ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯ ನಾಗರಿಕರಿಗೆ ರಿಯಾಯ್ತಿ ನೀಡಲು ಆದೇಶ

Last Updated 14 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ನೀಡುವ ಗುರುತಿನ ಚೀಟಿ ಹೊಂದಿರುವ ಹಿರಿಯ ನಾಗರಿಕರಿಗೆ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಬಸ್‌ಗಳಲ್ಲಿ ರಿಯಾಯಿತಿ ದರದಲ್ಲಿ ಟಿಕೆಟ್ ನೀಡಬೇಕು ಎಂದು ಬೆಂಗಳೂರು ನಗರ ಜಿಲ್ಲೆಯ ಎರಡನೇ ಹೆಚ್ಚುವರಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ನಿರ್ದೇಶನ ನೀಡಿದೆ.

ಹಿರಿಯ ನಾಗರಿಕರ ಗುರುತಿನ ಚೀಟಿ ಹೊಂದಿರುವವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಸ್ವಾಮ್ಯದ ರಸ್ತೆ ಸಾರಿಗೆ ಸಂಸ್ಥೆಗಳು, ರೈಲ್ವೆ ಮಂಡಳಿ, ಸರ್ಕಾರಿ ಆಸ್ಪತ್ರೆಗಳು ರಿಯಾಯಿತಿ ದರದಲ್ಲಿ ಸೇವೆ ಒದಗಿಸಬೇಕು ಎಂದು ಸರ್ಕಾರ ಸ್ಪಷ್ಟವಾಗಿ ಸೂಚನೆ ನೀಡಿದೆ. ಇದನ್ನು ಪಾಲಿಸಬೇಕು ಎಂದು ವೇದಿಕೆ ಇತ್ತೀಚೆಗೆ ನೀಡಿದ ಆದೇಶದಲ್ಲಿ ಹೇಳಿದೆ.

`ಹಿರಿಯ ನಾಗರಿಕರಿಗೆ ಇಲಾಖೆ ನೀಡುವ ಗುರುತಿನ ಚೀಟಿ ಹೊಂದಿರುವ ನಾನು, ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಬೆಂಗಳೂರಿನಿಂದ ಮುಳಬಾಗಿಲಿಗೆ ಪ್ರಯಾಣಿಸುವಾಗ, ಕೆಎಸ್‌ಆರ್‌ಟಿಸಿ ಬಸ್ಸಿನ ನಿರ್ವಾಹಕರು ಟಿಕೆಟ್ ದರದಲ್ಲಿ ಶೇಕಡ 25ರಷ್ಟು ರಿಯಾಯಿತಿ ನೀಡಲು ನಿರಾಕರಿಸಿದರು. ನಿಯಮಗಳ ಅನ್ವಯ ಈ ಗುರುತಿನ ಚೀಟಿ ಹೊಂದಿರುವವರಿಗೆ ಶೇ 25ರಷ್ಟು ರಿಯಾಯಿತಿ ನೀಡಬೇಕು~ ಎಂದು ಬೆಂಗಳೂರಿನ ಟಿ.ಆರ್. ನಗರ ನಿವಾಸಿ ಸಿ.ಎಸ್. ಗೋಪಾಲ ಶರ್ಮ ಎಂಬುವವರು ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ ವೇದಿಕೆ, ಈ ಆದೇಶ ನೀಡಿದೆ.

`ಕೆಎಸ್‌ಆರ್‌ಟಿಸಿ ನೀಡುವ ಗುರುತಿನ ಚೀಟಿ ಹೊಂದಿದ್ದರೆ ಮಾತ್ರ ಟಿಕೆಟ್ ದರದಲ್ಲಿ ರಿಯಾಯಿತಿ ನೀಡಲು ಸಾಧ್ಯ ಎಂದು ನಿರ್ವಾಹಕರು ಹೇಳಿದರು. ಆದರೆ ಹಿರಿಯ ನಾಗರಿಕರ ಗುರುತಿನ ಚೀಟಿ ಹೊಂದಿರುವ ಎಲ್ಲರಿಗೂ ಟಿಕೆಟ್ ದರದಲ್ಲಿ ರಿಯಾಯಿತಿ ನೀಡಬೇಕು ಎಂದು ಕೆಎಸ್‌ಆರ್‌ಟಿಸಿಗೆ ನಿರ್ದೇಶನ ನೀಡಬೇಕು~ ಎಂದು ಶರ್ಮ ಅವರು ಮನವಿ ಮಾಡಿದ್ದರು.

ಅವರ ಮನವಿ ಪುರಸ್ಕರಿಸಿದ ವೇದಿಕೆ, `ದೂರುದಾರರಿಗೆ 500 ರೂಪಾಯಿಯನ್ನು ಪರಿಹಾರ ರೂಪದಲ್ಲಿ ನೀಡಬೇಕು. ಸರ್ಕಾರ ನೀಡುವ ಗುರುತಿನ ಚೀಟಿ ಹೊಂದಿರುವ ಹಿರಿಯ ನಾಗರಿಕರಿಗೆ ರಿಯಾಯಿತಿ ದರದಲ್ಲಿ ಟಿಕೆಟ್ ನೀಡಬೇಕು~ ಎಂದು ನಿರ್ದೇಶನ ನೀಡಿ ಅರ್ಜಿ ಇತ್ಯರ್ಥಗೊಳಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT