ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯ ಮಗನ ಸಾವು: ನೇಣಿಗೆ ಶರಣಾದ ತಾಯಿ-ಮಗ

Last Updated 14 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಹಿರಿಯ ಮಗನ ಸಾವಿನಿಂದ ಮನನೊಂದ ತಾಯಿ, ಕಿರಿಯ ಮಗನ ಜತೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ದೊಮ್ಮಲೂರಿನ ಕೇಂದ್ರ ಲೋಕೋಪಯೋಗಿ ವಸತಿ ಸಮುಚ್ಚಯದಲ್ಲಿ (ಸಿಪಿಡಬ್ಲ್ಯುಡಿ) ಗುರುವಾರ ನಡೆದಿದೆ.

ಅಂಬಿಕಾ (65) ಮತ್ತು ಶ್ರೀನಿವಾಸನ್ (30) ಆತ್ಮಹತ್ಯೆ ಮಾಡಿಕೊಂಡವರು. ಅಂಬಿಕಾ ಅವರು ತಮಿಳುನಾಡು ಮೂಲದವರು. ಅವರ ಪತಿ ರಾಮಸ್ವಾಮಿ ಅವರು ಲೆಕ್ಕ ಪರಿಶೋಧನಾ ಇಲಾಖೆಯಲ್ಲಿ ಲೆಕ್ಕಿಗರಾಗಿದ್ದರು. ಹಲವು ವರ್ಷಗಳ ಹಿಂದೆಯೇ ಅವರು ಮೃತಪಟ್ಟಿದ್ದರು. ಅಂಬಿಕಾ ಅವರ ಹಿರಿಯ ಮಗ ಕುಮಾರೇಶನ್ ಕುಟುಂಬದ ಜವಾಬ್ದಾರಿ ಹೊತ್ತಿದ್ದರು. ಅನುಕಂಪದ ಆಧಾರದ ಮೇಲೆ ಲೆಕ್ಕ ಪರಿಶೋಧನಾ ಇಲಾಖೆಯಲ್ಲಿ ಅವರು ನೌಕರಿ ಪಡೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಒಂದು ವಾರದ ಹಿಂದೆ ಕುಮಾರೇಶನ್ ಅವರು ಹೃಯಾಘಾತದಿಂದ ಮೃತಪಟ್ಟಿದ್ದರು. ಕುಮಾರೇಶನ್ ಸಾವಿನಿಂದ ಅಂಬಿಕಾ ಮತ್ತು ಶ್ರೀನಿವಾಸನ್ ಖಿನ್ನತೆಗೊಳಗಾಗಿದ್ದರು. ಗುರುವಾರ ಮಧ್ಯಾಹ್ನವೇ ಅವರಿಬ್ಬರೂ ವಸತಿ ಸಮುಚ್ಚಯದ ಮನೆಯಲ್ಲಿ ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

`ನಮ್ಮನ್ನು ಭೇಟಿಯಾಗ ಬಯಸುವವರು ಬಾಗಿಲು ಒಡೆದು ಒಳಗೆ ಬನ್ನಿ~ ಎಂದು ಕಾಗದದಲ್ಲಿ ಬರೆದಿದ್ದ ಶ್ರೀನಿವಾಸನ್ ಅವರು ಅದನ್ನು ಬಾಗಿಲು ಬಳಿ ಅಂಟಿಸಿದ್ದರು. ಇದನ್ನು ಗಮನಿಸಿದ ಸುಬ್ರಮಣಿ ಎಂಬುವರು ನೆರೆಹೊರೆಯವರಿಗೆ ಮಾಹಿತಿ ನೀಡಿದ್ದಾರೆ. ಆ ನಂತರ ಅವರು ಠಾಣೆಗೆ ವಿಷಯ ತಿಳಿಸಿದರು. ಬಾಗಿಲು ಒಡೆದು ಒಳ ಹೋಗಿ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿದ್ದು ಗೊತ್ತಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

`ಕುಟುಂಬಕ್ಕೆ ಸಂಬಂಧಿಕರ ಸಂಪರ್ಕ ಇರಲಿಲ್ಲ. ಆದ್ದರಿಂದ ಯಾರೊಬ್ಬರು ಅವರ ಮನೆಗೆ ಬರುತ್ತಿರಲಿಲ್ಲ. ಶ್ರೀನಿವಾಸನ್ ಬಿಇ ಪದವೀಧರರಾಗಿದ್ದು, ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ವಿವಾಹವಾಗಿರಲಿಲ್ಲ. ಕುಟುಂಬದ ಸದಸ್ಯರು ನೆರೆ ಹೊರೆಯವರೊಂದಿಗೂ ಹೆಚ್ಚು ಸಂಪರ್ಕ ಇಟ್ಟುಕೊಂಡಿರಲಿಲ್ಲ~ ಎಂದು ಸಿಪಿಡಬ್ಲ್ಯುಡಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಆರ್.ಮನೋಹರ್ `ಪ್ರಜಾವಾಣಿ~ಗೆ ತಿಳಿಸಿದರು.

`ಕುಮಾರೇಶನ್ ಸಾವಿನ ನಂತರ ಅಂಬಿಕಾ ಮತ್ತು ಶ್ರೀನಿವಾಸನ್ ತೀವ್ರ ದುಃಖಕ್ಕೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ. ಕುಟುಂಬಕ್ಕೆ ಸಂಬಂಧಿಕರು ಇಲ್ಲದ ಕಾರಣ ಸಂಘದ ವತಿಯಿಂದ ಅವರು ಅಂತ್ಯಕ್ರಿಯೆ ನಡೆಸಲಾಗುತ್ತದೆ~ ಎಂದು ಅವರು ಹೇಳಿದರು. ಹಲಸೂರು ಠಾಣೆಯಲ್ಲಿ ದೂರು ದಾಖಲಾಗಿದೆ.

ಡಾ.ರಾಜ್ ಅವರಲ್ಲಿ ಪ್ರೀತಿ!: `ನಮ್ಮ ಸಾವಿಗೆ ಯಾರೂ ಕಾರಣರಲ್ಲ. ತಂದೆ ಸಾವನ್ನಪ್ಪಿದ ಮೇಲೆ ಅಣ್ಣ ಕುಮಾರೇಶನ್ ನಮಗೆ ಭರವಸೆ, ಶಕ್ತಿ, ಜೀವನ ಎಲ್ಲವೂ ಆಗಿದ್ದ. ಅವನನ್ನು ಬಿಟ್ಟು ಬದುಕುವ ಆಸೆ ಇಲ್ಲ. ತಾಯಿ ಸಾವನ್ನಪ್ಪಿದ್ದರೂ ಅಣ್ಣ ಸಾಯುವ ನಿರ್ಧಾರವನ್ನೇ ತೆಗೆದುಕೊಳ್ಳುತ್ತಿದ್ದ. ಸಂಬಂಧಿಕರಿಂದ ನಮಗೆ ಪ್ರೀತಿ ಸಿಗಲಿಲ್ಲ. ನಟರಾದ ಡಾ.ರಾಜ್‌ಕುಮಾರ್, ಡಾ.ವಿಷ್ಣುವರ್ಧನ್, ಅಂಬರೀಷ್, ಎಂಜಿಆರ್, ರಜನಿಕಾಂತ್, ಗಾಯಕರಾದ ಕಿಶೋರ್ ಕುಮಾರ್, ಎಸ್.ಜಾನಕಿ, ಚಂದ್ರಬಾಬು ಅವರಲ್ಲಿ ನಾವು ಪ್ರೀತಿ ಕಂಡಿದ್ದೆವು.

ಅಣ್ಣ ಮತ್ತು ನನ್ನ ಪಿಎಫ್ ಹಣವನ್ನು ಹಾಗೂ ನಮ್ಮೆಲ್ಲ ಆಸ್ತಿಯನ್ನು ಅನಾಥಶ್ರಮಕ್ಕೆ ನೀಡಿ. ತಾಯಿ ಐವತ್ತು ಸಾವಿರ ರೂಪಾಯಿ ಸಾಲ ಮಾಡಿದ್ದಾರೆ. ನನ್ನ ಬ್ಯಾಂಕ್ ಖಾತೆಯಲ್ಲಿರುವ ಹಣದಿಂದ ಆ ಸಾಲ ತೀರಿಸಿ. ನಮ್ಮ ಅಂತ್ಯಕ್ರಿಯೆಗೆಂದು ಟೇಬಲ್ ಮೇಲೆ ಹಣ ಇಟ್ಟಿದ್ದೇವೆ, ಅದನ್ನು ಬಳಸಿಕೊಳ್ಳಿ~ ಎಂದು ಶ್ರೀನಿವಾಸನ್ ಪತ್ರ ಬರೆದಿಟ್ಟಿದ್ದಾರೆ. ಶ್ರೀನಿವಾಸನ್, ಅವರ ತಾಯಿ ಮತ್ತು ಸಹೋದರ ಬಳಸುತ್ತಿದ್ದ ಕೆಲ ವಸ್ತುಗಳನ್ನು ಒಡೆದು ಹಾಕಿದ್ದಾರೆ. ಆ ವಸ್ತುಗಳನ್ನು ಬೇರೆ ಯಾರೂ ಬಳಸಬಾರದು ಎಂದೂ ಅವರು ಪತ್ರದಲ್ಲಿ ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT