ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರೇಬಗನಾಳ: ಕಾರ್ಮಿಕರ ಮಿಂಚಿನ ಪ್ರತಿಭಟನೆ

Last Updated 9 ಜನವರಿ 2011, 11:05 IST
ಅಕ್ಷರ ಗಾತ್ರ

ಕೊಪ್ಪಳ:ಪಂಚಾಯಿತಿ ಚುನಾವಣೆ ದಿನ ಮತದಾನಕ್ಕೆ ಅನುಕೂಲವಾಗುವಂತೆ ರಜೆ ನೀಡದೇ ಇರುವುದನ್ನು ಖಂಡಿಸಿ ಹಾಗೂ ಕಾರ್ಖಾನೆ ಆಡಳಿತ ಮಂಡಳಿ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ಕೋಕಾ-ಕೋಲಾ ಕಂಪನಿ ಕಾರ್ಮಿಕರು ಮಿಂಚಿನ ಮುಷ್ಕರ ನಡೆಸಿದ ಘಟನೆ ಶನಿವಾರ ಸಂಜೆ ತಾಲ್ಲೂಕಿನ ಹಿರೇಬಗನಾಳ ಗ್ರಾಮದಲ್ಲಿ ನಡೆದಿದೆ.

ಕಂಪನಿಯ ಮುಂಭಾಗದಲ್ಲಿ ದಿಢೀರ್ ಧರಣಿ ನಡೆಸಿದ ಸುಮಾರು 25ಕ್ಕೂ ಅಧಿಕ ಸಂಖ್ಯೆಯಲ್ಲಿದ್ದ ಕಾರ್ಮಿಕರು, ಕಂಪನಿಯ ಆಡಳಿತ ಮಂಡಳಿ ಅನುಸರಿಸುತ್ತಿರುವ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಮಿಕ ಮುಖಂಡರು, ಕಳೆದ ಡಿ. 31ರಂದು ನಡೆದ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಮಾಡಲು ಅನುಕೂಲವಾಗುವಂತೆ ರಜೆ ಘೋಷಿಸುವಂತೆ ಮನವಿ ಮಾಡಲಾಯಿತು. ಆದರೆ, ಆಡಳಿತ ಮಂಡಲಿ ರಜೆ ನೀಡಲು ನಿರಾಕರಿಸಿತಲ್ಲದೇ, ಕೇವಲ ಎರಡು ಗಂಟೆ ಅವಕಾಶ ನೀಡುವುದಾಗಿ ಹೇಳಿತು ಎಂದರು.

ದೂರದ ಊರುಗಳಿಗೆ ತೆರಳಿ ಮತ ಚಲಾಯಿಸಿ, ಪುನಃ ಕರ್ತವ್ಯ ಹಾಜರಾಗಲು ಸಾಧ್ಯವಾಗುವುದಿಲ್ಲ ಎಂಬ ಕಾರ್ಮಿಕರ ವಾದ ಯಾವುದೇ ಪರಿಣಾಮ ಬೀರಲಿಲ್ಲ. ಕೊನೆಯ ಪಕ್ಷ ನಮ್ಮ ಸಾಂದರ್ಭಿಕ ರಜೆಯನ್ನೇ ನೀಡಿ ಎಂದೂ ಆಡಳಿತ ಮಂಡಳಿ ಸಮ್ಮತಿಸಲಿಲ್ಲ ಎಂದು ಕಾರ್ಮಿಕ ಮುಖಂಡರು ದೂರಿದರು.

ಆದರೂ, ಕೆಲವು ಕಾರ್ಮಿಕರು ಮತ ಚಲಾಯಿಸಲು ಊರಿಗೆ ತೆರಳಿದರು. ಇದನ್ನೇ ನೆಪ ಮಾಡಿಕೊಂಡ ಆಡಳಿತ ಮಂಡಳಿ ನಿನ್ನೆ (ಶುಕ್ರವಾರ) ಕಾರ್ಮಿಕರನ್ನು ಕರೆತರಲು ವಾಹನವನ್ನೇ ಕಳಿಸಲಿಲ್ಲ. ಅಲ್ಲದೇ, ಇಂದು ಕೆಲಸಕ್ಕೆ ಹಾಜರಾಗಲು ಆಗಮಿಸಿದ ಕಾರ್ಮಿಕರಿಗೆ ಮಸ್ಟರ್ ರೋಲ್ ಪುಸ್ತಕದಲ್ಲಿ ಸಹಿ ಹಾಕಲು ಅವಕಾಶ ನೀಡಲಿಲ್ಲ. ಬದಲಿಗೆ, ಕೆಲವು ಅಧಿಕಾರಿಗಳೇ ಪುಸ್ತಕದಲ್ಲಿ ಕಾರ್ಮಿಕರ ಹೆಸರುಗಳ ಮುಂದೆ ಗುರುತು ಹಾಕಲು ಆರಂಭಿಸಿದರು. ಅಲ್ಲದೇ, 31ರಂದು ಮತದಾನಕ್ಕೆ ತೆಳಿದ ಕಾರ್ಮಿಕರಿಗೆ ಹಾಗೂ ರಜೆ ನೀಡದ್ದನ್ನು ಪ್ರಶ್ನಿಸಿದ ಕಾರ್ಮಿಕ ಮುಖಂಡರಿಗೆ ಕಂಪನಿ ಶೋಕಾಸ್ ನೊಟೀಸ್ ನೀಡಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ಆಡಳಿತ ಮಂಡಳಿಯ ಈ ಎಲ್ಲಾ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ ಧರಣಿ ನಡೆಸುತ್ತಿರುವುದಾಗಿ ಸ್ಪಷ್ಟಪಡಿಸಿದರು. ಈ ಕುರಿತಂತೆ ಆಡಳಿತ ಮಂಡಳಿಯ ಪ್ರತಿಕ್ರಿಯೆ ಪಡೆಯಲು ಸುದ್ದಿಗಾರರು ನಡೆಸಿದ ಪ್ರಯತ್ನಗಳು ವಿಫಲವಾದವು.

ಕಾರ್ಮಿಕರಾದ ಪಂಪಾಪತಿ ರಾಟಿ, ಚೆನ್ನವೀರಯ್ಯ, ರಮೇಶ, ಶೇಷಗಿರಿ, ಶ್ರೀನಿವಾಸರಾವ್ ಹಾಗೂ ಇತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಪರಿಸರ ರಕ್ಷಣಾ ವೇದಿಕೆಯ ಅಧ್ಯಕ್ಷ ವೆಂಕಟೇಶ ಹಾಗೂ ಇತರರು ಈ ಹೋರಾಟಕ್ಕೆ ಬೆಂಬಲ ಘೋಷಿಸಿ, ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT