ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯ ಗಾಯಕಿಯರ ರಂಜನೀಯ ಕಛೇರಿ

ಲಯ - ಲಾಸ್ಯ
Last Updated 11 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಪ್ರತಿವರ್ಷದಂತೆ ಈ ಬಾರಿಯೂ ನಡೆದ ಶ್ರೀರಾಮ ಲಲಿತಕಲಾ ಮಂದಿರ  ವಸಂತ ಸಂಗೀತೋತ್ಸವದ ಮೊದಲ ದಿನದ ಕಛೇರಿಯನ್ನು ಬಹು ಬೇಡಿಕೆಯ ಹಿರಿಯ ಗಾಯಕಿ ಬಾಂಬೆ ಜಯಶ್ರಿ ಅವರು ನಡೆಸಿಕೊಟ್ಟರು. ಕಛೇರಿಯ ಪ್ರತಿ ಹಂತದಲ್ಲೂ ಸಂಗೀತದ ಸೂಕ್ಷ್ಮತೆಗಳು ಹೊರಹೊಮ್ಮಿ ಅಪೂರ್ವ ಶ್ರವಣ ಸುಖ ದೊರಕುವಂತಾಯಿತು.

ನಾರಾಯಣತೀರ್ಥರ ಜಯ ಜಯ ಸ್ವಾಮಿನ್ (ನಾಟ) ಸ್ವರವಿನ್ಯಾಸದ ಮೆರುಗನ್ನು ಪಡೆಯಿತು. ದೇವಗಾಂಧಾರಿ ರಾಗದ ತ್ಯಾಗರಾಜರ ಅನನ್ಯ ಕೃತಿ ತುಳಸಮ್ಮ ಭಾವಪೂರ್ಣವಾಗಿತ್ತು. ಮೋಹನಕಲ್ಯಾಣಿ ರಾಗಾಲಾಪನೆಯನ್ನು ತಮ್ಮ ನೈಜ ಸಂಚಾರಗಳಿಂದ ಶ್ರೀಮಂತಗೊಳಿಸಿ ಮುತ್ತಯ್ಯ ಭಾಗವತರ ಭುವನೇಶ್ವರಿಯ ನೆನೆ ಮಾನಸ ಕನ್ನಡ ಕೃತಿಗೆ ತಮ್ಮ ಅಸಾಧಾರಣ ಲಯ ವಿಚಕ್ಷಣತೆಯ ಸ್ವರಗಳನ್ನು ಪೋಣಿಸಿದರು. ಲಗುಬಗೆಯ ದಾರಿನೀತೆಲುಸುಕೊಂಟಿ (ಶುದ್ಧಸಾವೇರಿ) ಮುದ ನೀಡಿತು.

ಬೇಗಡೆ ರಾಗದ ಬೆಡಗನ್ನು ತೋರಬೇಕಾದರೆ ಅಪಾರವಾದ ಅನುಭವವಿರಬೇಕು. ಅವರೆಡರಿಂದಲೂ ಸಮೃದ್ಧವಾಗಿ ಬೇಗಡೆ ರಾಗವು ಮಿಡಿದು ಶಂಕರಿ ನೀವೆ ಕೃತಿ ಮತ್ತು ಅದರ ಕನಕಾದ್ರಿ ಸಾಧನಾಧೀನ ಪಂಕ್ತಿಯ ಸಾಹಿತ್ಯ ವಿನ್ಯಾಸದ ನಂತರ ಪಲ್ಲವಿಗೆ ಹಿಂತಿರುಗಿ ಅದಕ್ಕೆ ಸ್ವರಗಳನ್ನು ಹಾಡಿದ್ದು ಅಚ್ಚರಿಗೊಳಿಸಿತು. ಏಮಿ ಜೇಸಿತೆ (ತೋಡಿ) ಜಯಶ್ರೀಯವರ ಗಾಯನದ ಮತ್ತೊಂದು ಆಕರ್ಷಕ ಘಟ್ಟವಾಗಿತ್ತು.

ತಮ್ಮ ಅಪಾರ ಮನೋಧರ್ಮ ಪ್ರಕಾಶನ ಸಾಧನವಾಗಿ, ಪ್ರಣಾಳಿಕೆಯಾಗಿ ದ್ವಿರಾಗ, ತಾನ ಮತ್ತು ಪಲ್ಲವಿಯನ್ನು ಅವರು ಬಳಸಿಕೊಂಡರು. ಅದಕ್ಕಾಗಿ ಕಾಪಿ ಮತ್ತು ಬೇಹಾಗ್ ರಾಗಗಳನ್ನು ಪರ್ಯಾಯವಾಗಿ ಚಿತ್ರಿಸಿದ ಅವರ ಪಾಂಡಿತ್ಯ ಅನುಪಮವಾದುದು. ನಡೆ ಪಲ್ಲವಿಯನ್ನು ತ್ರಿಶ್ರ ತ್ರಿಪುಟತಾಳದಲ್ಲಿ ವಿಸ್ತರಿಸಿ ಹಿಂದೋಳ, ವಾಸಂತಿ, ಹಂಸಾನಂದಿ ಇತ್ಯಾದಿ ರಾಗಗಳ ರಾಗಮಾಲಿಕಾ ಸ್ವರಗಳನ್ನು ಹಾಡಿ ಅವರು ಪ್ರಶಂಸೆ ಗಳಿಸಿದರು.

ನೀಲಾ ವಿಶಿಷ್ಟ ಪ್ರತಿಪಾದನೆ
ಗಂಭೀರವಾದ ಪಾಠಾಂತರ, ಆಗಿನ ಕಾಲದ ಕಠಿಣ ಸಾಧನೆ, ಅನೇಕ ದಶಕಗಳ ವೇದಿಕೆ ಅನುಭವ, ಶುದ್ಧ ಶಾಸ್ತ್ರೀಯ ಸಂಗೀತದ ಅನುಭಾವ, ಹಲವಾರು ಶ್ರೇಷ್ಠ ಮಟ್ಟದ ಸಂಗೀತಗಾರ-ಶಿಷ್ಯರ ತಯಾರಿ ಹಾಗೂ ಪರಿಪಕ್ವವಾದ ಪಾಂಡಿತ್ಯಗಳಿಂದ ಹಿರಿಯ ಗಾಯಕಿ ನೀಲಾ ರಾಂಗೋಪಾಲ್ ಅವರು ತಮ್ಮ ನಿಷ್ಕಳಂಕ ಮತ್ತು ನಿರರ್ಗಳ ಗಾಯನಕ್ಕೆ ಪ್ರಸಿದ್ಧರು. ತಮ್ಮ ಕಛೇರಿಗಳನ್ನು ಅಪೂರ್ವ ರಾಗಗಳು, ಕೃತಿಗಳು ಮತ್ತು ಪ್ರತಿಪಾದನಾ ವೈಶಿಷ್ಟ್ಯಗಳಿಂದ ನಿತ್ಯ ನೂತನವಾಗಿಸುವುದರಲ್ಲಿ ಅವರು ಸಿದ್ಧಹಸ್ತರು.

ನೀಲಾ ಅವರ ಕಛೇರಿಯು ಶಿಲ್ಪ (structure) ಮತ್ತು ಬಂಧ (texture)ಗಳ ಸಮರಸತೆಗಾಗಿ ಗಣನೀಯವಾಗಿತ್ತು. ಕಛೇರಿಯಾದ್ಯಂತ ರಾಗ ಮತ್ತು ಭಾವಗಳು ಸ್ಫುಟವಾಗಿ ತೆರೆದುಕೊಂಡು ಅವರ ಗಾಯನ ಕೌಶಲ, ಅಭಿವ್ಯಕ್ತಿ ವಿಧಾನ, ಭಾವನಾಪೂರ್ಣತೆ ಮತ್ತು ಲಯ ಪ್ರಾವೀಣ್ಯ ಪ್ರಶಂಸೆಗೊಳಗಾದವು. ಸಾಂಪ್ರದಾಯಿಕ ಮೌಲ್ಯಗಳೆಡೆಗೆ ಅವರ ಒಲವು, ಉತ್ತಮ ಕಲೆಗಾರಿಕೆ ಮತ್ತು ಸಹಜ ಗತಿ ಹಾಡಲಾದ ಪ್ರತಿಯೊಂದು ರಚನೆಯನ್ನು ಉಜ್ವಲಗೊಳಿಸಿತು.

ಕರ್ನಾಟಕ ಸಂಗೀತ ತ್ರಿಮೂರ್ತಿಗಳಿಂದ ಹಿಡಿದು ಹರಿದಾಸರು ಮತ್ತಿತರೆ ವಾಗ್ಗೇಯಕಾರರ ಕೃತಿಗಳನ್ನು ಸೊಗಸಾಗಿ ಮಂಡಿಸಿ ತಮ್ಮ ಕಛೇರಿಗೆ ಹೊಸ ತೆರನಾದ ಆಯಾಮವನ್ನು ಗಾಯಕಿ ಒದಗಿಸಿದರು. ಪರಿಣತ ಪಿಟೀಲು ವಾದಕಿ ಚಾರುಲತಾ ರಾಮಾನುಜಂ ಅವರ ಸಹವಾದನ ಪ್ರಭಾವಶಾಲಿಯಾಗಿತ್ತು. ಆದರೆ ಪೂಂಗಲಮ್ ಎಸ್. ಸುಬ್ರಮಣ್ಯಂ ಅವರ ಮೃದಂಗ ವಾದನ ಮತ್ತಷ್ಟು ಪರಿಣಾಮಕಾರಿಯಾಗಿರಬಹುದಾಗಿತ್ತು. ಗುರುಪ್ರಸಾದ್ ಅವರ ಘಟ ಪಕ್ಕವಾದ್ಯ ಉಪಯುಕ್ತವಾಗಿತ್ತು.

ನಿನ್ನೆ ಪಾಡುವೆ  ಎಂದು ತಮ್ಮ ಕಛೇರಿಯನ್ನು ಅವರು ಆರಂಭಿಸಿ ಕೇಳುಗರ ಗಮನ ಸೆಳೆದು ಅವರನ್ನು ಕಡೆಯ ಲಾಲ್ಗುಡಿ ಅವರ ರಾಗೇಶ್ರೀ ತಿಲ್ಲಾನದ ಸಮರ್ಥ ಕೊನೆಯವರೆಗೂ ಹಿಡಿದಿಟ್ಟರು. ಬಹು ಚತುರತೆಯಿಂದ ಹಾಡಬೇಕಾದ ಆನಂದಭೈರವಿ ಅಟತಾಳ ವರ್ಣ (ವನಜಾಕ್ಷಿ) ಸುಂದರವಾಗಿ ಮೂಡಿ ಬಂದಿತು. ವೆಂಕಟೇಶ ದೀಕ್ಷಿತರ ಶ್ರೀಶಿವತ್ರಯ ಮಹಾಗಣಪತಿಂ (ನಾಟ) ವೇದಿಕೆಯಲ್ಲಿ ಹೊಸದಾಗಿ ಕೇಳಿಬಂದು ಅದನ್ನು ಸ್ವರಪ್ರಸ್ತಾರದೊಂದಿಗೆ ಮತ್ತಷ್ಟು ಅಲಂಕೃತಗೊಳಿಸಿದರು. ನೀಲಾ ಅವರ ನೀಲಾಂಬರಿ ರಾಗದ ಅಂಬಾ ನೀಲಾಯತಾಕ್ಷಿ (ದೀಕ್ಷಿತರು) ಸಾರಪೂರ್ಣವಾಗಿತ್ತು.

ಶಾಮಾಶಾಸ್ತ್ರಿಗಳ ಕರುಣ ಜೂಡವಮ್ಮ  ದೇವಿಯ ಎದುರಿಗೆ ಬಿನ್ನವಿಸಿಕೊಂಡಂತಿತ್ತು. ಸ್ವಾತಿ ತಿರುನಾಳರ ಪಾಲಯಾ ಸದಾ  ರಚನೆಯ ವಿನಿಕೆ ರಾಗಭಾವ ಸತ್ಯ ಮತ್ತು ಸತ್ವಚಿತ್ರಣದ ಖರಹರಪ್ರಿಯ ರಾಗದ ಸವಿಸ್ತಾರ ಗಾಯನಕ್ಕೆ ಅನುಕೂಲಕರ ವಾತಾವರಣವನ್ನು ಉಂಟುಮಾಡಿತು. ಅದರಲ್ಲಿ ಅವರು ಕೈಗೊಂಡ ಗ್ರಹ ಅಥವಾ ಶೃತಿ ಭೇದವಂತೂ ಅದಕ್ಕೆ ಪರಿಪೂರ್ಣ ಅಭಿವ್ಯಕ್ತಿಯನ್ನು ಕಲ್ಪಿಸಿತು. ತ್ಯಾಗರಾಜರ ರಾಮಾ ನೀಯಡ ಕೀರ್ತನೆ ಧನ ಸೌಖ್ಯಮು ಎಂಬಲ್ಲಿ ನೆರೆವಲ್ ಮತ್ತು ಕಲ್ಪನಾಸ್ವರಗಳ ಅಡಕದೊಂದಿಗೆ ಖುಷಿ ಕೊಟ್ಟಿತು. ತಮಗೆ ಅತ್ಯಂತ ಇಷ್ಟವಾದ ನೀರಜಸಮ (ಜಯಂತಶ್ರೀ ರಾಗ, ತ್ರಿಶ್ರ ಆದಿತಾಳ, ಊತ್ತುಕ್ಕಾಡು ವೆಂಕಟಸುಬ್ಬಯ್ಯರ್) ಕಛೇರಿಗೆ ಕಳೆ ಕಟ್ಟಿತು.

ಸಾಕಷ್ಟು ಜಾಣ್ಮೆ ಮತ್ತು ನೈಪುಣ್ಯದಿಂದ ನಿರ್ವಹಿಸಬೇಕಾದ ರಿಷಭಪ್ರಿಯ ರಾಗವನ್ನು ರಾಗ, ತಾನ ಮತ್ತು ಪಲ್ಲವಿಗಾಗಿ ಆಯ್ದುಕೊಂಡು ತಮ್ಮ ವಿದ್ವತ್ತು ಮತ್ತು ವಿಶೇಷತೆಗಳ ಉತ್ತುಂಗ ಶಿಖರವನ್ನು ಅವರು ದರ್ಶಿಸಿದರು. ಶುದ್ಧ ಶಾಸ್ತ್ರೀಯತೆಯಿಂದ ಕಿವಿಗಳಿಗೆ ಆಪ್ಯಾಯಮಾನವಾಗಿದ್ದ ರಾಗ ಮತ್ತು ತಾನ ವಿಸ್ತಾರದಲ್ಲಿ  ತಮ್ಮ ಹಿರಿಮೆ-ಗರಿಮೆಗಳನ್ನು ನೀಲಾ ಅವರು ಪರಿಚಯಿಸಿದರು. ಲಯ ಪ್ರಭುತ್ವದಿಂದ ಮಾತ್ರ ಎಟಕುವ ಮಿಶ್ರಜಾತಿ ತ್ರಿಪುಟತಾಳಕ್ಕೆ ಶಿವೇ ಪಾಹಿಮಾಂ ಅಂಬಿಕೆ ಶೃತಫಲದಾಯಿಕೆ ಶಶಿಕಲಾಧರಿ ರಿಷಭಪ್ರಿಯೆ ಪಲ್ಲವಿಯನ್ನು ಅಳವಡಿಸಿ ಅದನ್ನು ಕಾಲ ಮತ್ತು ಗತಿ ಭೇದಗಳೊಂದಿಗೆ ಸಜ್ಜುಗೊಳಿಸಿದರು. ಪಲ್ಲವಿಯ ವಿಶದೀಕರಣಕ್ಕೆ ಚಾರುಕೇಶಿ, ಮಲಯಮಾರುತ ಮತ್ತು ಸಿಂಧುಭೈರವಿ ರಾಗಗಳ ರಾಗಮಾಲಿಕಾ ಸ್ವರಗಳ ಕಿರೀಟವನ್ನು ತೊಡಿಸಿ ಕಲಾಪ್ರೇಮಿಗಳನ್ನು ಸಂತೃಪ್ತಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT