ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತೂಕ’ದ ನಟ – ನಟಿಯರು!

Last Updated 29 ಅಕ್ಟೋಬರ್ 2019, 6:32 IST
ಅಕ್ಷರ ಗಾತ್ರ

ಬಿ–ಟೌನ್ ಅಷ್ಟು ಸುಲಭವಾಗಿ ಯಾರನ್ನೂ ಸ್ವೀಕರಿಸುವುದಿಲ್ಲ. ಸಿನಿಮಾ ರಂಗಕ್ಕೆ ಬರುವ ಹೊಸಬರಲ್ಲಿ ಪ್ರತಿಭೆಯೊಂದಿಗೆ ಸೌಂದರ್ಯವೂ ಇರಬೇಕು ಎನ್ನುತ್ತದೆ ಬಾಲಿವುಡ್‌ನ ಇತಿಹಾಸ. ಹೀಗಾಗಿಯೇ ದೊಡ್ಡ ಸ್ಟಾರ್‌ಗಳ ಕುಟುಂಬದ ಹಿನ್ನೆಲೆಯಿಂದ ಬಂದರೂ ಅಗ್ನಿಪರೀಕ್ಷೆ ಎದುರಿಸಲೇಬೇಕಾಗುತ್ತದೆ.

ಬಾಲಿವುಡ್‌ನಲ್ಲಿ ಎಂಟ್ರಿಗಾಗಿ ಸಾವಿರಾರು ಮಂದಿ ಕಾಯುತ್ತಾರೆ. ಕೆಲವರಂತೂ ಅದಕ್ಕಾಗಿ ಏನು ಮಾಡಲು ಬೇಕಾದರೂ ತಯಾರಿರುತ್ತಾರೆ. ನಟ– ನಟಿಯಾಗರಾಲು ಬಯಸಿದವರು ತಮ್ಮ ದೇಹದ ತೂಕ ಇಳಿಸಿಕೊಂಡ ಆಸಕ್ತಿಕರ ವಿವರಗಳು ಇಲ್ಲಿವೆ...

ಸೋನಂ ಮನ್ವಂತರ
ಸ್ಟೈಲ್‌ ಐಕಾನ್‌ ಸೋನಂ ಕಪೂರ್‌ ಬಾಲಿವುಡ್‌ಗೆ ಎಂಟ್ರಿ ಕೊಡುವ ಮೊದಲು 30 ಕೆ.ಜಿ. ತೂಕ ಇಳಿಸಿಕೊಂಡರು.ಸದಾ ಯಂಗ್‌ ಆಗಿ ಕಾಣುವ ನಟ ಅನಿಲ್‌ ಕಪೂರ್‌ ಅವರ ಮುದ್ದಿನ ಮಗಳು ಸೋನಂ ಮೊದಲ ಚಿತ್ರಕ್ಕೆ ಸಹಿ ಹಾಕುವ ಮುನ್ನ 86 ಕೆ.ಜಿ. ಇದ್ದರು. ನಟಿಯಾಗಲೆಂದೇ 56 ಕೆ.ಜಿಗೆ ತೂಕ ಇಳಿಸಿಕೊಂಡರು.ಮೊದಲ ಚಿತ್ರ ‘ಸಾವರಿಯಾ’ದಲ್ಲಿ ಅಭಿನಯಿಸಲು ಕೇವಲ ವರ್ಕ್‌ಔಟ್‌ ಹಾಗೂ ಡಯಟ್‌ನಿಂದ ತೂಕ ಇಳಿಸಿಕೊಂಡ ಸೋನಂ ಈಗ ಬಾಲಿವುಡ್‌ನ ಫೇವರಿಟ್‌ ಸ್ಟೈಲ್‌ ಐಕಾನ್‌. ಅದರಲ್ಲೂ ಸ್ಟಾರ್‌ ಡಸ್ಟ್ ಅವಾರ್ಡ್ಸ್‌ನಲ್ಲಿ ಸೈಲ್ಟ್‌ ಐಕಾನ್‌ ಪ್ರಶಸ್ತಿ ಪಡೆದ ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌ಗೂ ಸೋನಂ ಕಪೂರ್‌ ಫೇವರಿಟ್‌ ಸ್ಟೈಲ್‌ ಐಕಾನ್‌ ಆಗಿದ್ದಾರಂತೆ.

ಆ ಕಾಲದ ಡುಮ್ಮ ಕರಣ್‌
ಬಿ-–ಟೌನ್‌ನಲ್ಲಿ ಸಾಕಷ್ಟು ಹಿಟ್‌ ಚಿತ್ರಗಳನ್ನು ನೀಡಿರುವ ನಿರ್ದೇಶಕ ಕರಣ್‌ ಜೋಹರ್‌ ಸಹ ತಮ್ಮ 20ನೇ ವಯಸ್ಸಿನಲ್ಲಿ 120 ಕೆ.ಜಿ. ಇದ್ದರಂತೆ. ನಂತರ ತಮ್ಮ ತೂಕವನ್ನು ಇಳಿಸಿಕೊಂಡು ಸ್ಮಾರ್ಟ್ ಆದ ಅವರು ಬಾಲಿವುಡ್‌ನಲ್ಲಿ ಕೇವಲ ನಟರು ಮಾತ್ರ ದೇಹದ ಸೌಂದರ್ಯ ಕಾಪಾಡಿಕೊಳ್ಳುತ್ತಾರೆ ಎಂದು ತಿಳಿದಿದ್ದವರಿಗೆ ಮಾದರಿಯಾಗಿದ್ದಾರೆ.

ಗುಂಡಮ್ಮ ಸೋನಾಕ್ಷಿ
‘ದಬಂಗ್‌’ ಖ್ಯಾತಿಯ ಸೋನಾಕ್ಷಿ ಸಿನಿಮಾ ರಂಗಕ್ಕೆ ಬರುವ ಮೊದಲು 30 ಕೆ.ಜಿ. ತೂಕವನ್ನು ಇಳಿಸಿಕೊಂಡವರು. ಸಲ್ಮಾನ್‌ ಖಾನ್‌ ಜೊತೆ ಅಭಿನಯಿಸಿದ ಮೊದಲ ಸಿನಿಮಾ ‘ದಬಂಗ್‌’ಗೆ ಸಹಿ ಹಾಕುವ ಮುನ್ನ ಅವರು 90 ಕೆ.ಜಿ. ಇದ್ದರು.ಅದರಲ್ಲೂ ಕೇವಲ ಅಭಿನಯವೊಂದಿದ್ದರೆ ಬಿ–ಟೌನ್‌ನಲ್ಲಿ ಬಹುಕಾಲ ಉಳಿಯಲು ಸಾಧ್ಯವಾಗುವುದಿಲ್ಲ ಎಂಬ ಸತ್ಯವನ್ನು ಅರಿತ ಸೋನಾಕ್ಷಿಗೆ ತಮ್ಮ ತೂಕ ಮತ್ತಷ್ಟು ಇಳಿಸಲು ಖುದ್ದು ಸಲ್ಮಾನ್‌ ಪ್ರೇರಣೆ. ‘ದಬಂಗ್‌’ ನಂತರ ಮುಂದಿನ ಚಿತ್ರಗಳಿಗಾಗಿ ಮತ್ತಷ್ಟು ತೂಕ ಇಳಿಸುವಂತೆ ಸಲ್ಮಾನ್‌ ಸೋನಾಕ್ಷಿಗೆ ಕೆಲವು ಟಿಪ್ಸ್‌ ನೀಡಿ, ತರಬೇತಿ ಸಹ ನೀಡಿದ್ದರಂತೆ.

ಕರೀನಾ ತೂಕಾಂತರ
ಕರೀನಾ ಕಪೂರ್‌ ಬಾಲಿವುಡ್‌ ಅಂಗಳಕ್ಕೆ ಕಾಲಿಟ್ಟ ಹೊಸತರಲ್ಲಿ ಆಕೆಯ ದೇಹದ ತೂಕ ಹೆಚ್ಚಾಗಿದ್ದ ಕಾರಣಕ್ಕೆ ಆಕೆಯನ್ನು ಟೀಕಿಸಿದವರೇ ಹೆಚ್ಚು. ‘ಯೇ ಮೇರಾ ದಿಲ್‌ ಪ್ಯಾರ್ ಕಾ ದಿವಾನಾ’ ಚಿತ್ರದಲ್ಲಿ ಕರೀನಾ ಕಾಣಿಸಿಕೊಂಡಾಗ ವಿಮರ್ಶಕರಿಂದ ಆಕೆಯ ತೂಕದ ಬಗ್ಗೆ ಹೆಚ್ಚು ಟೀಕೆಗಳು ಕೇಳಿ ಬಂದಿದ್ದವು.ಟೀಕೆಗಳಿಗೆ ಕಿವಿಗೊಡದ ಕರೀನಾ ತನ್ನ ಮುಂದಿನ ಚಿತ್ರ ‘ತಶನ್‌’ಗಾಗಿ ದೇಹವನ್ನು ದಂಡಿಸಿ ಸೈಜ್‌ ಜೀರೊ ಮಾಡಿಕೊಂಡಿದ್ದರು. ಇದರಿಂದ ರಾತ್ರೋರಾತ್ರಿ ಮತ್ತೆ ಸುದ್ದಿಗೆ ಬಂದಿದ್ದರು. ಇದಾದ ನಂತರ ಕರೀನಾ ಏಳಿಗೆಯನ್ನು ಯಾರಿಂದಲೂ ತಡೆಯಲಾಗಲಿಲ್ಲ.

ಪಡ್ಡೆಗಳ ಡಾರ್ಲಿಂಗ್‌ ಅಲಿಯಾ
‘ಸ್ಟೂಡೆಂಟ್‌ ಆಫ್‌ ದಿ ಇಯರ್‌’ ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಟ್ಟ ಬೆಡಗಿ ಅಲಿಯಾ ಭಟ್‌ ತನ್ನ ಮೊದಲ ಚಿತ್ರಕ್ಕಾಗಿ 17ರಿಂದ 18 ಕೆ.ಜಿ. ತೂಕ ಇಳಿಸಿಕೊಂಡಿದ್ದಳು.ಚಿಕ್ಕಂದಿನಿಂದಲೂ ನಟಿಯಾಗುವ ಬಯಕೆ ಹೊಂದಿದ್ದ ಅಲಿಯಾ 68 ಕೆ.ಜಿ. ತೂಕ ಇದ್ದರು. ತನ್ನ 19ನೇ ವಯಸ್ಸಿನಲ್ಲೇ ‘ಸ್ಟೂಡೆಂಟ್‌ ಆಫ್‌ ದ ಇಯರ್‌’ ಚಿತ್ರದ ಆಡಿಷನ್‌ಗೆ ಕಾಲೇಜಿನ ಸಮವಸ್ತ್ರದಲ್ಲೇ ಹೋಗಿದ್ದರು.ಮೊದಲ ಚಿತ್ರಕ್ಕೆ ಸಹಿ ಹಾಕುವ ಮುನ್ನ ದೇಹದ ತೂಕ ಇಳಿಸಿಕೊಳ್ಳುವುದು ಹೇಗೆಂಬುದು ಅಲಿಯಾ ಮುಂದಿದ್ದ ದೊಡ್ಡ ಪ್ರಶ್ನೆ. ಅದನ್ನು ಸವಾಲಾಗಿ ಸ್ವೀಕರಿಸಿದ ಅಲಿಯಾ ಮೂರೇ ತಿಂಗಳಿನಲ್ಲಿ ಮೊದಲ ಚಿತ್ರದ ಚಿತ್ರೀಕರಣದ ವೇಳೆಗೆ 17 ರಿಂದ 18 ಕೆ.ಜಿ. ತೂಕವನ್ನು ಇಳಿಸಿಕೊಂಡರಂತೆ.

ಜರೀನ್‌ ಖಾನ್‌
ಜೂನಿಯರ್‌ ಕತ್ರಿನಾ ಕೈಫ್‌ ಎಂದೇ ಕರೆಸಿಕೊಳ್ಳುವ ಜರೀನ್‌ ಖಾನ್‌ ಸಲ್ಮಾನ್‌ ಖಾನ್‌ ಜತೆ ಅಭಿನಯಿಸುವ ಮುನ್ನ 100 ಕೆ.ಜಿ. ತೂಕ ಇದ್ದರಂತೆ.ಸಲ್ಮಾನ್‌ ಖಾನ್‌ ಅಭಿನಯದ ‘ವೀರ್‌’ ಚಿತ್ರದಲ್ಲಿ ಅಭಿನಯಿಸಲೆಂದೇ ಅವರು 43 ಕೆ.ಜಿ.ಯಷ್ಟು ತೂಕ ಕಡಿಮೆ ಮಾಡಿಕೊಂಡರು. ‘ವೀರ್‌’ ನಂತರ ‘ಹೌಸ್‌ಫುಲ್‌ 2’ ಚಿತ್ರದಲ್ಲೂ ಅಭಿನಯಿಸಿದರು. ಆದರೂ ಅವರ ತೂಕ ಇನ್ನಷ್ಟು ಕಡಿಮೆಯಾಗಬೇಕು ಎಂದು ಚಿತ್ರ ವಿಮರ್ಶಕರು ಸಲಹೆ ಕೊಟ್ಟಿದ್ದರಿಂದ ತಮ್ಮ ಮುಂದಿನ ಚಿತ್ರದ ಹೊತ್ತಿಗೆ ಮತ್ತೆ 10 ಕೆ.ಜಿ. ತೂಕವನ್ನು ಕಡಿಮೆ ಮಾಡಿಮಾಡಿಕೊಂಡಿದ್ದರಂತೆ.

ಪಂಜಾಬಿ ಕುಡಿ ಪರಿಣೀತಿ
ಪರಿಣೀತಿ ಚೋಪ್ರಾ ಪೋಷಕ ಪಾತ್ರದಲ್ಲಿ ಅಭಿನಯಿಸಿದ ಮೊದಲ ಚಿತ್ರ ‘ಲೇಡೀಸ್ v/s ರಿಕ್ಕಿ ಬೆಹ್ಲ್‘. ಅದರಲ್ಲಿನ ಅವರ ಅಭಿನಯ ಪ್ರೇಕ್ಷಕರ ಮನಸೂರೆಗೊಂಡಿತ್ತು. ನೋಡಲು ಸ್ವಲ್ಪ ದಪ್ಪಗಿದ್ದರೂ ಈಕೆ ಬಾಲಿವುಡ್‌ನಲ್ಲಿ ಬೇಡಿಕೆಯಲ್ಲಿರುವ ನಟಿಯಾಗುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ.ಬಾಲಿವುಡ್‌ಗೆ ಎಂಟ್ರಿ ಕೊಡುವ ಮುನ್ನ ಯಶ್‌ ರಾಜ್‌ ಪ್ರೊಡಕ್ಷನ್ಸ್‌ನ ಅಕೌಂಟ್ಸ್‌ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಪರಿಣೀತಿ ಬಗ್ಗೆ ಸಾಕಷ್ಟು ಜನರಿಗೆ ತಿಳಿದೇ ಇಲ್ಲ. ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಿ, ಅಲ್ಲಿ ಕೆಲಸ ಸಿಗದೆ ಭಾರತಕ್ಕೆ ಹಿಂತಿರುಗುವಾಗ ಆಕೆ ತಾನು ಮುಂದೊಂದು ದಿನ ನಟಿಯಾಗುತ್ತೇನೆ ಎಂದೂ ಅಂದುಕೊಂಡಿರಲಿಲ್ಲ.85 ಕೆ.ಜಿ. ತೂಕದ ಪರಿಣೀತಿ ಯಶ್‌ ರಾಜ್ ಬ್ಯಾನರ್‌ನಲ್ಲಿ ಕೆಲಸ ಮಾಡುವಾಗ ತಾನೇಕೆ ಚಿತ್ರಗಳಲ್ಲಿ ಅಭಿನಯಿಸಬಾರದು ಎಂಬ ಆಲೋಚನೆ ಮೂಡಿತ್ತು. ಅಕ್ಕ ಪ್ರಿಯಾಂಕಾ ಚೋಪ್ರಾ ಅಗಾಗಲೇ ಸ್ಟಾರ್‌ ಆಗಿದ್ದ ಮಾದರಿಯೂ ಎದುರಲ್ಲಿ ಇತ್ತು. ಇದರಿಂದ ಪ್ರಭಾವಿತಳಾದ ಪರಿಣೀತಿ ಮೊದಲು ತನ್ನ ದೇಹದ ತೂಕವನ್ನು ಇಳಿಸಿಕೊಳ್ಳಲು ಮುಂದಾಗಿ 85ಕೆ.ಜಿಯಿಂದ 50 ಕೆ.ಜಿಗೆ ತೂಕ ಇಳಿಸಿಕೊಂಡರು. 38 ಇಂಚಿನಷ್ಟಿದ್ದ ಸೊಂಟದ ಅಳತೆ 32 ಇಂಚಿಗೆ ಇಳಿಯಿತು. ಕ್ರಮೇಣ ನಿರಂತರ ವರ್ಕ್ಔಟ್ ಮಾಡಿ ಇನ್ನೂ ತೆಳ್ಳಗಾದರು. ಈಗ ಆಕೆಯ ಸೊಂಟದ ಅಳತೆ 30 ಇಂಚು! ಇದಕ್ಕಾಗಿ ಆಕೆ ಎಂದೂ ಡಯಟ್‌ ಮಾಡಲಿಲ್ಲವಂತೆ. ಕೇವಲ ಜಾಗಿಂಗ್‌, ಜಿಮ್‌ ಅಂತ ವರ್ಕ್‌ಔಟ್‌ನಿಂದಲೇ ತನ್ನ ತೂಕ ಇಳಿಸಿಕೊಂಡರು.

ಭಾರಿ ಬೆವರಿಳಿಸಿದ ಅರ್ಜುನ್‌
ನಿರ್ದೇಶಕ ಬೋನಿ ಕಪೂರ್‌ ಪುತ್ರ ಅರ್ಜುನ್‌ ಕಪೂರ್‌ ನಟನಾಗುವ ಮೊದಲ ಕೆಲ ವರ್ಷ ತನ್ನ ದೇಹದ ತೂಕವನ್ನು ಇಳಿಸಿಕೊಳ್ಳಲು ತುಂಬಾ ಕಷ್ಟಪಟ್ಟಿದ್ದರು. ತಮ್ಮ 22ನೇ ವಯಸ್ಸಿನಲ್ಲಿ 140 ಕೆ.ಜಿ. ತೂಕ ಇದ್ದ ಅರ್ಜುನ್‌ ಮೊದಲ ಸಿನಿಮಾ ಚಿತ್ರೀಕರಣದ ಹೊತ್ತಿಗೆ 90 ಕೆ.ಜಿಗೆ ಇಳಿದರು.ತನ್ನ ಮೊದಲ ಚಿತ್ರ ‘ಇಷ್ಕ್‌ಜಾದೆ’ಗೆ ಸಹಿ ಹಾಕುವ ನಿರ್ಣಯಕ್ಕೂ ಮೊದಲಿನಿಂದಲೇ ಅರ್ಜುನ್ ದೇಹತೂಕ ಇಳಿಸಿಕೊಳ್ಳತೊಡಗಿದರು. ನಾಲ್ಕು ವರ್ಷಗಳ ಕಸರತ್ತಿನ ಫಲ ಅದು. ನಿತ್ಯ ಜಿಮ್‌ನಲ್ಲಿ ಬೆವರಿಳಿಸುವುದಲ್ಲದೆ, ಸೂಕ್ತ ಡಯಟ್‌ ಕೂಡ ಅನುಸರಿಸುತ್ತಿದ್ದರು. ಅದಕ್ಕೆ ಅವರಿಗೆ ಪ್ರೇರಣೆ ನಟ ಸಲ್ಮಾನ್‌ ಖಾನ್‌.ನಟ ಅರ್ಜುನ್‌ 4 ವರ್ಷಗಳಲ್ಲಿ ಬರೋಬ್ಬರಿ 50 ಕೆ.ಜಿ. ತೂಕ ಇಳಿಸಿಕೊಂಡರು. ಇತ್ತೀಚೆಗೆ ತೆರೆಕಂಡ ‘ತೇವರ್’ ಚಿತ್ರ ಹಾಗೂ ಅದಕ್ಕೂ ಮೊದಲು ರಣವೀರ್ ಸಿಂಗ್ ಜೊತೆ ಅಭಿನಯಿಸಿದ ‘ಗುಂಡೇ’ ಸಿನಿಮಾದಲ್ಲಿ ತೂಕ ತಗ್ಗಿಸಿಕೊಂಡಿದ್ದಷ್ಟೇ ಅಲ್ಲದೆ ಮೈಕಟ್ಟನ್ನು ಹುರಿಗೊಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT