ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಣಸೆ ಸೌದೆ ಕೊರತೆ ಭೀತಿ !

Last Updated 24 ಮಾರ್ಚ್ 2011, 5:50 IST
ಅಕ್ಷರ ಗಾತ್ರ

ಶಿಡ್ಲಘಟ್ಟ:  ಒಂದೆಡೆ ಚೀನಾ ರೇಷ್ಮೆಯ ಹಾವಳಿ, ಮತ್ತೊಂದೆ ಸುಂಕ ರಹಿತ ರೇಷ್ಮೆ ಆಮದಿನ ಆತಂಕ. ಹೀಗೆ ಒಂದಿಲ್ಲೊಂದು ರೀತಿಯ ಸಮಸ್ಯೆಯಿಂದ ಸಂಕಷ್ಟಪಡುತ್ತಿರುವ ತಾಲ್ಲೂಕಿನ ಕಚ್ಚಾ ರೇಷ್ಮೆಯ ಉತ್ಪಾದಕರಾದ ರೀಲರುಗಳಿಗೆ ಇತ್ತೀಚಿನ ದಿನಗಳಲ್ಲಿ ಇನ್ನೊಂದು ರೀತಿಯ ಸಮಸ್ಯೆ ತೀವ್ರ  ಎದುರಾಗಿದೆ. ಹುಣಸೆ ಸೌದೆಗಳ ಪ್ರಮಾಣ ಕಡಿಮೆಯಾಗುತ್ತಿದ್ದು, ರೀಲರುಗಳಲ್ಲಿ ಭೀತಿಯ ಕಾರ್ಮೋಡ ಆವರಿಸಿದೆ.

ಈ ಸೌದೆಯಲ್ಲಿ ಮೂರು ಮುಖ್ಯ ಗುಣಗಳಿವೆ. ಶಾಖ, ಹೊಗೆ ರಹಿತ ಮತ್ತು ಕೆಂಡದ ಉತ್ಪಾದನೆ. ಇವುಗಳಿಂದಾಗಿ ಕಚ್ಚಾ ರೇಷ್ಮೆ ಉತ್ಪಾದನೆಗೆ ಹುಣಸೆ ಸೌದೆ ಅತ್ಯಗತ್ಯ. ರೀಲರುಗಳು ರೇಷ್ಮೆ ಗೂಡನ್ನು ಕುದಿಯುವ ನೀರಿನಲ್ಲಿ ಹಾಕಿ ಕಡ್ಡಿಯಲ್ಲಿ ತಿರುಗಿಸಿ ಜೋಟನ್ನು ಬೇರ್ಪಡಿಸಿತ್ತಾರೆ. ನಂತರ ಮುಂದಿರುವ ರೀಲಿಂಗ್ ಬೇಸನ್ನಿನಲ್ಲಿ ಎಳೆಗಳ ಸಮೇತವಾಗಿ ಗೂಡನ್ನು ಹಾಕುತ್ತಾರೆ. ಅಲ್ಲಿ 6 ರಿಂದ 10 ಗೂಡುಗಳ ಎಳೆ ಒಂದು ಮಾಡಿ ತಿರುಗುವ ರಾಟೆಯಲ್ಲಿ ಸುತ್ತಲಾಗುತ್ತದೆ. ಹೀಗೆ ಕಚ್ಚಾ ರೇಷ್ಮೆ ಉತ್ಪಾದನೆ ನಡೆಯುತ್ತದೆ. 

 ‘ರೇಷ್ಮೆ ಗೂಡು ಸರಾಗವಾಗಿ ಕುದಿಯಲು ಹುಣಸೆ  ಸೌದೆಯೇ ಬೇಕು. ಏಕೆಂದರೆ ಅತ್ಯಧಿಕ ಶಾಖ ಮತ್ತು ಹೊಗೆ ರಹಿತ ಇಂಧನವಾಗಿದೆ. ಜಾಲಿ ಮೊದಲಾದ ಸೌದೆಗಳನ್ನು ಸುಟ್ಟರೆ ಹೊಗೆ ಬಂದು ರೇಷ್ಮೆ ಹೊಳಪು ಕಳೆದುಕೊಂಡು ಕಪ್ಪಗಾಗುತ್ತದೆ. ಇನ್ನು ರಾಟೆಯಲ್ಲಿ ಸುತ್ತಿಕೊಳ್ಳುವ ರೇಷ್ಮೆಯನ್ನು ಒಣಗಿಸಲು ಅದರ ಅಡಿಯಲ್ಲಿ ಕೆಂಡವನ್ನು ಹಾಸಿಡಬೇಕು. ಉತ್ತಮ ಹೊಗೆ ರಹಿತ ಕೆಂಡ ಸಿಗುವುದು ಇದರಲ್ಲಿ ಮಾತ್ರ’ ಎಂದು ರೀಲರುಗಳು ಹೇಳುತ್ತಾರೆ.

 ಶಿಡ್ಲಘಟ್ಟದಲ್ಲಿ ಸುಮಾರು 4,500 ರೇಷ್ಮೆ ತಯಾರಿಕಾ ಘಟಕಗಳಿವೆ. ಅಂದರೆ ಈ ಸಂಖ್ಯೆಯ ಮೂರರಿಂದ ನಾಲ್ಕರಷ್ಟು ಒಲೆಗಳು ಬೆಳಿಗ್ಗೆ ಉರಿಯಲೇ ಬೇಕು. ಹೀಗಾಗಿ ಪ್ರತಿದಿನ 250 ರಿಂದ 300 ಟನ್ ಹುಣಸೆ ಸೌದೆಯ ಅಗತ್ಯವಿದೆ. ಇನ್ನೊಂದು ಲೆಕ್ಕಾಚಾರದ ಪ್ರಕಾರ ಒಂದು ಟನ್ ಹುಣಸೆ ಸೌದೆ ಬಳಸಿ 75 ರಿಂದ 80 ಕೆಜಿ ರೇಷ್ಮೆ ಉತ್ಪಾದಿಸಬಹುದು. ನಾಲ್ಕು ಟೇಬಲ್ ಇರುವ ರೇಷ್ಮೆ ಘಟಕಕ್ಕೆ ವಾರಕ್ಕೆ ಒಂದು ಟನ್ ಹುಣಸೆ ಸೌದೆಯ ಅಗತ್ಯವಿದೆ.

 ಈಗ ಒಂದು ಟನ್ ಹುಣಸೆ ಸೌದೆಯ ಬೆಲೆ 2800 ರೂಗಳಿಂದ 3000 ರೂಪಾಯಿವರೆಗೆ ಇದೆ. ಒಂದು ಒಳ್ಳೆಯ ಮರ ಎಂದರೆ ಸುಮಾರು ನೂರು ವರ್ಷದ್ದು ಎಂದರ್ಥ. ಹುಣಸೆ ಮರ ಫಸಲು ಕೊಡುವುದೇ ಹತ್ತು ವರ್ಷಗಳ ನಂತರ. ನಲವತ್ತು ವರ್ಷದ ಮರವೊಂದು ಸುಮಾರು ಎರಡು ಟನ್ ತೂಗುತ್ತದೆಯಷ್ಟೇ. ಇತ್ತೀಚಿನ ದಿನಗಳಲ್ಲಿ ರಸ್ತೆ ವಿಸ್ತರಣೆ ಹೆಸರಿನಲ್ಲಿ ಮರಗಳನ್ನು ಕಡಿಯಲಾಗುತ್ತಿದೆ. ಕೆಲವೇ ದಿನಗಳಲ್ಲಿ ಶಿಡ್ಲಘಟ್ಟದಲ್ಲಿದ್ದ ಹಲವು ಹುಣಸೆ ತೋಪುಗಳು ಕಣ್ಮರೆಯಾಗಿವೆ. ಇದೇ ಕಾರಣದಿಂದ ಹುಣಸೆ ಹಣ್ಣು ಒಂದು ಕೆಜಿ 80 ರೂಪಾಯಿಯಂತೆ ಮಾರಲಾಗುತ್ತಿದೆ.

‘ಹಲವು ತಂತ್ರಜ್ಞಾನವನ್ನು ರೇಷ್ಮೆ ತಯಾರಿಕೆಯಲ್ಲಿ ಪ್ರಯೋಗಿಸಿ ಬಳಸಿದ್ದರೂ ಹುಣಸೆ  ಸೌದೆಗೆ ಪರ್ಯಾಯವಾಗಿ ಏನನ್ನೂ ಕಂಡು ಹಿಡಿಯಲಾಗಿಲ್ಲ. ಹೊಗೆ ರಹಿತ, ಶಾಖ, ಮತ್ತು ರೇಷ್ಮೆ ಒಣಗಿಸುವ ಉಪಕರಣವಿದ್ದರೆ ಎಲ್ಲ ರೀಲರುಗಳೂ ಖಂಡಿತ ಬಳಸುತ್ತಾರೆ. ಸೌದೆಯ ಬೆಲೆ ಏರಿಕೆಯಿಮದಾಗಿ ನಮಗೆ ರೇಷ್ಮೆ ತಯಾರಿಕಾ ವೆಚ್ಚ ಹೆಚ್ಚುತ್ತಿದೆ. ಇನ್ನು ಸೌದೆಯೇ ಇಲ್ಲವಾದರೆ ಶಿಡ್ಲಘಟ್ಟದಲ್ಲಿ ರೇಷ್ಮೆಯೇ ತಯಾರಾಗದು. ಲಕ್ಷಾಂತರ ಮಂದಿ ಬೀದಿಗೆ ಬರಬೇಕಾಗುತ್ತದೆ. ಇದರ ಪರಿಣಾಮ ಊಹಿಸಲೂ ಅಸಾಧ್ಯ’ ಎಂದು ಹೇಳುವ ರೀಲರುಗಳು ಆತಂಕದ ಸ್ಥಿತಿ ಎದುರಿಸುತ್ತಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT