ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೀಗೂ ಇರುತ್ತದೆ ಕಾಳಜಿ

Last Updated 16 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಹಣಕ್ಕಾಗಿ ಕೊಲೆ ಮಾಡಲೂ ಹೇಸದ ಈ ದಿನಗಳಲ್ಲಿ ಆಟೊ ಚಾಲಕನಿಂದ ಅಮೂಲ್ಯ ಕಡತಗಳು ವಾರಸುದಾರರ ಕೈಸೇರಿದ ಅಪರೂಪದ ಘಟನೆಯೊಂದು ಇತ್ತೀಚೆಗೆ ನಡೆಯಿತು. ಆ ಬಳಿಕ ಆಟೊ ಚಾಲಕರನ್ನು ನೋಡುವ ದೃಷ್ಟಿಯೂ ಬದಲಾಯಿತು.
ಕೋರಮಂಗಲಕ್ಕೆ ತೆರಳುವ ಅವಸರದಲ್ಲಿ ನಾನು ರಿಚ್‌ಮಂಡ್ ಬಳಿ ಆಟೊ ಏರಿದ್ದೆ.

ಮೊಬೈಲ್‌ನಲ್ಲಿ ಯಾವುದೋ ಭಾಷೆಯಲ್ಲಿ ಮಾತನಾಡಿದ್ದು ಕೇಳಿ ಆತ `ನಿಮ್ಮ ಊರು ಯಾವುದು ಸ್ವಾಮಿ~ ಎಂದು ಪ್ರಶ್ನಿಸಿದ. ನಾನು `ಮಂಗಳೂರು~ ಎಂದಾಗ, `ನಿಮಗಿಂತ ಮುನ್ನ ನನ್ನ ಆಟೊ ಹತ್ತಿದ ಪ್ರಯಾಣಿಕರೂ ಅದೇ ಊರಿನವರು. ಆಟೊದಲ್ಲಿ ಹಿಂದೆ ಪ್ಲಾಸ್ಟಿಕ್ ಚೀಲವೊಂದನ್ನು ಬಿಟ್ಟು ಹೋಗಿದ್ದಾರೆ. ದಯವಿಟ್ಟು ಅವರಿಗೆ ತಲುಪಿಸಲು ಸಾಧ್ಯವೇ~ ಎಂದು ಪ್ರಶ್ನಿಸಿದ.

ನಾನು ನನ್ನದೇ ಅವಸರದಲ್ಲಿದ್ದೆ. ನೀನೇ ಆ ಕೆಲಸ ಮಾಡಬಹುದಲ್ಲಾ ಎಂದರೆ, `ಸ್ವಾಮಿ, ಅವರ ಮನೆ ಹಲಸೂರು ಸಮೀಪದಲ್ಲಿ. ಮನೆ ಮುಂಭಾಗದವರೆಗೂ ನಾನು ಬಿಟ್ಟುಬಂದಿದ್ದರಿಂದ ವಿಳಾಸವನ್ನೂ ಸ್ಪಷ್ಟವಾಗಿ ನೀಡಬಲ್ಲೆ. ಯಾವುದೇ ಬಾಡಿಗೆಯಿಲ್ಲದೆ ನಾನು ಅಷ್ಟು ದೂರ ಹೋದರೆ, ನನಗೆ ನಷ್ಟವಾಗುತ್ತದೆ. ನನ್ನನ್ನೇ ನಂಬಿಕೊಂಡಿರುವ ಕುಟುಂಬದ ಬಗ್ಗೆಯೂ ನಾನು ಯೋಚಿಸಬೇಕಲ್ಲಾ ಸ್ವಾಮಿ~ ಎಂದ. ನಾನು `ಸರಿ ನೋಡೋಣ, ಒಂದೆರಡು ದಿನಗಳಲ್ಲಿ ಅತ್ತ ಹೋಗಲಿದ್ದೇನೆ. ಆಗ ವಿಳಾಸ ನೋಡಿ ಹುಡುಕಿಕೊಡುತ್ತೇನೆ~ ಎಂದಾಗ, `ಅವರು ಬಿಟ್ಟು ಹೋದ ಕೈಚೀಲದಲ್ಲಿ ಅಂಕಪಟ್ಟಿಯೂ ಸೇರಿದಂತೆ ಹಲವಾರು ಕಡತಗಳಿವೆ. ಬೇಗ ತಲುಪಿಸಿದರೆ ಒಳ್ಳೆಯದಲ್ಲವೇ? ಯಾವ ಅಗತ್ಯದಲ್ಲಿ ಹಿಡಿದುಕೊಂಡು ಹೊರಟಿದ್ದರೋ ಏನೋ?~ ಎಂದ. ಆತನ ಕಾಳಜಿ ನನಗಿಲ್ಲವಲ್ಲ ಎಂದು ಒಂದು ಕ್ಷಣ ಬೇಸರವಾದರೂ, ಸಾವರಿಸಿಕೊಂಡು `ಸರಿ, ಇದೇ ಸಂಜೆ ಕೊಡುತ್ತೇನೆ~ ಎಂದೆ. ಆತ ನನ್ನ ಮೊಬೈಲ್ ನಂಬರ್ ಕೇಳಿ ಪಡೆದುಕೊಂಡ.

ಕೋರಮಂಗಲದಿಂದ ಹಿಂದಿರುವಾಗ ನಾನು 201 ಬಸ್ ಹತ್ತಿ ಹಲಸೂರಿನಲ್ಲಿ ಇಳಿದು ವಿಳಾಸ ಹುಡುಕಿ ಕೈಚೀಲ ಹಿಂದಿರುಗಿಸಿದೆ. ಆಗ ಅವರಿಗಾದ ಸಂತಸಕ್ಕೆ ಪಾರವೇ ಇರಲಿಲ್ಲ. ನನಗೂ ಆಟೊ ಡ್ರೈವರ್‌ಗೂ ನೂರೆಂಟು ಬಾರಿ ಕೃತಜ್ಞತೆ ಸಲ್ಲಿಸಿದರು. ಅದೇ ಸಂಜೆ ನನ್ನ ಮೊಬೈಲ್‌ಗೆ ಕರೆ ಮಾಡಿದ ಆಟೊ ಚಾಲಕ ಚೀಲ ಹಿಂದಿರುಗಿಸಿರುವುದನ್ನು ಖಾತರಿಪಡಿಸಿಕೊಂಡ. ಆತನ ಈ ಕಾಳಜಿ ನನ್ನನ್ನು ಮೂಕನನ್ನಾಗಿಸಿತು. ಆಟೊ ಡ್ರೈವರ್‌ಗಳೆಂದರೆ ಹಿಂದುಮುಂದು ಯೋಚಿಸದೆ ಹಗುರವಾಗಿ ಮಾತನಾಡುವ ಮಂದಿಗೆ ಒಮ್ಮೆ ಈ ಘಟನೆಯನ್ನು ವಿವರಿಸಬೇಕೆಂದೆನಿಸಿತು. ನನ್ನ ಮೊಬೈಲ್‌ನಲ್ಲಿ ಇಂದಿಗೂ ಅವರ ನಂಬರನ್ನು `ಆಟೊ~ ಎಂದು ಸೇವ್ ಮಾಡಿಕೊಂಡಿದ್ದು, ಹೆಸರು ಮಾತ್ರ ತಿಳಿದುಕೊಂಡಿಲ್ಲ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT