ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೀಮೊಫೀಲಿಯ: ವಂಶವಾಹಿ ರಕ್ತಸ್ರಾವದ ತೊಂದರೆ

Last Updated 20 ಜನವರಿ 2012, 19:30 IST
ಅಕ್ಷರ ಗಾತ್ರ

ಹೀಮೊಫೀಲಿಯ(ಕುಸುಮರೋಗ) ಎನ್ನುವುದು ಅತ್ಯಂತ ವಿರಳವಾದ ವಂಶವಾಹಿ ರಕ್ತಸ್ರಾವದ ತೊಂದರೆಯಾಗಿದ್ದು ರಕ್ತ ಹೆಪ್ಪುಗಟ್ಟುವ ಪ್ರಕ್ರಿಯೆಯನ್ನು ನಿಧಾನವಾಗಿಸುತ್ತದೆ.

ಹೀಮೊಫೀಲಿಯದಿಂದ ಬಳಲುತ್ತಿರುವ ಜನರು ಅತ್ಯಂತ ಸಣ್ಣ ಗಾಯದ ಸಂದರ್ಭದಲ್ಲೂ ದೀರ್ಘಕಾಲದ ರಕ್ತಸ್ರಾವದ ತೊಂದರೆ ಅನುಭವಿಸಬೇಕಾಗುತ್ತದೆ. ವಾಸ್ತವದಲ್ಲಿ ತೀವ್ರ ರೀತಿಯ ಹೀಮೊಫೀಲಿಯ ಪ್ರಕರಣಗಳಲ್ಲಿ ಆಂತರಿಕವಾಗಿ ದೇಹದಲ್ಲಿ ಸ್ವಯಂಪ್ರೇರಿತವಾಗಿ ರಕ್ತಸ್ರಾವ ಉಂಟಾಗಬಹುದು.

10,000 ಜನರಲ್ಲಿ ಒಬ್ಬರಿಗೆ ಈ ರೋಗ ಇರುವ ಅಂದಾಜು ಮಾಡಲಾಗಿದ್ದು ಭಾರತದಲ್ಲಿ ಸುಮಾರು ಒಂದು ಲಕ್ಷ ಜನರು ಹೀಮೊಫೀಲಿಯದಿಂದ ಬಳಲುತ್ತಿರಬಹುದು ಎಂದು ಹೇಳಲಾಗಿದೆ. ಇವರಲ್ಲಿ 60,000 ಜನರು ತೀವ್ರ ರೀತಿಯ ತೊಂದರೆ ಅನುಭವಿಸುತ್ತಿರುತ್ತಾರೆ.

ಆದರೆ ಹೀಮೊಫೀಲಿಯ ಹೊಂದಿರುವ ಜನರಲ್ಲಿ ಕೇವಲ 14,000 ಮಂದಿ ಮಾತ್ರ ಪರ್ಸನ್ಸ್ ವಿತ್ ಹೀಮೊಫೀಲಿಯ (ಪಿಡಬ್ಲ್ಯುಎಚ್) ಸಂಸ್ಥೆಯಲ್ಲಿ ನೋಂದಣಿ ಮಾಡಿಕೊಂಡಿರುತ್ತಾರೆ. ಅಂದರೆ ಅನೇಕ ರೋಗಿಗಳು ಆಸ್ಪತ್ರೆ ತಲುಪುವ ಮುನ್ನವೇ ಸಾಯುತ್ತಿರಬಹುದು. ಹಾಗೂ ಇನ್ನೂ ಅನೇಕರಿಗೆ ಪ್ರಯೋಗಾಲಯ ಸೌಲಭ್ಯಗಳು ಲಭ್ಯವಿಲ್ಲದೆ ಇರುವುದರಿಂದ ಅವರಿಗೆ ರೋಗ ಇರುವುದೇ ಪತ್ತೆಯಾಗದಿರಬಹುದು. ಆದ್ದರಿಂದ ಹೀಮೊಫೀಲಿಯದ ರೋಗನಿದಾನ ಮತ್ತು ಚಿಕಿತ್ಸೆ ಭಾರತದಲ್ಲಿ ಹೆಚ್ಚು ಕಡಿಮೆ ಅವ್ಯವಸ್ಥಿತವಾಗಿದ್ದು ದೇಶದಾದ್ಯಂತ ಎಲ್ಲಾ ಕಡೆ ಲಭ್ಯವಿರುವುದಿಲ್ಲ. ವೈದ್ಯಕೀಯ ಸಮುದಾಯದಲ್ಲೂ ಈ ರೋಗ ಕುರಿತು ಜಾಗೃತಿ ಕಳಪೆ ಮಟ್ಟದಲ್ಲಿ ಇದೆ.

ಅಂಕಿಅಂಶಗಳ ಪ್ರಕಾರ ಭಾರತ, ಚೀನಾ, ಬಾಂಗ್ಲಾದೇಶ ಮತ್ತು ಇಂಡೋನೇಷ್ಯಾಗಳು ಜಾಗತಿಕವಾಗಿ ಹೀಮೋಫೀಲಿಯ ಹೊಂದಿರುವ ಜನರಲ್ಲಿ ಶೇ. 10ರಷ್ಟನ್ನು ಮಾತ್ರ ಪ್ರತಿನಿಧಿಸುತ್ತವೆ. ವಿಶ್ವವ್ಯಾಪಿಯಾಗಿ ಹೀಮೊಫೀಲಿಯ ಚಿಕಿತ್ಸೆಗೆ ಬಳಸುವ ಫ್ಯಾಕ್ಟರ್ ಕಾನ್ಸನ್‌ಟ್ರೇಟ್‌ಗಳ ಪೈಕಿ ಈ ದೇಶಗಳು ಶೇ. 2ಕ್ಕಿಂತಲೂ ಕಡಿಮೆ ಬಳಸುತ್ತಿವೆ.

ಅಭಿವೃದ್ಧಿ ಹೊಂದಿರುವ ದೇಶಗಳು ಮತ್ತು ಅಭಿವೃದ್ಧಿಶೀಲ ದೇಶಗಳ ನಡುವೆ ಹೀಮೊಫೀಲಿಯ ಸಂಬಂಧಿಸಿದಂತೆ ಅಪಾರ ಅಂತರ ಇರುವುದು ವಿಪರ್ಯಾಸವಾಗಿದೆ. ರೋಗ ಪತ್ತೆಯಾಗಿರುವ ಶೇಕಡಾವಾರು ಹೀಮೊಫೀಲಿಯ ರೋಗಿಗಳು, ವಿಶ್ವವ್ಯಾಪಿಯಾಗಿ ಚಿಕಿತ್ಸಾ ಕೇಂದ್ರಗಳ ಸಂಖ್ಯೆ ಮತ್ತು ಪ್ರತಿ ವ್ಯಕ್ತಿಗೆ ಫ್ಯಾಕ್ಟರ್ ರಿಪ್ಲೇಸ್‌ಮೆಂಟ್ ಥೆರೆಪಿಯ ಬಳಕೆ -ಇವುಗಳು ಆರೈಕೆಯ ಲಭ್ಯತೆಯ ಮಟ್ಟವನ್ನು ನಿರ್ಣಯಿಸಲು ನಂಬಿಕಾರ್ಹ ಅಂಶಗಳಾಗಿವೆ. ಶೇ. 76ರಷ್ಟು ಜನರ ರೋಗವನ್ನು ಪತ್ತೆ ಮಾಡಿರುವ, 136 ಚಿಕಿತ್ಸಾ ಕೇಂದ್ರಗಳನ್ನು ಹೊಂದಿರುವ, ಪ್ರತಿ ವ್ಯಕ್ತಿಗೆ 3.4 ಯುನಿಟ್ ಬಳಕೆಯಾಗುವ ಅಮೇರಿಕಾಗೆ ಹೋಲಿಸಿದರೆ ಭಾರತದಲ್ಲಿ ಶೇ. 12ರಷ್ಟು  ಹೀಮೊಫೀಲಿಯ ರೋಗಿಗಳನ್ನು ಮಾತ್ರ ಗುರುತಿಸಲಾಗಿದೆ.  ಭಾರತದಲ್ಲಿರುವ ಚಿಕಿತ್ಸಾ ಕೇಂದ್ರಗಳು  ಕೇವಲ 55ಮತ್ತು ಪ್ರತಿ ವ್ಯಕ್ತಿಯ ಬಳಕೆ ಮಟ್ಟ  ಕೇವಲ 0.01 ಯುನಿಟ್‌ಗಳಾಗಿವೆ. ಆದರೆ, ಭಾರತದಲ್ಲಿ ಅತ್ಯಂತ ದೊಡ್ಡ ಸಮಸ್ಯೆ ಎಂದರೆ ನಗರಗಳ ಸುಶಿಕ್ಷಿತವರ್ಗದಲ್ಲೂ ಜಾಗೃತಿಯ ಕೊರತೆ. ವಿಶ್ವಾಸಾರ್ಹ ಪ್ರಯೋಗಾಲಯ ಸೌಲಭ್ಯಗಳ ಕೊರತೆ ಮತ್ತೊಂದು ದೊಡ್ಡ ಆತಂಕವಾಗಿದೆ.

ಹೀಮೊಫೀಲಿಯಾದ ವಿಧಗಳಾವವು?
ಹೀಮೊಫೀಲಿಯವನ್ನು ಹೀಮೋಫೀಲಿಯ ಎ ಮತ್ತು ಹೀಮೊಫೀಲಿಯ ಬಿ ಎಂದು ವಿಂಗಡಿಸಲಾಗಿದೆ.
ಹೀಮೊಫೀಲಿಯ ಎ ನಲ್ಲಿ ಫ್ಯಾಕ್ಟರ್ ವಿ ಅತ್ಯಂತ ಕಡಿಮೆ ಇರುತ್ತದೆ ಅಥವಾ ಇರುವುದೇ ಇಲ್ಲ.

ಆದರೆ ಫ್ಯಾಕ್ಟರ್ ಐಎಕ್ಸ್‌ನ ಮಟ್ಟ ಕಡಿಮೆ ಇರುವುದು ಅಥವ ಇಲ್ಲದಿರುವುದು ಹೀಮೊಫೀಲಿಯ ಬಿ ಉಂಟಾಗಲು ಕಾರಣವಾಗುತ್ತದೆ. ಹೀಮೊಫೀಲಿಯ ಹೊಂದಿರುವ ರೋಗಿಗಳ ಪೈಕಿ ಸುಮಾರು  ಶೇ. 80ರಷ್ಟು ರೋಗಿಗಳಲ್ಲಿ ವಿ ಕೊರತೆ ಕಾಡಿರುತ್ತದೆ.
 
ಅಂದರೆ ಅವರು ಹೀಮೊಫೀಲಿಯ ಎ ತೊಂದರೆಯಿಂದ ಬಳಲುತ್ತಿರುತ್ತಾರೆ. ರಕ್ತ ಹೆಪ್ಪುಗಟ್ಟುವುದರ ಅಂಶದ ಪ್ರಮಾಣವನ್ನು ಆಧರಿಸಿ ದೇಹದಲ್ಲಿ ಹೀಮೊಫೀಲಿಯವನ್ನು ಅಲ್ಪ, ಮಧ್ಯಮ ಅಥವ ತೀವ್ರ ರೀತಿಯದೆಂದು ವಿಂಗಡಿಸಲಾಗಿದೆ. ಅಲ್ಪ ಪ್ರಮಾಣದ ಹೀಮೊಫೀಲಿಯದಲ್ಲಿ ರೋಗಿ ವಿರಳವಾಗಿ ರಕ್ತಸ್ರಾವ ಹೊಂದಿದ್ದರೆ ತೀವ್ರ ರೀತಿಯ ಹೀಮೊಫೀಲಿಯದಲ್ಲಿ ಪದೇ ಪದೇ ರಕ್ತಸ್ರಾವವಾಗುತ್ತಿರುತ್ತದೆ.

ವಂಶವಾಹಿ ಗುಣಲಕ್ಷಣಗಳು
ಅನೇಕ ಜನರಿಗೆ ವಂಶವಾಹಿ ಶಾಸ್ತ್ರವನ್ನು ಅರ್ಥ ಮಾಡಿಕೊಳ್ಳುವುದು  ಬೃಹತ್ತಾದ ಬಗೆಹರಿಸಲಾಗದ ಒಗಟಿನಂತಿದೆ. ಆದರೆ ವಂಶವಾಹಿ ಶಾಸ್ತ್ರ ಸಂಕಿರ್ಣವಾಗಿರಬೇಕಾಗಿಲ್ಲ. ಈಗ ನಾವು ಹೀಮೊಫೀಲಿಯ ವಂಶವಾಹಿ ಸಂಬಂಧಿ ರೋಗವೆಂದು ತಿಳಿದಿರುವುದರಿಂದ ಮೂಲವಾಗಿ ರೋಗಿಯಲ್ಲಿ ನಿರ್ದಿಷ್ಟ ಜೀನ್‌ಗಳು ಸೂಕ್ತವಾಗಿ ಕೆಲಸ ಮಾಡುತ್ತಿಲ್ಲ ಎಂಬುದನ್ನು ಅರಿತುಕೊಳ್ಳಬೇಕು.

ಮಾನವರಲ್ಲಿ ಇರುವ ಲಿಂಗ ನಿರ್ಧರಣ ವ್ಯವಸ್ಥೆ ಬಗ್ಗೆ ನಮ್ಮಲ್ಲಿ ಬಹುತೇಕ ಜನರು ಅರಿತಿರುತ್ತಾರೆ. ಮಹಿಳೆಯರಲ್ಲಿ ಒಂದೇ ರೀತಿಯ ಲಿಂಗ ವರ್ಣತಂತು(ಕ್ರೊಮೊಸೋಮ್-ಎಕ್ಸ್‌ಎಕ್ಸ್) ಇದ್ದು ಪುರುಷರಲ್ಲಿ ಎರಡು ಪ್ರತ್ಯೇಕ ಲಿಂಗ ವರ್ಣತಂತುಗಳು(ಎಕ್ಸ್‌ವೈ) ಇರುತ್ತವೆ. ಹುಟ್ಟುವ ಮಗು ತನ್ನ ತಾಯಿ ಮತ್ತು ತಂದೆಯಿಂದ ಅರ್ಧರ್ಧವಾಗಿ ಈ ಮೇಲಿನ ಜೋಡಿಗಳನ್ನು ಪಡೆಯುತ್ತದೆ.

ವರ್ಣತಂತುಗಳ ಜೋಡಿ ಲಿಂಗವನ್ನು ನಿರ್ಧರಿಸುತ್ತದೆ. ಹೀಮೊಫೀಲಿಯಾದ ತೊಂದರೆ ಈ ವಿಷಯದೊಂದಿಗೆ ತಳುಕು ಹಾಕಿಕೊಂಡಿದೆ. ಹೀಮೊಫೀಲಿಯಾದ ಎರಡೂ ವಿಧಗಳಲ್ಲಿಯೂ ಅಂದರೆ ಎ ಮತ್ತು ಬಿ ಗಳೆರಡೂ ವಂಶವಾಹಿಗಳಿಂದ ಬಂದಿರುತ್ತವೆ.

ವಿ ಮತ್ತು ಐಎಕ್ಸ್ (ಇವುಗಳ ಕೊರತೆ ಹೀಮೊಫೀಲಿಯಾಗೆ ದಾರಿಯಾಗುತ್ತದೆ) ಅಂಶಗಳ ಉತ್ಪಾದನೆಗೆ ಕಾರಣವಾಗುವ ಜೀನ್‌ಗಳು ಎಕ್ಸ್ ಕ್ರೋಮೊಸೋಮ್‌ನಲ್ಲಿರುತ್ತವೆ. ಪುರುಷರಲ್ಲಿ ಕೇವಲ ಒಂದು ಎಕ್ಸ್ ವರ್ಣತಂತು ಇರುತ್ತದೆ. ಬದಲಾವಣೆ ಹೊಂದಿರುವ ಒಂದೇ ಒಂದು ವಂಶಪಾರಂಪರ್ಯವಾಗಿ ಬಂದ ಜೀನ್‌ನ ನಕಲು, ಪ್ರತಿ ಸೆಲ್‌ನಲ್ಲಿ ಇದ್ದರೆ ಸಾಕು ಹೀಮೊಫೀಲಿಯಾ ಉಂಟಾಗುತ್ತದೆ. ಆದರೆ ಮಹಿಳೆಯರಲ್ಲಿ ಎರಡು ಎಕ್ಸ್ ಕ್ರೋಮೊಸೋಮ್‌ಗಳಿದ್ದು ಈ ಎರಡರ  ವಂಶವಾಹಿಗಳಲ್ಲಿ ಪರಿವರ್ತನೆಗಳಿದ್ದಲ್ಲಿ ಮಾತ್ರ ತೊಂದರೆ ಕಾಣಿಸಿಕೊಳ್ಳಬಹುದು.

ಆದ್ದರಿಂದ ಮಹಿಳೆಯರಲ್ಲಿ ಹೀಮೊಫೀಲಿಯಾ ಸಮಸ್ಯೆ ಕೇಳಿಬರುವುದೇ ಇಲ್ಲ. ಬಹುತೇಕ ಹೀಮೊಫೀಲಿಯಾ ರೋಗಿಗಳು ಪುರುಷರಾಗಿರುತ್ತಾರೆ. ಬದಲಿಗೆ ಮಹಿಳೆ ರೋಗವನ್ನು ಹೊತ್ತೊಯ್ಯುವಾಕೆ. ಆಕೆ ಮಕ್ಕಳಿಗೆ ಹೀಮೊಫೀಲಿಯಾ ವರ್ಗಾಯಿಸುವ ಸಾಮರ್ಥ್ಯ ಹೊಂದಿರುತ್ತಾಳೆ.

 ಕೆಲವು ಪ್ರಮುಖ ಅಂಶಗಳು
* ಈ ರೋಗದಿಂದ ಬಳಲುತ್ತಿರುವ ಬಹುತೇಕ ಎಲ್ಲರೂ ಪುರುಷರಾಗಿರುತ್ತಾರೆ. ಮಹಿಳೆಯರು ರೋಗವನ್ನು ಹೊತ್ತೊಯ್ದು ಮುಂದಿನ ಪೀಳಿಗೆಗೆ ರವಾನಿಸುವ ಅಪಾಯ ಹೊಂದಿರುವಂತಹವರು.

* ರೋಗ ಪೀಡಿತ ಪರುಷರು ಈ ರೋಗವನ್ನು ತಮ್ಮ ಮಗನಿಗೆ ವರ್ಗಾಯಿಸಲಾರರು. ಆದರೆ ಇಂತಹ ರೋಗ ಹೊಂದಿರುವ ಪುರುಷರ ಹೆಣ್ಣುಮಕ್ಕಳೆಲ್ಲರೂ ರೋಗವನ್ನು ಮುಂದಕ್ಕೆ ಹೊತ್ತೊಯ್ಯಬಲ್ಲರು. (ತಾಯಿು ರೋಗದ ವಾಹಕಿಯಾಗದಿದ್ದಲ್ಲಿ)

* ರೋಗದ ವಾಹಕಿಯಾದ ಮಹಿಳೆ ತನ್ನ ಗಂಡುಮಕ್ಕಳಿಗೆ ಈ ಅಂಶವನ್ನು ಶೇ. 50ರಷ್ಟು ಬಾರಿ ಪ್ರಸರಿಸಬಹುದು.

* ರೋಗವನ್ನು ಒಯ್ಯುತ್ತಿರುವ ಮಹಿಳೆಯ ಹೆಣ್ಣುಮಕ್ಕಳು ಶೇ. 50ರಷ್ಟು ಸಮಯದಲ್ಲಿ ರೋಗವನ್ನು ಒಯ್ಯುವಂಥವರಾಗಿರುತ್ತಾರೆ. (ತಂದೆ ಈ ರೋಗದಿಂದ ಪೀಡಿತನಾಗದಿದ್ದಲ್ಲಿ).

* ಕೆಲವೊಮ್ಮೆ ಪೂರ್ವಜರಲ್ಲಿ ಯಾವುದೇ ಹೀಮೊಫೀಲಿಯಾ ಅಂಶಗಳು ಇಲ್ಲದಿದ್ದರೂ ವ್ಯಕ್ತಿಗೆ ಹೀಮೊಫೀಲಿಯಾ ಬರಬಹುದಾಗಿದೆ. ಇದು ಜೀನ್‌ಗಳಲ್ಲಿನ ಹಠಾತ್ ಬದಲಾವಣೆಯಿಂದ ಕಾಣಿಸಿಕೊಳ್ಳುತ್ತದೆ.

ಸರಿಯಾದ ರೀತಿಯಲ್ಲಿ ಚಿಕಿತ್ಸೆ
ಹೀಮೊಫೀಲಿಯಾಗೆ ಸಂಬಂಧಿಸಿದಂತೆ ಲಭ್ಯವಿರುವ ಪ್ರಾಥಮಿಕ ಚಿಕಿತ್ಸೆ ಎಂದರೆ ರಿಪ್ಲೇಸ್‌ಮೆಂಟ್ ಥೆರೆಪಿ ಆಗಿದೆ. ಅಂದರೆ ರಕ್ತ ಹೆಪ್ಪುಗಟ್ಟಲು ಬೇಕಾದ ಅಂಶಗಳ ಕೊರತೆ ಇರುವವರಿಗೆ ಅವುಗಳನ್ನು (ಹೀಮೊಫೀಲಿಯಾದ ಮಾದರಿಯನ್ನು ಆಧರಿಸಿ ಫ್ಯಾಕ್ಟರ್ ವಿ ಅಥವ ಫ್ಯಾಕ್ಟರ್ ಐಎಕ್ಸ್) ನಿಗದಿತ ಅವಧಿಗೊಮ್ಮೆ ಸೇರಿಸಲಾಗುತ್ತದೆ. ರಕ್ತ ಹೆಪ್ಪುಗಟ್ಟುವ ಅಂಶಗಳನ್ನು ಹಲವು ಚಿಕಿತ್ಸಾ ಸಿದ್ಧತೆಗಳಿಂದ ತಯಾರಿಸಲಾಗುತ್ತದೆ.

 ಇವುಗಳಲ್ಲಿ ಕೆಲವುಗಳನ್ನು ಬಳಸುವಲ್ಲಿ ಗಮನಾರ್ಹ ಹಿನ್ನಡೆಗಳು ಇವೆ. ಇಂದು ಲಭ್ಯವಿರುವ  ಚಿಕಿತ್ಸೆಗಳಲ್ಲಿ ಉತ್ತಮವಾದದ್ದು ಆ್ಯಂಟಿ ಹೀಮೊಫೀಲಿಕ್ ಫ್ಯಾಕ್ಟರ್ ಅಂದರೆ ಎಎಚ್‌ಎಫ್ ಆಗಿದೆ. ಕಳೆದ ಕೆಲವು ವರ್ಷಗಳಲ್ಲಿ ಫ್ಯಾಕ್ಟರ್ ಕಾನ್ಸನ್‌ಟ್ರೇಟ್‌ಗಳನ್ನು ಹೀಮೋಫೀಲಿಯ ನಿರ್ವಹಣೆಗಾಗಿ ವಿಸ್ತಾರವಾಗಿ ಬಳಸಲಾಗುತ್ತಿದೆ. ಇದರಿಂದ ರಕ್ತಸ್ರಾವವನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಪ್ರಯತ್ನಿಸಲಾಗುತ್ತಿದೆ. ಮಾನವ ರಕ್ತದ ಪ್ಲಾಸ್ಮಾದಿಂದ ಹೊರತೆಗೆಯಲಾದ ಈ ಕಾನ್ಸನ್‌ಟ್ರೇಟ್‌ಗಳನ್ನು ರಕ್ತಕ್ಕೆ ನೇರವಾಗಿ ಸೇರಿಸಬಹುದು. ಅವುಗಳು ಮಧ್ಯಮ ಶುದ್ಧತೆ ಮತ್ತು ಅತ್ಯಂತ ಶುದ್ಧ ಮಾದರಿಗಳಲ್ಲಿ ಲಭ್ಯವಿರುತ್ತವೆ.

ಸಂಪೂರ್ಣವಾದ ಗುಣಪಡಿಸುವಿಕೆ ನಮ್ಮಿಂದ ಇನ್ನೂ ದೂರವೇ ಇದ್ದರೂ ಆಧುನಿಕ ವೈದ್ಯಕೀಯ ಅತ್ಯಂತ ಪರಿಣಾಮಕಾರಿ ವ್ಯವಸ್ಥೆಗಳನ್ನು ಹೊಂದಿದ್ದು ಈ ವಂಶವಾಹಿ ತೊಂದರೆಯನ್ನು  ಪರಿಣಾಮಕಾರಿಯಾಗಿ ನಿಭಾಯಿಸಲು ಮತ್ತು ಚಿಕಿತ್ಸೆ ಮಾಡಲು ಸಾಧ್ಯವಿದೆ. ವಂಶವಾಹಿ  ಚಿಕಿತ್ಸೆಯ ಸಾಧ್ಯತೆ ಇನ್ನೂ ಸಾಧ್ಯವಾಗದೇ ಇದ್ದರೂ ಗುಣಪಡಿಸುವಿಕೆ ಲಭ್ಯವಾಗುವವರೆಗೆ ಆರೈಕೆ ಎಂಬುದು ಅತ್ಯುತ್ತಮ ಕಾರ‌್ಯಕ್ರಮವಾಗಿರುತ್ತದೆ.
(ಲೇಖಕರು ಉಪಾಧ್ಯಕ್ಷರು, ಹೀಮೋಫೀಲಿಯ ಫೆಡರೇಷನ್ ಇಂಡಿಯಾ, ಹೆಮಾಟಾಲಜಿ ವಿಭಾಗದ ಮುಖ್ಯಸ್ಥರು )

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT