಿಸಿದ ಮೇಲೆ ಇಲಾಖೆ ಮಟ್ಟದಲ್ಲಿ ಕೈವಾಡ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ' ಎಂದು ಸಮಿತಿ ಸದಸ್ಯರೊಬ್ಬರು `ಪ್ರಜಾವಾಣಿ'ಗೆ ತಿಳಿಸಿದರು.

`ಬಹುತೇಕ ಎಲ್ಲ ಕಡತಗಳಿಗೆ ಹಿರಿಯ ಅಧಿಕಾರಿಯೊಬ್ಬರು ಸಹಿ ಹಾಕಿರುವುದನ್ನು ಸಮಿತಿ ಸದಸ್ಯರು ವಿಶೇಷವಾಗಿ ಗಮನಿಸಿದ್ದಾರೆ. ಉಪವಿಭಾಗದಿಂದ ಬಾರದ ಪ್ರಸ್ತಾವಗಳಿಗೂ ತರಾತುರಿಯಿಂದ ಕಡತ ತಯಾರಿಸಿ ಅನುದಾನ ಬಿಡುಗಡೆ ಮಾಡಿರುವ ಸಂಗತಿ ಗಮನಕ್ಕೆ ಬಂದಮೇಲೆ ನಮ್ಮ ವಿಚಾರಣೆ ದಿಕ್ಕು ಸ್ಪಷ್ಟವಾಗಿದೆ. ಪ್ರಭಾವಿಗಳು ಈ ಹಗರಣದಲ್ಲಿ ಭಾಗಿಯಾದ ಗುಮಾನಿ ಇದ್ದು, ಆ ವಿಷಯವೂ ಚರ್ಚೆಗೆ ಒಳಗಾಗಲಿದೆ' ಎಂದು ವಿವರಿಸಿದರು.

`ವಿಚಾರಣೆ ಅಪೂರ್ಣವಾಗಿರುವ ಕಾರಣ ಸದನ ಸಮಿತಿ ಅವಧಿಯನ್ನು ಇನ್ನೊಂದು ತಿಂಗಳಿಗೆ ವಿಸ್ತರಣೆ ಮಾಡಬೇಕು ಎನ್ನುವ ಮನವಿಯನ್ನು ವಿಧಾನಸಭಾಧ್ಯಕ್ಷರು ಪುರಸ್ಕರಿಸಿದ್ದಾರೆ. ಇನ್ನೂ ಒಂದೆರಡು ಸಭೆಗಳನ್ನು ನಡೆಸಿ ನಮ್ಮ ವರದಿಯನ್ನು ಸಿದ್ಧಪಡಿಸಲಿದ್ದೇವೆ' ಎಂದು ಸದನ ಸಮಿತಿ ಅಧ್ಯಕ್ಷ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಹೇಳಿದರು.
`ಇಲಾಖೆಯಿಂದ ಕೆಲವು ಕಡತಗಳನ್ನು ತರಿಸಿಕೊಂಡು ಪರಿಶೀಲನೆ ಮಾಡುತ್ತಿದ್ದೇವೆ. ಲೋಪಗಳು ಕಂಡುಬಂದಿದ್ದು ಅವುಗಳನ್ನು ವರದಿಯಲ್ಲಿ ದಾಖಲಿಸುತ್ತೇವೆ' ಎಂದು ತಿಳಿಸಿದರು. ಕಾಕತಾಳೀಯವಾಗಿ ಲೋಕಾಯುಕ್ತ ವಿಶೇಷ ಕೋರ್ಟ್‌ನಲ್ಲಿ ದಾಖಲಾದ ಪ್ರಕರಣದ ವಿಚಾರಣೆ ಸಹ ಮಂಗಳವಾರ ನಡೆಯಿತು. ಏ. 5ಕ್ಕೆ ವಿಚಾರಣೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT