ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರೇಖೇಡ: ಹೆಜ್ಜೆ ಹೆಜ್ಜೆಗೂ ಸಮಸ್ಯೆ ಅನಾವರಣ

Last Updated 17 ಡಿಸೆಂಬರ್ 2013, 6:04 IST
ಅಕ್ಷರ ಗಾತ್ರ

ಕನಕಗಿರಿ: ಈ ಊರಿನ ಯಾವುದೇ ಮೂಲೆ ಯಲ್ಲಿ ನಿಂತು ಕಲ್ಲು ಎಸೆದರೆ ‘ಬಾರಿ ಮರ್ದಪ್ಪ’ನ ಮನೆಯ ಮೇಲೆ ಬೀಳುತ್ತವೆ. ‘ಬಾರಿಮರ್ದ ಸಿದ್ದೇಶ್ವರ’ ಗ್ರಾಮದ ಆರಾಧ್ಯ ದೈವ. ಹೀಗಾಗಿ ಪ್ರತಿ ಮನೆಯಲ್ಲಿಯೂ ಬಾರೇಶ, ಬಾರಿಮರ್ದಪ್ಪ, ಸಿದ್ದೇಶ್ವರ, ಸಿದ್ದಮ್ಮ ಎಂಬ ಹೆಸರಿನವರು ಕಾಣಸಿಗುತ್ತಾರೆ.

ವಾಲ್ಮೀಕಿ ನಾಯಕ ಜನಾಂಗದವರೇ ಹೆಚ್ಚಿರುವ ಹುಲಿಹೈದರ ಜಿಲ್ಲಾ ಪಂಚಾಯಿತಿಗೆ ಸೇರಿದ ಹಿರೇಖೇಡ ಹಲವು ವಿಶೇಷಗಳಿಂದ ಗಮನ ಸೆಳೆಯುತ್ತದೆ. ಆದರೆ, ಗ್ರಾಮದಲ್ಲಿ ಮೂಲ ಸೌಕರ್ಯ ಎಂಬುದು ಈಗಲೂ ಮರೀಚಿಕೆ.

ಗ್ರಾಮದಲ್ಲಿ ನಾಲ್ಕು ಅಂಗನವಾಡಿಗಳಿವೆ. ಅವುಗಳಲ್ಲಿ ಒಂದಕ್ಕೆ ಮಾತ್ರ ಸ್ವಂತ ಕಟ್ಟಡ ಇದೆ. ಉಳಿದವು ಗುಡಿಗಳಲ್ಲಿ ನೆಲೆಯೂರಿವೆ.
ಗ್ರಾಮಕ್ಕೆ ಮಂಜೂರಾದ ನೀರಿನ ಟ್ಯಾಂಕ್‌ ನಿರ್ಮಿಸಲು ಸ್ಥಳೀಯರು ತಮ್ಮ ಹೊಲದಲ್ಲಿ ಜಾಗ ನೀಡಿದ್ದಾರೆ. ಜಾಗದ ಮಾಲೀಕರಿಗೆ ಆಶ್ರಯಮನೆ ನೀಡುವ ಭರವಸೆ ನೀಡಿದ್ದ ಗ್ರಾಮ ಪಂಚಾಯಿತಿ ಆಡಳಿತ ಭರವಸೆ ಈಡೇರಿಸಿಲ್ಲ.

ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ವಿಪರೀತವಾಗಿದೆ. ಊರಿಗೆ ಒಂದೇ ಒಂದು ಕೈಪಂಪ್‌ ಇದ್ದು, ಜನ ಸರದಿಯಲ್ಲಿ ನಿಂತು ನೀರು ಸಂಗ್ರಹಿಸಬೇಕು. ಕರೆಂಟ್‌ ಇದ್ದರೆ ಮಾತ್ರ ನೀರು. ಶುದ್ಧ ಕುಡಿಯುವ ನೀರಿನ ಯಾವಾಗ ಬರುತ್ತದೆ ಸಾರ್‌? ಎಂದು ಸೋಮಪ್ಪ ಕುರುಬರ ಪ್ರಶ್ನಿಸುತ್ತಾರೆ.

ಗ್ರಾಮದಲ್ಲಿ ಸಾಮೂಹಿಕ ಶೌಚಾಲಯ ಇಲ್ಲದ ಕಾರಣ ಮಹಿಳೆಯರು ಪರದಾಡುತ್ತಿದ್ದಾರೆ. ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆ ಇದೆ, ಅದು ಸುತ್ತಲ್ಲಿನ ಹತ್ತು ಗ್ರಾಮಗಳಿಗೆ ಅನುಕೂಲ ವಾಗಿದೆ. ಗ್ರಾಮಗಳಲ್ಲಿ ಬಡವರ ಸಂಖ್ಯೆ ಹೆಚ್ಚಿದ್ದು, ಪಾಲಕರು ತಮ್ಮ ಮಕ್ಕಳಿಗೆ ಪಿಯುಸಿ ಹಾಗೂ ಉನ್ನತ ಶಿಕ್ಷಣ ಕೊಡಿಸಲು ಹಿಂಜರಿ ಯುತ್ತಿದ್ದಾರೆ. ವಸತಿನಿಲಯ ಸೇರಿದಂತೆ ಗ್ರಂಥಾ ಲಯ, ಶುದ್ಧ ನೀರಿನ ಘಟಕ ಮಂಜೂರು ಮಾಡಿಸಲು ಗ್ರಾಮಸ್ಥರು ಆಗ್ರಹಿಸುತ್ತಾರೆ.

‘ವೈಯಕ್ತಿಕ ಶೌಚಾಲಯ ಸೇರಿದಂತೆ ಗ್ರಾಮದಲ್ಲಿ ಮೂಲಸೌಲಭ್ಯ ಕಲ್ಪಿಸಲು ಆದ್ಯತೆ ನೀಡಲಾಗಿದೆ. ಅಧಿಕಾರಿ, ಜನಪ್ರತಿನಿಧಿಗಳಿಗೆ ಹೆಚ್ಚಿನ ಹಣಕಾಸಿನ ನೆರವು ಕೋರಲಾಗಿದೆ’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹಂಪಮ್ಮ ಹುಗ್ಗಿ ತಿಳಿಸಿದರು.


‘ಊರಾಗ ಹೆಣ್ಣು ಮಕ್ಕಳಿಗೆ ಶೌಚಾಲಯ ಇಲ್ಲ. ಜಾಲಿಗಿಡಗಲೇ ಮಹಿಳೆಯರ ಮಾನ ಕಾಪಾಡುತ್ತಿವೆ. ಶೌಚಾಲಯ ಕಟ್ಟಿಸಿದರೆ ಗ್ರಾಮದಲ್ಲಿ ನೈರ್ಮಲ್ಯ ಕಾಪಾಡಲು ಅನುಕೂಲವಾಗುತ್ತದೆ.
ಲಕ್ಷ್ಮಮ್ಮ ಬಡಿಗೇರ, ಗ್ರಾಮಸ್ಥೆ

‘ಮನೆಗಾಗಿ ಅಲೆದಾಟ ತಪ್ಪಿಲ್ಲ’
‘ಆಶ್ರಯ ಮನಿ ಕೊಡುತ್ತಿವಿ ಅಂದ ನಮ್ಮ ಜಾಗದಾಗ ನೀರಿನ  ಟ್ಯಾಂಕ್‌ ಕಟ್ಟಿದ್ದಾರೆ. ಮನಿ ಕೊಟ್ಟಿಲ್ಲ, ಟ್ಯಾಂಕ್‌ಗೆ ನೀರು ಬಿಟ್ಟಿಲ್ಲ. ಮನಿಗಾಗಿ ಅಲೆದಾಟ ತಪ್ಪಿಲ್ಲ. ಮೂಗಿಗೆ ತುಪ್ಪ ಸವರುವ ಕೆಲಸವೂ ನಿಂತಿಲ್ಲ’
ರಾಮಪ್ಪ ಕಾಟಾಪುರ, ಗ್ರಾಮಸ್ಥ

‘ಆಶ್ರಯ ಮನೆ ಅನರ್ಹರ ಪಾಲು’
‘2005ರಿಂದ ಆಶ್ರಯ ಮನೆಗಳು ಅನರ್ಹರ ಪಾಲಾಗಿವೆ. ಗ್ರಾಮಸಭೆ ನಡೆಸಿಲ್ಲ. ಬಡವರಿಗೆ ಮನಿ ಸಿಕ್ಕಿಲ್ಲ.  ಒಂದೇ ಮನೆ ಮುಂದೆ ನಿಂತು, ನಾಲ್ಕಾರು ಮಂದಿ ಫಲಾನುಭವಿಗಳು ಭಾವಚಿತ್ರ ತೆಗೆಸಿಕೊಂಡಿದ್ದಾರೆ. ಈ  ಅವ್ಯವಹಾರದ ಬಗ್ಗೆ ತನಿಖೆಯಾಗಲಿ’
–ಅಯ್ಯಣ್ಣ ಹುಡೇದ, ಗ್ರಾಮಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT