ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುತಾತ್ಮ ಪೊಲೀಸರಿಗೆ ಗೌರವ ಸಮರ್ಪಣೆ

Last Updated 22 ಅಕ್ಟೋಬರ್ 2012, 6:00 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕರ್ತವ್ಯ ನಿರತ ಸಮಯಲ್ಲಿ ನಾಡಿಗೆ ಪ್ರಾಣಾರ್ಪಣೆ ಮಾಡಿದ ದೇಶದ 579 ಪೊಲೀಸರಿಗೆ ಭಾನುವಾರ ಪೊಲೀಸ್ ಹುತಾತ್ಮರ ದಿನಾಚರಣೆ ಅಂಗವಾಗಿ ಗೌರವ ಸಮರ್ಪಿಸಲಾಯಿತು.

ನಗರ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹುತಾತ್ಮ ಪೊಲೀಸರಿಗೆ ಪುಷ್ಪಗುಚ್ಛ ಸಮರ್ಪಣೆ, ವಾಲಿ ಫೈರಿಂಗ್ ಹಾಗೂ ಪೊಲೀಸ್ ಧ್ವಜವನ್ನು ಅರ್ಧಕ್ಕೆ ಇಳಿಸಿ ಪೊಲೀಸ್ ಬ್ಯಾಂಡ್‌ನಿಂದ ನಾದ ನಮನ ಸಲ್ಲಿಸುವ ಮೂಲಕ ಗೌರವಿಸಲಾಯಿತು. ಪ್ರಾಣ ತ್ಯಾಗ ಮಾಡಿದ ಕರ್ನಾಟಕದ ನಾಲ್ವರು ಪೊಲೀಸರು ಸೇರಿದಂತೆ ದೇಶದ 579 ಪೊಲೀಸರು ಹಾಗೂ ಅರೆ ಸೇನಾ ಪಡೆ ಸಿಬ್ಬಂದಿಯ ಹೆಸರುಗಳನ್ನು ನಗರ ಪೊಲೀಸ್ ಆಯುಕ್ತ ಬಿ.ಎ. ಪದ್ಮನಯನ ಇದೇ ಸಂದರ್ಭದಲ್ಲಿ ಸ್ಮರಿಸಿದರು.


ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ವಾಯವ್ಯ ಸಾರಿಗೆ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಜೈನ್  `ದೇಶದ ನಾಗರಿಕರು ಭದ್ರತೆ ಮತ್ತು ಶಾಂತಿಯಿಂದ ಬದುಕಬೇಕಾದರೆ ನಮ್ಮ  ಪೊಲೀಸರ ಸೇವೆ ಮುಖ್ಯವಾದುದು. ದೇಶದ ಭದ್ರತೆಗಾಗಿ ಪ್ರಾಣ ತ್ಯಾಗ ಮಾಡಿದ ಪೊಲೀಸರನ್ನು ಸ್ಮರಿಸುವ ಕಾರ್ಯ ಅತ್ಯಂತ ಮಹತ್ವವಾದುದು.
 
1959ರಲ್ಲಿ ಚೀನಾದೊಂದಿಗೆ ಹೋರಾಡಿ ಅಮರರಾದ ವೀರಯೋಧರ ಸವಿನೆನಪಿನಲ್ಲಿ ಪ್ರತೀ ಅಕ್ಟೋಬರ್ 21ರಂದು ಹುತ್ಮಾತರ ದಿನಾಚರಣೆ ಆಚರಿಸಲಾಗುತ್ತಿದ್ದು, ಇದು ಶ್ಲಾಘನೀಯವಾಗಿದೆ. ತಮ್ಮ ಪ್ರಾಣದ ಹಂಗು ತೊರೆದು ಹೋರಾಡುವ ಪೊಲೀಸರು ಸಮಾಜದಲ್ಲಿ ಶಾಂತಿ ಮತ್ತು ನೆಮ್ಮದಿ ನೆಲೆಸುವಂತೆ ಮಾಡಿದ್ದಾರೆ. ಅವರು ಸಮಾಜದ ನಿಜವಾದ ನಾಯಕರಾಗಿದ್ದಾರೆ. ಅವರನ್ನು ಸ್ಮರಿಸುವುದು ಎಲ್ಲರ ಕರ್ತವ್ಯ~ ಎಂದು ಹೇಳಿದರು.

ಹುತಾತ್ಮ ಪೊಲೀಸರ ನೆನಪಿನಲ್ಲಿ ಮೌನ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಪೊಲೀಸರಿಂದ ಗೌರವ ನಮನ ಸಮಾವೇಶ ನಡೆಯಿತು. ಎಸ್.ಪಿ. ರವಿಕುಮಾರ, ಡಿ.ಸಿ.ಪಿ.ಗಳಾದ ಪ್ರತಾಪನ್, ಶ್ರೀನಾಥ್ ಜೋಶಿ ಮುಂತಾದವರು ಹಾಜರಿದ್ದರು.

ಧಾರವಾಡ ವರದಿ

ಕರ್ತವ್ಯ ನಿರ್ವಹಿಸುವ ವೇಳೆ ಹುತಾತ್ಮರಾದ ವಿವಿಧ ರಾಜ್ಯಗಳ ಪೊಲೀಸ್ ಸಿಬ್ಬಂದಿಯನ್ನು ಸ್ಮರಿಸುವ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮವನ್ನು ಭಾನುವಾರ ಇಲ್ಲಿನ ಜಿಲ್ಲಾ ಪೊಲೀಸ್ ಮೈದಾನದಲ್ಲಿ ಆಚರಿಸಲಾಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವೈ.ಎಸ್.ರವಿಕುಮಾರ್ ಅವರು ಕಳೆದ 2011 ಸೆಪ್ಟೆಂಬರ್‌ನಿಂದ ಈ ವರ್ಷದ ಆಗಸ್ಟ್ ಅಂತ್ಯದವರೆಗೆ ದೇಶದ ವಿವಿಧೆಡೆ ಹುತಾತ್ಮರಾದ   ಪೊಲೀಸ್ ಅಧಿಕಾರಿಗಳು ಹಾಗೂ ವಿವಿಧ ಹಂತದ ಸಿಬ್ಬಂದಿಯ ಹೆಸರುಗಳನ್ನು ಓದಿದರು. ಬಳಿಕ ಎರಡು ನಿಮಿಷದ ಮೌನಾಚರಣೆ ಮಾಡಲಾಯಿತು. ಮೃತ ಪೊಲೀಸ್ ಸಿಬ್ಬಂದಿಯ ಗೌರವಾರ್ಥ ಮೂರು ಸುತ್ತು ಕುಶಾಲ ತೋಪುಗಳನ್ನು ಹಾರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ರವಿಕುಮಾರ್, `ದೇಶದ ಆಂತರಿಕ ಭದ್ರತೆ ಸವಾಲಾಗಿ ಪರಿಣಮಿಸಿದ್ದು, ಭಯೋತ್ಪಾದನೆ, ನಕ್ಸಲ್ ಸಮಸ್ಯೆಗಳನ್ನು ಪೊಲೀಸರು ಎದುರಿಸಬೇಕಾಗಿದೆ. ಈ ಸಮಸ್ಯೆಗಳನ್ನು ಹಿಮ್ಮೆಟ್ಟಿಸುವ ಸಂದರ್ಭದಲ್ಲಿ ಹುತಾತ್ಮರಾದ ಪೊಲೀಸರ ಶೌರ್ಯಕ್ಕೆ ಬೆಲೆ ಕಟ್ಟಲಾಗದು~ ಎಂದರು.

ಮುಖ್ಯ ಅತಿಥಿಯಾಗಿದ್ದ ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶ ಸಿ.ರಾಜಶೇಖರ, `ರಾತ್ರಿ ಹೊತ್ತು ನೆಮ್ಮದಿಯಿಂದ ನಾವೆಲ್ಲ ನಿದ್ರೆ ಮಾಡಲು ಸಾಧ್ಯವಾಗಿರುವುದು ಪೊಲೀಸರಿಂದ. ಎಷ್ಟೋ ಸಂದರ್ಭಗಳಲ್ಲಿ, ಎಲ್ಲ ಮುಗಿದ ಮೇಲೆ ಪೊಲೀಸರು ಬರುತ್ತಾರೆ ಎಂಬ ಭಾವನೆ ಜನರಲ್ಲಿದೆ. ಇದನ್ನು ಹೋಗಲಾಡಿಸಲು ಪೊಲೀಸರು ಸಮಯ ಪರಿಪಾಲನೆ ಮಾಡಬೇಕು. ರಾಜ್ಯದ ಪೊಲೀಸರಿಗೆ ದೇಶದಲ್ಲಿ ವಿಶೇಷ ಸ್ಥಾನವಿದೆ. ಅವರ ಕಾರ್ಯವನ್ನು ಹತ್ತಿರದಿಂದ ಬಲ್ಲವರಿಗೆ ಮಾತ್ರ ಅವರ ಶ್ರಮ ಗೊತ್ತಾಗುತ್ತದೆ~ ಎಂದು ಹೇಳಿದರು.

ಡಿಎಸ್‌ಪಿ ರಾಜು ಬನಹಟ್ಟಿ ಸ್ವಾಗತಿಸಿದರು. ನವಲಗುಂದ ಸಿಪಿಐ ಎಸ್.ಎಸ್.ಪಡೋಲ್ಕರ್ ವಂದಿಸಿದರು. ಎನ್.ಎ.ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯ ಪ್ರಾಚಾರ್ಯ ಡಾ.ವೈ.ಪಿ.ಕಲ್ಲನಗೌಡ್ರ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT