ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೀಗಿದೆ ಹಸಿರು ಕಾಳಜಿ!

Last Updated 7 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಸ್ಯಾಂಕಿ ರಸ್ತೆ ವಿಸ್ತರಣೆಗಾಗಿ ಮಹಾನಗರ ಪಾಲಿಕೆಯವರು ಮರಗಳನ್ನು ಕತ್ತರಿಸಲು ಮುಂದಾದಾಗ ಅನೇಕ ಸಂಘಟನೆಗಳು `ಉಗ್ರ ಪ್ರತಿಭಟನೆ~ ನಡೆಸಿದವು. ಅನೇಕರು ಮರ `ಅಪ್ಪಿ~ಕೊಂಡರು, ಮರ ಏರಿದರು, ರಾತ್ರಿ ಇಡೀ ಮರದ ಮೇಲೆ ವಾಸ ಮಾಡಿದರು. ಬೆಂಗಳೂರಿನಲ್ಲಿ `ಪರಿಸರ ಕಾಳಜಿ~ ಎನ್ನುವುದು ಅಂಥ `ಉಗ್ರ~ ಸ್ವರೂಪದಲ್ಲಿದೆ!

ಇಷ್ಟೆಲ್ಲ `ಪರಿಸರ ಕಾಳಜಿ~ ಪ್ರದರ್ಶಿಸುವ ಬೆಂಗಳೂರಿನ ನಾಗರಿಕರು ತಮ್ಮ ಮನೆಗಳನ್ನು ಎಷ್ಟು ಪರಿಸರ ಸ್ನೇಹಿಯಾಗಿ ಇಟ್ಟುಕೊಂಡಿದ್ದಾರೆ? ಈ ಪ್ರಶ್ನೆ ಹಾಕಿದರೆ, ಅಘಾತಕಾರಿ ಅಂಶ ಅನಾವರಣಗೊಳ್ಳುತ್ತದೆ.

ಏಕೆಂದರೆ ಬೆಂಗಳೂರಿನಲ್ಲಿ ಶೇ 83ರಷ್ಟು ಮನೆಗಳು `ಕನಿಷ್ಠ ಪರಿಸರ ಸ್ನೇಹಿ~ಯಾಗಿಯೂ ಇಲ್ಲ! ಇದು ಆಧಾರರಹಿತ ಮಾತಲ್ಲ. ಪರಿಸರ ಸ್ನೇಹಿ ಮನೆ ನಿರ್ಮಾಣದಲ್ಲಿ ದಶಕಗಳ ಅನುಭವ ಹೊಂದಿರುವ ಬಯೋಡೈವರ್ಸಿಟಿ ಕನ್ಸರ್ವೇಷನ್ ಆಫ್ ಇಂಡಿಯಾ ಸಂಸ್ಥೆ ನಡೆಸಿದ `ಪರಿಸರ ಸ್ಪಂದನ ಸಮೀಕ್ಷೆ~ಯಿಂದ ಬೆಳಕಿಗೆ ಬಂದ ಸತ್ಯ.

ಈ ಸಮೀಕ್ಷೆಗೆ ನಗರದ ಎಲ್ಲ ವರ್ಗಗಳ (21ರಿಂದ 50ರ ವಯೋಮಾನದ, 20 ರಿಂದ 40 ಸಾವಿರ ರೂಪಾಯಿ ಆದಾಯವಿರುವ ) ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಸ್ವಂತ ವಸತಿ ಗೃಹಗಳನ್ನು ಮಾತ್ರ ಪರಿಗಣನೆಗೆ ತೆಗೆದುಕೊಳ್ಳಲಾಗಿತ್ತು. ಇವರಲ್ಲಿ ಶೇ 34ರಷ್ಟು ಮಂದಿ ಎರಡು ಮತ್ತು ಮೂರು ಬೆಡ್‌ರೂಮ್ ಮನೆ ಹೊಂದಿದವರು.

`ಮಳೆ ನೀರು ಸಂಗ್ರಹ~ ಕುರಿತು ಯಥೇಚ್ಛ ಪ್ರಚಾರ ಮಾಡಲಾಗಿದೆ. ಜಲ ಮಂಡಳಿ `ಈ ವಿಧಾನವನ್ನು ಕಡ್ಡಾಯಗೊಳಿಸಿದೆ~. ಉಚಿತ ಸಲಹಾ ಕೇಂದ್ರ, ಪ್ಲಾನಿಂಗ್ ವ್ಯವಸ್ಥೆ ಮಾಡಿದೆ. ಇಷ್ಟಾದರೂ ಉದ್ಯಾನ ನಗರಿಯಲ್ಲಿ  ಶೇ 12 ಮಂದಿ ಮಾತ್ರ ಮಳೆ ನೀರು ಸಂಗ್ರಹ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಉಳಿದವರು, ದುಬಾರಿ ವೆಚ್ಚ, ಸ್ಥಳದ ಕೊರತೆ ಮತ್ತು ಮಾರ್ಗದರ್ಶನದ ಕೊರತೆಯ ಕಾರಣ ನೀಡುತ್ತಾರೆ.

ಸಮೀಕ್ಷೆಗೆ ಒಳಪಟ್ಟವರಲ್ಲಿ ಬಹುತೇಕ ಮಂದಿಗೆ ನೀರಿನ ಪೋಲಾಗುವ ಕುರಿತು ಕಾಳಜಿ ಇಲ್ಲ. ಹಾಗಾಗಿ ಕಾವೇರಿ ಹಾಗೂ ಕೊಳವೆ ಬಾವಿ ನೀರನ್ನು ಶೇ 73 ರಷ್ಟು ಮಂದಿ ಕಾರು ತೊಳೆಯಲು, ಶೇ 84ರಷ್ಟು ಶೌಚಾಲಯ ಬಳಕೆಗೆ, ಶೇ 78ರಷ್ಟು ಮಂದಿ ಗಿಡಗಳಿಗೆ ನೀರು ಹನಿಸಲು ಬಳಸುತ್ತಾರೆ. 

ಶೇ 19ರಷ್ಟು ಜನರಿಗೆ ಸಸ್ಯ ಸಾಂಗತ್ಯವಿದೆ. ಇವರಲ್ಲಿ ಕೆಲವರು ತಾರಸಿಯಲ್ಲಿ `ಕೈತೋಟ~ ಹೊಂದಿದ್ದಾರೆ. ಆದರೆ ಇವರೆಲ್ಲ ಬೆಳೆಸುವುದು ಅಲಂಕಾರಿಕ ಹೂವುಗಳನ್ನು ಮಾತ್ರ! ಅದೇಕೋ ತರಕಾರಿ, ಹಣ್ಣಿನ ಗಿಡಗಳಿಂದ ಮಾರು ದೂರ.

ಇದರಲ್ಲಿ ಶೇ 84 ಮಂದಿ ಗಿಡಗಳಿಗೆ ರಸಗೊಬ್ಬರ ಮತ್ತು ಕೀಟನಾಶಕ ಬಳಸುತ್ತಾರೆ. ಅಲ್ಲಿಗೆ ಕೈತೋಟ ಬೆಳೆಸಿದರೂ ಈ ಪರಿ ರಾಸಾಯನಿಕ ಬಳಕೆಯಿಂದ `ಪರಿಸರ ಸ್ನೇಹಿ~ಗೆ ತಿಲಾಂಜಲಿ ಇಟ್ಟಂತೆ.

`ಸಿಎಫ್‌ಎಲ್~ ಬಲ್ಪ್, ಸೌರ ಶಕ್ತಿ ಬಳಕೆ ಕುರಿತು ಸರ್ಕಾರ ವ್ಯಾಪಕ ಪ್ರಚಾರ ನೀಡಿದೆ. ಸಬ್ಸಿಡಿ ಕೂಡ ಘೋಷಿಸಿದೆ. ಇಷ್ಟಾದರೂ ಶೇ 50ರಷ್ಟು ಜನ ಸೋಲಾರ್ ವಾಟರ್ ಹೀಟರ್ ಅಳವಡಿಸಿಕೊಂಡಿಲ್ಲ. ಶೇ 19 ಮಂದಿ ಮಾತ್ರ ಸಿಎಫ್‌ಎಲ್ ಬಲ್ಬ್ ಬಳಸುತ್ತಾರೆ. ಮನೆ ನಿರ್ಮಾಣದಲ್ಲೂ ಶೇ 84ರಷ್ಟು ಮಂದಿ ಮರಗಳನ್ನೇ ಬಾಗಿಲು- ಕಿಟಕಿಗಳಿಗೆ ಬಳಸುತ್ತಿದ್ದಾರೆ.

ಇನ್ನು ಘನ ತ್ಯಾಜ್ಯ ವಿಲೇವಾರಿ ಕುರಿತು `ಅಸಡ್ಡೆ~ ತೋರುತ್ತಿದ್ದಾರೆ ಉದ್ಯಾನಗರಿಗರು. ಶೇ 70 ರಷ್ಟು ಮಂದಿಗೆ ತ್ಯಾಜ್ಯ ಬೇರ್ಪಡಿಸಲು ಸೋಮಾರಿತನ. ಹಾಗಾಗಿಯೇ ನಗರ ಈ ಪ್ರಮಾಣದಲ್ಲಿ ಕಲುಷಿತವಾಗಿ, ರೋಗ ರುಜಿನಗಳು ಹರಡುತ್ತಿವೆ ಎನ್ನುತ್ತದೆ ವರದಿ.

ಇದಕ್ಕೆ ಪರಿಹಾರವೇನು?
`ಪರಿಸರ ಸ್ನೇಹಿ~ ಮನೆ ನಿರ್ಮಾಣ ಎನ್ನುವುದು ದುಬಾರಿ ಎನ್ನುವ ಪರಿಕಲ್ಪನೆ ಇದೆ. ಖಂಡಿತಾ ಅದು ಸತ್ಯಕ್ಕೆ ದೂರವಾದ ಮಾತು. ಮೊದಲು ಮನಸ್ಸನ್ನು `ಪರಿಸರ ಸ್ನೇಹವಾಗಿಸಿಕೊಳ್ಳಿ~. ನಂತರ ಕೆಳಗಿನ ಸಣ್ಣ ಅಂಶಗಳನ್ನು ನಿಮ್ಮ ಮನೆಗೆ ಅಳವಡಿಸಿಕೊಂಡರೆ ಸಾಕು~ ಎನ್ನುತ್ತಾರೆ ಬಿಸಿಐಎಲ್ ಮುಖ್ಯಸ್ಥ ಹರಿಹರನ್ ಚಂದ್ರಶೇಖರ್. 

* ಕಾರು, ಶೌಚಾಲಯ ಹಾಗೂ ಇನ್ನಿತರೆ ಶುಚಿತ್ವಕ್ಕೆ ಪುನರ್ ಬಳಕೆಯ ನೀರು ಬಳಸಿ.
* ಮನೆಗೆ ಕಡ್ಡಾಯವಾಗಿ ಮಳೆ ನೀರು ಸಂಗ್ರಹ ಅಳವಡಿಸಿ. ಇದರಿಂದ ಕನಿಷ್ಠ 6 ತಿಂಗಳ ಕಾಲ ಮಳೆ ನೀರನ್ನು ಬಳಸಬಹುದು.

* ನೀರು ಕಾಯಿಸಲು ಸೋಲಾರ್ ವಾಟರ್ ಹೀಟರ್ ಬಳಸಿ. ಮನೆಗಳಿಗೆ ಕಡಿಮೆ ವಿದ್ಯುತ್ ಹೀರುವ `ಸಿಎಫ್‌ಎಲ್~ ಬಲ್ಬ್‌ಗಳನ್ನು ಬಳಸಿ. ಇಂಧನ ವ್ಯಯವಾಗುವುದನ್ನು, ಅವಲಂಬನೆಯನ್ನು ತಪ್ಪಿಸಿಕೊಳ್ಳಿ.

* ಪ್ರಸ್ತುತ ಬಳಸುವ ನಲ್ಲಿಗಳಿಂದಾಗಿ ದಿನಕ್ಕೆ ಅಂದಾಜು 200 ಲೀಟರ್‌ನಷ್ಟು ನೀರು ಪೋಲಾಗುತ್ತಿದೆ. ಆದ್ದರಿಂದ ಮನೆಯ ನಲ್ಲಿಗಳಿಗೆ `ಏರೇಟರ್~ ಅಳವಡಿಸಿ. ಇದರಿಂದ ಶೇ 70ರಷ್ಟು ನೀರು ಪೋಲು ತಪ್ಪಿಸಬಹುದು.

* ಮನೆಯಲ್ಲಿ ತ್ಯಾಜ್ಯ ಬೇರ್ಪಡಿಸಿ. ಘನ ತ್ಯಾಜ್ಯ ಹೊರ ಕಳುಹಿಸಿ. ಅಡುಗೆ ಹಾಗೂ ಹಸಿ ತ್ಯಾಜ್ಯವನ್ನು ಗೊಬ್ಬರವಾಗಿಸಿ. ತಾರಸಿ ಕೃಷಿ ಮಾಡಿ, ಇದೇ ಗೊಬ್ಬರ ಬಳಸಿ. ಇದರಿಂದ ಮನೆಯ ವಾತಾವರಣ ಶುದ್ಧವಾಗಿರುತ್ತದೆ. ಹಕ್ಕಿ-ಪಕ್ಷಿಗಳು ಮನೆಯತ್ತ ಆಕರ್ಷಿತವಾಗುತ್ತವೆ. ತೋಟದಲ್ಲಿ ನಿತ್ಯ ಕೆಲಸ ಮಾಡುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ.

* ಈ ಮಟ್ಟಿಗೆ ನಿಮ್ಮ ಮನೆ `ಪರಿಸರ ಸ್ನೇಹ~ವಾಗಿಸಲು 8 ಸಾವಿರ ರೂಪಾಯಿಗಿಂತ ಹೆಚ್ಚು ಖರ್ಚಾಗುವುದಿಲ್ಲ. ಕೇವಲ ಒಂದು ಸಾರಿ ಬಂಡವಾಳ ಹಾಕಿದರೆ ಸಾಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT