ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೀರೊ ಹೊಂಡಾ ವಿಚ್ಛೇದನ

Last Updated 19 ಜನವರಿ 2011, 8:45 IST
ಅಕ್ಷರ ಗಾತ್ರ

ಹೀರೊ ಹೊಂಡಾ. ನಗರ, ಪಟ್ಟಣ, ಹಳ್ಳಿ ಎನ್ನದೆ ರಾಷ್ಟ್ರದೆಲ್ಲೆಡೆ ಬೈಕ್‌ಗಳ ದೂಳೆಬ್ಬಿಸಿದ ಖ್ಯಾತಿ ಈ ಕಂಪೆನಿಯದ್ದು. ಬಹುತೇಕ ಜನಕ್ಕೆ ಇದು ಎರಡು ಕಂಪೆನಿಗಳು ಬೆಸೆದುಕೊಂಡು ರೂಪುಗೊಂಡಿರುವ ಕಂಪೆನಿ ಎಂಬುದೂ ಗೊತ್ತಿಲ್ಲ! ಆ ಪರಿ ಯಶಸ್ವಿ ಜೋಡಿದಾರಿಕೆಯ ಬೆಳ್ಳಿ ಹಬ್ಬ ಪೂರೈಸಿರುವ ಹೀರೊ ಹೊಂಡಾ ಇದೀಗ ಪರಸ್ಪರ ತಮ್ಮ ಸಹಯೋಗ ಕಡಿದುಕೊಳ್ಳಲು ತೀರ್ಮಾನಿಸಿವೆ.

ಹೀರೊ ಹೊಂಡಾದ ಸಹಭಾಗಿ ಕಂಪೆನಿಗಳಾಗಿದ್ದ ಪಂಜಾಬ್‌ನ ಲೂಧಿಯಾನ ಮೂಲದ ಹೀರೊ ಸೈಕಲ್ಸ್ ಸಮೂಹ ಹಾಗೂ ಜಪಾನಿನ ಹೊಂಡಾ ಮೋಟಾರ್ ಕಂಪೆನಿಗಳೆರಡೂ ಇನ್ನು ಮುಂದೆ ತಾವು ಏಕಾಂಗಿ ಸವಾರಿ ನಡೆಸುವುದಾಗಿ ಅಧಿಕೃತವಾಗಿ ಘೋಷಿಸಿವೆ. ಇದರೊಂದಿಗೆ ರಾಷ್ಟ್ರದ ಆರ್ಥಿಕ ಸುಧಾರಣೆ ಹಾಗೂ ಮುಕ್ತ ಮಾರುಕಟ್ಟೆ ನೀತಿಯ ಫಲವಾಗಿ ಹೊರಹೊಮ್ಮಿದ್ದ ಅತ್ಯಂತ ಫಲಪ್ರದವಾದ ಒಂದು ಸಹಭಾಗಿತ್ವಕ್ಕೂ ತೆರೆಬಿದ್ದಿದೆ.

ಸದ್ಯ ಹೀರೊ ಹೊಂಡಾ ಕಂಪೆನಿಯಲ್ಲಿ ಹೊಂಡಾ ಕಂಪೆನಿ ಶೇ 26ರಷ್ಟು ಪಾಲುದಾರಿಕೆ ಹೊಂದಿದ್ದು, ಅದನ್ನು ಹೀರೊ ಕಂಪೆನಿಯೇ ಖರೀದಿಸಲಿದೆ. ಖಾಸಗಿ ಹೂಡಿಕೆದಾರರ ನೆರವಿನೊಂದಿಗೆ ನಡೆಸುವ ಈ ಖರೀದಿಯಿಂದಾಗಿ ಕಂಪೆನಿಯಲ್ಲಿನ ಹೀರೊ ಪಾಲುದಾರಿಕೆ ಶೇ 52ಕ್ಕೆ ಏರಲಿದೆ.

ಹೊಂಡಾದ ಒಡೆತನ ತನ್ನದಾಗಿಸಿಕೊಳ್ಳಲು ತಾನು ನೀಡಲಿರುವ ಹಣದ ಮೊತ್ತ ಎಷ್ಟೆಂಬುದನ್ನು ಹೀರೊ ಬಹಿರಂಗಗೊಳಿಸಿಲ್ಲ.  ಹೊಂಡಾ ಕಂಪೆನಿ ಕೂಡ ಈ ಕುರಿತು ಯಾವ ಸುಳಿವನ್ನೂ ಬಿಟ್ಟುಕೊಟ್ಟಿಲ್ಲ. ಆದರೆ, ಈ ಬೆಳವಣಿಗೆ ಬಗ್ಗೆ ತೀವ್ರ ಕುತೂಹಲ ತಾಳಿರುವ ಖಾಸಗಿ ಹೂಡಿಕೆದಾರ ಸಂಸ್ಥೆಗಳ ಲೆಕ್ಕಾಚಾರದ ಪ್ರಕಾರ ಈ ಮೊತ್ತ ್ಙ 9200 ಕೋಟಿಗಳಷ್ಟಾಗುವ ಅಂದಾಜಿದೆ. ಈ ಪೈಕಿ ಸುಮಾರು ರೂ. 5000 ಕೋಟಿ  ಹೀರೊ ಮೊದಲ ಹಂತದಲ್ಲೇ ನೀಡಲಿದೆ. ಉಳಿದ ಹಣವನ್ನು ತಾಂತ್ರಿಕ ನೆರವಿಗೆ ನೀಡಲಾಗುವ ಗೌರವಧನದ ರೂಪದಲ್ಲಿ 2014ರವರೆಗೆ ನಿಯಮಿತವಾಗಿ ಭರಿಸಲಿದೆ.

ಈ ಖರೀದಿ ಮೊತ್ತ ತಕ್ಷಣಕ್ಕೆ ದುಬಾರಿ ಎನ್ನಿಸುತ್ತದೆ. ಆದರೆ, ಪ್ರಸ್ತುತ ರಾಷ್ಟ್ರದ ದ್ವಿಚಕ್ರ ವಾಹನ ಮಾರುಕಟ್ಟೆ ಮೌಲ್ಯ ವಾರ್ಷಿಕ  ರೂ. 35,400 ಕೋಟಿ ಗಳಷ್ಟಿದ್ದು, ಅದರಲ್ಲಿ ಗರಿಷ್ಠ ಶೇ 53ರಷ್ಟು ಪಾಲು ಹೀರೊ ಹೊಂಡಾದ್ದೇ ಇದೆ. ಅತ್ಯಂತ ಲಾಭದಾಯಕವಾಗಿ ನಡೆಯುತ್ತಿರುವ ಈ ಕಂಪೆನಿ  ್ಙ 4400 ಕೋಟಿಗಳಷ್ಟು ನಗದು ಮೀಸಲನ್ನೂ ಹೊಂದಿದೆ. ಹೀಗಾಗಿ ಹೀರೊ  ಕಂಪೆನಿಗೆ ಈ ಮೊತ್ತ ಭರಿಸುವುದು ಒಂದು ಹೊರೆಯೇ ಅಲ್ಲ.

ಆದರೆ ಸಹಭಾಗಿತ್ವ ಮುರಿದುಕೊಂಡು ಹೊಸ ಹೆಸರಿನೊಂದಿಗೆ ಏಕಾಂಗಿ ಸವಾರಿ ಆರಂಭಿಸಿದ ನಂತರ ಹೀರೋಗೆ ನಿಜವಾದ ಸವಾಲು ಎದುರಾಗುವುದು ಮಾರುಕಟ್ಟೆಯಲ್ಲೇ.  ಹೀರೊ ಹೊಂಡಾ ಒಂದು ಕಂಪೆನಿಯಾಗಿ ಕಳೆದ 25 ವರ್ಷಗಳಿಂದ ಮುನ್ನಡೆ ಸಾಧಿಸುವಲ್ಲಿ ಹೊಂಡಾದ ಹೆಸರು ಹಾಗೂ ತಾಂತ್ರಿಕ ಪರಿಣತಿಯು ಬೆನ್ನೆಲುಬಾಗಿ ಕೆಲಸ ಮಾಡಿತ್ತು. ಆದರೆ, ಇನ್ನು ಮುಂದೆ ಹೀರೊ ಏಕಾಂಗಿಯಾಗಿಯೇ ಅದನ್ನು ಸಾಧಿಸಬೇಕು. ಹೊಸ ಕಂಪೆನಿಯ ವರ್ಚಸ್ಸು ಗ್ರಾಹಕರ ಮನಸ್ಸಿಗೆ ಅಚ್ಚೊತ್ತುವಂತೆ ‘ಬ್ರ್ಯಾಂಡ್ ಬಿಲ್ಡಿಂಗ್’ ಮಾಡುವುದು ಅಷ್ಟು ಸುಲಭವಲ್ಲ. ಒಪ್ಪಂದದ ಪ್ರಕಾರ, ಇನ್ನು ನಾಲ್ಕು ವರ್ಷಗಳ ಕಾಲ ಹೀರೊ ತನ್ನ ಉತ್ಪನ್ನಗಳೊಂದಿಗೆ ಹೊಂಡಾ ಹೆಸರನ್ನೂ ಬಳಸಿಕೊಳ್ಳಲು ಅವಕಾಶವಿದೆಯಾದರೂ ಅಷ್ಟರ ವೇಳೆಗೆ ತನ್ನದೇ ವರ್ಚಸ್ಸನ್ನು ಬೆಳೆಸುವುದು ಕೂಡ ಅಗತ್ಯ. ಮಾರುಕಟ್ಟೆ ವಿಶ್ಲೇಷಕರ ಪ್ರಕಾರ, ಇಂತಹ ಬ್ರಾಂಡ್ ಬಿಲ್ಡಿಂಗ್‌ಗಾಗಿ ಹೀರೊ ಮುಂಬರುವ ವರ್ಷಗಳಲ್ಲಿ ಸುಮಾರು  ರೂ. 500 ಕೋಟಿಗಳನ್ನಾದರೂ ವಿನಿಯೋಗಿಸಬೇಕಾಗುತ್ತದೆ.

ಇನ್ನೊಂದೆಡೆ ಹೊಂಡಾ ಕೂಡ ಶೇ 100ರಷ್ಟು ಒಡೆತನದ ತನ್ನದೇ ಪ್ರತ್ಯೇಕ ಕಂಪೆನಿಯಾದ ಹೊಂಡಾ ಮೋಟಾರ್‌ಸೈಕಲ್ಸ್ ಅಂಡ್ ಸ್ಕೂಟರ್ಸ್‌ ಇಂಡಿಯಾ  (ಎಚ್‌ಎಂಎಸ್‌ಐ) ಮೂಲಕ ಮಾರುಕಟ್ಟೆಯಲ್ಲಿ ತನ್ನ ಅಸ್ತಿತ್ವ ಬಲಪಡಿಸಿಕೊಳ್ಳಲು ಯತ್ನಿಸಲಿದೆ. ಬರುವ ದಿನಗಳಲ್ಲಿ ಹಲವಾರು ಮಾದರಿಯ ಹೊಚ್ಚ ಹೊಸ ಬೈಕ್‌ಗಳನ್ನು ಅದು ಮಾರುಕಟ್ಟೆಗೆ ಬಿಡುವ ನಿರೀಕ್ಷೆ ಇದೆ. ಪ್ರಸ್ತುತ ಬೈಕ್‌ಗಳ ವಿಭಾಗದಲ್ಲಿ ಶೇ 7ರಷ್ಟು ಅಲ್ಪಪ್ರಮಾಣದ ಮಾರುಕಟ್ಟೆ ಪಾಲು ಹೊಂದಿರುವ ಎಚ್‌ಎಂಎಸ್‌ಐ 100 ಸಿ.ಸಿ. ಮಾದರಿಯ ಹೊಸ ಬೈಕ್‌ಗಳ ಮೂಲಕ ತನ್ನ ಪಾಲನ್ನು ಹಿಗ್ಗಿಸಿಕೊಳ್ಳುವ ಯೋಜನೆ ಹೊಂದಿದೆ ಎನ್ನಲಾಗಿದೆ.

 ಐದು ವರ್ಷಗಳ ಹಿಂದೆ ಆರಂಭಗೊಂಡ ಎಚ್‌ಎಂಎಸ್‌ಐ ಸ್ಕೂಟರ್ ಮಾರುಕಟ್ಟೆಯಲ್ಲಿ ಈಗಾಗಲೇ ತನ್ನ ಪ್ರಾಬಲ್ಯ ಮೆರೆದಿದೆ. 2010ರ ಏಪ್ರಿಲ್-ನವೆಂಬರ್ ಅವಧಿಯಲ್ಲಿ ಸ್ಕೂಟರ್ ಮಾರುಕಟ್ಟೆಯ ಶೇ 44ರಷ್ಟು ಪಾಲನ್ನು ಕಂಪೆನಿ ತನ್ನಡೆಗೆ ಸೆಳೆದುಕೊಂಡಿರುವುದೇ ಇದಕ್ಕೆ ಸಾಕ್ಷಿ. ಇದರೊಟ್ಟಿಗೆ ಬೈಕ್‌ಗಳ ಮಾರಾಟವನ್ನೂ ಹೆಚ್ಚಿಸಿಕೊಂಡು ಪ್ರಸ್ತುತ ಹಣಕಾಸು ವರ್ಷದಲ್ಲಿ ಒಟ್ಟಾರೆ 15 ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಬೇಕೆಂಬ ಗುರಿ  ಹೊಂದಿದೆ.

ಅಂತಿಮವಾಗಿ ಈ ವಿದ್ಯಮಾನ ರಾಷ್ಟ್ರದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲೇ ಸಂಚಲನ ಮೂಡಿಸಲಿದೆ. ತನ್ನ ಗುರಿ ಸಾಧನೆಗಾಗಿ ಹೊಂಡಾ ಏನೆಲ್ಲಾ ಕಸರತ್ತುಗಳನ್ನು ಮಾಡಬಹುದೆಂಬ ವಾಸನೆ ಗ್ರಹಿಸಿರುವ ಇನ್ನಿತರ ಪ್ರಮುಖ ಕಂಪೆನಿಗಳಾದ ಬಜಾಜ್ ಆಟೊ, ಟಿವಿಎಸ್, ಯಮಹಾ ಮತ್ತು ಸುಜುಕಿಗಳು ಕೂಡ 2011ರ ಮೊದಲ ತ್ರೈಮಾಸಿಕದಲ್ಲಿ ಹೊಸ ಹೊಸ ಮಾದರಿಯ ಟೂ ವ್ಹೀಲರ್‌ಗಳನ್ನು ರಸ್ತೆಗಿಳಿಸಲಿವೆ. ಹೀಗಾಗಿ  ಮುಂದಿನ ಎರಡು ವರ್ಷಗಳಲ್ಲಿ ಬಗೆಬಗೆಯ ಮಾದರಿಯ ದ್ವಿಚಕ್ರವಾಹನಗಳು ಜನರಿಗೆ ಹತ್ತಿರವಾಗಲು ತೀವ್ರ ಪೈಪೋಟಿ ನಡೆಸಲಿವೆ. ಇದು ಬೆಲೆ ಸಮರಕ್ಕೂ ಕಾರಣವಾಗುವ ಸಂಭವವಿದೆ.

 ಈ ಸ್ಪರ್ಧೆಯ ಮಧ್ಯೆ ಹೊಸ ಬೈಕ್ ತಂತ್ರಜ್ಞಾನದ ಅಲಭ್ಯತೆ ಹೀರೊ ಕಂಪೆನಿಗೆ ಮತ್ತೊಂದು ಮುಖ್ಯ ತೊಡಕಾಗುವ ಸಾಧ್ಯತೆ ಇದೆ. ಅಷ್ಟಕ್ಕೂ, ಹೊಂಡಾ ಕಂಪೆನಿ ಆಧುನಿಕ ತಂತ್ರಜ್ಞಾನ ಹಾಗೂ ಹೊಸ ಮಾದರಿಗಳನ್ನು ತನ್ನೊಂದಿಗೆ ಹಂಚಿಕೊಳ್ಳಲು ಹಿಂದೇಟು ಹಾಕಿದ್ದೇ ಹೀರೊ ಹೊಂಡಾ ವಿಚ್ಛೇದನಕ್ಕೆ ಕಾರಣವೆನ್ನಲಾಗಿದೆ. ಈ ಕೊರತೆ ನೀಗಿಕೊಂಡು ಮಾರುಕಟ್ಟೆಯಲ್ಲಿ ಪೈಪೋಟಿ ಸಾಮರ್ಥ್ಯ ಉಳಿಸಿಕೊಳ್ಳಬೇಕಾದರೆ ಹೀರೊ ಕಂಪೆನಿಯು ಸುಸಜ್ಜಿತ ಸಂಶೋಧನಾ ಮತ್ತು ಅಭಿವೃದ್ಧಿ ಸೌಲಭ್ಯಕ್ಕಾಗಿ ರೂ. 500 ಕೋಟಿ  ಬಂಡವಾಳ ಹೂಡಬೇಕಾಗುತ್ತದೆ.

ಈ ಸವಾಲಿನೊಟ್ಟಿಗೇ ಹೀರೊ ಪಾಲಿಗೆ ಮತ್ತೊಂದು ಅವಕಾಶವೂ ಒದಗಿ ಬಂದಿದೆ. ಇಷ್ಟು ದಿನ ಬೈಕ್‌ಗಳನ್ನು ವಿದೇಶಗಳಿಗೆ ರಫ್ತು ಮಾಲು ಹೀರೊಗೆ ಹೊಂಡಾ ಒಪ್ಪಿಗೆ ನೀಡಿರಲಿಲ್ಲ. ಆದರೆ ಇನ್ನು ಮುಂದೆ ಅದಕ್ಕೆ ಯಾರೂ ಎಲ್ಲೂ ತಡೆಯೊಡ್ಡಲಾರರು. ಭವಿಷ್ಯದಲ್ಲಿ ಹೀರೊ  ಸವಾರಿ ಹೇಗಿರುತ್ತೋ ನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT