ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯ ನಾಯಕರ ಹೆಸರಿಡಲು ಸಭೆ ನಿರ್ಣಯ

Last Updated 12 ಅಕ್ಟೋಬರ್ 2012, 10:25 IST
ಅಕ್ಷರ ಗಾತ್ರ

ಚನ್ನಗಿರಿ: ಪಟ್ಟಣದಲ್ಲಿ ಪಂಚಾಯ್ತಿ ವತಿಯಿಂದ ನಿರ್ಮಿಸಿರುವ ಸಾರ್ವಜನಿಕ ಸ್ಥಳ ಅಥವಾ ಕಟ್ಟಡಗಳಿಗೆ ಶಾಸಕ ಅಥವಾ ಸಂಸತ್ ಸದಸ್ಯರ ಹೆಸರನ್ನು ನಾಮಕರಣ ಮಾಡಿರುವುದನ್ನು ತೆರವುಗೊಳಿಸಲು ನ್ಯಾಯಾಲಯ ಆದೇಶ ಮಾಡಿದ್ದು, ಅದರಂತೆ ಈಗಾಗಲೇ ಹೆಸರನ್ನು ಅಳಿಸಿ ಹಾಕಲಾಗಿದೆ. ಈಗ ಹೊಸದಾಗಿ ಅಂತಹ ಕಟ್ಟಡಗಳಿಗೆ ತಾಲ್ಲೂಕಿನ ಹಿರಿಯ ನಾಯಕರ ಹೆಸರನ್ನು ನಾಮಕರಣ ಮಾಡಲು ಸರ್ವಾನುಮತದ ನಿರ್ಣಯವನ್ನು ಸಭೆಯಲ್ಲಿ ಅಂಗೀಕರಿಸಲಾಯಿತು.

ಮಾಡಾಳ್ ವಿರೂಪಾಕ್ಷಪ್ಪ ವಾಣಿಜ್ಯ ಸಂಕೀರ್ಣಕ್ಕೆ ಮಾಜಿ ಸಚಿವ ಎಚ್. ಸಿದ್ದಯ್ಯ, ವಡ್ನಾಳ್ ರಾಜಣ್ಣ ಬಡಾವಣೆಗೆ ಚನ್ನಮ್ಮಾಜಿ ಬಡಾವಣೆ ಹಾಗೂ ವಡ್ನಾಳ್ ರಾಜಣ್ಣ ಸಮುದಾಯ ಭವನಕ್ಕೆ ಮಾಜಿ ಸಚಿವ ಎನ್.ಜಿ. ಹಾಲಪ್ಪ ಅವರ ಹೆಸರನ್ನು ನಾಮಕರಣ ಮಾಡಲು ಅಧ್ಯಕ್ಷೆ ಪುಷ್ಪಲತಾ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಾಮಾನ್ಯಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಪಟ್ಟಣದಲ್ಲಿ ಈಗ ತಿಂಗಳಿಗೆ ನಾಲ್ಕೈದು ಬಾರಿ ಮಾತ್ರ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಇಂದಿನ ಸಭೆಗೆ ನೀರಗಂಟಿಗಳು ಹಾಜರಾಗಬೇಕೆಂದು ತಿಳಿಸಿದ್ದರೂ ಯಾರೊಬ್ಬರೂ ಹಾಜರಾಗಿಲ್ಲ.

ನೀರಗಂಟಿಗಳು ಯಾವ ಸದಸ್ಯರ ಮಾತಿಗೂ ಬೆಲೆ ನೀಡುತ್ತಿಲ್ಲ. ಅವರಿಗೆಲ್ಲಾ ಕೂಡಲೇ ನೋಟಿಸ್ ಜಾರಿ ಮಾಡಬೇಕು. ಅದೇ ರೀತಿ ಅಧಿಕಾರಿಗಳು ಆಯಾ ವಾರ್ಡ್‌ಗಳ ಸದಸ್ಯರ ಗಮನಕ್ಕೆ ತಾರದೇ ಕಾಮಗಾರಿಗಳನ್ನು ಮಾಡಿಸುತ್ತಿದ್ದಾರೆ. ಇದು ತಪ್ಪು. ಸದಸ್ಯರ ಗಮನಕ್ಕೆ ತಂದು ಕಾಮಗಾರಿ ನಿರ್ವಹಿಸಬೇಕು ಎಂದು ಸದಸ್ಯರಾದ ಕೆ.ಪಿ.ಎಂ. ಶಿವಲಿಂಗಯ್ಯ, ಸಿ.ಕೆ. ರೇವಣ್ಣ, ಎನ್. ಮಂಜಪ್ಪ, ಶಿವಕುಮಾರ್, ಅಸ್ಲಾಂ ಬೇಗ್ ಒತ್ತಾಯಿಸಿದರು.

ಉಪಾಧ್ಯಕ್ಷ ರೆಹಮತ್ ಉಲ್ಲಾ ಖಾನ್, ಮುಖ್ಯಾಧಿಕಾರಿ ಕೆ. ಪರಮೇಶ್ ಉಪಸ್ಥಿತರಿದ್ದರು.

ಮಾನಸಿಕ ಅಸ್ವಸ್ಥರ ದಿನಾಚರಣೆ
ಮಾನಸಿಕ ಅಸ್ವಸ್ಥರನ್ನು ಕೀಳಾಗಿ ಕಾಣಬಾರದು. ಅವರಿಗೆ ಕಿರುಕುಳವನ್ನು ಕೊಡದೇ ಪ್ರೀತಿಯನ್ನು ತೋರಿಸುವುದು ಉತ್ತಮ ಮಾರ್ಗವಾಗಿದೆ ಎಂದು ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ವೈ. ರಾಮಚಂದ್ರರಾವ್ ಹೇಳಿದರು.

ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ತಾಲ್ಲೂಕು ವಕೀಲರ ಸಂಘ ಹಾಗೂ ತಾಲ್ಲೂಕು ಕಾನೂನು ನೆರವು ಸಮಿತಿ ವತಿಯಿಂದ ವಿಶ್ವ ಮಾನಸಿಕ ಅಸ್ವಸ್ಥರ ದಿನಾಚರಣೆ ಅಂಗವಾಗಿ ನಡೆದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮಾನಸಿಕ ಅಸ್ವಸ್ಥರನ್ನು ಕೋಣೆಗಳಲ್ಲಿ ಕೂಡಿ ಹಾಕಬಾರದು. ಎಲ್ಲರಂತೆ ಅವರನ್ನು ಸ್ವಚ್ಛಂದವಾಗಿ ಆಟವಾಡಲು ಹೊರಗಡೆ ಬಿಡಬೇಕು. ನಿರ್ಬಂಧ ಹೇರಿದರೆ ಅವರಲ್ಲಿ ಮಾನಸಿಕ ಅಸ್ವಸ್ಥತೆ ಹೆಚ್ಚಾಗುವುದರಲ್ಲಿ ಯಾವುದೇ ಸಂದೇಹ ಇಲ್ಲ ಎಂದರು.

ಜೆಎಂಎಫ್‌ಸಿ ನ್ಯಾಯಾಧೀಶರಾದ ಕವಿತಾ ಎಸ್. ಉಂಡೋಡಿ ಕಾರ್ಯಕ್ರಮ ಉದ್ಘಾಟಿಸಿದರು. ಸರ್ಕಾರಿ ಸಹಾಯಕ ಅಭಿಯೋಜಕ ಸುಧೀರ್‌ಕುಮಾರ್, ತಾಲ್ಲೂಕು ವೈದ್ಯಾಧಿಕಾರಿ ಡಾ.ಮಂಜುನಾಥ್, ಡಾ.ಅಶೋಕ್, ಪ್ರಾಂಶುಪಾಲ ಎನ್. ಶಿವಮೂರ್ತಿ ಉಪಸ್ಥಿತರಿದ್ದರು.

ಅಭಿವೃದ್ಧಿಗೆ ಒತ್ತು
ಬಿಜೆಪಿ ಸರ್ಕಾರ ಅಲ್ಪಸಂಖ್ಯಾತರ ವಿರೋಧಿಯಲ್ಲ ಎಂಬುದನ್ನು ಅಭಿವೃದ್ಧಿಗೆ ನಿಗಮಕ್ಕೆ ರೂ 400 ಕೋಟಿ ಅನುದಾನ ನೀಡುವ ಮೂಲಕ ಸಾಧಿಸಿ ತೋರಿಸಿದೆ ಎಂದು ಸಂಸತ್ ಸದಸ್ಯ ಜಿ.ಎಂ. ಸಿದ್ದೇಶ್ವರ ಹೇಳಿದರು.
ತಾಲ್ಲೂಕಿನ ಆಗರಬನ್ನಿಹಟ್ಟಿ ಗ್ರಾಮದಲ್ಲಿ ಬುಧವಾರ ನಡೆದ ವಿವಿಧ ಕಾಮಗಾರಿ ಉದ್ಘಾಟನೆ, ಗುದ್ದಲಿ ಪೂಜೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮಾತನಾಡಿ, ಈ ಗ್ರಾಮದ ಶಾದಿಮಹಲ್ ನಿರ್ಮಾಣಕ್ಕೆ ರೂ 25 ಲಕ್ಷ, ಸುವರ್ಣ ಗ್ರಾಮ ಯೋಜನೆಗೆ ರೂ 58 ಲಕ್ಷ, ಬೀರೂರು-ಸಮ್ಮಸಗಿ ಸಂಪರ್ಕ ರಸ್ತೆಗೆ ರೂ 30 ಲಕ್ಷ, ಓವರ್‌ಹೆಡ್ ಟ್ಯಾಂಕ್‌ಗೆ ರೂ 18 ಲಕ್ಷ ಕಾಂಕ್ರೀಟ್ ರಸ್ತೆಗೆ ರೂ 40 ಲಕ್ಷ, ಸಮುದಾಯ ಭವನಗಳಿಗೆ ರೂ 30 ಲಕ್ಷ, ವಿ. ರಾಮೇನಹಳ್ಳಿಯಿಂದ ದೇವರಹಳ್ಳಿ ಗ್ರಾಮದವರೆಗೆ ರಸ್ತೆಗೆ ರೂ 1 ಕೋಟಿ, ಹೊದಿಗೆರೆ-ನೀತಿಗೆರೆ ರಸ್ತೆಗೆ ರೂ 2.50 ಕೋಟಿ ಅನುದಾನವನ್ನು ನೀಡಲಾಗಿದೆ ಎಂದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಸರೋಜಮ್ಮ, ಸದಸ್ಯರಾದ ಎ.ಬಿ. ಶಿವಕುಮಾರ್, ಕೆ.ಜಿ. ಪಾಲಾಕ್ಷಪ್ಪ, ಜಿಲ್ಲಾ ಪಂಚಾಯ್ತಿ ಸದಸ್ಯ ಎಚ್.ವಿ. ರುದ್ರಪ್ಪ, ತುಮ್ಕೊಸ್ ನಿರ್ದೇಶಕ ಮಲ್ಲಿಕಾರ್ಜುನಪ್ಪ, ಎಪಿಎಂಸಿ ಅಧ್ಯಕ್ಷ ಜಿ.ಎಸ್. ಮಹೇಶ್ವರಪ್ಪ, ಎಸ್. ಪ್ರೇಮಾ, ಎ.ಎಂ. ಚಂದ್ರಶೇಖರ್, ಬಿ.ಕೆ. ರಾಜಣ್ಣ, ಶಿವಲಿಂಗಪ್ಪ ಇದ್ದರು. ಉಷಾ ಪ್ರಾರ್ಥಿಸಿದರು. ಎಂ.ಬಿ. ನಾಗರಾಜ್ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT