ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೀಗಾದರೆ ಪ್ರತಿಭೆ ಅರಳುವುದು ಹೇಗೆ...?

Last Updated 19 ಜೂನ್ 2011, 19:30 IST
ಅಕ್ಷರ ಗಾತ್ರ

ಕೆಸರಿನಲ್ಲಿ ಕಮಲ ಅರಳುತ್ತೆ...
ಹಾಗೇ, ಅವ್ಯವಸ್ಥೆಯ ಗೂಡಿನ್ಲ್ಲಲೂ ಪ್ರತಿಭಾವಂತ ಅಥ್ಲೀಟ್‌ಗಳು ಅರಳುತ್ತಾರೆ ಎಂದು ಈ ಮಹಾಶಯರು ಭಾವಿಸಿದಂತಿದೆ.

ಎಂಥ ಅವ್ಯವಸ್ಥೆ ನೋಡಿ...! ಕ್ರೀಡಾಂಗಣದಲ್ಲಿನ ಟಾಯ್ಲೆಟ್‌ಗಳನ್ನು ಸ್ವಚ್ಛ ಮಾಡಿ ಅದೆಷ್ಟು ತಿಂಗಳುಗಳಾಗಿವೆಯೋ? ಮೂಗು ಮುಚ್ಚಿಕೊಂಡು ಹೋಗಿ, ಮೂಗು ಮುಚ್ಚಿಕೊಂಡೇ ಹೊರಬರಬೇಕು! ಅಥ್ಲೆಟಿಕ್ ಕೂಟ ನಡೆದ ನಾಲ್ಕು ದಿನಗಳು ಕೂಡ ಇದೇ ಪಾಡು.

ಈಗಷ್ಟೇ ಹೆಸರು ಮಾಡುತ್ತಿರುವ ಕೆಲ ಅಥ್ಲೀಟ್‌ಗಳ ವಾಸ್ತವ್ಯಕ್ಕೆ ಕೂಡ ಸರಿಯಾದ ವ್ಯವಸ್ಥೆ ಇರಲಿಲ್ಲ. ಇನ್ನು ಕ್ರೀಡಾಂಗಣಕ್ಕೆ ಬಣ್ಣ ಬಳಿದು ಎಷ್ಟು ವರ್ಷಗಳು ಕಳೆದಿವೆಯೋ? ಕೆಲವೆಡೆ ಗ್ಯಾಲರಿಗಳಲ್ಲಿ ಪಾಚಿ ಕಟ್ಟಿದೆ. ಇನ್ನು ಕೆಲವೆಡೆ ರಾಶಿ ರಾಶಿ ಕಳೆ ಬೆಳೆದುನಿಂತಿದೆ. 1997ರ ರಾಷ್ಟ್ರೀಯ ಕ್ರೀಡಾಕೂಟದ ವೇಳೆ ಹಾಕಲಾಗಿದ್ದ ಎಲೆಕ್ಟ್ರಾನಿಕ್ ಸ್ಕೋರ್ ಬೋರ್ಡ್ ಕೆಟ್ಟು ವರ್ಷಗಳೇ ಕಳೆದಿದೆ. ತುಕ್ಕು ಹಿಡಿಯುತ್ತಿರುವ ಅದು ಯಾವುದೇ ಸಂದರ್ಭದಲ್ಲಿ ಕೆಳಗೆ ಬೀಳಬಹುದು!

ಈ ಅವ್ಯವಸ್ಥೆಯ ನಡುವೆಯೇ ಕಳೆದ ವಾರ ಉದ್ಯಾನ ನಗರಿಯ ಕಂಠೀರವ ಕ್ರೀಡಾಂಗಣದಲ್ಲಿ 51ನೇ ರಾಷ್ಟ್ರೀಯ ಸೀನಿಯರ್ ಅಂತರ ರಾಜ್ಯ ಅಥ್ಲೆಟಿಕ್ ಚಾಂಪಿಯನ್‌ಷಿಪ್ ನಡೆದು ಹೋಯಿತು.

`ಕಂಠೀರವ ಕ್ರೀಡಾಂಗಣದಲ್ಲಿ ಕ್ರೀಡಾಪಟುಗಳಿಗೆ ಮೂಲ ಸೌಲಭ್ಯ ಒದಗಿಸಿ ಎಂದು ಆರು ವರ್ಷಗಳಿಂದ ಮನವಿ ಮಾಡುತ್ತಲೇ ಇದ್ದೇವೆ. ಆದರೆ ಒಬ್ಬನೇ ಒಬ್ಬ ಅಧಿಕಾರಿಯೂ ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಕಾಳಜಿ ವಹಿಸಿ ಕೆಲಸ ಮಾಡುತ್ತಿಲ್ಲ~ ಎಂದು ಕರ್ನಾಟಕ ಒಲಿಂಪಿಕ್ ಸಂಸ್ಥೆ (ಕೆಒಎ) ಅಧ್ಯಕ್ಷ ಕೆ.ಗೋವಿಂದರಾಜ್ ಇತ್ತೀಚೆಗಷ್ಟೇ `ಪ್ರಜಾವಾಣಿ~ಯೊಂದಿಗೆ ಮಾತನಾಡುತ್ತಾ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು.

`ಕ್ರೀಡಾಂಗಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಶೌಚಾಲಯ ವ್ಯವಸ್ಥೆ ಹದಗೆಟ್ಟು ಹೋಗಿದೆ. ಒಂದು ಕ್ಯಾಂಟಿನ್ ಕೂಡ ಇಲ್ಲ. ಈ ಬಗ್ಗೆ ಅಧಿಕಾರಿಗಳು ಸ್ವಲ್ಪವೂ ತಲೆಕೆಡಿಸಿಕೊಳ್ಳುತ್ತಿಲ್ಲ. ಬದಲಾಗಿ ಈ ಅಧಿಕಾರಿಗಳು ಕ್ರೀಡಾಂಗಣವನ್ನು ಬಾಡಿಗೆ ಕೊಡುವ ಸಂಬಂಧ ಹೆಚ್ಚು ಕಾಳಜಿ ತೋರಿಸುತ್ತಿದ್ದಾರೆ~ ಎಂದು ಅವರು ಹೇಳಿದ್ದರು.

ಆ ವ್ಯವಸ್ಥೆ ಇನ್ನೂ ಸುಧಾರಿಸಿಲ್ಲ. ನಿಜ, ಕ್ರೀಡಾಂಗಣದಲ್ಲಿ ವಾರಕ್ಕೊಂದು ಸಮಾರಂಭಗಳು ನಡೆಯುತ್ತಿರುತ್ತವೆ. ಅದರಿಂದ ಬಾಡಿಗೆಯೂ ಬರುತ್ತೆ. ಆದರೆ ಕ್ರೀಡಾಂಗಣದ ಸೌಲಭ್ಯಗಳತ್ತ ಮಾತ್ರ ಯಾರೂ ಗಮನ ಹರಿಸುತ್ತಿಲ್ಲ.

ತಂಪು ಪಾನೀಯ ಕುಡಿಯಲು ಅಥವಾ ಏನನ್ನಾದರೂ ತಿನ್ನಲು ಸನಿಹ ಒಂದು ಸಣ್ಣ ಕ್ಯಾಂಟಿನ್ ಕೂಡ ಇಲ್ಲ. ದೂರದ ರಾಜ್ಯಗಳಿಂದ ಬಂದಿದ್ದ ಅಥ್ಲೀಟ್‌ಗಳು ಅದಕ್ಕಾಗಿ ಹುಡುಕಾಡುತ್ತಾ ಸದಾ ಗಿಜುಗುಡುವ ರಸ್ತೆ ದಾಟಿ ಹೋಗಬೇಕು.

`ಬೆಂಗಳೂರಿನಲ್ಲಿ ಮಾತ್ರ ಈ ಅವ್ಯವಸ್ಥೆ ಇದೆ ಎಂದು ತಿಳಿದುಕೊಳ್ಳಬೇಡಿ. ಬೇರೆ ರಾಜ್ಯಗಳಲ್ಲೂ ಇದೇ ಪಾಡು. ಹಾಗಂತ ಬಾಯಿಬಿಟ್ಟರೆ ನಾವು ಈ ಕ್ಷೇತ್ರದಲ್ಲಿ ಮುಂದುವರಿಯುವುದು ಕಷ್ಟ~ ಎಂದು ಈಗ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವ ಮಾಜಿ ಅಥ್ಲೀಟ್ ಒಬ್ಬರು ನುಡಿಯುತ್ತಾರೆ. ಅಥ್ಲೀಟ್‌ಗಳು ಈ ಅವ್ಯವಸ್ಥೆ ಬಗ್ಗೆ ಧ್ವನಿ ಎತ್ತಲು ಹೆದರುತ್ತಾರೆ.

ಎ್ಲ್ಲಲಾ ಕ್ರೀಡೆಗಳ ತಾಯಿ ಬೇರು ಅಥ್ಲೆಟಿಕ್ಸ್ ಎನ್ನುತ್ತಾರೆ. ಆದರೆ ಇಂತಹ ಅವ್ಯವಸ್ಥೆಯಲ್ಲಿ ಅಥ್ಲೀಟ್‌ಗಳ ಪ್ರತಿಭೆ ಯಾವ ರೀತಿಯಲ್ಲಿ ರೂಪಗೊಂಡಿತು ಹೇಳಿ? ಪೋಷಕರು ತಮ್ಮ ಮಕ್ಕಳನ್ನು ಇಂತಹ ಕಡೆ ಕಳುಹಿಸುತ್ತಾರಾ? ಬೆಂಗಳೂರಿನಲ್ಲಿಯೇ ಹೀಗಾದರೆ ರಾಜ್ಯದ ಇನ್ನುಳಿದ ಭಾಗಗಳಲ್ಲಿ ವ್ಯವಸ್ಥೆ ಹೇಗಿರಬಹುದು ಊಹಿಸಿ?
ಇರಲಿ ಬಿಡಿ, ಭಾರತದಲ್ಲಿ ಕ್ರಿಕೆಟ್ ಹೊರತುಪಡಿಸಿ ಉಳಿದ ಕ್ರೀಡೆಗಳು ಸುಧಾರಣೆಯಾಗುವುದು ಹಾಗೂ ಸೂಕ್ತ ಸೌಲಭ್ಯ ಹೊಂದುವುದು ತುಂಬಾ ಕಷ್ಟ.
`ರಾಷ್ಟ್ರೀಯ ಕ್ಯಾಂಪ್‌ಗಳಲ್ಲಿ ಬರೀ ರಾಜಕೀಯ ಹಾಗೂ ತಾರತಮ್ಯ ಮಾಡುತ್ತಾರೆ.

ಶಿಬಿರದಲ್ಲಿ ಸರಿಯಾದ ಸೌಲಭ್ಯವೇ ಇರುವುದಿಲ್ಲ. ಕಾಮನ್‌ವೆಲ್ತ್ ಕ್ರೀಡಾಕೂಟದ ಬಳಿಕ ಶಿಬಿರವನ್ನೇ ಆಯೋಜಿಸಿಲ್ಲ. ಹೀಗಾದರೇ ಪ್ರದರ್ಶನ ಮಟ್ಟವನ್ನು ಸುಧಾರಿಸಿಕೊಳ್ಳುವುದು ಹೇಗೆ~ ಎಂದು ಕಾಮನ್‌ವೆಲ್ತ್ ಕೂಟದ ಕಂಚಿನ ಪದಕ ವಿಜೇತ ಜಾವೆಲಿನ್ ಥ್ರೋ ಸ್ಪರ್ಧಿ ಕಾಶೀನಾಥ್ ನಾಯ್ಕ ಪ್ರಶ್ನಿಸುತ್ತಾರೆ.

ಆರು ವರ್ಷಗಳ ನಂತರ ನಡೆದ ಈ ಸೀನಿಯರ್ ಅಂತರ ರಾಜ್ಯ ಅಥ್ಲೆಟಿಕ್ ಚಾಂಪಿಯನ್‌ಷಿಪ್ ಆಕಸ್ಮಿಕವಾಗಿ ಬೆಂಗಳೂರಿಗೆ ಲಭಿಸಿತ್ತು.

`ಮೊದಲು ನಿಗದಿಯಾದಂತೆ ಈ ಕೂಟ ತಮಿಳುನಾಡಿನಲ್ಲಿ ನಡೆಯಬೇಕಿತ್ತು. ಆದರೆ ತಮಿಳುನಾಡು ಅಥ್ಲೆಟಿಕ್ ಸಂಸ್ಥೆ ಕಾರ್ಯದರ್ಶಿ ನೀಲಶಿವಲಿಂಗಸ್ವಾಮಿ ಅವರ ಅಕಾಲಿಕ ನಿಧನದ ಕಾರಣ ಬೆಂಗಳೂರಿಗೆ ಸ್ಥಳಾಂತರಿಸಲಾಯಿತು. ಲಭಿಸಿದ ಅಲ್ಪ ಕಾಲದಲ್ಲಿ ಕೂಟವನ್ನು ಯಶಸ್ವಿಯಾಗಿಸಲು ಪ್ರಯತ್ನಿಸಿದೆವು~ ಎನ್ನುತ್ತಾರೆ ಕರ್ನಾಟಕ ಅಥ್ಲೆಟಿಕ್ ಸಂಸ್ಥೆ ಕಾರ್ಯದರ್ಶಿ ಸತ್ಯನಾರಾಯಣ.

ಆದರೆ ಈ ಕ್ರೀಡಾಕೂಟದಲ್ಲಿ ಒಂದೇಒಂದು ರಾಷ್ಟ್ರೀಯ ದಾಖಲೆ ನಿರ್ಮಾಣವಾಗಲಿಲ್ಲ. ದಕ್ಷಿಣ ಕೊರಿಯಾದ ಡೇಗುನಲ್ಲಿ ಆಗಸ್ಟ್ 27ರಿಂದ ಸೆಪ್ಟೆಂಬರ್ 4ರವರೆಗೆ ಜರುಗಲಿರುವ ವಿಶ್ವ ಚಾಂಪಿಯನ್‌ಷಿಪ್‌ಗೆ ಬೇಕಾದ ಅರ್ಹತೆ ಮಟ್ಟ ಕೂಡ ದಾಟಲಿಲ್ಲ. ಹಾಗೇ, ಕರ್ನಾಟಕದಿಂದಲೂ ಹೇಳಿಕೊಳ್ಳುವಂತಹ ಪ್ರದರ್ಶನ ಮೂಡಿಬರಲಿಲ್ಲ.

ಕರ್ನಾಟಕಕ್ಕೆ ಬಂದ ಚಿನ್ನದ ಪದಕವೆಲ್ಲಾ ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿಯ ಅಥ್ಲೀಟ್‌ಗಳು ತಂದುಕೊಟ್ಟರು. ಅದಕ್ಕೆ ಉದಾಹರಣೆ ಅಶ್ವಿನಿ ಅಕ್ಕುಂಜಿ (ಉಡುಪಿ), ಸಹನಾ ಕುಮಾರಿ (ಮಂಗಳೂರು), ಕಾಶೀನಾಥ್ ನಾಯ್ಕ (ಶಿರಸಿ) ಹಾಗೂ ಎಂ.ಜಿ.ಜೋಸೆಫ್ (ಸುಳ್ಯ).

ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ಬೆಂಗಳೂರಿನ ವ್ಯವಸ್ಥೆ ಕೊಂಚ ಪರವಾಗಿಲ್ಲ. ಆದರೂ ಇಲ್ಲಿನ ಅಥ್ಲೀಟ್‌ಗಳೇಕೇ ಹಿಂದುಳಿದಿದ್ದಾರೆ? ಕೂಟದಲ್ಲಿ ಮತ್ತೊಮ್ಮೆ ಪಾರಮ್ಯ ಮೆರೆದಿದ್ದು ಕೇರಳ. ಸತತ ಐದನೇ ವರ್ಷ ಸಮಗ್ರ ಪ್ರಶಸ್ತಿ ಜಯಿಸಿದರು. ಆದರೆ ಇತರ ರಾಜ್ಯಗಳ ಪರಿಸ್ಥಿತಿ ಶೋಚನೀಯ.

ಇನ್ನು ಕೆಲ ಅಥ್ಲೀಟ್‌ಗಳು ದೇಶಿ ಕ್ರೀಡಾಕೂಟಗಳಲ್ಲಿ ಉತ್ತಮ ಪ್ರದರ್ಶನ ತೋರುತ್ತಾರೆ. ಆದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಅವರ ಪ್ರದರ್ಶನ ಆ ಮಟ್ಟವನ್ನೂ ತಲುಪುವುದಿಲ್ಲ. ಇದು 2008ರ ಒಲಿಂಪಿಕ್ಸ್ ಸೇರಿದಂತೆ ಪ್ರಮುಖ ಕೂಟಗಳಲ್ಲಿ ಸಾಬೀತಾಗಿದೆ.

ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಅಂಜು ಬಾಬಿ ಜಾರ್ಜ್ ಅವರು ಲಾಂಗ್ ಜಂಪ್‌ನಲ್ಲಿ ಎಲ್ಲಾ ಪ್ರಯತ್ನಗಳಲ್ಲಿ ಫೌಲ್ ಆಗಿ ಹೊರಬಿದ್ದಿದ್ದರು. ಇನ್ನು ಕೆಲವರಿಗೆ ತಮ್ಮ ವೈಯಕ್ತಿಕ ದಾಖಲೆ ಪ್ರದರ್ಶನವನ್ನು ಅ್ಲ್ಲಲಿ ಪುನರಾವರ್ತಿಸಲು ಸಾಧ್ಯವಾಗಿರಲಿಲ್ಲ.
ಏನೇ ಇರಲಿ, ಈ ವರ್ಷ ಏಷ್ಯನ್ ಹಾಗೂ ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್ ನಡೆಯುತ್ತಿದೆ. ಮುಂದಿನ ವರ್ಷ ಲಂಡನ್‌ನಲ್ಲಿ ಒಲಿಂಪಿಕ್ ಕ್ರೀಡಾಕೂಟ ಜರುಗಲಿದೆ.
ಎಚ್ಚೆತ್ತುಕೊಳ್ಳಲು ಇನ್ನೂ ಕಾಲ ಮಿಂಚಿ ಹೋಗಿಲ್ಲ...!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT