ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯರ ಕಾಳಜಿ

Last Updated 1 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಜೀವನದ ಮುಸ್ಸಂಜೆಯಲ್ಲಿರುವವರ ಕುರಿತಾದ ಕಾಳಜಿಗಳಿಗೆ ಅಭಿವ್ಯಕ್ತಿ ನೀಡುವ ದಿನವಾಗಿ ಹಿರಿಯರ ದಿನವನ್ನು (ಅ.1) ಆಚರಿಸಿದ್ದೇವೆ. ಅಂಕಿಅಂಶಗಳ ಪ್ರಕಾರ, ವಿಶ್ವದಲ್ಲಿ ವೃದ್ಧರ ಸಂಖ್ಯೆ ಏರುತ್ತಲೇ ಸಾಗಿದೆ.

ವೈದ್ಯಕೀಯ ವಿಜ್ಞಾನದ ಮುನ್ನಡೆ ಹಾಗೂ ಹೆಚ್ಚುತ್ತಿರುವ ಆರೋಗ್ಯ ಸೌಲಭ್ಯಗಳಿಂದಾಗಿ ಭಾರತದಲ್ಲೂ ವೃದ್ಧರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. 2011ರ ಜನಗಣತಿ ಪ್ರಕಾರ, 60ಕ್ಕಿಂತ ಹೆಚ್ಚು ವಯಸ್ಸಾದವರ ಸಂಖ್ಯೆ ಮುಂದಿನ ವರ್ಷದೊಳಗೆ ಹತ್ತುಕೋಟಿಗೆ ಏರಲಿದೆ. ಈ ಜನಸಮುದಾಯದ ವೈದ್ಯಕೀಯ ಅಥವಾ ಸಾಮಾಜಿಕ ಸಮಸ್ಯೆಗಳ ಸವಾಲುಗಳನ್ನು ನಿರ್ವಹಿಸಲು ರಾಷ್ಟ್ರ ಸನ್ನದ್ಧವಾಗಬೇಕಾದ ಜರೂರು ಇಂದಿನ ದಿನಗಳಲ್ಲಿದೆ.

ಸಾಮಾಜಿಕ ಹಾಗೂ ಆರೋಗ್ಯ ಭದ್ರತೆಗೆ ಸಂಬಂಧಿಸಿದಂತೆ ಬಹುತೇಕ ವೃದ್ಧರು ವೃದ್ಧಾಪ್ಯಸೌಲಭ್ಯಗಳನ್ನು ಹೊಂದಿಲ್ಲ. ವೃದ್ಧರಿಗೆ ಆದಾಯ ಭದ್ರತೆ ಅಥವಾ ಆದಾಯ ಸಂಪಾದನೆಗೆ ಅವಕಾಶಗಳನ್ನು ಒದಗಿಸುವ ವ್ಯವಸ್ಥೆ ನಮ್ಮಲ್ಲಿಲ್ಲ. 

ರಾಜ್ಯದಲ್ಲಿರುವ ಅಂಕಿಅಂಶಗಳನ್ನು ಗಮನಿಸಿದಲ್ಲಿ, ವೃದ್ಧರ ಸಂಖ್ಯೆ 50 ಲಕ್ಷ. ಆ ಪೈಕಿ 35 ಲಕ್ಷ ಮಂದಿ ಬಡತನದ ರೇಖೆಗಿಂತ ಕೆಳಗಿನ ಮಟ್ಟದಲ್ಲಿ ಬದುಕುತ್ತಿದ್ದಾರೆ. ಇವರ್ಲ್ಲಲಿ 15 ಲಕ್ಷ ಮಂದಿ ಸರ್ಕಾರದ ಮಾಸಿಕ ಪಿಂಚಣಿ ರೂ 400 ಪಡೆಯುತ್ತ್ದ್ದಿದು ಈಗ 8.5ಲಕ್ಷ ಮಂದಿಯ ಹೆಸರನ್ನು ಪಿಂಚಣಿ ಪಟ್ಟಿಯಿಂದ ಕೈಬಿಟ್ಟಿರುವುದು ವಿರೋಧಕ್ಕೆ ಕಾರಣವಾಗಿದೆ.

ಸುಳ್ಳು ಪ್ರಮಾಣಪತ್ರಗಳನ್ನು ನೀಡಿ  ಈ ಪಿಂಚಣಿ ಪಡೆಯಲಾಗುತ್ತಿತ್ತು ಎಂದು ಆರೋಪಿಸಿ ಈ ಸೌಲಭ್ಯ ಹಿಂತೆಗೆದುಕೊಂಡಿರುವ ವಿರುದ್ಧ ಪ್ರತಿಭಟನೆ ನಡೆದಿದೆ. ವಾಸ್ತವವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲೇ ಅಂಗವಿಕಲ ಮತ್ತು ಹಿರಿಯರ ವಿಭಾಗವೂ ಇದೆ.

ಇದರಿಂದ ಹಿರಿಯರ ಅಗತ್ಯಗಳ ಕುರಿತಂತಹ ನೀತಿಗಳನ್ನು ರೂಪಿಸುವ ವಿಚಾರ ಅವಗಣನೆಗೆ ಸಿಲುಕುತ್ತಿದೆ ಎಂದು ವೃದ್ಧರು ಆರೋಪಿಸುತ್ತಿದ್ದು ಈ ಆರೋಪಗಳಲ್ಲಿ ಹುರುಳಿದೆ.

 ಸಮೀಕ್ಷೆಯೊಂದರ ಪ್ರಕಾರ, ಭಾರತದ ಶೇ 31ರಷ್ಟು ಹಿರಿಯ ನಾಗರಿಕರು ತಮ್ಮ ವೃದ್ಧಾಪ್ಯದಲ್ಲಿ ಒಂದಲ್ಲ ಒಂದು ದೌರ್ಜನ್ಯವನ್ನು ಎದುರಿಸುತ್ತಾರೆ. ಹೊಂದಾಣಿಕೆಯ ಕೊರತೆ ಹಾಗೂ ಆರ್ಥಿಕ ಅವಲಂಬನೆಗಳಿಂದಾಗಿ ಈ ಬಗೆಯ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.

ಜೀವನಶೈಲಿ ಬದಲಾವಣೆ, ವೃತ್ತಿಸಂಬಂಧಿ ಒತ್ತಡ, ದೂರದ ದೇಶ ಅಥವಾ ಊರುಗಳಲ್ಲಿ ನೆಲೆಸಬೇಕಾದ ಅನಿವಾರ್ಯತೆಗಳಿಂದಲೂ ಹಿರಿಯರ ಕಾಳಜಿ ಮಾಡಲು ಸಾಧ್ಯವಾಗದ ಸಂದರ್ಭಗಳೂ ಇಂದಿನ ದಿನಗಳಲ್ಲಿ ಸೃಷ್ಟಿಯಾಗುತ್ತಿವೆ. ಅನೇಕ ವೃದ್ಧರು ಏಕಾಂಗಿಯಾಗಿ ಬದುಕುವಂತಹದ್ದೂ ಮಾಮೂಲಾಗುತ್ತಿದೆ.

ಇಂತಹ ಸಂದರ್ಭಗಳಿಗೆ ಸ್ಪಂದಿಸಬಹುದಾದಂತಹ ಯಾವುದೇ ಸಾಮಾಜಿಕ ಕ್ಷೇಮಾಭಿವೃದ್ಧಿ ಕಾರ್ಯಕ್ರಮಗಳು ನಮ್ಮಲ್ಲಿಲ್ಲ. ಅನೇಕ ರಾಷ್ಟ್ರಗಳಲ್ಲಿ ವೃದ್ಧಾಪ್ಯಶಾಸ್ತ್ರ (ಜೀರಿಆ್ಯಟ್ರಿಕ್ಸ್) ಎಂಬುದು ಅತ್ಯಂತ ಮುಖ್ಯವಾದ  ವೈದ್ಯಕೀಯ ಶಿಸ್ತು. ಆದರೆ ನಮ್ಮಲ್ಲಿ ಈ ಬಗೆಗೂ ಜಾಗೃತಿ ಕಡಿಮೆ.

ನಮ್ಮ ಆಸ್ಪತ್ರೆಗಳಲ್ಲಿ ಹಿರಿಯ ನಾಗರಿಕರ ವಿಶೇಷ ಅಗತ್ಯಗಳಿಗೆ ಗಮನ ನೀಡುವಂತಹ ತರಬೇತಿ ಪಡೆದ ಸಿಬ್ಬಂದಿಯಾಗಲಿ, ಹಿರಿಯ ನಾಗರಿಕರ ವಿಶೇಷ ವಾರ್ಡ್‌ಗಳಾಗಲಿ ಇರುವುದು ಅಪರೂಪ. ವೃದ್ಧರಿಗಾಗಿ ಸುರಕ್ಷಾ ಕಾರ್ಯಕ್ರಮಗಳನ್ನು ರೂಪಿಸುವ ಸಂದರ್ಭದಲ್ಲಿ ಸರ್ಕಾರ  ಈ ಎಲ್ಲಾ ಅಂಶಗಳನ್ನೂ ಗಮನಕ್ಕೆ ತೆಗೆದುಕೊಳ್ಳಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT